ಮಣಿಪುರದಲ್ಲಿ ಮಹಿಳೆಯರ ನಗ್ನವಾಗಿ ಮೆರವಣಿಗೆ ಮಾಡಿದ ಪ್ರಕರಣ; ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ನಾವು ಮಾಡುತ್ತೇವೆ: ಸುಪ್ರೀಂಕೋರ್ಟ್

Share and Enjoy !

Shares
Listen to this article

ಹೊಸದಿಲ್ಲಿ: ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ನಗ್ನರಾಗಿ ಮೆರವಣಿಗೆ ನಡೆಸಿದ ವಿಡಿಯೋಗೆ ಸುಪ್ರೀಂಕೋರ್ಟ್ ಗುರುವಾರ ಆಘಾತ ವ್ಯಕ್ತಪಡಿಸಿದೆ. ಇದು ತೀವ್ರ ಹೃದಯ ಹಿಂಡುವ ವಿಡಿಯೋ ಎಂದಿರುವ ಸುಪ್ರೀಂಕೋರ್ಟ್ ಘಟನೆಯನ್ನು ಖಂಡಿಸಿದೆ. ಈ ದೃಶ್ಯಗಳು ಸಂಪೂರ್ಣ ಸಾಂವಿಧಾನಿಕ ವೈಫಲ್ಯವನ್ನು ತೋರಿಸುತ್ತದೆ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.

ಈ ಘಟನೆ ಬಗ್ಗೆ ಕ್ರಮ ಕೈಗೊಳ್ಳುವಂತೆ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ. ಈ ಭಾಗದ ಮಹಿಳೆಯರ ಸುರಕ್ಷತೆಗೆ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ನ್ಯಾಯಾಲಯದ ಮಾಹಿತಿ ನೀಡುತ್ತಾ ಇರುವಂತೆಯೂ ಅವರು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದ್ದಾರೆ.

ಒಂದು ವೇಳೆ ಸರ್ಕಾರ ಕ್ರಮ ಕೈಗೊಳ್ಳದೆ ಇದ್ದಲ್ಲಿ ಸುಪ್ರೀಂಕೋರ್ಟ್ ತೆಗೆದುಕೊಳ್ಳಲಿದೆ ಎಂದು ಸಿಜೆಐ ಚಂದ್ರಚೂಡ್ ಎಚ್ಚರಿಕೆ ನೀಡಿದ್ದಾರೆ. ಈ ಪ್ರಕರಣವನ್ನು ಜುಲೈ 28ರಂದು ವಿಚಾರಣೆಗೆ ಎತ್ತಿಕೊಳ್ಳುವುದಾಗಿ ಕೋರ್ಟ್ ತಿಳಿಸಿದೆ.

“ನಿನ್ನೆ (ಬುಧವಾರ) ಹಂಚಿಕೆಯಾಗುತ್ತಿರುವ ವಿಡಿಯೋಗಳ ಬಗ್ಗೆ ನಮಗೆ ಬಹಳ ಖೇದವಾಗಿದೆ. ನಾವು ನಮ್ಮ ತೀವ್ರ ಆತಂಕವನ್ನು ವ್ಯಕ್ತಪಡಿಸುತ್ತೇವೆ. ಸರ್ಕಾರ ಮುಂದಡಿ ಇರಿಸಿ ಕ್ರಮ ತೆಗೆದುಕೊಳ್ಳುವ ಸಮಯ ಇದು. ಇದು ಒಪ್ಪುವಂತಹದ್ದಲ್ಲ” ಎಂದು ಸಿಜೆಐ ಡಿವೈ ಚಂದ್ರಚೂಡ್ ಹೇಳಿದ್ದಾರೆ.

