ಕಾಂಗ್ರೇಸ್‌ನ ಗ್ಯಾರಂಟಿಗಳ ಆಟನಡೆಯುವುದಿಲ್ಲ:ಡಾ.ಕೆ.ಬಸವರಾಜ ಕ್ಯಾವಟರ್

ಸಿರುಗುಪ್ಪ.ಮಾ.೨೬:- ಕಾಂಗ್ರೇಸ್ ಸರ್ಕಾರದ ಗ್ಯಾರಂಟಿಗಳು ಲೋಕಸಭಾ ಚುನಾವಣೆಯ ನಂತರ ಸ್ಥಗಿತಗೊಳ್ಳಲಿವೆ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಸರ್ಕಾರದ ಗ್ಯಾರಂಟಿಗಳ ಆಟ ನಡೆಯುವುದಿಲ್ಲವೆಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿ ಡಾ.ಕೆ.ಬಸವರಾಜ ಕ್ಯಾವಟರ್ ಆರೋಪಿಸಿದರು.
ನಗರದ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಬಿ.ಜೆ.ಪಿ. ಘಟಕದ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಪ್ರಧಾನ ಮಂತ್ರಿ ನರೇಂದ್ರಮೋದಿಯವರು ವಿಶ್ವವೇ ಮೆಚ್ಚುವಂತಹ ಆಡಳಿತವನ್ನು ನಮ್ಮ ದೇಶಕ್ಕೆ ನೀಡಿದ್ದಾರೆ, ಮೋದಿಯವರ ಸರ್ಕಾರ ಮಾಡಿದ ಸಾಧನೆಗಳೇ ನಮಗೆ ಶ್ರೀರಕ್ಷೆ, ಕೇಂದ್ರ ಸರ್ಕಾರ ಮಾಡಿರುವ ಅನೇಕ ಜನಪರ ಕಾರ್ಯಕ್ರಮಗಳು ಜನಸಾಮಾನ್ಯರ ಬದುಕಿಗೆ ಅನುಕೂಲವಾಗಿವೆ. ಈ ಬಾರಿಯೂ ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲು ಬಿ.ಜೆ.ಪಿ.ಯ ಪ್ರತಿಯೊಬ್ಬ ಕಾರ್ಯಕರ್ತರು ಚುನಾವಣೆಯಲ್ಲಿ ಸೈನಿಕರಂತೆ ಕೆಲಸ ಮಾಡಬೇಕು, ಕೇಂದ್ರ ಸರ್ಕಾರದ ಸಾಧನೆಗಳನ್ನು ಮತದಾರರ ಮನೆ ಬಾಗಿಲಿಗೆ ಮುಟ್ಟಿಸಲು ಶ್ರಮಿಸಬೇಕೆಂದು ಕರೆ ನೀಡಿದರು.
ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಂಗ್ರೇಸ್ ಸರ್ಕಾರವು ಕೇವಲ ಗ್ಯಾರಂಟಿ ಯೋಜನೆಗಳನ್ನು ಈ ಚುನಾವಣೆಯಲ್ಲಿ ಪ್ರಮುಖ ಅಸ್ತ್ರವಾಗಿ ಬಳಸುತ್ತಿವೆ, ಆದರೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಆಡಳಿತ ವಿಶ್ವಕ್ಕೆ ಮಾದರಿಯಾಗಿದೆ, ಈ ಬಾರಿ ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗಲು ಕಾರ್ಯಕರ್ತರು ನಿಷ್ಟೆಯಿಂದ ಕಾರ್ಯನಿರ್ವಹಿಸಬೇಕೆಂದು ಹೇಳಿದರು.
ಮಾಜಿ ಶಾಸಕರಾದ ಪರಣ್ಣ ಮುನುವಳ್ಳಿ, ಮಾಜಿ ಸಚಿವ ನಾಗಪ್ಪ ಸಾಲೋಣಿ,ಪ್ರತಾಪ್‌ಗೌಡ, ದೊಡ್ಡನಗೌಡ ಪಾಟೀಲ್, ಬಸವರಾಜ ಧಡೆಸೂಗೂರು, ವಿ.ಪ.ಸದಸ್ಯೆ ಹೇಮಲತನಾಯ್ಕ್, ಜೆ.ಡಿ.ಎಸ್ ರಾಜ್ಯ ಯುವ ಕಾರ್ಯಾಧ್ಯಕ್ಷ ರಾಜುನಾಯಕ, ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಅನಿಲ್‌ಕುಮಾರ್, ಜೆ ಡಿ ಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ, ಮಾಜಿ ಸಂಸದ ವಿರುಪಾಕ್ಷಪ್ಪ, ಮಾಜಿ ಸಚಿವ ಹಾಲಪ್ಪ ಆಚಾರ್, ತಾ.ಅದ್ಯಕ್ಷ ಹೆಚ್.ಎಂ.ಮಲ್ಲಿಕಾರ್ಜುನಸ್ವಾಮಿ ಮತ್ತು ಮುಖಂಡರು, ವಿವಿಧ ಗ್ರಾಮಗಳ ಕಾರ್ಯಕರ್ತರು ಇದ್ದರು.

Share and Enjoy !

Shares