76ನೇ ಗಣರಾಜ್ಯೋತ್ಸವ ದಿನಾಚರಣೆ: ಜಿಲ್ಲಾ ಉಸ್ತುವಾರಿ ಸಚಿವರಿಂದ ರಾಷ್ಟ್ರ ಧ್ವಜಾರೋಹಣ … ಭಾರತದ ಪ್ರಜಾಪ್ರಭುತ್ವ ಇಡೀ ವಿಶ್ವಕ್ಕೆ ಮಾದರಿಯಾಗಿದೆ – ಸಚಿವ ಶಿವರಾಜ ತಂಗಡಗಿ

Vijayanagara Vani
76ನೇ ಗಣರಾಜ್ಯೋತ್ಸವ ದಿನಾಚರಣೆ: ಜಿಲ್ಲಾ ಉಸ್ತುವಾರಿ ಸಚಿವರಿಂದ ರಾಷ್ಟ್ರ ಧ್ವಜಾರೋಹಣ … ಭಾರತದ ಪ್ರಜಾಪ್ರಭುತ್ವ ಇಡೀ ವಿಶ್ವಕ್ಕೆ ಮಾದರಿಯಾಗಿದೆ – ಸಚಿವ ಶಿವರಾಜ ತಂಗಡಗಿ
ಕೊಪ್ಪಳ ಜನವರಿ 26 : ಭಾರತದ ಪ್ರಜಾಪ್ರಭುತ್ವ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್ ತಂಗಡಗಿ ಹೇಳಿದರು.
ಅವರು ಭಾನುವಾರ ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ 76ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಮಂಗಲ ಪಾಂಡೇ, ನೇತಾಜಿ ಸುಭಾಷಚಂದ್ರ ಭೋಸ್, ಭಗತ್‌ಸಿಂಗ್, ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಬ್ ಬಾಯ್ ಪಟೇಲ್ ಸೇರಿದಂತೆ ಇನ್ನೂ ಅನೇಕ ಮಹನೀಯರ ತ್ಯಾಗ, ಬಲಿದಾನದಿಂದ 1947ರ ಆಗಸ್ಟ್ 15 ರಂದು ನಮ್ಮ ದೇಶ ಸ್ವಾತಂತ್ರ್ಯ ಕಂಡಿತು. ಬಳಿಕ ಸಂವಿಧಾನ ಕರಡು ರಚನಾ ಸಮಿತಿ ಅಧ್ಯಕ್ಷರಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಅವಿರತ ಪರಿಶ್ರಮದ ಫಲವಾಗಿ 1950ರ ಜನವರಿ 26 ರಂದು ಭಾರತದ ಆಡಳಿತಕ್ಕೆ ಕೈಗನ್ನಡಿಯಾಗಿರುವ ಭಾರತದ ಸಂವಿಧಾನವನ್ನು ಅಂಗೀಕರಿಸಲಾಯಿತು. ಈ ದಿನವನ್ನು ನಾವು ಗಣರಾಜ್ಯ ದಿನವನ್ನಾಗಿ ಆಚರಿಸುತ್ತಾ ಬಂದಿದ್ದೇವೆ ಎಂದರು.
