ಅಂಜನೇಯನ ಜನ್ಮಸ್ಥಳ ಅಂಜನಾದ್ರಿ, ಅಂಜನಾದ್ರಿ ಬೆಟ್ಟ.

ಹನುಮಾನ್, ಅಂಜನಿಸುತ, ವಾಯುಪುತ್ರ, ಮಹಾಬಲಿ, ರಾಮೇಷ್ಟ, ಫಲ್ಗುಣಸಖ, ಪಿಂಗಾಕ್ಷಯ, ಅಮಿತವಿಕ್ರಮ, ಉಧದಿಕ್ರಮಣ, ಸೀತಾಶೋಕವಿನಾಶಕ, ಲಕ್ಷ್ಮಣಪ್ರಾಣದಾತ, ರಾವಣದರ್ಪಹಾರಿ ಇವು ಭಗವಂತ ಹನುಮನ ನಾಮಗಳು. ಈ ನಾಮಗಳನ್ನು ನೆನೆಯಲು ಒಂದು ಕಾರಣವಿದೆ.

ಅದೇನೆಂದರೆ ಈ ಒಂದೊಂದು ನಾಮಗಳಲ್ಲಿ ಒಂದೊಂದು ಹನುಮನ ಕಥೆಯಿದೆ. ಇದರಲ್ಲಿ ಅಂಜನಿಸುತ ಎಂದು ಕರೆಯಲಾಗುವ ನಾಮದ ಅರ್ಥ- ಹನುಮನು ತಾಯಿ ಅಂಜನಿಯ ಪುತ್ರನಾಗಿದ್ದಾನೆ. ಹೀಗಾಗಿ ಆತನಿಗೆ ಅಂಜನಿಸುತ ಎಂದು ಕರೆಯಲಾಗುತ್ತದೆ. ಹೀಗಾಗಿ ಈ ನಾಮವನ್ನು ಅಂಜನೇಯನ ಜನ್ಮಸ್ಥಳವೆಂದೇ ಖ್ಯಾತಿ ಪಡೆದಿರುವ ಅಂಜನಾದ್ರಿ ಬೆಟ್ಟಕ್ಕೂ ಕರೆಯಲಾಗುತ್ತದೆ

ಅಂಜನಾದ್ರಿ ಬೆಟ್ಟ:

ಕರ್ನಾಟಕದಲ್ಲಿ ಹಲವಾರು ಮಾರುತಿಯ ದೇವಸ್ಥಾನಗಳಿವೆ. ಅಂಥಹ ಖ್ಯಾತಿ ಪಡೆದ ದೇವಸ್ಥಾನಗಳಲ್ಲಿ ಅಂಜನಾದ್ರಿ ಬೆಟ್ಟದಲ್ಲಿರುವ ಹನುಮನ ದೇವಸ್ಥಾನವೂ ಒಂದು. ಇದು ಐತಿಹಾಸಿಕ ತಾಣವಾದ ಕೊಪ್ಪಳದ ಕೊಪ್ಪ ನಗರದಲ್ಲಿದೆ. ಐತಿಹಾಸಿಕ ಸ್ಥಳ ಹಂಪಿಯಿಂದ ತುಂಗಭದ್ರಾ ನದಿಗೆ ಅಡ್ಡಲಾಗಿ ಆನೆಗುಂಡಿಗೂ ಹತ್ತಿರದಲ್ಲಿದೆ. ವಿಶೇಷ ದಿನಗಳು ಸೇರಿದಂತೆ ಇಲ್ಲಿ ಹನುಮ ಜಯಂತಿಯಂದು, ಶನಿವಾರದಂದು ಹನುಮನನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಲಾಗುತ್ತದೆ.

