‘ಆಸ್ಕರ್ ಪ್ರಶಸ್ತಿ’ ಗೆದ್ದವರಿಗೆ ಸಿಗುವ ಹಣ ಎಷ್ಟು ಕೋಟಿ ರೂಪಾಯಿ?

ಬೆಂಗಳೂರು, ಮಾರ್ಚ್‌ 12: ಜಾಗತಿಕ ಮಟ್ಟದಲ್ಲಿ ಅತಿದೊಡ್ಡ ಬಹುಮಾನ ಎಂದು ಪರಿಗಣಿಸುವ ‘ಆಸ್ಕರ್ ಪ್ರಶಸ್ತಿ’ಯನ್ನು ಇಂದು ಘೋಷಣೆ ಮಾಡಲಾಗಿದೆ. ಸಿನಿಮಾ ನಟರಿಗೆ ಮತ್ತು ನಿರ್ದೇಶಕರಿಗೆ ಈ ಪ್ರಶಸ್ತಿ ಒಂದು ಕನಸಿನ ಕುದುರೆ ಇದ್ದಂತೆ ಸರಿ. ಇಂದು ವಿವಿಧ ವಿಭಾಗಗಳಲ್ಲಿ ‘ಆಸ್ಕರ್’ ವಿತರಿಸಲಾಗಿದೆ. ಈ ರೀತಿ ಪ್ರಶಸ್ತಿ ಪಡೆದವರಿಗೆ ಎಷ್ಟು ಕೋಟಿ ರೂಪಾಯಿ ಬಹುಮಾನ ಕೊಡುತ್ತಾರೆ ಎಂಬ ವಿಚಾರವೇ ಸಾಕಷ್ಟು ಕುತೂಹಲ ಕೆರಳಿಸುತ್ತದೆ.

ಜಾಗತಿಕ ಚಿತ್ರರಂಗವೇ ಕುತೂಹಲದಿಂದ ಕಾಯುತ್ತಿದ್ದ 96ನೇ ಅಕಾಡೆಮಿ ಪ್ರಶಸ್ತಿ ಕಾರ್ಯಕ್ರಮ ಇಂದು ನಡೆಯಿತು. ಸಮಾರಂಭದಲ್ಲಿ ಹಲವು ಸಿನಿಮಾಗಳು ದೊಡ್ಡ ದೊಡ್ಡ ಬಹುಮಾನಕ್ಕೆ ಮುತ್ತಿಟ್ಟಿವೆ. ಅಮೇರಿಕಾದ ಲಾಸ್ ಏಂಜಲೀಸ್ನಲ್ಲಿರುವ ಡಾಲ್ಬಿ ಥಿಯೇಟರ್​ನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಆಸ್ಕರ್ ಪ್ರಶಸ್ತಿ ವಿತರಣೆ ಮಾಡಲಾಗಿದೆ. ಪ್ರಶಸ್ತಿ ರೇಸ್‌ನಲ್ಲಿ ಇದ್ದ ನೂರಾರು ಸಿನಿಮಾಗಳ ನಡುವೆ ಅಕ್ಷರಶಃ ಯುದ್ಧವೇ ನಡೆದಿದೆ. ಈ ಯುದ್ಧದಲ್ಲಿ ಗೆದ್ದವರು ಈಗ ಆಸ್ಕರ್ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ. ಆಸ್ಕರ್ ಗೆದ್ದವರಿಗೆ ಸಿಗುವ ಹಣ ಎಷ್ಟು ಎಂಬುದು ಜಾಗತಿಕವಾಗಿ ಗಮನ ಸೆಳೆಯುತ್ತದೆ.

ಎಷ್ಟು ಕೋಟಿ ಸಿಗಬಹುದು? ಸಿನಿಮಾ ಲೋಕದ ಅತಿ ಪ್ರತಿಷ್ಠಿತ ಎನಿಸುವ, ಆಸ್ಕರ್ ಪ್ರಶಸ್ತಿ ವಿಜೇತರಿಗೆ ಎಷ್ಟು ಕೋಟಿ ನಗದು ಬಹುಮಾನ ನೀಡಲಾಗುತ್ತೆ? ಎಂಬ ಚರ್ಚೆ ಈಗ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಸಣ್ಣ ಪುಟ್ಟ ಪ್ರಶಸ್ತಿಗಳನ್ನು ನೀಡಿದರೆ ಸಾಕು ದೊಡ್ಡ ಮೊತ್ತದ ನಗದು ಅಥವಾ ಹಣ ಪ್ರಶಸ್ತಿ ಗೆದ್ದವರಿಗೆ ನೀಡುತ್ತಾರೆ. ಅದರಲ್ಲೂ ಇದು ಆಸ್ಕರ್ ಪ್ರಶಸ್ತಿ ಆಗಿರುವ ಕಾರಣಕ್ಕೆ ಇಲ್ಲಿ ಇನ್ನೂ ಹೆಚ್ಚಿನ ಹಣವನ್ನು ಪ್ರಶಸ್ತಿ ಗೆದ್ದವರಿಗೆ ನೀಡಲಾಗುತ್ತದೆ ಎಂಬ ಊಹೆ ಇರುತ್ತದೆ. ಆದರೂ ನಿಮ್ಮ ಊಹೆ ತಪ್ಪು. ಯಾಕೆಂದರೆ ಆಸ್ಕರ್ ಪ್ರಶಸ್ತಿ ಗೆದ್ದವರಿಗೆ ಸಿಗುವ ಹಣ ಎಷ್ಟು ಎಂಬ ಮಾಹಿತಿ ತಿಳಿದರೆ ನಿಮಗೆ ಆಶ್ವರ್ಯ ಕಟ್ಟಿಟ್ಟಬುತ್ತಿ.