ಭಾರತೀಯರಾದ ನಾವು ದೇಶವನ್ನು ಸರ್ವಸ್ವತಂತ್ರ, ಸಮಾಜವಾದಿ, ಜಾತ್ಯಾತೀತ ಗಣರಾಜ್ಯವನ್ನಾಗಿ ರೂಪಿಸುವುದಾಗಿ ಘೋಷಿಸಿದ್ದು, ಇದಕ್ಕೆ ಪೂರಕವಾಗಿ ಸ್ವಾತಂತ್ರ್ಯ, ಸಮಾನತೆ ಹಾಗೂ ನ್ಯಾಯವನ್ನು ರಕ್ಷಿಸುವುದಾಗಿ ಸಂವಿಧಾನದ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. ನಮ್ಮ ಸಂವಿಧಾನವು ವಿಶ್ವದ ಬೃಹತ್ ಸಂವಿಧಾನವಾಗಿದ್ದು, 448 ವಿಧಿಗಳು, 12 ಪರಿಚ್ಛೇಧಗಳು, 103ಕ್ಕೂ ಹೆಚ್ಚು ಬಾರಿ ತಿದ್ದುಪಡಿಗಳನ್ನು ಒಳಗೊಂಡ ಸಂವಿಧಾನವಾಗಿರುತ್ತದೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ಇಡೀ ಜಗತ್ತಿಗೆ ಮಾದರಿ ಅನಿಸಿದೆ. ಎಂತಹ ಸವಾಲುಗಳು ಬಂದರೂ ಅವುಗಳನ್ನು ಎದುರಿಸಿ ನಮ್ಮ ಪ್ರಜಾಪ್ರಭುತ್ವದ ವ್ಯವಸ್ಥೆಯ ನೆಲೆಗಟ್ಟು ಭದ್ರವಾಗಿ ನಿಂತಿದೆ. ಇದಕ್ಕೆ ಸಂವಿಧಾನದ ಅಡಿಪಾಯ ಹಾಕಿದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ನಾವೆಲ್ಲರೂ ಚಿರ ಋಣಿಗಳಾಗಿರಬೇಕು ಎಂದು ಹೇಳಿದರು.
ಕೊಪ್ಪಳ ಜಿಲ್ಲೆಯ ತೊಗಲುಗೊಂಬೆಯಾಟ ಕಲಾವಿದೆ ಭೀಮವ್ವ ಶಿಳ್ಳೇಕ್ಯಾತರ ಅವರು 2025ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾವನಾಗಿರುವುದಕ್ಕೆ ಕೊಪ್ಪಳ ಜಿಲ್ಲೆ ಹಾಗೂ ನಮ್ಮ ಕರ್ನಾಟಕ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ. ಸುಮಾರ 7 ದಶಕಗಳಿಗೂ ಅಧಿಕ ಕಾಲ ತೊಗಲುಗೊಂಬೆಯಾಟವನ್ನೇ ತನ್ನ ಬದುಕಿನ ಹಾದಿಯಾಗಿಸಿಕೊಂಡು, ನೆಲದ ಕಲೆಯನ್ನು ದೇಶ-ವಿದೇಶಗಳಲ್ಲಿ ಪರಿಚಯಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ರಾಜ್ಯ ಸರ್ಕಾರವು ಪದ್ಮಶ್ರೀ ಪ್ರಶಸ್ತಿಗಾಗಿ ಭೀಮವ್ವ ಶಿಳ್ಳೇಕ್ಯಾತರ ಅವರ ಹೆಸರನ್ನು ಕೇಂದ್ರಕ್ಕೆ ಶೀಫಾರಸ್ಸು ಮಾಡಿತ್ತು. ಇದರ ಜೊತೆಗೆ ಮುನಿರಾಬಾದ್ ಐ.ಆರ್.ಬಿ ಕಮಾಂಡೆಂಟ್ ಬಿ.ಎಂ.ಪ್ರಸಾದ್ ಅವರಿಗೆ ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕ ಲಭಿಸಿದ್ದು, ಈ ಎರಡು ಸಾಧಕರಿಗೆ ಕೊಪ್ಪಳ ಜಿಲ್ಲೆ ಮತ್ತು ಈ ನಾಡಿನ ಜನತೆಯ ಪರವಾಗಿ ವಿಶೇಷ ಅಭಿನಂಧನೆಯನ್ನು ಸಲ್ಲಿಸುತ್ತೇನೆ ಎಂದರು.
