ಐತಿಹಾಸಿಕ ಬಳ್ಳಾರಿ ಕೋಟೆ ಮೇಲೆ ಸಂವಿಧಾನ ಜಾಗೃತಿ ಜಾಥಾ

Share and Enjoy !

Shares

ಬಳ್ಳಾರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಜಂಟಿಯಾಗಿ ‘ಸಂವಿಧಾನ ಜಾಗೃತಿ ಜಾಥಾ’ವನ್ನು ಐತಿಹಾಸಿಕ ಬಳ್ಳಾರಿ ಕೋಟೆಯಲ್ಲಿ ನಡೆಸಲಾಯಿತು.

ಬಳ್ಳಾರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಜಂಟಿಯಾಗಿ ಸಂವಿಧಾನ ಅಂಗೀಕಾರಗೊಂಡು 75ನೇ ವರ್ಷದ ಪ್ರಯುಕ್ತ ‘ಸಂವಿಧಾನ ಜಾಗೃತಿ ಜಾಥಾ’ವನ್ನು ಐತಿಹಾಸಿಕ ಬಳ್ಳಾರಿ ಕೋಟೆಯ ಮೇಲೆ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದ ಮೂಲಕ ಸಂವಿಧಾನದ ಮೌಲ್ಯ, ಆಶಯಗಳ ಕುರಿತು ಜನರಲ್ಲಿ ಅರಿವು ಮೂಡಿಸಲಾಯಿತು.

‘ನಮ್ಮ ಸಂವಿಧಾನ’ ಎಂಬ ಪರಿಕಲ್ಪನೆಯಡಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ, ರೆಡ್‍ಕ್ರಾಸ್ ಸ್ವಯಂ ಸೇವಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂವಿಧಾನ ನಡಿಗೆ ಮೂಲಕ ಬಳ್ಳಾರಿ ಕೋಟೆಯನ್ನು ಏರಿ ಸಂವಿಧಾನ ಜಾಗೃತಿಯನ್ನು ಮೂಡಿಸಲಾಯಿತು.

‘ಸಂವಿಧಾನ ಜಾಗೃತಿ ಜಾಥಾ’ದಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್. ಎನ್, ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸಂವಿಧಾನ ಮೌಲ್ಯ ಮತ್ತು ಆದರ್ಶಗಳನ್ನು ರಾಜ್ಯ, ರಾಷ್ಟ್ರ ಮಟ್ಟಕ್ಕೆ ಪಸರಿಸುವ ಕಾರ್ಯವಾಗಬೇಕಿದೆ. ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದರು.

ಬಳ್ಳಾರಿ ಕೋಟೆಯ ತುತ್ತ ತುದಿಯಲ್ಲಿ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಬಲೂನ್‍ಗಳನ್ನು ಹಾರಿಸಿ ಸಂಭ್ರಮಿಸುವ ಮೂಲಕ ಸಂವಿಧಾನ ಜಾಗೃತಿ ನಡಿಗೆಗೆ ಮೆರಗು ತಂದರು. ಸಂವಿಧಾನ ಪ್ರಸ್ತಾವನೆ ಭೋಧಿಸಲಾಯಿತು. ನಂತರ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸತೀಶ್ ಕೆ. ಹೆಚ್. ಅವರು ಸಂವಿಧಾನ ಜಾಗೃತಿ ಕುರಿತ ಗೀತೆಗಳನ್ನು ಹಾಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಮಾತನಾಡಿ, ಸಂವಿಧಾನದ ಮೌಲ್ಯ, ಆಶಯಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಎಲ್ಲರೂ ಕೈಜೋಡಿಸಬೇಕು. ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರು ರಚಿಸಿದ ನಮ್ಮ ಸಂವಿಧಾನ ಇಡೀ ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಠ ಸಂವಿಧಾನವಾಗಿದೆ. ಈ ಸಂವಿಧಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು

ಸಂವಿಧಾನ ನಡಿಗೆ, ಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ಬೆಟ್ಟದ ಬುಡದಲ್ಲಿ ರಂಗೋಲಿಯಲ್ಲಿ ಅರಳಿದ ಡಾ. ಬಿ. ಆರ್. ಅಂಬೇಡ್ಕರ್ ಅವರ ರೂಪ, ಸಂವಿಧಾನ ಪೀಠಿಕೆ, ಅಶೋಕ ಚಕ್ರ, ಸಂಸತ್ ಭವನ ಹಾಗೂ ನಮ್ಮ ಸಂವಿಧಾನ ಎಂದು ಬಿಡಿಸಿದ ರಂಗೋಲಿಯು ಆಕರ್ಷಣೆಯಾಗಿತ್ತು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸತೀಶ್. ಕೆ. ಹೆಚ್., ಅಬಕಾರಿ ಉಪ ಆಯುಕ್ತ ಮಂಜುನಾಥ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವೈ. ರಮೇಶ್ ಬಾಬು, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Share and Enjoy !

Shares