ನಮಸ್ಕಾರ ಎಂಬ ಸಂಸ್ಕಾರ ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ

Share and Enjoy !

Shares
Listen to this article

ನಮಸ್ಕಾರ ಎಂಬ ಸಂಸ್ಕಾರ ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ


“ನಮಾಸ್ಕಾರ” ಎಂಬುದು ಸಂಸ್ಕಾರ ಎನ್ನುವ ತತ್ವ ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ.ದೇವರಿಗೆ ಮಾಡುವ ನಮಸ್ಕಾರವಲ್ಲದೆ ಗುರು-ಹಿರಿಯರಿಗೆ ನಮಸ್ಕರಿಸುವ ವಾಡಿಕೆ ನಮ್ಮಲ್ಲಿ ಸರ್ವೇಸಾಮಾನ್ಯ ಹಾಗೂ ಸಂಪ್ರದಾಯವೂ ಹೌದು.
ನಮಸ್ಕಾರಗಳು ವಯಸ್ಸಿನ ಅಂತರದ ಹಂಗಿಲ್ಲದೆ, ಜಾತಿ,ಮತ, ಪಂಥದ ಭೇಧವಿಲ್ಲದೆ ನಮ್ಮ ನಡುವೆ ದಿನದ ಚಟುವಟಿಕೆಗಳ ನಡುವೆ ಸುಲಲಿತವಾಗಿ ಹರಿದಾಡುತ್ತವೆ.ಇಬ್ಬರು ವ್ಯಕ್ತಿಗಳು ಅಥವಾ ಹೆಚ್ಚು ವ್ಯಕ್ತಿಗಳು ಒಬ್ಬರಿಗೊಬ್ಬರು ದಿನದ ಮೊದಲಬಾರಿಗೆ ಭೇಟಿಯಾದಾಗ ಆಡುವ ಮೊದಲ ಮಾತೇ “ನಮಸ್ಕಾರ”. ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ಬಹುತೇಕ ನಮಾಸ್ಕಾರದ ಜಾಗದಲ್ಲಿ ಗುಡ್ಮಾರ್ನಿಂಗ್,ಗುಡ್ ಈವನಿಂಗ್,ಗಳು ಬಂದಿವೆ.
ವ್ಯಕ್ತಿಗಳು ದಿನದ ಪ್ರಥಮ ಭೇಟಿಯಲ್ಲಿ ಕಂಡಾಗ ಬೇರೆ ಬೇರೆ ಸಂಸ್ಕೃತಿಗಳಲ್ಲಿ ಭಿನ್ನವಾದ ರೀತಿಯಲ್ಲಿ ವರ್ತನೆಗಳು ಕಂಡು ಬರುತ್ತವೆ.ಆದರೆ ಭಾರತೀಯ ಸಂಸ್ಕೃತಿಯಲ್ಲಿ “ನಮಸ್ಕಾರ”ಕ್ಕೆ ತನ್ನದೇ ಆದ ಪ್ರಾಧಾನ್ಯತೆ ಇದೆ.