*ಐದು ಗ್ಯಾರಂಟಿ ಯೋಜನೆಗಳಡಿ ಜಿಲ್ಲೆಯ ಪ್ರಗತಿ:* ನಮ್ಮ ರಾಜ್ಯ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಆರ್ಥಿಕವಾಗಿ ದುರ್ಬಲವಾಗಿರುವ ವರ್ಗದವರಿಗೆ ಪಂಚ ಗ್ಯಾರಂಟಿ ಯೋಜನೆಯಡಿ ಸೌಲಭ್ಯಗಳನ್ನು ಒದಗಿಸಿದ್ದು, ಮಹಿಳೆಯರು, ಪಡಿತರ ಚೀಟಿದಾರರು, ಯುವಕರು ಸೇರಿದಂತೆ ರಾಜ್ಯದ ಜನತೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಸರ್ಕಾರ ವಿವಿಧ ಸಮಾಜ ಮುಖಿ ಕಾರ್ಯಗಳನ್ನು ಜಾರಿಗೆ ತಂದಿರುವುದು ತಮಗೆಲ್ಲ ತಿಳಿದಿದೆ. ಅದರಲ್ಲಿ 2023ರ ಜೂನ್ ಮಾಹೆಯಲ್ಲಿ ಆರಂಭಗೊಂಡ ಶಕ್ತಿ ಯೋಜನೆಯು ಜನಪ್ರಿಯ ಯೋಜನೆಯಾಗಿ ಮೆಚ್ಚುಗೆ ಗಳಿಸಿದ್ದು, 2024ರ ಡಿಸೆಂಬರ್ 25 ರವರೆಗೆ ಒಟ್ಟು 926.96 ಲಕ್ಷ ಪ್ರಯಾಣಿಕರಲ್ಲಿ ಶೇ. 65.35ರಷ್ಟು ಅಂದರೆ, 605.79 ಲಕ್ಷ ಮಹಿಳಾ ಪ್ರಯಾಣಿಕರು ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ಅದೇ ರೀತಿ 2024ರ ಡಿಸೆಂಬರ್ 31ರವರೆಗೆ ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ “ಗೃಹ ಜ್ಯೋತಿ” ಯೋಜನೆಯಲ್ಲಿ ಒಟ್ಟು 2,83,712 ಗ್ರಾಹಕರ ಪೈಕಿ 2,77,262 ಫಲಾನುಭವಿಗಳು ನೋಂದಾಯಿಸಿದ್ದು, ಶೇ 97.64 ರಷ್ಟು ಪ್ರಗತಿಯಾಗಿದೆ. ಅನ್ನಭಾಗ್ಯ ಯೋಜನೆಯಂತೆ ಹೆಚ್ಚುವರಿಯಾಗಿ ನೀಡಬೇಕಾದ 5 ಕೆ.ಜಿ ಅಕ್ಕಿ ಬದಲಿಗೆ ಪ್ರತಿ ಸದಸ್ಯರಿಗೆ 170 ರೂ.ದಂತೆ ನೇರ ನಗದು ವರ್ಗಾವಣೆ ಮೂಲಕ ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಜುಲೈ-2023 ರಿಂದ ಸೆಪ್ಟೆಂಬರ್-2024 ರವರೆಗೆ 260.20 ಕೋಟಿ ರೂಪಾಯಿಗಳನ್ನು ಕಾರ್ಡುದಾರ ಖಾತೆಗೆ ನೇರವಾಗಿ ವರ್ಗಾಯಿಸಲಾಗಿದೆ. ಯುವನಿಧಿ ಯೋಜನೆಯಡಿ ಕೊಪ್ಪಳ ಜಿಲ್ಲೆಯಲ್ಲಿ 2025ರ ಜನವರಿ 21 ರವರೆಗೆ 6,783 ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದು, ಇಲ್ಲಿಯವರೆಗೆ ಒಟ್ಟು ಮೊತ್ತ 6,50,79,000 ರೂ.ಗಳನ್ನು ನಿರುದ್ಯೋಗ ಭತ್ಯೆಗಾಗಿ ನೀಡಲಾಗಿದೆ ಎಂದರು.
ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆಯು ಒಂದಾಗಿದೆ. ಬಿಪಿಎಲ್, ಎಪಿಎಲ್/ಅಂತ್ಯೋದಯ ಕಾರ್ಡನಲ್ಲಿ ನಮೂದಿಸಿರುವಂತೆ ಕುಟುಂಬ ಯಜಮಾನಿ ಮಹಿಳಾ ಫಲಾನುಭವಿಗಳಿಗೆ ಪ್ರತಿ ತಿಂಗಳು ರೂ. 2 ಸಾವಿರಗಳನ್ನು ಡಿಬಿಟಿ ಮೂಲಕ ಪಾವತಿಸುವ ಯೋಜನೆಯಾಗಿರುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 3,31,365 ಪಡಿತರ ಚೀಟಿಗಳನ್ನು ಹೊಂದಿರುವ ಕುಟುಂಬಗಳಿದ್ದು, ಅದರಲ್ಲಿ ಅಕ್ಟೋಬರ್-2024ರ ಮಾಹೆಯ ಅಂತ್ಯಕ್ಕೆ 3,13,734 ಫಲಾನುಭವಿಗಳಿಗೆ ಹಣ ಪಾವತಿಯಾಗಿರುತ್ತದೆ. ಈ ಯೋಜನೆಯಲ್ಲಿ ಆಗಸ್ಟ್-2023 ರಿಂದ ಮಾರ್ಚ-2024ರ ಅಂತ್ಯಕ್ಕೆ ರೂ. ನಾಲ್ಕು ನೂರ ಅರವತ್ತ್ರೊಂಭತ್ತು ಕೋಟಿ ಮೂವತ್ತೈದು ಲಕ್ಷದ ಇಪ್ಪತ್ತೆಂಟು ಸಾವಿರಗಳನ್ನು ಹಾಗೂ ಏಪ್ರಿಲ್-2024 ರಿಂದ ಅಕ್ಟೋಬರ್-2024 ರವರೆಗೆ ರೂ. ನಾಲ್ಕು ನೂರ ಮೂವತ್ತೈಕೋಟಿ ಅರವತ್ತಾರು ಲಕ್ಷದ ಅರವತ್ತೆಂಟು ಸಾವಿರ ಹೀಗೆ ಒಟ್ಟು ರೂ. ಒಂಬೈನೂರ ಐದು ಕೋಟಿ ಒಂದು ಲಕ್ಷದ ತೊಂಭತ್ತಾರು ಸಾವಿರಗಳನ್ನು ಜಿಲ್ಲೆಯ ಫಲಾನುಭವಿಗಳ ಖಾತೆಗೆ ನೇರವಾಗಿ ಡಿ.ಬಿ.ಟಿ ಯ ಮೂಲಕ ಧನ ಸಹಾಯ ಪಾವತಿ ಮಾಡಲಾಗುತ್ತಿದೆ ಎಂದು ಹೇಳಿದರು.
*ಜಿಲ್ಲಾ ಪಂಚಾಯತ್:* ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ 2024-25 ನೇ ಸಾಲಿಗೆ 82 ಲಕ್ಷ ಮಾನವ ದಿನಗಳ ಸೃಜನೆಯ ಗುರಿಯಿದ್ದು ಜನವರಿ 26-01-2025 ಕ್ಕೆ 71.40 ಲಕ್ಷ ಮಾನವ ದಿನಗಳು ಸೃಜಿಸಿ ಶೇ 87 ರಷ್ಟು ಪ್ರಗತಿ ಸಾಧಿಸಲಾಗಿದೆ. ಸ್ವಚ್ಚ ಭಾರತ ಮಿಷನ್ (ಗ್ರಾಮೀಣ) ಯೋಜನೆಯಡಿ 2023-25 ನೇ ಸಾಲಿನಲ್ಲಿ ವೈಯಕ್ತಿಕ ಶೌಚಾಲಯಗಳನ್ನು ಹೊಂದದೇ ಇರುವ ಕುಟುಂಬಗಳನ್ನು ಸಿಟಿಜನ್ ತಂತ್ರಾಂಶದ ಮೂಲಕ 9,374 ಫಲಾನುಭವಿಗಳ ದಾಖಲೀಕರಣ ಮಾಡಿದ್ದು, 5,728 ಫಲಾನುಭವಿಗಳು ವೈಯಕ್ತಿಕ ಶೌಚಾಲಯವನ್ನು ನಿರ್ಮಿಸಿಕೊಂಡಿರುತ್ತಾರೆ. ಬಾಕಿ ಉಳಿದ 36.46 ಶೌಚಾಲಯಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿರುತ್ತದೆ ಎಂದು ತಿಳಿಸಿದರು.
