ಮಕ್ಕಳ ಮೆಚ್ಚಿನ ಬಾಂಬೆ ಮಿಠಾಯಿ ಮಾರಾಟ ನಿಷೇಧ: ಕಾರಣವೇನು?

Share and Enjoy !

Shares

ಕಡಿಮೆ ವೆಚ್ಚದ ಎಲ್ಲರ ಮೆಚ್ಚಿನ ತಿನಿಸು ಬಾಂಬೆ ಮಿಠಾಯಿ. ಕಳೆದ ಇಪ್ಪತ್ತು ವರ್ಷಗಳಿಂದ ಹೆಚ್ಚಾಗಿ ಮುನ್ನೆಲೆಗೆ ಬಂದ ಈ ತಿಸಿಸು ಮಕ್ಕಳಿಂದ ದೊಡ್ಡವರವರೆಗೂ ಎಲ್ಲರಿಗೂ ಅಚ್ಚುಮೆಚ್ಚಾಗಿತ್ತು. ನೋಡಲು ಆಕರ್ಷಕವಾಗಿದ್ದು, ದರವೂ ಕಡಿಮೆ ಇರುವುದರಿಂದ ಎಲ್ಲರ ಕೈಗೆಟುಕುವ ರುಚಿಯಾದ ಸಿಹಿ ತಿಂಡಿಗಳಲ್ಲಿ ಬಾಂಬೆ ಮಿಠಾಯಿ ಪ್ರಮುಖವಾಗಿತ್ತು. ಆದರೆ ಇದೀಗ ಮಕ್ಕಳ ಮೆಚ್ಚಿನ ಬಾಂಬೆ ಮಿಠಾಯಿ ಮಾರಾಟವನ್ನು ನಿಷೇಧಿಸಲಾಗುತ್ತಿದೆ.

ಹೌದು, ಬಾಂಬೆ ಮಿಠಾಯಿ ತಯಾರಿಕೆಯಲ್ಲಿ ವಿಷಕಾರಿ ರಾಸಾಯನಿಕಗಳ ಬಳಕೆಯನ್ನು ಆಹಾರ ಅಧಿಕಾರಿಗಳು ಪತ್ತೆಹಚ್ಚಿದ್ದು, ಪುದುಚೇರಿ ಸರ್ಕಾರವು ಕಳೆದ ವಾರದಿಂದ ಬಾಂಬೆ ಮಿಠಾಯಿ ಮಾರಾಟವನ್ನು ನಿಷೇಧಿಸಿದೆ. ಸದ್ಯ ಪುದುಚೇರಿಯಲ್ಲಿ ಬಾಂಬೆ ಮಿಠಾಯಿ ಮಾರಾಟವನ್ನು ನಿಷೇಧಿಸಲಾಗಿದೆ.

ಬಾಂಬೆ ಮಿಠಾಯಿಯಲ್ಲಿ ಆರೋಗ್ಯಕ್ಕೆ ಹಾನಿಕರ­ವಾದ ರೊಡಮೈನ್‌-ಬಿ ಎಂಬ ವಿಷಕಾರಿ ಅಂಶ ಪತ್ತೆಯಾಗಿ­ರುವುದಾಗಿ ಆಹಾರ ಸುರಕ್ಷತಾ ಅಧಿಕಾರಿಗಳು ವರದಿ ನೀಡಿದ್ದಾರೆ. ಹೀಗಾಗಿ ಪುದುಚೇರಿಯಾದ್ಯಂತ ಇನ್ನು ಬಾಂಬೆ ಮಿಠಾಯಿ ಮಾರಾಟ ನಿಷೇಧಿಸಿರುವುದಾಗಿ ಲೆಫ್ಟಿನೆಂಟ್‌ ಗವರ್ನರ್‌ ತಮಿಳಿಸೈ ಸೌಂದರರಾಜನ್ ತಿಳಿಸಿದ್ದಾರೆ.

ಬಾಂಬೆ ಮಿಠಾಯಿ ತಯಾರಿಕೆಯಲ್ಲಿ ಬಳಸುವ ರೋಡಮೈನ್ ಬಿ ಮಾನವರ ದೇಹಕ್ಕೆ ವಿಷಕಾರಿಯಾಗುತ್ತದೆ. ಇದನ್ನು ಸೇವಿಸಿದರೆ ಜೀವಕೋಶಗಳು ಮತ್ತು ಅಂಗಾಂಶಗಳ ಮೇಲೆ ಆಕ್ಸಿಡೇಟಿವ್ ಒತ್ತಡವನ್ನು ಉಂಟುಮಾಡಬಹುದು. ಇದರ ಸೇವನೆ ಕಾಲಾನಂತರದಲ್ಲಿ ಯಕೃತ್ತು ಹಾನಿ, ಗೆಡ್ಡೆಗಳು ಮತ್ತು ಮಾರಣಾಂತಿಕ ಕಾಯಿಲೆ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ವರದಿಯಾಗಿದೆ.

ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಸೌಂದರರಾಜನ್ ಅವರು ತಿಳಿಸಿರುವ ಪ್ರಕಾರ ‘ಸದ್ಯ ಕೇಂದ್ರಾಡಳಿತ ಪ್ರದೇಶದಲ್ಲಿ ಮಾರಾಟವಾಗುತ್ತಿದ್ದ ಕಾಟನ್ ಕ್ಯಾಂಡಿಯನ್ನು ಆಹಾರ ಸುರಕ್ಷತಾ ಅಧಿಕಾರಿಗಳು ಪರೀಕ್ಷಿಸಿದಾಗ ರೋಡಮೈನ್-ಬಿ ಎಂಬ ಹಾನಿಕಾರಕ ರಾಸಾಯನಿಕ ಅಂಶ ಕಂಡುಬಂದಿದೆ. ಹೀಗಾಗಿ ಜನರ ಆರೋಗ್ಯದ ದೃಷ್ಟಿಯ ಹಿನ್ನೆಲೆಯಲ್ಲಿ ಕಾಟನ್ ಕ್ಯಾಂಡಿ ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ಈ ಬಗ್ಗೆ ಇನ್ನೂ ಪರಿಶೀಲನೆ ನಡೆಯಲಿದ್ದು, ಆಹಾರ ಸುರಕ್ಷತಾ ಪ್ರಮಾಣ ಪತ್ರ ಎಷ್ಟು ಬೇಗ ಸಿಗುತ್ತದೋ ಅಷ್ಟು ಬೇಗ ವ್ಯಾಪಾರ ಆರಂಭಿಸಬಹುದು. ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಹೀಗಾಗಿ ಬಣ್ಣದ ಸೇರ್ಪಡೆಗಳನ್ನು ಹೊಂದಿರುವ ಈ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡಬಾರದು’ ಎಂದು ತಿಳಿಸಿದ್ದಾರೆ.

Share and Enjoy !

Shares