ಇಲ್ಲಿ ಆಂಜನೇಯನಿಗೆ ಗೌರವವಾಗಿ ಸುಂದರ ಹನುಮಾನ್ ದೇವಾಲಯವನ್ನು ನಿರ್ಮಿಸಲಾಗಿದೆ. ಈ ದೇವಾಲಯವು ಅಂಜನಾದ್ರಿ ಬೆಟ್ಟದ ತುದಿಯಲ್ಲಿದೆ. ಬೇಡಿದ್ದನ್ನು ಭಕ್ತರಿಗೆ ಕರುಣಿಸುವ ಈ ಹನುಮನನ್ನು ಕಾಣಲು ಭಕ್ತರು ಬರೋಬ್ಬರಿ 570 ಮೆಟ್ಟಿಲುಗಳನ್ನು ಹತ್ತಬೇಕು. ಇನ್ನೂ ಇಲ್ಲಿ ಭಕ್ತರನ್ನು ಆಹ್ವಾನಿಸುವಂತೆ ಕೋತಿಗಳು ಎದುರಾಗುತ್ತವೆ. ಇವುಗಳಿಗೆ ಆಹಾರ ನೀಡುವ ಮೂಲಕ ಭಕ್ತರು ಹನುಮನ ದರ್ಶನ ಪಡೆಯುತ್ತಾರೆ.

ಅಂಜನಾದ್ರಿ ಎನ್ನಲು ಕಾರಣವೇನು?

ಅಂಜನೇಯ ಎಂಬುದು ಹನುಮನ ಮತ್ತೊಂದು ಹೆಸರು. ಇದು ಆತನ ತಾಯಿ ಅಂಜನಿ ಹೆಸರು. ಅದಕ್ಕಾಗಿಯೇ ಬೆಟ್ಟವನ್ನು ಅಂಜೇನೇಯ ಅಥವಾ ಅಂಜನಾದ್ರಿ ಎಂದು ಕರೆಯಲಾಗುತ್ತದೆ. ಇದನ್ನು ಹನುಮನ ಜನ್ಮಸ್ಥಳವೆಂದು ಹೇಳಲಾಗುತ್ತದೆ. ಹಿಂದೂಗಳ ಆರಾಧ್ಯ ದೈವ ಹನುಮನ. ಶ್ರೀರಾಮನ ಹೆಗಲಿಗೆ ಹೆಗಲಾಗಿ ನಿಂತು ತಾಯಿ ಸೀತಾ ಮಾತೆಯನ್ನು ರಾವಣನಿಂದ ಕಾಪಾಡಿದ ಶ್ರೀರಾಮನ ಅಪ್ಪಟ ಭಕ್ತ ಹನುಮ. ಹೀಗಾಗಿ ಎಲ್ಲಿ ಶ್ರೀರಾಮನನ್ನು ನೆನೆಯುವರೋ ಅಲ್ಲಿ ಹನುಮನಿರುತ್ತಾನೆ ಎನ್ನಲಾಗುತ್ತದೆ. ಅದಕ್ಕಾಗಿನೇ ಶ್ರೀರಾಮನನ್ನು ಪೂಜಿಸುವ ಮುನ್ನ ಹನುಮನ ದರ್ಶನ ಪಡೆಯಲಾಗುತ್ತದೆ. ಅಂಜನೇಯನ ಆಶೀರ್ವಾದ ಇದ್ದರೆ ಅಂಥವರು ಜೀವನದಲ್ಲಿ ಕುಗ್ಗುವುದಿಲ್ಲ, ನಿರಾಸೆಗೊಳ್ಳುವುದಿಲ್ಲ, ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸುವ ಶಕ್ತಿಯನ್ನು ಪಡೆಯುತ್ತಾರೆಂದು ನಂಬಲಾಗಿದೆ.

ದೇವಸ್ಥಾನದ ರಚನೆ

ಅಂಜನಾದ್ರಿ ಬೆಟ್ಟದಲ್ಲಿರುವ ಹನುಮನ ದೇವಸ್ಥಾನವನ್ನು ಬಿಳಿ ಬಣ್ಣದ ಪಿರಮಿಡ್ ರಚನೆಯೊಂದಿಗೆ ರಚಿಸಲಾಗಿದ್ದು, ಮೇಲ್ಭಾಗದಲ್ಲಿ ಸಣ್ಣ ಕೆಂಪು ಗಮ್ಮಟವನ್ನು ಹೊಂದಿದೆ. ಇಲ್ಲಿನ ವಿಗ್ರಹವನ್ನು ಬಂಡೆಯಿಂದ ಕೆತ್ತಲಾಗಿದೆ. ತಾಯಿ ಅಂಜನಿದೇವಿಯ ದೇವಾಲಯವೂ ಇಲ್ಲದೆ. ಜೊತೆಗೆ ರಾಮ ಮತ್ತು ಸೀತೆಯ ಸಣ್ಣ ದೇವಾಲಯವನ್ನು ಇಲ್ಲಿ ಕಾಣಬಹುದು. ನಿತ್ಯ ಇಲ್ಲಿ ಆಂಜನೇಯ ಮಂತ್ರ ಪಠಣ ನಡೆಯುತ್ತದೆ.