ವಸತಿ ಯೋಜನೆಯಡಿ 2021-22ನೇ ಸಾಲಿನ ಬಸವ ವಸತಿ ಯೋಜನೆ ಮತ್ತು ಹೆಚ್ಚುವರಿ ಯೋಜನೆಯಡಿ 13,348 ಮನೆಗಳ ಗುರಿ ಇದ್ದು ಈ ಪೈಕಿ ಇಲ್ಲಿಯವರೆಗೆ 13,152 ಮನೆಗಳನ್ನು ನಿಗಮದಿಂದ ಅನುಮೋದನೆ ಪಡೆಯಲಾಗಿದೆ. ಇದರಲ್ಲಿ 4825 ಪ್ರಗತಿಯಲ್ಲಿದ್ದು 5,656 ಮನೆಗಳು ಮುಕ್ತಾಯಗೊಂಡಿರುತ್ತವೆ. ಡಾ.ಬಿ.ಆರ್. ಅಂಬೇಡ್ಕರ ವಸತಿ ಯೋಜನೆ ಮತ್ತು ಹೆಚ್ಚುವರಿ ಯೋಜನೆಯಡಿ 4,207 ಮನೆಗಳ ಗುರಿ ಇದ್ದು ಈ ಪೈಕಿ ಇಲ್ಲಿಯವರೆಗೆ 4,142 ಮನೆಗಳನ್ನು ನಿಗಮದಿಂದ ಅನುಮೋದನೆ ಪಡೆಯಲಾಗಿದೆ. ಇದರಲ್ಲಿ 1,475 ಮನೆಗಳು ಪ್ರಗತಿಯಲ್ಲಿದ್ದು 1,888 ಮನೆಗಳು ಮುಕ್ತಾಯಗೊಂಡಿರುತ್ತವೆ ಎಂದರು.
*ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆ:* ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕಾಗಿ 2023-24ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಯ ಮಾಕ್ರೋ (ಮೆಗಾ) ಯೋಜನೆಯಡಿ ಒಟ್ಟು 36 ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲು ರೂ.562 ಲಕ್ಷ ಅನುದಾನ ಹಾಗೂ ನಗರ ಮಹತ್ವಾಕಾಂಶಿ ಯೋಜನೆಯಡಿ 7 ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲು ರೂ 140 ಲಕ್ಷಗಳ ಅನುದಾನ ಬಿಡುಗಡೆಯಾಗಿದ್ದು, ಹಾಗೂ 2024-25ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಯ ಮೈಕ್ರೋ ಯೋಜನೆಯಡಿ 5 ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲು ರೂ 112.97 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಮ್ಯಾಕ್ರೋ ಯೋಜನೆಯಡಿ 6 ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲು ರೂ 120 ಲಕ್ಷ ಅನುದಾನ ಬಿಡುಗಡೆಯಾಗಿರುತ್ತದೆ. ಈ ಕೇಂದ್ರಗಳ ಕಟ್ಟಡ ಕಾಮಗಾರಿ ಪ್ರಗತಿ ಹಂತದಲ್ಲಿರುತ್ತವೆ ಎಂದು ಹೇಳಿದರು.
