ನೋಡು ಮನವೇ ನೋಡು
ಈ ಸ್ವಾರ್ಥ ಜನರ ಪಾಡು…!!
ಅಂಧಕಾರ ತುಂಬಿದ ಈ ನಾಡು
ಬರೀ ಹೊಟ್ಟೆ ಕಿಚ್ಚಿನ ಸುಡುಗಾಡು…!
ಬಿದ್ದು ಬಿಟ್ಟಿದೆ ಅನಾದಿಕಾಲದಿಂದಲೂ ಜಾಡು
ಅದನ್ನೊಮ್ಮೆ ನೀ ಬದಲಾವಣೆ ಮಾಡಿ ನೋಡು…!!
ಮನುಷ್ಯನ ಆಸೆಗೆ ಮತ್ತು ಸ್ವಾರ್ಥಕ್ಕೆ
ಕೊನೆ ಇಲ್ಲವೇ ಇಲ್ಲ ಅನಿಸುತ್ತದೆ.
ಯಾಕೆಂದರೆ ನಾವು ಬಾಲ್ಯ ಜೀವನದಿಂದ ಮುಪ್ಪಿನಾವಸ್ಥೆವರೆಗೂ ಜೀವನದ ಪ್ರತಿಯೊಂದು ಹಂತವನ್ನು ಮೆಲುಕು ಹಾಕಿ ನೋಡಿದಾಗ ಮನುಷ್ಯನ ನಿಜ ರೂಪ ಹೊರ ಹೊಮ್ಮುತ್ತದೆ.ನೋಡಿ ಮನುಷ್ಯ ತಾಯಿಯ ಗರ್ಭದಿಂದ ಜನಿಸಿದಾಗಲೇ ಶುರುವಾದ ಈ ಮನುಷ್ಯನ ಆಸೆ ಮತ್ತು ಸ್ವಾರ್ಥ ಮನೋಭಾವ ತಾನು ಮಣ್ಣಲ್ಲಿ-ಮಣ್ಣಾಗುವವರೆಗೂ ಆ ಗುಣಗಳಿಗೆ ಮಿತಿಯೇ ಇಲ್ಲವೆನಿಸುತ್ತದೆ.
ಬಾಲ್ಯದಲ್ಲಿ ಮಗುವಿದ್ದಾಗ ತಾಯಿ-ತಂದೆ ತನ್ನ ಮಗುವಿಗೆ ಪ್ರೀತಿಯಿಂದ ಕೈತುತ್ತು ತಿನ್ನಿಸುವಾಗ ಮಗು ನಿರಾಕರಿಸಿದರೆ ತಿನ್ನಿಸುವ ಕೈತುತ್ತನ್ನು ಬೇರೆಯವರಿಗೆ ತಿನ್ನಿಸುವೇ ಅಂತ ತಾಯಿ ಅಥವಾ ತಂದೆ ಹೇಳಿದಾಗ ಮಗು ತಿನ್ನಲು ಇಷ್ಟವಿಲ್ಲದಿದ್ದರೂ ಬೇರೆಯವರ ಹೆಸರು ಪ್ರಸ್ತಾಪಿಸಿದ ತಕ್ಷಣವೇ ತಿನ್ನಲು ಆರಂಭಿಸುತ್ತದೆ,
ಪುಟ್ಟ-ಪುಟ್ಟ ಮಕ್ಕಳಿದ್ದಾಗಿನಿಂದ ತಂದೆ-ತಾಯಿ ಮಕ್ಕಳಿಗೆ ಸ್ವಾರ್ಥದ ಸಂದೇಶದ ಪಾಠ ಮಾಡುತ್ತೇವೆ.
ಆ ಮನೆ ನಿಂದು,ಈ ಹೊಲ ನಿಂದು ಅಂತ ಅಲ್ಲಿಂದಲೇ ಶುರುವಾದ ಈ ಸ್ವಾರ್ಥ ಮನೋಭಾವದ ಬುದ್ಧಿ ಮುಂದೆ ಯಾವ ಹಂತಕ್ಕೆ ಬಂದು ತಲುಪುತ್ತದೆ ಅಂದರೆ,ಒಂದೇ ತಾಯಿಯ ಹೊಟ್ಟೆಯಲ್ಲಿ ಜನಿಸಿ ಒಂದೇ ತಾಯಿಯ ಎದೆ ಹಾಲು ಕುಡಿದರು.
ನಾಳೆ ಅದೇ ಮಕ್ಕಳು ಆಸ್ತಿಯ ವಿಚಾರವಾಗಿ ಒಡೆದಾಡಿ-ಬಡಿದಾಡಿ ಪ್ರಾಣ ಕಳೆದುಕೊಳ್ಳುವ ಹಂತಕ್ಕೆ ಬಂದು ನಿಲ್ಲುತ್ತಾರೆ.
ಒಡ ಹುಟ್ಟಿದವರಲ್ಲಿಯೂ ಕೂಡ ಈ ಸ್ವಾರ್ಥ ಮತ್ತು ಮನುಷ್ಯನ ಆಸೆ ಗುಣಗಳು ತಮ್ಮ ಕಾರ್ಯವನ್ನು ಆರಂಭಿಸಲು ಪ್ರಯತ್ನ ಮಾಡುತ್ತಲೇ ಇರುತ್ತವೇ.
