ಮುಂದಿನ ತಿಂಗಳಲ್ಲಿ ಅಪರೂಪದ ತಿಂಗಳು: ಖಗೋಳ ವಿಸ್ಮಯ ಆಕಾಶದಲ್ಲಿ ಕಾಣಿಸುತ್ತದೆ ಬ್ಲೂ ಮೂನ್, ಸೂಪರ್ ಮೂನ್

Share and Enjoy !

Shares
Listen to this article

ವಾಷಿಂಗ್ಟನ್ :ಜುಲೈ 21:  ಮುಂದಿನ ತಿಂಗಳು ಅಂದರೆ ಆಗಸ್ಟ್ ತಿಂಗಳಲ್ಲಿ ಆಕಾಶದಲ್ಲಿ ಬ್ಲೂ ಮೂನ್  ಮತ್ತು ಎರಡು ಸೂಪರ್‌ಮೂನ್‌ಗಳನ್ನು ಕಾಣಬಹುದಾಗಿದೆ. ನಮ್ಮ ಗ್ರಹದ ಸುತ್ತ ದೀರ್ಘವೃತ್ತದ ಹಾದಿಯಲ್ಲಿ ಹುಣ್ಣಿಮೆಯ ಕಕ್ಷೆಯು ಭೂಮಿಗೆ ಹತ್ತಿರವಾದಾಗ ಸೂಪರ್‌ಮೂನ್ ಸಂಭವಿಸುತ್ತದೆ. ಅಂದರೆ ಚಂದ್ರನು ತನ್ನ ಗಾತ್ರಕ್ಕಿಂತ ದೊಡ್ಡದಾಗಿ ಕಾಣಿಸುತ್ತಾನೆ. ಇದು ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತದೆ.  ಈ ಸಮಯದಲ್ಲಿ ಚಂದ್ರ ಮತ್ತು ಭೂಮಿಯ ನಡುವಿನ ಅಂತರವು ತುಂಬಾ ಕಡಿಮೆ ಆಗಿರುತ್ತದೆ. ಚಂದ್ರ ಭೂಮಿಯ ಸಮೀಪ ಬರುತ್ತಾನೆ. ಭೂಮಿ ಮತ್ತು ಚಂದ್ರನ ನಡುವಿನ ಅಂತರವು ಸುಮಾರು 4,05,500 ಕಿ.ಮೀ. ಚಂದ್ರನು ಭೂಮಿಯ ಪರಿಧಿಯ ಶೇ 90ರಷ್ಟು ಹತ್ತಿರ ಬಂದಾಗ ಈ ಖಗೋಳ ವಿಸ್ಮಯವನ್ನು ಸೂಪರ್ ಮೂನ್ ಎಂದು ಕರೆಯಲಾಗುತ್ತದೆ.

ಚಂದ್ರ ಸುಮಾರು 4,05,500 ಕಿಮೀ ದೂರದಲ್ಲಿದ್ದರೆ ಅಪೋಜಿ ಎಂದು ಕರೆಯಲಾಗುತ್ತದೆ. ಸಮೀಪವಿದ್ದರೆ ಅದನ್ನು ಪೆರಿಜಿ ಎಂದು ಕರೆಲಾಗುತ್ತದೆ. ಹೀಗಾದಾಗ ದೂರವು ಸರಿಸುಮಾರು 3,63,300 ಕಿಮೀಗೆ ಕಡಿಮೆಯಾಗುತ್ತದೆ.

ಈ ವರ್ಷದ ಸೂಪರ್‌ಮೂನ್ ಚಕ್ರವು ವಿಶಿಷ್ಟವಾಗಿದೆ. ಏಕೆಂದರೆ ಇದು ನಾಲ್ಕು ಸತತ ಸೂಪರ್‌ಮೂನ್‌ಗಳನ್ನು ಒಳಗೊಂಡಿದೆ. ಮೊದಲನೆಯದು ಜುಲೈ 3 ರಂದು ಮತ್ತು ಕೊನೆಯದು ಸೆಪ್ಟೆಂಬರ್ 29 ರಂದು ಕಾಣಿಸಿಕೊಳ್ಳುತ್ತದೆ ಎಂದು earth.com ವರದಿ ಮಾಡಿದೆ.

ಸೂಪರ್‌ಮೂನ್‌ನ ಗಾತ್ರ ಮತ್ತು ಹೊಳಪು ಪೆರಿಜಿಯಲ್ಲಿ ಚಂದ್ರನ ದೂರ ಮತ್ತು ಸೂರ್ಯನಿಂದ ಪ್ರತಿಫಲಿಸುವ ಬೆಳಕಿನ ಪ್ರಮಾಣವನ್ನು ಅವಲಂಬಿಸಿ ಬದಲಾಗುತ್ತದೆ. ಇದು ಎಲ್ಲಾ ಸೂಪರ್‌ಮೂನ್‌ಗಳು ಸಮಾನವಾಗಿರುವುದಿಲ್ಲ.

