ಬಳ್ಳಾರಿ: ರಾಜ್ಯ ಸರ್ಕಾರವು ಅತಿಥಿ ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡುವಾಗ ಪ್ರತ್ಯೇಕವಾಗಿ ಸಂವಿಧಾನದ ಕಲಂ ೩೭೧ ಜೆ ಅಡಿಯಲ್ಲಿ ನೇಮಕಾತಿ ಮಾಡಿಕೊಳ್ಳುವಂತೆ ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ಬಳ್ಳಾರಿ ಜಿಲ್ಲಾ ಘಟಕವು ಮನವಿ ಮಾಡಿದೆ.
ಸಂಘದ ಪದಾಧಿಕಾರಿಗಳು ಮತ್ತು ಪ್ರಮುಖರು ಇಂದು ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ, ರಾಜ್ಯದ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಕಳುಹಿಸಿಕೊಟ್ಟರು.
ಈ ಹಿಂದಿನ ಪ್ರಧಾನಿ ಡಾ.ಮನಮೋಹನ್‌ಸಿಂಗ್ ನೇತೃತ್ವದ ಕೇಂದ್ರ ಸರ್ಕಾರವು ಕಲ್ಯಾಣ ಕರ್ನಾಟಕ ಭಾಗದಲ್ಲಿ ಉದ್ಯೋಗ ಮತ್ತು ಶಿಕ್ಷಣ ಸೌಲಭ್ಯಕ್ಕಾಗಿ ಸಂವಿಧಾನದ ೩೭೧ ಜೆ ಕಲಂಗೆ ತಿದ್ದುಪಡಿ ತಂದು ಜಾರಿಗೆ ತಂದಿದೆ. ಆದರೆ ಕಳೆದ ಹಲವು ವರ್ಷಗಳಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಯಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ೩೭೧ಜೆ ಗೆ ಸಂಬಂಧಿಸಿದ ನಿಯಮಾವಳಿಗಳು ಪಾಲನೆಯಾಗುತ್ತಿಲ್ಲ ಎಂದು ತಿಳಿಸಲಾಗಿದೆ.
ಇನ್ನು ಮುಂದೆ ಅತಿಥಿ ಉಪನ್ಯಾಸಕರ ನೇಮಕಾತಿ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕ ಹುದ್ದೆಗಳನ್ನು ೩೭೧ಜೆ ಕಲಂಗೆ ಅನ್ವಯವಾಗುವಂತೆ ಕಲ್ಯಾಣ ಕರ್ನಾಟಕ ಭಾಗದ ನಿರುದ್ಯೋಗಿ ಸ್ನಾತಕೋತ್ತರ ಪದವೀಧರರು, ಪಿಎಚ್.ಡಿ, ಎನ್.ಇ.ಟಿ, ಎಸ್.ಎಲ್.ಇ.ಟಿ, ಅರ್ಹತೆ ಹೊಂದಿದವರಿಗೆ ಪ್ರತ್ಯೇಕವಾಗಿ ನೇಮಕಾತಿ ಆದೇಶವನ್ನು ಹೊರಡಿಸಬೇಕು ಎಂದು ಮನವಿ ಪತ್ರದಲ್ಲಿ ಕೋರಲಾಗಿದೆ.