ಆಸ್ಕರ್ ಗೆದ್ದವರಿಗೆ ಸೊನ್ನೆ: 96ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಸಿನಿಮಾ ಆಗಿ ಓಪನ್‌ ಹೈಮರ್ ಇದೀಗ ಆಯ್ಕೆ ಆಗಿದ್ದು. ಹಾಗೇ ಅತ್ಯುತ್ತಮ ನಟನಾಗಿ ಕಿಲಿಯನ್ ಮರ್ಫಿ & ಅತ್ಯುತ್ತಮ ನಟಿಯಾಗಿ ಎಮ್ಮಾ ಸ್ಟೋನ್ ಆಯ್ಕೆ ಆಗಿದ್ದಾರೆ. ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಕ್ರಿಸ್ಟೋಫರ್ ನೋಲನ್ ಅವರಿಗೆ ಸಿಕ್ಕಿದೆ. ಆಸ್ಕರ್ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಹೊಯ್ಟೆ ವ್ಯಾನ್ ಹೊಯ್ಟೆಮಾ ಅವರ ಪಾಲಾಗಿದೆ. ಹಾಗಾದರೆ ಇವರಿಗೆಲ್ಲಾ ಸಿಕ್ಕಿರುವ ಹಣದ ಪ್ರಮಾಣ ಎಷ್ಟು ಎನ್ನುವ ನಿಮ್ಮ ಪ್ರಶ್ನೆಗೆ ಉತ್ತರ ಮಾತ್ರ ಸೊನ್ನೆಯೇ ಆಗಿರುತ್ತದೆ!

ನಿಯಮ ಮೀರಿದರೆ ಕ್ರಮ: ಅಚ್ಚರಿಯಾದರೂ ಇದು ಸತ್ಯ ಸಂಗತಿ ಆಗಿದೆ. ಆಸ್ಕರ್ ಪ್ರಶಸ್ತಿ ಗೆದ್ದಿರುವವರಿಗೆ ಯಾವುದೇ ರೀತಿ ಹಣ ಸಿಗುವುದಿಲ್ಲ. ಆಸ್ಕರ್ ಪ್ರಶಸ್ತಿ ಬೆಲೆ ಕೋಟಿ ಕೋಟಿ ಅದಕ್ಕಾಗಿಯೇ ವಿಜೇತರಿಗೆ ಹಣವನ್ನು ಬಹುಮಾನದ ಜೊತೆಗೆ ನೀಡುವುದಿಲ್ಲ ಎಂಬ ಮಾತು ಇದೆ. ಇನ್ನು ನಾಮಿನೇಟ್ ಆದವರಿಗೆ ದೊಡ್ಡ ಮೊತ್ತದ ಗಿಫ್ಟ್ ಬ್ಯಾಗ್ ನೀಡಲಾಗುತ್ತದೆ. ಆದರೆ ಆಸ್ಕರ್ ವಿಜೇತರಿಗೆ ಟ್ರೋಫಿಯ ಬಿಟ್ಟು ಬೇರೆ ಯಾವುದೇ ನಗದು ಬಹುಮಾನ ನೀಡುವುದಿಲ್ಲ. ಅಲ್ಲದೇ ಈ ಟ್ರೋಫಿಯನ್ನು ಯಾರಿಗೂ ಮಾರಾಟ ಮಾಡುವಂತಿಲ್ಲ ಎಂಬ ನಿಯಮ ಕೂಡ ಇರುತ್ತದೆ. ಈ ಟ್ರೋಫಿ ಮಾರಾಟವನ್ನು ಮಾಡಿದರೂ ಕೇವಲ 1 ಡಾಲರ್‌ಗೆ ಮಾರಾಟ ಮಾಡಬೇಕು, ಈ ನಿಮಯ ಮೀರಿದರೆ ಯಾರು ತಪ್ಪು ಮಾಡಿರುತ್ತಾರೋ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅವಕಾಶ ಇರುತ್ತದೆ.

1929ರಲ್ಲಿ ಆಸ್ಕರ್ ಪ್ರಶಸ್ತಿ ಘೋಷಿಸಿದಾಗ ಅಕಾಡೆಮಿ ಪ್ರಶಸ್ತಿ ಮೊದಲ ಬಾರಿ ಆರಂಭವಾಯಿತು ಈ ಸಮಾರಂಭದಲ್ಲಿ ಮೊದಲ ಬಾರಿಗೆ 270 ಕ್ಕೂ ಹೆಚ್ಚು ಅತಿಥಿಗಳು ಭಾಗವಹಿಸಿದ್ದರು. ಪ್ರಶಸ್ತಿ ಸಮಾರಂಭದ ಪ್ರಸಾರವನ್ನು 1953 ರಿಂದ ಆರಂಭಿಸಿದರು. ವಿಶ್ವದ 200ಕ್ಕೂ ಹೆಚ್ಚು ದೇಶಗಳ ಜನರು ಆಸ್ಕರ್ ಸಮಾರಂಭ ವೀಕ್ಷಿಸಲು ಇದೀಗ ಕುತೂಹಲ ಹೊಂದಿದ್ದಾರೆ. ಜಗತ್ತಿನಾದ್ಯಂತ ಈ ಪ್ರಶಸ್ತಿ ದೊಡ್ಡ ಹೆಸರು ಸಂಪಾದನೆ ಮಾಡಿದೆ. ಸಿನಿಮಾ ರಂಗದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಆಸ್ಕರ್ ಪ್ರಶಸ್ತಿ ಪಡೆಯುವುದು ಒಂದು ದೊಡ್ಡ ಕನಸಾಗಿರುತ್ತದೆ.

Share and Enjoy !

Shares