ಅಯೋಧ್ಯೆಯ ರಾಮನಿಗೆ ಅಕ್ಷರಗಳ ಮಾಲೆ! ಇದು ಕನ್ನಡ ವರ್ಣಮಾಲೆಯಿಂದ ಸಿಂಗರಿಸಿದ ಸರಳ ರಾಮಾಯಣ ಕಥನ.

ರಚನೆ: ಶ್ರೀಮತಿ ಪದ್ಮಶ್ರೀ , ಬೆಂಗಳೂರು.

  ಅಯೋಧ್ಯೆಯಲ್ಲಿ ಪುತ್ರಕಾಮೇಷ್ಠಿ ಯಾಗದಿಂದಾಯಿತು ದಶರಥನ ಪುತ್ರರತ್ನರ ಜನನ

.  ಆಟದ ಜೊತೆಗೆ ವಿದ್ಯಾಭ್ಯಾಸವನ್ನೂ ಮಾಡುತ್ತಿದ್ದರು ರಾಮ, ಲಕ್ಷ್ಮಣ, ಭರತ, ಶತ್ರುಘ್ನ

   ಇದ್ದಕ್ಕಿದ್ದಂತೆ  ಋಷಿ ವಿಶ್ವಾಮಿತ್ರರು ಅಯೋಧ್ಯೆಗೆ ಬಂದರೊಂದು ದಿನ

.  ಈ ಮಹರ್ಷಿಗಳು ರಾಮ ಲಕ್ಷ್ಮಣರಿಗಿತ್ತರು  ಸಿದ್ಧಾಶ್ರಮಕ್ಕೆ ಆಹ್ವಾನ

  ಉಭಯರನ್ನೂ ಕರಕೊಂಡು ಪ್ರವೇಶಿಸಲು ಭಯಂಕರವಾದೊಂದು ವನ

 ಊರ್ಧ್ವಾಭಿಮುಖವಾಗಿ ರಾಕ್ಷಸಿ ತಾಟಕಿಯನ್ನು ಸಂಹರಿಸಿದ ಕೌಸಲ್ಯಾ ನಂದನ

.  ಋಷಿಗಳನೇಕರು ಲೋಕ ಕಲ್ಯಾಣಕ್ಕಾಗಿ ನಡೆಸುತ್ತಿದ್ದರೆ, ಹೋಮ ಹವನ

  ಎಡೆಬಿಡದೇ ಮಾರೀಚಾದಿ ರಾಕ್ಷಸರು ತರುತ್ತಿದ್ದರಿದಕ್ಕೆ ವಿಘ್ನ

.   ಏಕಾಗ್ರತೆಯಿಂದ ರಾಮ ಲಕ್ಷ್ಮಣರಿಟ್ಟರಲ್ಲಿ ತಮ್ಮ ಮನ

.   ಐಂದ್ರಜಾಲವೆಂಬಂತೆ ರಾಘವನಿಂದಾಯಿತು ಮಾರೀಚನ ಸೋಲು ಹಾಗೂ ಸುಬಾಹು ಮರ್ದನ

   ಒಟ್ಟಿನಲ್ಲಿ ರಾಜಕುಮಾರರಿಬ್ಬರೂ ಮಾಡಿದರು ಇನ್ನುಳಿದ ಅಸುರರ ದಮನ

   ಓಜಸ್ವಿಯಾದ ಶ್ರೀ ರಾಮನು ಹರಿಸಲು ಗೌತಮಾಶ್ರಮದತ್ತ ತನ್ನ ಗಮನ

   ಔಷಧಿಯಂತಾಗಿತ್ತಾಗ ಕಲ್ಲಾಗಿದ್ದ ಋಷಿ ಪತ್ನಿ ಅಹಲ್ಯೆಗೆ  ದಾಶರಥಿಯ ಆಗಮನ

ಅಂ.  ಅಂದವಾಗಿ ಅಲಂಕರಿಸಲಾಗಿತ್ತು ಇತ್ತ ಜನಕರಾಜನ ಆಸ್ಥಾನ

ಅಃ

 

