ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಗುರುತಿಸಿಕೊಂಡಿರುವ ನಟ ವಿಜಯ್ ರಾಘವೇಂದ್ರ ಅವರ ಅಭಿಮಾನಿಗಳಿಗೆ ಬೇಸರದ ಸುದ್ದಿ ಸಿಕ್ಕಿದೆ. ಅವರ ಪತ್ನಿ ಸ್ಪಂದನಾಗೆ ಹೃದಯಾಘಾತ ಆಗಿ ಮೃತಪಟ್ಟಿದ್ದಾರೆ. ಬ್ಯಾಂಕಾಕ್ಗೆ ಹೋದಾಗ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಸದ್ಯ ಲೋ ಬಿಪಿ ಹಾಗು ಹೃದಯಾಘಾತ ಆಗಿತ್ತು ಎಂಬ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ. ಪುನೀತ್ ರಾಜ್ಕುಮಾರ್ ಸೇರಿ ಅನೇಕ ಸೆಲೆಬ್ರಿಟಿಗಳು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈಗ ಸ್ಪಂದನಾ ಕೂಡ ನಿಧನ ಹೊಂದಿದ್ದು ನಿಜಕ್ಕೂ ಶಾಕಿಂಗ್ ಆಗಿದೆ. ಹೃದಯಾಘಾತ ಉಂಟಾದ ಸಂದರ್ಭದಲ್ಲಿ ಸ್ಪಂದನಾ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಯಾವುದೇ ಪ್ರಯೋಜನ ಆಗಿಲ್ಲ.
ಸ್ಪಂದನಾ ಅವರು ಜನಿಸಿದ್ದು ಬೆಂಗಳೂರಿನಲ್ಲಿ. ಅವರ ತಂದೆ ಬಿಕೆ ಶಿವರಾಮ್ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. 2007ರ ಆಗಸ್ಟ್ 26ರಂದು ವಿಜಯ್-ಸ್ಪಂದನಾ ಮದುವೆ ನಡೆಯಿತು. ಈ ದಂಪತಿಗೆ ಶೌರ್ಯ ಹೆಸರಿನ ಮಗ ಇದ್ದಾನೆ. ಈಗ ಸ್ಪಂದನಾ ಸಾವು ಅನೇಕರಿಗೆ ಶಾಕ್ ತಂದಿದೆ.
2016ರಲ್ಲಿ ಸ್ಪಂದನಾ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ವಿ. ರವಿಚಂದ್ರನ್ ನಿರ್ದೇಶನದ ‘ಅಪೂರ್ವ’ ಸಿನಿಮಾದಲ್ಲಿ ಸ್ಪಂದನಾ ನಟಿಸಿದ್ದರು. ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಅವರ ಪತ್ನಿಯಾಗಿ ಅವರು ನಟಿಸಿದ್ದರು. ಈಗ ಸ್ಪಂದನಾ ಸಾವಿನ ಸುದ್ದಿಯನ್ನು ಅನೇಕರಿಂದ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ವಿಜಯ್ ಅವರಿಗೆ ನೋವು ಭರಿಸುವ ಶಕ್ತಿ ದೇವರು ನೀಡಲಿ ಎಂದು ದೇವರಲ್ಲಿ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.