ಕಾರಣ, ಕಲ್ಯಾಣ ಕರ್ನಾಟಕ ಭಾಗದಿಂದ ಹೊರಗಿನ ಜಿಲ್ಲೆಗಳ ಅತಿಥಿ ಉಪನ್ಯಾಸಕರು ಕಲ್ಯಾಣ ಕರ್ನಾಟಕ ಭಾಗದಲ್ಲಿನ ಜಿಲ್ಲೆಗಳಲ್ಲಿ ಅತಿಥಿ ಉಪನ್ಯಾಸಕ ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಕಲ್ಯಾಣ ಕರ್ನಾಟಕ ಭಾಗದ ಅರ್ಹ ಸ್ನಾತಕೋತ್ತರ ಪದವೀಧರರಿಗೆ ಅನ್ಯಾಯವಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗವು ಶೈಕ್ಷಣಿಕವಾಗಿ ಹಿಂದುಳಿದಿದ್ದು, ಕಳೆದ ೧೦ ವರ್ಷಗಳ ಹಿಂದೆ ಕೆಲವು ವಿಶ್ವವಿದ್ಯಾಲಯಗಳು ತಲೆ ಎತ್ತಿವೆ. ಅಲ್ಲೊಬ್ಬರು ಇಲ್ಲೊಬ್ಬರು ಎಂಬಂತೆ ಕೆಲವರು ಸ್ನಾತಕೋತ್ತರ ಪದವಿ ಸ್ವೀಕರಿಸಿ ಅತಿಥಿ ಉಪನ್ಯಾಸಕ ಹುದ್ದೆಗೆ ಬರುತ್ತಿದ್ದಾರೆ ಎಂದು ವಿವರಿಸಲಾಗಿದೆ.
ಹಳೆ ಮೈಸೂರು ಭಾಗವು ಶೈಕ್ಷಣಿಕವಾಗಿ ಮುಂದುವರೆದಿದ್ದು, ಆ ಭಾಗದ ವಿದ್ಯಾವಂತರು ಕಲ್ಯಾಣ ಕರ್ನಾಟಕದಲ್ಲಿನ ವಿದ್ಯಾವಂತರ ಜೊತೆಗೆ ಬಂದು ಸ್ಪರ್ಧೆವೊಡ್ಡುತ್ತಾ ಕಲ್ಯಾಣ ಕರ್ನಾಟಕದ ಭಾಗದವರ ಹುದ್ದೆಗಳನ್ನು ಕಬಳಿಸುತ್ತಿದ್ದಾರೆ. ಇದರಿಂದ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾವಂತರು ನಿರುದ್ಯೋಗಿಗಳಾಗುತ್ತಿದ್ದಾರೆ. ಆದ್ದರಿಂದ ನಿರುದ್ಯೋಗ ಸಮಸ್ಯೆಯನ್ನು ನಿವಾರಣೆ ಮಾಡಲು ಪ್ರತ್ಯೇಕವಾಗಿ ಕಲ್ಯಾಣ ಅತಿಥಿ ಉಪನ್ಯಾಸಕರ ಹುದ್ದೆಗಳನ್ನು ನೇಮಕಾತಿ ಮಾಡುವಂತೆ ಕೋರಿದ್ದಾರೆ.
2022 ಮತ್ತು 2023 ನೇ ಸಾಲಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದವರನ್ನು ಅದೇ ಕಾಲೇಜುಗಳಿಗೆ ಮುಂದುವರಿಸಬೇಕೆಂದು ಹೇಳಿದರು. ಇದರಿಂದ ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರು ಪಾಠ ಪ್ರವಚನ ಗಳಿಗೆ ಅನುಕೂಲಕರವಾಗುತ್ತದೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ಡಾ||ಟಿ.ದುರುಗಪ್ಪ ನೇತೃತ್ವದಲ್ಲಿ ಕಾರ್ಯದರ್ಶಿ ಸಿದ್ದೇಶ್, ಆರ್.ಶ್ರೀನಿವಾಸ್, ಡಾ||ಅಪರ್ಣ ಹೆಚ್.ಎಂ., ಗಿರೀಶ್ ಕುಮಾರ್ ಗೌಡ, ಗಿರಿರಾಜ್, ವಿಷ್ಣು, ಸುಜಾತ, ಡಾ||ಹನುಮೇಶ್, ಡಾ||ಕೆ.ಬಸಪ್ಪ, ರಫೀಕ್, ಕಾಂತ, ಬಾಲು ಮತ್ತಿತರರು ಪಾಲ್ಗೊಂಡಿದ್ದರು.