ಹುಡುಗರಿದ್ದಾಗ ನಾನೇ ಜಾಣ ನಾನೇ ಶ್ರೇಷ್ಠ ಎಂಬುವ ಮನೋಭಾವ,ಯೌವನದಲ್ಲಿ ನಾನೇ ಸುಂದರ ನಾನೇ ಶ್ರೀಮಂತ ಎನ್ನುವಂತ ಸ್ವಾರ್ಥ.ನಾನೇ ಅತಿ ಹೆಚ್ಚು ಸಂಪಾದಿಸಬೇಕು ಅನ್ನುವಂತ ಆಸೆ ಮುಂದೆ ಮದುವೆ ಆಗುವುದರಲ್ಲಿಯೂ ಕೂಡ ಅತೀ ಸ್ವಾರ್ಥ
ನನ್ನ ಹೆಂಡತಿ ಸುಂದರವಾಗಿರಬೇಕು ಇಲ್ಲ ನನ್ನ ಗಂಡ ಸುಂದರವಾಗಿರಬೇಕು ನಮ್ಮಷ್ಟು ಸುಂದರವಾಗಿ ಯಾರು ಇರಬಾರದು ಅನ್ನುವಂತ ದುರ್ಬುದ್ಧಿ.ಮುಂದೆ ಮಕ್ಕಳು ಜನಿಸಿದರು ಕೂಡ ಬೇರೆಯವರ ಮಕ್ಕಳಿಗೂ ನಮ್ಮ ಮಕ್ಕಳಿಗೂ ಹೋಲಿಕೆ ಮಾಡಿದರು
ನಮ್ಮ ಮಕ್ಕಳು ಸುಂದರವಾಗಿರಬೇಕು ಅನ್ನುವ ಸ್ವಾರ್ಥ.ಮಕ್ಕಳು ಓದುವಾಗ ನಮ್ಮ ಮಕ್ಕಳೇ ಜಾಣರು ಇರಬೇಕು ಅನ್ನುವಂತ ಸ್ವಾರ್ಥ,
ಈ ಜಗತ್ತು ನಾವೊಂದು ಸಾರಿ ಯೋಚನೆ ಮಾಡಿದಾಗ ಅನಿಸುತ್ತೇ ಬರೀ ಸ್ವಾರ್ಥದಿಂದ ಕೂಡಿದೆ ಅಂತ.ನಾನೇ ಶ್ರೇಷ್ಠ ನೀನು ಕನಿಷ್ಠ ಎಲ್ಲರೂ ನಾನು ಹೇಳಿದಾಗೇ ಕೇಳಬೇಕು ಅನ್ನುವಂತ ದುರಹಂಕಾರ ಈ ಸಮಾಜದ ಪ್ರತಿಯೊಂದು ಕ್ಷೇತ್ರ ತೆಗೆದುಕೊಂಡರು ಬರೀ ಆಸೆ ಸ್ವಾರ್ಥ ತುಂಬಿ ತುಳುಕುತ್ತದೆ.ರಾಜಕೀಯ ಕ್ಷೇತ್ರದಲ್ಲಿ ತೆಗೆದುಕೊಂಡರು ಪಕ್ಷ ನನಗೆ ಟಿಕೇಟ್ ಕೊಡಬೇಕು ನಾನೇ ಶಾಸಕನಾಗಬೇಕು ಜೊತೆಗೆ ನಾನೇ ಪ್ರತಿ ಸಾರಿ ಮಂತ್ರಿಯಾಗಬೇಕು ಅನ್ನುವಂತ ಸ್ವಾರ್ಥ,ಜಾತಿಯಲ್ಲಿ ನಾನೇ
ಶ್ರೇಷ್ಠ ನಮ್ಮ ಜಾತಿಯವರದ್ದೇ ಆಡಳಿತವಿರಬೇಕು ಅನ್ನುವ ಸ್ವಾರ್ಥ,ಉದ್ಯೋಗದಲ್ಲಿಯು ಕೂಡ ಮೇಲಧಿಕಾರಿಗಳ ಮನಸ್ಥಿತಿ ಹೇಗಿರುತ್ತೇ ಅಂದ್ರೆ ಕಚೇರಿಯ ಎಲ್ಲಾ ಸಿಬ್ಬಂದಿಗಳು ನನ್ನ ಮಾತಿನಲ್ಲಿಯೇ ಇರಬೇಕು ನಾನು ಹೇಳಿದಾಗೇ ಕೇಳಬೇಕು ಅನ್ನುವ ಸ್ವಾರ್ಥ.
ಇನ್ನು ಅನೇಕ ಕ್ಷೇತ್ರದಲ್ಲಿ ನಾವು ಆಲೋಚಿಸಿ ನೋಡಿದಾಗ ಆಸೆ ಮತ್ತು ಸ್ವಾರ್ಥ ಹೆಚ್ಚಾಗಿದೆ ಅಂತ ಹಿಂದೆ ಹೇಳಿದಂತಹ ಶಿವ-ಶರಣರ ಮಾತುಗಳು ನೈಜತೆಯನ್ನು ಸಾರುತ್ತವೆ.ಮನುಷ್ಯ ಹುಟ್ಟಿ ಬೆಳೆಯುವಾಗಿನಿಂದ ಶುರುವಾದ ಆಸೆ ಮತ್ತು ಸ್ವಾರ್ಥ ಮನುಷ್ಯನ ಕೊನೆಯುಸಿರು ಹೋಗುವವರೆಗೂ ಅದಕ್ಕೆ ಕೊನೆಯೇ ಇಲ್ಲ ಅನ್ನುವಂತ ನೈಜ ಸಂದೇಶವನ್ನು ವ್ಯಕ್ತಪಡಿಸುವುದೇ ಈ ಲೇಖನದ ಉದ್ದೇಶವಾಗಿದೆ.
ಹೆಚ್.ಕೆ.ದಿದ್ದಿಗಿ…✍