ನಮಸ್ಕಾರ ಎಂದರೆ ಹಿಂದೂ ಸಂಸ್ಕೃತಿಯಲ್ಲಿ ಗೌರವಯುತವಾಗಿ ಶುಭಕಾಮನೆಗಳು ಹೇಳುವುದು ಎಂದು ಅರ್ಥ ಹಾಗೆಯೇ “ನಮಸ್ಕಾರ” ಎಂಬ ಪದವು ಸಂಸ್ಕೃತದ “ನಮಹ” ಎಂಬ ಪದದಿಂದ ವ್ಯುತ್ಪತ್ತಿ ಪಡೆದಿದೆ.ನಮಹದ ಅರ್ಥ “ನನಗೆ ಅಲ್ಲ” (ಟಿoಣ ಜಿoಡಿ me ) ಎಂದು ಅರ್ಥ,ಹಾಗೆಯೆ ನಾನು ನಿನಗೆ ಶರಣಾಗಿದ್ದೇನೆ ಎಂಬ ಅರ್ಥಕೂಡ ಬರುತ್ತದೆ.
ಇದಕ್ಕೆ ಸಮನಾಗಿ “ನಮಸ್ತೆ” ಎಂದು ಕೂಡ ಹೇಳುತ್ತೇವೆ.ನಮಸ್ತೆ ಅತಿ ಹೆಚ್ಚು ಪ್ರಚಲಿತವಿರುವ ಪರಿಕಲ್ಪನೆ, ಆದರೆ ಈ ಎರಡರ ನಡುವೆ ತೆಳುವಾದ ವ್ಯತ್ಯಾಸವಿದೆ. ನಮಸ್ತೆ ಅಂದರೆ ನಿನಗೆ ಶರಣು ಎಂದು ಅರ್ಥ.ಗೌರತಯುವವಾಗಿ ನಿನಗೆ ಬಾಗಿದ್ದೇನೆ ಎಂಬ ಅರ್ಥವೂ ಬರುತ್ತದೆ.ಒಟ್ಡಾರೆ ನಮಸ್ಕಾರವು ಔಪಚಾರಿಕ ಪರಿಕಲ್ಪನೆಯಾದರೆ,ನಮಸ್ತೆ ಅನೌಪಚಾರಿಕ ಪರಿಕಲ್ಪನೆಯಾಗಿದೆ.
ನಮಸ್ಕಾರ ಎಂಬುದು ಸಹಜವಾಗಿ ನಡೆಯುವ ಪ್ರಕ್ರಿಯಲ್ಲಿ ಎರಡು ಕೈ ಗಳು ಜೋಡಿಸಿ ಎದೆಗೆ ಆನಿಸಿ ಸಲ್ಲಿಸುವುದು ನಮಸ್ಕಾರದ ಸ್ಥಿತಿಯಾಗಿದೆ.ಇದು ಆಧ್ಯಾತ್ಮಿಕ ವಿಚಾರದಲ್ಲಿ ಹಾಗೂ ಯೋಗದಲ್ಲೂ ಬಹು ಮುಖ್ಯ ವಿಚಾರವಾಗಿದೆ.ಆಧ್ಯಾತ್ಮಿಕ ವಿಚಾರದಲ್ಲಿ ನಮಸ್ಕಾರ ಮನದ ಅಹಂ ಕಳೆದುಕೊಳ್ಳುವ ಮಾರ್ಗವೂ ಹೌದು ಹಾಗೆಯೆ ಮೋಕ್ಷಕ್ಕೆ ಬಾಗಿಲು ನಮಸ್ಕಾರ ಎಂದರೂ ತಪ್ಪಲ್ಲ. ಯೋಗದಲ್ಲಿ ನಮಸ್ಕಾರವು ದೈಹಿಕ ಶಿಸ್ತಿಗೆ ಪ್ರಾರ್ಥನೆ ಗೀತೆ ಇದ್ದಹಾಗೆ.
ನಮಸ್ಕಾರದ ಉದ್ದೇಶ ಮತ್ತೊಬ್ಬ ವ್ಯಕ್ತಿಯಲ್ಲಿರುವ “ಅಧಮ್ಯ ಶಕ್ತಿಯನ್ನು” ಗೌರವಿಸುವುದು,ಇಲ್ಲ ವ್ಯಕ್ತಿಯಲ್ಲಿನ ಒಳ್ಳೆತನಕ್ಕೆ,ದೈವತ್ವವಕ್ಕೆ ಶರಣಾಗುವುದು. ವಚನಕಾರರು ಒಂದಡೆ ಹೀಗೆ ಹೇಳುತ್ತಾರೆ..

