ಹಾಸನ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ.), ಬೆಂಗಳೂರು ವತಿಯಿಂದ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ದೇವಾಲಯ ಸನ್ನಿಧಿಯಲ್ಲಿ ಹಮ್ಮಿಕೊಂಡಿರುವ ಅಖಿಲ ಕರ್ನಾಟಕ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯದ ವಿವಿಧ ಕ್ಷೇತ್ರದ ಆರು ಸಾಧಕರಿಗೆ ೨೦೨೪ ನೇ ಸಾಲಿನ “ಶರಣ ಸಂಕುಲ ರತ್ನ ರಾಷ್ಟ್ರೀಯ ಪ್ರಶಸ್ತಿ” ನೀಡಿ ಗೌರವಿಸಲಾಗುತ್ತದೆ ಎಂದು ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟ್ರಸ್ಟಿಗಳಾದ ನಾಗರಾಜ್ ದೊಡ್ಡಮನಿ, ಎಚ್.ಎಸ್.ಬಸವರಾಜ್, ವಾಸು ಸಮುದ್ರವಳ್ಳಿ, ಡಾ. ಪಿ. ದಿವಾಕರ ನಾರಾಯಣ, ದೇಸು ಆಲೂರು, ಡಾ. ಎಚ್. ಕೆ. ಹಸೀನಾ, ಲತಾಮಣಿ ಎಂ. ಕೆ. ತುರುವೇಕೆರೆ ಮುಂತಾದವರನ್ನೊಳಗೊಂಡ ಆಯ್ಕೆ ಸಮಿತಿಯು ಎನ್. ಶೈಲಜಾ ಹಾಸನ (ಸಾಹಿತ್ಯ ಕ್ಷೇತ್ರ), ಸೈಯದ್ ಮುಹೀಬುಲ್ಲಾ ಖಾದ್ರಿ (ಪಾರಂಪರಿಕ ವೈದ್ಯಕೀಯ ಕ್ಷೇತ್ರ), ಮಹೇಶ್ ಎನ್. (ಮಾಧ್ಯಮ ಕ್ಷೇತ್ರ), ಚಂದ್ರಪ್ಪ ಕೆ.ಆರ್. (ಮುದ್ರಣ ಕ್ಷೇತ್ರ), ಸಿದ್ದೇಶ್ ಕುಮಾರ್ ವೈ.ಟಿ. (ಸಂಗೀತ ಕ್ಷೇತ್ರ) ಹಾಗೂ ವೈ. ಎಸ್. ರಮೇಶ್ (ಸಂಘಟನಾ ಕ್ಷೇತ್ರ) ಆರು ಸಾಧಕರನ್ನು ಆಯ್ಕೆ ಮಾಡಲಾಗಿದೆ.
ವೇದಿಕೆಯು ಡಿಸೆಂಬರ್ ೨೯ ಭಾನುವಾರ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಹಮ್ಮಿಕೊಂಡಿರುವ ಅಖಿಲ ಕರ್ನಾಟಕ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಲ್ಬುರ್ಗಿ ಜಿಲ್ಲೆಯ ಶ್ರೀ ತೋಂಟದಾರ್ಯ ಅನುಭವ ಮಂಟಪ, ಆಳಂದ ಮಠದ ಶ್ರೀ ಕೋರಣೇಶ್ವರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್.ಎನ್. ಮುಕುಂದರಾಜ್ ಸಮ್ಮೇಳನ ಉದ್ಘಾಟಿಸಲಿದ್ದಾರೆ. ತುಮಕೂರಿನ ಹಿರಿಯ ಸಾಹಿತಿ ಹಾಗೂ ಹೋರಾಟಗಾರ್ತಿ ಡಾ. ಬಿ.ಸಿ.ಶೈಲಾ ನಾಗರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ನಾಡಿನ ವಿವಿಧ ಕ್ಷೇತ್ರಗಳ ಸಾಧಕರಿಗೆ ಕುಣಿಗಲ್ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಡಾ. ಎಚ್.ಡಿ. ರಂಗನಾಥ್ ಹಾಗೂ ರಾಜ್ಯ ಉಪಾಧ್ಯಕ್ಷರಾದ ಟಿ. ಸತೀಶ್ ಜವರೇಗೌಡರವರು ಶರಣ ಸಂಕುಲ ರತ್ನ ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಲಿದ್ದಾರೆ.