ರಾಯಚೂರು: ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಖಾನಾಪೂರದಲ್ಲಿ ಕುಡಿಯುವ ನೀರಿನ ಟ್ಯಾಂಕ್ನಲ್ಲಿ ಕೋತಿಗಳು ಬಿದ್ದು ಸಾವನ್ನಪ್ಪಿದ್ದು, ಅದೇ ನೀರನ್ನು ಕುಡಿದು ಗ್ರಾಮದ ಕೆಲವರು ಅಸ್ವಸ್ಥರಾದ ಘಟನೆ ನಡಿದಿದೆ. ಇನ್ನು ಕೋತಿಗಳು ಸತ್ತು ಬಿದ್ದ ಟ್ಯಾಂಕ್ನಿಂದಲೇ ಇಡೀ ಊರಿಗೆ ನೀರು ಸರಬರಾಜು ಆಗುತ್ತಿತ್ತು. ತೆರೆದ ವಾಟರ್ ಟ್ಯಾಂಕ್ ಆದ್ದರಿಂದ ಕೋತಿಗಳು ನೀರು ಕುಡಿಯಲು ಹೋಗಿ ಬಿದ್ದಿದ್ದಾವೆ. ನಂತರ ಮೇಲೆ ಬರಲಾಗದೇ ಅದೇ ನೀರಲ್ಲೇ ಎರಡು ಕೋತಿಗಳು ಮುಳುಗಿ ಸಾವನ್ನಪ್ಪಿದ್ದಾವೆ.
ಕೋತಿಗಳು ಸತ್ತು ಮೂರು ದಿನಗಳ ಕಾಲ ಇದೇ ನೀರನ್ನು ಗ್ರಾಮಸ್ಥರು ಸೇವಿಸಿದ್ದು, ಅವರಲ್ಲಿ ಕೆಲವರು ಅಸ್ವಸ್ಥರಾಗಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ನೀರಿನ ಟ್ಯಾಂಕ್ ಮುಚ್ಚಲು ಯಾವುದೇ ಕ್ರಮವಹಿಸದ ಯಮನಾಳ ಗ್ರಾಮ ಪಂಚಾಯತಿ ಪಿಡಿಓ ಸೇರಿದಂತೆ ಸಿಬ್ಬಂದಿಗಳ ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.