  ಕನ್ಯೆಯಾದ ಸೀತಾ ಸ್ವಯಂವರಕ್ಕಾಗಿತ್ತು ಭವ್ಯ ಮಂಟಪದ ನಿರ್ಮಾಣ

 ಖಡ್ಗಧಾರಿ, ಧನುರ್ಧಾರಿ ರಾಜರಿಗೆಲ್ಲ ಇತ್ತು ಆಮಂತ್ರಣ

  ಗುರು ವಿಶ್ವಾಮಿತ್ರರೊಂದಿಗೆ ರಾಮ ಲಕ್ಷ್ಮಣರೂ ಬೆಳೆಸಿದರತ್ತ ತಮ್ಮ ಪ್ರಯಾಣ

   ಘನವಾದ ಶಿವ ಧನುಸ್ಸನ್ನು ರಾಮನು ಲೀಲಾಜಾಲವಾಗಿ ಭಂಗಿಸಿದ ಕಾರಣ

 

   ಚೆಂದದ ಚೆಲುವೆ ಮೈಥಿಲಿ ಕೋದಂಡರಾಮನಿಗೆ ಮನಸೋತಳು ಆ ಕ್ಷಣ

   ಛಲವಾದಿ ಸ್ಫುರದ್ರೂಪಿ ರಾಘವನನ್ನು ವರಿಸಿದಳು ತತ್‌ಕ್ಷಣ

   ಜನಕನ ಪುತ್ರಿಯರಿಗೆ ದಶರಥನ ಪುತ್ರರೊಂದಿಗಾಯಿತು ಪಾಣಿಗ್ರಹಣ

ಝಗಮಗಿಸುತ್ತಾ ಸಂಭ್ರಮಕ್ಕೆ ಸಾಕ್ಷಿಯಾಯಿತು ಮಿಥಿಲೆಯ ಆವರಣ

 

 ಟೀಕೆ ಟಿಪ್ಪಣಿಗಳಿಲ್ಲದೇ ಅಯೋಧ್ಯೆಯಲ್ಲಿ ರಾಮನಾಗಿದ್ದನು ರಘುಕುಲ ಭೂಷಣ

   ಠೀವಿಯಿಂದ ಸೃಷ್ಟಿಯಾಯಿತಲ್ಲಿ ಶ್ರೀರಾಮನ ಪಟ್ಟಾಭಿಷೇಕದ ವಾತಾವರಣ

    ಡೊಂಕು ಬುದ್ಧಿಯ ಮಂಥರೆಯಿಂದಾಯಿತು ಇದರ ವಾರ್ತಾ ಶ್ರವಣ

    ಢಣ ಢಣ ಘಂಟಾನಾದದಂತೆ ತನ್ನ ರಾಣಿಗೆ ಕಿವಿಯೂದಿದಳು ಮರುಕ್ಷಣ

 

  ತನ್ನ ಮಗನ ಪಟ್ಟಾಭಿಷೇಕ, ರಾಮನ ವನವಾಸದ ಕುರಿತು ಚಿತ್ರಣ

  ಥಟ್ಟನೆ ಪತಿಗೆ ಅರುಹಿದಳು ಕೈಕೇಯಿ ಬಿಸಾಕಿ ತನ್ನೆಲ್ಲಾ ಆಭರಣ

 ದಶರಥನಿಗೆ ಕಳೆದುಕೊಂಡಂತೆ ಭಾಸವಾಯಿತಾಗ ತನ್ನ ಪ್ರಾಣ

   ಧನುರ್ಧಾರಿ ರಾಘವನು ತಂದೆಗಿತ್ತು ವಚನ, ಕಾಡಿನತ್ತ ಹೊರಟನು ಹಿಡಿದು ಬಿಲ್ಲು ಬಾಣ

  ನಮ್ರತೆಯಿಂದ ಹಿಂಬಾಲಿಸಿದರು ಪತ್ನಿ ಜಾನಕಿ ಹಾಗೂ ತಮ್ಮ ಲಕ್ಷ್ಮಣ

 