“ಒಂದು ವೇಳೆ ಸರ್ಕಾರ ಕ್ರಮ ಕೈಗೊಳ್ಳದೆ ಇದ್ದರೆ, ನಾವು ಮಾಡುತ್ತೇವೆ. ಸರ್ಕಾರ ತೆಗೆದುಕೊಳ್ಳುವ ಕ್ರಮಗಳ ಕುರಿತು ಕೋರ್ಟ್‌ಗೆ ಮಾಹಿತಿ ನೀಡಬೇಕು ಎಂದು ನಾವು ಸೂಚಿಸುತ್ತೇವೆ. ಇದರಿಂದ ಅಂತಹ ಹಿಂಸಾಚಾರಗಳಿಗಾಗಿ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಬಹುದು. ಮಾಧ್ಯಮಗಳಲ್ಲಿ ಬಿಂಬಿಸುತ್ತಿರುವುದು, ಪ್ರಸಾರವಾಗುತ್ತಿರುವ ವಿಡಿಯೋಗಳು ಸಂಪೂರ್ಣ ಸಾಂವಿಧಾನಿಕ ಉಲ್ಲಂಘನೆಯನ್ನು ತೋರಿಸುತ್ತದೆ” ಎಂದು ಸಿಜೆಐ ಹೇಳಿದ್ದಾರೆ.

ಇಬ್ಬರು ಮಹಿಳೆಯರನ್ನು ಬೆತ್ತಲಾಗಿಸಿ, ಮೆರವಣಿಗೆ ನಡೆಸಿ, ಮೈದಾನವೊಂದಕ್ಕೆ ಎಳೆದುಕೊಂಡು ಹೋಗುವ ವಿಡಿಯೋ ಬುಧವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಅಲ್ಲಿ ಅವರಿಬ್ಬರ ಮೇಲೆಯೂ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಈ ಘಟನೆ ಮಣಿಪುರದ ಕಾಂಗ್‌ಪೊಕ್ಪಿ ಜಿಲ್ಲೆಯಲ್ಲಿ ಮೇ 4ರಂದು ನಡೆದಿದೆ ಎಂದು ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ಐಟಿಎಲ್‌ಎಫ್) ತಿಳಿಸಿದೆ.

ಈ ಭಯಾನಕ ವಿಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡಿದ ಬಳಿಕ ಮಣಿಪುರ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರು ಹೇರಾದಾಸ್ (32) ಎಂಬಾತನನ್ನು ಥೌಬಲ್ ಜಿಲ್ಲೆಯಿಂದ ಬಂಧಿಸಿದ್ದಾರೆ.

ಮಣಿಪುರದಲ್ಲಿ ಕುಕಿ ಜನಾಂಗಕ್ಕೆ ಬುಡಕಟ್ಟು ಸಮುದಾಯದ ಮಾನ್ಯತೆ ನೀಡುವುದನ್ನು ವಿರೋಧಿಸಿ ಅಲ್ಲಿನ ಮೈತೇಯಿ ಆದಿವಾಸಿ ಸಮುದಾಯವು ಮೇ 3ರಂದು ಪ್ರತಿಭಟನೆ ಆರಂಭಿಸಿತ್ತು. ಅದು ಹಿಂಸಾಚಾರಕ್ಕೆ ತಿರುಗಿದ್ದು, ಈವರೆಗೂ 120ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಜನರು ಅಕ್ಷರಶಃ ನೆಲೆ ಕಳೆದುಕೊಂಡಿದ್ದಾರೆ. ಮೈತೇಯಿ ಸಮುದಾಯವು ವ್ಯಾಪಕ ಹಿಂಸಾಚಾರದಲ್ಲಿ ತೊಡಗಿದ್ದು, ನೂರಾರು ಕುಟುಂಬಗಳು ಸರ್ಕಾರ ಸ್ಥಾಪಿಸಿರುವ ಪರಿಹಾರ ಶಿಬಿರಗಳಲ್ಲಿ ದಿನಗಳನ್ನು ಕಳೆಯುತ್ತಿದ್ದಾರೆ.

Share and Enjoy !

Shares