ಶರಣ ಶರಣನ ಕಂಡು,
ಶರಣು ಎಂದು ಕರವ ಮುಗಿವುದೆ
ಭಕ್ತಿಲಕ್ಷಣ
ಶರಣ ಶರಣನ ಕಂಡು
ಪಾದವಿಡುದು ವಂದಿಸುದೆ ಭಕ್ತಿ.
ವಚನ ಸಾಹಿತ್ಯದ ಮೂಲಕ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಹಾಗೂ ಆಧ್ಯಾತ್ಮಿಕ ಕ್ರಾಂತಿ ಉಂಟುಮಾಡಿದ ಬಸವಣ್ಣ ಹಾಗೂ ಹರಳಯ್ಯ ಭೇಟಿಯಾದಾಗ ಶರಣ ಹರಳಯ್ಯ ಬಸವಣ್ಣನಿಗೆ “ಶರಣು” ಎನ್ನುತ್ತಾರೆ, ಆಗ ಬಸವಣ್ಣ ತಿರುಗಿ ಹರಳಯ್ಯನವರಿಗೆ “ಶರಣು, ಶರಣಾರ್ಥಿಗಳು” ಎನ್ನತ್ತಾರೆ, ಇದು ಹರಳಯ್ಯನವರಿಗೆ ಭಾರವೆನಿಸುತ್ತೆ, ನಾನು ಒಂದು ಬಾರಿ ನಮಸ್ಕಾರ ಹೇಳಿದರೆ ಅಣ್ಣ ಬಸವಣ್ಣ ನವರು ನನಗೆ ಎರಡು ಬಾರಿ ನಮಸ್ಕಾರ ಹೇಳಿದರಲ್ಲ ಎಂದು ,ಚಿಂತೆಗೀಡಾದ ಹರಳಯ್ಯ ಇವರ ಋಣ ಹೇಗೆ ತೀರಿಸೋದು ಎಂದು ಯೋಚಿಸತೊಡಗಿದ.
ಒಂದು ದಿನ ತಮ್ಮ ತೊಡೆಯ ಚರ್ಮವನ್ನು ತೆಗೆದು ಪಾದರಕ್ಷೆಗಳನ್ನು ತಯಾರಿಸಿ ದಂಪತಿಗಳು ಬಸವಣ್ಣನಿಗೆ ನೀಡುತ್ತಾರೆ. ಇದನ್ನು ಕಂಡ ಬಸವಣ್ಣ ಆಶ್ಚರ್ಯಚಕಿತರಾಗುತ್ತಾರೆ,ಮಾತ್ರವಲ್ಲ ಭಾವುಕರಾಗಿ ಆ ಪಾದರಕ್ಷೆಗಳನ್ನು ತಲೆಯಮೇಲೆ ಇಟ್ಟುಕೊಂಡು ಅವರ ಅಭಿಮಾನಕ್ಕೆ ಶರಣಾಗುತ್ತಾರೆ. ಇಲ್ಲಿ ನಮಗೆ ನಮಸ್ಕಾರದ ಮಹತ್ವ ತಿಳಿದು ಬರುತ್ತದೆ. ನಮಸ್ಕಾರ ಎಂಬುದು ಕೇವಲ ಒಂದು ಪದವಲ್ಲ, ಸುಖಾ ಸುಮ್ಮನೆ ಬಳಿಸುವ ಪದವೂ ಅಲ್ಲ ಎಂದು ಈ ಘಟನೆ ನಮಗೆ ಪಾಠ ಹೇಳುತ್ತದೆ.
ಇತ್ತೀಚಿಗೆ ಪಾಶ್ಚಿಮಾತ್ಯ ಸಂಸ್ಕೃತಿ ಪ್ರಭಾವದಿಂದ ನಮಸ್ಕಾರದಲ್ಲಿದ್ದ ಗೌರವ, ವಿಶ್ವಾಸ,ಪ್ರೀತಿ ,ಶರಣಾಗತಿಯ ಮನೋಭಾವ ಮರೆಯಾಗಿವೆ.ಮತ್ತೆ ಕೆಲವರು ನಮಸ್ಕಾರವನ್ನು ವ್ಯಂಗ್ಯವಾಗಿ ಬಳಸಿದರೆ,ಮತ್ತೆ ಕೆಲವರು ಕೆಲಸ ಮಾಡಿಸಿಕೊಳ್ಳಲು ನಮಸ್ಕಾರ ಬಳಸುತ್ತಾರೆ, ಕೆಲವರು ನಮಸ್ಕಾರ ಪಡೆಯಲು ಗತ್ತು,ಅಧಿಕಾರ ತೋರಿಸಿದರೆ,ಮತ್ತೆ ಕೆಲವರು ನಮಸ್ಕಾರ ವನ್ನು ಮಸ್ಕಾ ಹೊಡೆಯಲು ಬಳೆಸುತ್ತಾರೆ.