   ಪುರ ಜನರಿಂದ ಬೀಳ್ಕೊಟ್ಟ ಇವರಿಗೆ ಅಗಸ್ತ್ಯಾದಿ ಮುನಿಗಳಾದರು ಆಶಾ ಕಿರಣ

  ಫಲಪುಷ್ಪಗಳಿಂದ ಕಂಗೊಳಿಸುತ್ತಿದ್ದ  ಪಂಚವಟಿಗೆ ಇಟ್ಟರವರ ಚರಣ

 ಬಂದೊದಗಿತ್ತೊಂದು ದಿನ ಇವರಿಗೆ ಶೂರ್ಪನಖಿಯ ಮೂಲಕ ಗ್ರಹಣ

 ಭಾರ್ಯೆ ಸೀತೆಗಾಗಿ  ಶ್ರೀರಾಮನು ಹುಡುಕ ಹೊರಡಲು ಚಿನ್ನದ ಹರಿಣ

  ಮಾಯಾ ವೇಷಧಾರಿ ರಾವಣನಿಂದಾಯಿತು ಜಾನಕಿಯ ಅಪಹರಣ

 

ಯೋಚನಾಕ್ರಾಂತರಾಗಿದ್ದ ಸಹೋದರರಿಗೆ ಜಟಾಯು ಪಕ್ಷಿಯಿಂದ ಸಿಕ್ಕಿತು ಮಾರ್ಗದರ್ಶನ

    ರಾಮನು ತನಗಾಗಿ ಭಕ್ತಿಯಿಂದ ಕಾಯುತ್ತಿದ್ದ ಶಬರಿಗೆ ಇತ್ತನು ದರ್ಶನ

ಲಕ್ಷಣವಾದ ಭಿಕ್ಷುವಿನ ರೂಪದ ಹನುಮನಿಂದಾಯಿತು ರಾಮ ಹಾಗೂ ಸುಗ್ರೀವರ ಮಿಲನ

ವಾಲಿಯನ್ನು ಸಂಹರಿಸಿದರೆ ರಾಮ, ಮಾರುತಿಯಿಂದಾಯಿತು ಲಂಕಾ ದಹನ

 ಶರಣಾಗತನಾದ ವಿಭೀಷಣನಿಗೆ ಸಿಕ್ಕಿತು ಶ್ರೀರಾಮನ ಆಲಿಂಗನ

ಷರತ್ತಿನಂತೆ ವಾನರರು ಲಂಕೆಗೆ ಸೇತುವೆ ನಿರ್ಮಿಸಿ ಮಾಡಲಾರಂಭಿಸಿದರೆ ಶತ್ರು ಪತನ

ಸಂಜೀವಿನಿ ಪರ್ವತವನ್ನೇ ಲಕ್ಷ್ಮಣನಿಗಾಗಿ ಹೊತ್ತು ತಂದ ಪ್ರಾಭಂಜನ

  ಹರಿತವಾದ ಇಂದ್ರಾಸ್ತ್ರದಿಂದ ಸೌಮಿತ್ರಿಯು ಮಾಡಿದರೆ ಮೇಘನಾಥನ ದಮನ

ಕ್ಷ   ಕ್ಷತ್ರಿಯವೀರ ರಾಮನಿಂದಾಯಿತು ರಾವಣನ ಮರಣ ಹಾಗೂ ಅರಳಿತು ಸೀತಾ ವದನ

ತ್ರ   ತ್ರಿಗುಣಾತೀತ ಸಂಪನ್ನ ಶ್ರೀರಾಮನಿಗೆ  ಸಿಕ್ಕಿತು ಅಯೋಧ್ಯೆಯ ಸಿಂಹಾಸನ

ಜ್ಞ  ಜ್ಞಾನಿಗಳಾದ ವಾಲ್ಮೀಕಿ ಮಹರ್ಷಿಗೆ ಹಾಗೂ ಸೀತಾರಾಮರಿಗೆ ನಮ್ಮೆಲ್ಲರ ಭಕ್ತಿ ಪೂರ್ವಕ ನಮನ

Share and Enjoy !

Shares