ನೀಲಿ ಚಂದ್ರ ಅಥವಾ ಬ್ಲೂ ಮೂನ್

ಬ್ಲೂ ಮೂನ್ ಎಂದರೆ ಇದು ಚಂದ್ರನ ಬಣ್ಣಕ್ಕೆ ಸಂಬಂಧಿಸಿಲ್ಲ. ಒಂದೇ ಕ್ಯಾಲೆಂಡರ್ ತಿಂಗಳೊಳಗೆ ಸಂಭವಿಸುವ ಎರಡನೇ ಹುಣ್ಣಿಮೆಯನ್ನು ಬ್ಲೂಮೂನ್ ಎನ್ನಲಾಗುತ್ತದೆ . ಹೆಚ್ಚಿನ ತಿಂಗಳುಗಳು ಸರಿಸುಮಾರು 29 ದಿನಗಳ ಚಂದ್ರನ ಚಕ್ರಕ್ಕಿಂತ ಹೆಚ್ಚು ದೀರ್ಘವಾಗಿರುವುದರಿಂದ, ಸಾಂದರ್ಭಿಕವಾಗಿ ಒಂದೇ ತಿಂಗಳಲ್ಲಿ ಎರಡು ಹುಣ್ಣಿಮೆಗಳು ಸಂಭವಿಸುವ ಸಾಧ್ಯತೆಯಿದೆ.

ಬ್ಲೂ ಮೂನ್ ತುಲನಾತ್ಮಕವಾಗಿ ಅಪರೂಪದ ಘಟನೆ. ಇದು ಸರಿಸುಮಾರು ಪ್ರತಿ ಎರಡೂವರೆ ವರ್ಷಗಳಿಗೊಮ್ಮೆ ಸಂಭವಿಸುತ್ತದೆ. 1999ರಲ್ಲಿ ಎರಡು ಬ್ಲೂ ಮೂನ್ ಇತ್ತು. ಜನವರಿಯಲ್ಲಿ ಒಂದು ಮತ್ತು ಮಾರ್ಚ್‌ನಲ್ಲಿ ಈ ರೀತಿ ಬ್ಲೂ ಮೂನ್ ಕಾಣಿಸಿಕೊಂಡಿದ್ದು, ಫೆಬ್ರವರಿಯಲ್ಲಿ ಹುಣ್ಣಿಮೆಯಿರಲಿಲ್ಲ.

ಆಗಸ್ಟ್ ತಿಂಗಳಲ್ಲಿ ಎರಡು ಹುಣ್ಣಿಮೆಗಳಿದ್ದು, ಇವೆರಡೂ ಸೂಪರ್ ಮೂನ್ ಆಗಿರುತ್ತವೆ. ಸ್ಟರ್ಜನ್ ಮೂನ್ ಎಂದು ಕರೆಯಲ್ಪಡುವ ಮೊದಲನೆಯದು ಆಗಸ್ಟ್ 2 ರಂದು ಮಧ್ಯಾಹ್ನ 12:01 ಕ್ಕೆ (ಭಾರತೀಯ ಕಾಲಮಾನ) ಗೋಚರಿಸುತ್ತದೆ. “ಸ್ಟರ್ಜನ್ ಮೂನ್” ಎಂಬ ಹೆಸರು ಕೆಲವು ಸ್ಥಳೀಯ ಅಮೆರಿಕನ್ ಗುಂಪುಗಳಿಂದ ಬಂದಿದೆ. ವಿಶೇಷವಾಗಿ ಗ್ರೇಟ್ ಲೇಕ್ಸ್ ಪ್ರದೇಶದಲ್ಲಿ, ಈ ತಿಂಗಳಲ್ಲಿ ಸ್ಟರ್ಜನ್ ಮೀನುಗಳು ಹೇರಳವಾಗಿ ಸಿಗುತ್ತವೆ. ಅದರಿಂದಲೇ ಈ ಹೆಸರು ಬಂದಿದೆ ಎಂದು earth.com ಹೇಳಿದೆ.

ಎರಡನೇ ಹುಣ್ಣಿಮೆ ಅಂದರೆ ಬ್ಲೂ ಮೂನ್ ಆಗಸ್ಟ್ 31 ರಂದು ಗೋಚರಿಸುತ್ತದೆ. ಬೆಳಿಗ್ಗೆ 7:05 ಕ್ಕೆ (ಭಾರತೀಯ ಕಾಲಮಾನ) ಇದು ಸ್ಪಷ್ಟವಾಗಿ ಕಾಣಿಸಲಿದ್ದು. ಈ ನಿರ್ದಿಷ್ಟ ಬ್ಲೂಮೂನ್ ಕೂಡ ಸೂಪರ್‌ಮೂನ್ ಆಗಿರುತ್ತದೆ, ಇದು ಇಡೀ ವರ್ಷದಲ್ಲಿ ಭೂಮಿಗೆ ಅತ್ಯಂತ ಸಮೀಪದಲ್ಲಿ ಕಾಣಿಸುವ ಹುಣ್ಣಿಮೆಯಾಗಿದೆ.

Share and Enjoy !

Shares