ಒಬ್ಬರು ಇನ್ನೊಬ್ಬರನ್ನು ನೋಡಿದಾಗ “ನಮಸ್ತೆ” ಎನ್ನುತ್ತೇವೆ ಕೈಗಳನ್ನು ಜೋಡಿಸಿ, ಶಿರಭಾಗಿ ನಮಿಸುತ್ತೇವೆ.ನಮಸ್ಕಾರ ದಿಂದ ನಾನು-ದೇವರು, ನೀನು-ದೇವರು.ನಾನು ನಿನಗೆ ದೇವರನ್ನು ನೆನಪಿಸುತ್ತೇನೆ, ನೀನು ನನಗೆ ದೇವರನ್ನು ಜ್ಞಾಪಿಸುತ್ತೀಯ ಎಂಬುದೇ ಇಲ್ಲಿ ಮುಖ್ಯ.ಮಹಾಭಾರತದಲ್ಲಿ ಕೆಲವೊಮ್ಮೆ ಶ್ರೀಕೃಷ್ಣನೂ ಕೂಡ ದುರ್ಯೋಧನನಿಗೆ ನಮಸ್ಕಾರ ಎಂದು ಹೇಳುತ್ತಾನೆ.ಇಲ್ಲಿ ಶ್ರೀಕೃಷ್ಣ ದೇವರೆಂದಾಗಲಿ, ಧುರ್ಯೋಧನ ಮಾನವೆಂದಾಗಲಿ ಅಲ್ಲ.ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ಗೌರವಿಸುವ ವಿಧಾನ ಇದಾಗಿದೆ.ನಮಸ್ಕಾರದಿಂದ ವ್ಯಕ್ತಿಯಲ್ಲಿರುವ ಅಹಂಕಾರ ತಗ್ಗಿಸುತ್ತದೆ. ಇಬ್ಬರ ನಡುವೆ ಮಧುರ ಬಾಂಧವ್ಯ ಏರ್ಪಡುತ್ತದೆ.ಉತ್ತಮ ಸಮಾಜದ ನಿರ್ಮಾಣದಲ್ಲಿ ನಮಸ್ಕಾರದ ಪಾತ್ರ ಬಹು ಮುಖ್ಯವಾಗಿ ಕೆಲಸ ಮಾಡಿದೆ.
ಇತಿಹಾಸ ಪೂರ್ವಕಾಲದಲ್ಲಿ ಜಡವಸ್ತುಗಳಿಗೂ ಪ್ರಕೃತಿ ವ್ಯವಹಾರಕ್ಕೂ ಚೇತನವನ್ನು ಆರೋಪಿಸುವ ವಾಡಿಕೆ ಬಂತು, ನಿಸರ್ಗದಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳಿಗೆ ಕಾರಣ ಒಂದು ಮಹಾ ಚೇತನವಿದೆ ಎಂಬ ನಂಬಿಕೆಯು ಬಂತು. ಆ ಮಹಾಚೇತನದೊಂದಿಗೆ ಕೂಡವುದೆ ಮೋಕ್ಷವೆಂದು ನಂಬಿದರು.ನಮಸ್ಕಾರದ ಮೂಲಕ ಪ್ರಾರ್ಥಿಸುವುದೆ ಇದಕ್ಕೆ ಮಾರ್ಗ ಎಂಬ ನಂಬಿಕೆ ಯಿಂದ ಹುಟ್ಟಿದ ಶೈಲಿಯೆ ನಮಸ್ಕಾರ ಇರಬೇಕು.ಅಂತಹ ಅಧ್ಭುತ ನಮಸ್ಕಾರಕ್ಕೆ…ಕೋಟಿ,ಕೋಟಿ ನಮಸ್ಕಾರಗಳು.
ಆರು ಕಂಡು ಕೈಯೆತ್ತಿ ಮುಗಿದರೆ
ನಾನು ಮುಗಿವೆನಾಗಿ, ಅದೇನು ಕಾರಣವೆಂದರೆ
ಅವರ ನಿಟಿಲತಟದ ಭೂಮಧ್ಯೆದಲ್ಲಿ
ಕಪಿಲಸಿದ್ಧ ಮಲ್ಲಿಕಾರ್ಜುನನಿಪ್ಪನಾಗಿ
ಅವರರಿಯರು ನಾ ಬಲ್ಲೆನಾಗಿ ಕೈಮುಗಿವೆನು-ಸಿದ್ಧರಾಮ.

ಡಾ||.ಯು.ಶ್ರೀನಿವಾಸ ಮೂರ್ತಿ.

ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜ್ ಬಳ್ಳಾರಿ.ಫೋನ್ ಸಂ:೯೭೩೧೦೬೩೯೫೦.

Share and Enjoy !

Shares