ಏನೆಲ್ಲಾ ವೀಕ್ಷಿಸಬಹುದು?

ಈ ನಯನ ಮನೋಹರವಾದ ಅಂಜನಾದ್ರಿ ಪರ್ವತವೂ ತುಂಗ ಭದ್ರಾ ನದಿಯ ತಟದಲ್ಲಿದೆ. ಇದರೊಂದಿಗೆ ಋಶ್ಯ ಮೂಕ ಪರ್ವತ, ಅಂಜನಾದಿಪರ್ವತ, ಮಾತಂಗ ಪರ್ವತ, ಹೇಮಕೂಟ ಪರ್ವತ, ಮಾತಂಗ ಪರ್ವತಗಳನ್ನೂ ಇಲ್ಲಿ ಕಣ್ತುಂಬಿಕೊಳ್ಳಬಹುದು. ಜೊತೆಗೆ ವಿಶೇಷ ದಿನಗಳಲ್ಲಿ ಅಂದರೆ ಹನುಮಾನ್ ಜಯಂತಿ, ಶನಿವಾರ, ಹಬ್ಬಗಳ ಸಂದರ್ಭಗಳಲ್ಲಿ ಈ ದೇವಸ್ಥಾನಕ್ಕೆ ತೆರಳುವ ಭಕ್ತರ ಸಂಖ್ಯೆ ಅಧಿಕವಾಗಿರುತ್ತದೆ

ಅಂದಹಾಗೆ ಈ ಬೆಟ್ಟವನ್ನು ಹತ್ತಲು ವೃದ್ಧರಿಗೆ ಪುಟ್ಟ ಮಕ್ಕಳಿರುವವರಿಗೆ ಭಯವಾಗಬಹುದು. ಆದರೆ ಈ ಬೆಟ್ಟದ ಮೇಲೆ ಕಾಣಿಸುವ ಪ್ರಕೃತಿಯ ಸೌಂದರ್ಯ ಕಣ್ತುಂಬಿಕೊಳ್ಳುವುದರಲ್ಲಿ ಅದೇನೋ ಆನಂದ ಸಿಗುತ್ತದೆ. ಇನ್ನೂ ಈ ಸ್ಥಳದಲ್ಲಿ ಸೂರ್ಯಾಸ್ತದ ವೀಕ್ಷಣೆಯೂ ಜನಪ್ರಿಯವಾಗಿದೆ. ಬೆಟ್ಟದ ಮೇಲಿಂದ ಸಂಜೆ ಹೊತ್ತು ಸೂರ್ಯ ಮುಳುಗುವುದನ್ನು ನೋಡುವುದು ಅದ್ಬುತವಾಗಿರುತ್ತದೆ.

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ: ಅಯೋಧ್ಯೆಯಲ್ಲಿ ಬಹು ನಿರೀಕ್ಷಿತ ರಾಮ ಮಂದಿರ ಉದ್ಘಾಟನೆ ಜನವರಿ 22ರಂದು ನಡೆಯಲಿದೆ. ಈ ಸಮಯದಲ್ಲಿ ಅಂಜನಾದ್ರಿ ಬೆಟ್ಟದಲ್ಲೂ ಅಂಜನೇಯನಿಗೆ ವಿಶೇಷ ಪೂಜೆಗಳು ನಡೆಯಲಿವೆ. ಈ ವೇಳೆ ಅಧಿಕ ಸಂಖ್ಯೆಯಲ್ಲಿ ಶ್ರೀರಾಮನ ಹಾಗೂ ಹನುಮನ ಭಕ್ತರು ಇಲ್ಲಿಗೆ ಭೇಟಿ ನೀಡಲಿದ್ದಾರೆ.

Share and Enjoy !

Shares