ಆಗಸದಲ್ಲಿ ಪುಷ್ಪಕ ವಿಮಾನ, ಕಥಕಳ್ಳಿ, ಯಕ್ಷ, ಗಜೇಂದ್ರ, ಭೂತಕೋಲದ ಚಿತ್ತಾರ!

Share and Enjoy !

Shares

ಮಂಗಳೂರು, ಫೆಬ್ರವರಿ.11: ಮಂಗಳೂರು ಕಡಲ ಕಿನಾರೆ ತಣ್ಣೀರುಬಾವಿ ಬೀಚ್ ನಲ್ಲಿ ಎರಡು ದಿನಗಳ ಕಾಲ ಅಂತರರಾಷ್ಟ್ರೀಯ ಗಾಳಿಪಟ ಉತ್ಸವ ಚಾಲನೆ ದೊರೆತಿದೆ. ಈ ಗಾಳಿಪಟ ಉತ್ಸವದಲ್ಲಿ ಟೀಮ್ ಮಂಗಳೂರಿನ ವಿಶೇಷ ಗಾಳಿಪಟವಾದ ಕಥಕಳ್ಳಿ, ಯಕ್ಷ, ಗಜೇಂದ್ರ, ಭೂತಕೋಲ, ಗರುಡ, ಪುಷ್ಪಕ ವಿಮಾನ ದಂತಹ ಕಲಾತ್ಮಕ ಗಾಳಿಪಟ ಗಳು ಆಕರ್ಷಣೆಯ ಕೇಂದ್ರ ವಾಗಿದ್ದು ಈ ಬಾರಿಯ ಉತ್ಸವದಲ್ಲಿ 8 ದೇಶಗಳ 13 ಮಂದಿ ಪ್ರತಿನಿಧಿಗಳು ಭಾಗವಹಿಸಿದ್ದಾರೆ.

ಕಡಲತೀರದ ಸೌಂದರ್ಯಕ್ಕೆ ಮನಸೋಲದ ಮನಸ್ಸುಗಳಿಲ್ಲ. ಇದಕ್ಕೆ ಪೂರಕವಾಗಿ ಇದೀಗ ಕಡಲ ಅಲೆಗಳ ರುದ್ರ ರಮಣೀಯ ದೃಶ್ಯದ ಜತೆಗೆ ಆಗಸದಲ್ಲಿ ಪಟ ಪಟನೆ ಸ್ವಚ್ಛಂದವಾಗಿ ಹಾರುವ ಗಾಳಿಪಟವನ್ನು ವೀಕ್ಷಿಸಿ ಆಸ್ವಾಧಿಸುವುದೇ ಕಣ್ಣಿಗೆ ಹಬ್ಬ. ಇಂಥಹದೊಂದು ಸಂದರ್ಭ ಮಂಗಳೂರಿನಲ್ಲಿ ಸೃಷ್ಟಿಸಲಾಗಿದೆ.

ಮಂಗಳೂರು ಹೊರವಲಯದ ತಣ್ಣೀರುಬಾವಿ ಕಡಲ ತೀರದಲ್ಲಿ ಎರಡು ದಿನಗಳಕಾಲ ನಡೆಯಲಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದ್ದಾರೆ . ಪ್ರತೀ ವರ್ಷ ಈ ಗಾಳಿಪಟ ಉತ್ಸವ ನಡೆಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಟೀಂ ಮಂಗಳೂರು ವತಿಯಿಂದ ಮೂರು ವರ್ಷದ ಬಳಿಕ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಲಾಗಿದೆ. ‘ಒಂದೇ ಆಕಾಶ, ಒಂದೇ ಭೂಮಿ, ಒಂದೇ ಕುಟುಂಬ’ ಎಂಬ ಧೈಯ ವಾಕ್ಯದಲ್ಲಿ ಸಾಮರಸ್ಯ, ಏಕತಾ ಭಾವಗಳಿಂದ ಈ ಉತ್ಸವ ಆಯೋಜನೆ ಮಾಡಲಾಗಿದೆ. ಸುಮಾರು 1,000ಕ್ಕೂ ಅಧಿಕ ವಿವಿಧ ವಿನ್ಯಾಸ, ಗಾತ್ರಗಳಿಂದ ಕೂಡಿದ ಗಾಳಿಪಟಗಳು ಆಗಸದಲ್ಲಿ ಹಾರಿವೆ.

ಎರಡು ದಿನಗಳು ನಡೆಯುವ ಈ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಮಲೇಷಿಯಾ, ಇಂಡೋನೇಷ್ಯ, ಗ್ರೀಸ್, ಸ್ಪೀಡನ್, ಉಕ್ರೇನ್, ಥೈಲ್ಯಾಂಡ್, ವಿಯೇಟ್ನಾಂ, ಇಸ್ಟೋನಿಯ ದೇಶಗಳ 13 ಮಂದಿ ಪ್ರತಿನಿಧಿಗಳು ಭಾಗಿವಹಿಸಿದ್ದಾರೆ. ಅದೇ ರೀತಿ, ಭಾರತದ ಮಹಾರಾಷ್ಟ್ರ ಗುಜರಾತ್, ತೆಲಂಗಾಣ ಮತ್ತು ಕೇರಳದ ಸುಮಾರು 20 ಮಂದಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಎರಡು ದಿನ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಗಾಳಿಪಟ ಹಾರಾಟ ಮತ್ತು ಪ್ರದರ್ಶನ ನಡೆಯಲಿದೆ. ಮೊದಲನೇ ದಿನ ರಾತ್ರಿ ವಿದ್ಯುತ್ ದೀಪಗಳ ಬಣ್ಣಗಳ ಬೆಳಕಿನಲ್ಲಿಯೂ ಗಾಳಿಪಟ ಹಾರಾಟಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಎಂಆರ್‌ಪಿಎಲ್- ಒಎನ್‌ಜಿಸಿ ಸಂಸ್ಥೆಯ ಪ್ರಾಯೋಜಕತ್ವ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಕಾರದಲ್ಲಿ ಈ ಉತ್ಸವ ನಡೆಯುತ್ತಿದೆ.

Share and Enjoy !

Shares