*ಕೃಷಿ ಇಲಾಖೆ:* ಜಿಲ್ಲೆಯ 2024ರ ವಾಡಿಕೆ ಮಳೆ 614 ಮಿ.ಮಿ. ಯಿದ್ದು, 598 ಮಿ.ಮಿ. ವಾಸ್ತವಿಕ ಮಳೆಯಾಗಿರುತ್ತದೆ. ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯ ಬಿತ್ತನೆ ಗುರಿ 1.69 ಲಕ್ಷ ಹೆಕ್ಟರ್ ಇದ್ದು, ಇದರಲ್ಲಿ 1.69 ಲಕ್ಷ ಹೆಕ್ಟರ್ ಶೇ 100 ಪ್ರದೇಶದಲ್ಲಿ ಬಿತ್ತನೆಯಾಗಿರುತ್ತದೆ. ಈ ವರ್ಷ ಮುಂಗಾರು ಹಾಗೂ ಹಿಂಗಾರು ಹಂಗಾಮು ಆಶಾದಾಯಕವಾಗಿರುತ್ತದೆ. e-SAP : ಕೃಷಿ ವಿಶ್ವವಿದ್ಯಾಲಯ ರಾಯಚೂರು ಇವರು ಸಿದ್ದಪಡಿಸಿರುವ ಮೊಬೈಲ್ ಆ್ಯಪ್ ಆದ e-SAP ಮೂಲಕ ಕೃಷಿ ಹಾಗೂ ತೋಟಗಾರಿಕೆ 50 ಬೆಳೆಗಳಲ್ಲಿ ರೋಗ, ಕೀಟಭಾಧೆಯ ಬಗ್ಗೆ ಹಾಗೂ ಲಘುಪೋಷಕಾಂಶಗಳ ಕೊರತೆಯ ಬಗ್ಗೆ ಮೊಬೈಲ್ ಆ್ಯಪ್ ಮೂಲಕ ರೈತರಿಗೆ ಮಾಹಿತಿ ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ ಕೃಷಿ ಇಲಾಖೆಯ ಸಿಬ್ಬಂದಿಗಳು 64 ಸಾವಿರದ 900 ತಾಲ್ಲೂಕುಗಳಿಗೆ ಭೇಟಿ ನೀಡಿ ರೈತರಿಗೆ ಕೀಟ ಹಾಗೂ ರೋಗ ಭಾಧೆಯ ಬಗ್ಗೆ ಮಾಹಿತಿ ನೀಡಲಾಗಿದೆ. ಕೀಟ ಹಾಗೂ ರೋಗ ಭಾಧೆಯ ನಿರ್ವಹಣೆಯ ಬಗ್ಗೆ e-SAP ತಂತ್ರಾಂಶದಲ್ಲಿ ಮಾಹಿತಿ ನೀಡುವುದರಲ್ಲಿ ಜಿಲ್ಲೆಯು ರಾಜ್ಯದಲ್ಲಿ ದ್ವೀತಿಯ ಸ್ಥಾನದಲ್ಲಿರುತ್ತದೆ ಎಂದರು.
ಜಿಲ್ಲೆಯಲ್ಲಿ ರಸಗೊಬ್ಬರ & ಬಿತ್ತನೆ ಬೀಜದ ಯಾವುದೇ ಕೊರತೆ ಇರುವುದಿಲ್ಲ. ಕಳೆದ ಐಸಿಸಿ ಸಭೆಯಲ್ಲಿ ಎಲ್ಲಾ ಜನಪ್ರತಿನಿಧಿಗಳ & ರೈತ ಮುಖಂಡರ ಉಪಸ್ಥತಿಯಲ್ಲಿ ನೀರಾವರ ಸಲಹಾ ಸಮಿತಿ ಸಭೆ ಮಾಡಿ, ಎಲ್ಲಾ ರೈತರಿಗೆ ಬೇಡಿಕೆಗೆ ಅನುಗುಣವಾಗಿ ನೀರು ಪೂರೈಕೆ ಮಾಡುವುದಕ್ಕೆ ನಿರ್ಧರಿಸಲಾಗಿದ್ದು & ಎಲ್ಲಾ ಗೇಜ್‌ಗಳನ್ನು ಸರಿಯಾಗಿ ನಿರ್ವಹಿಸಿ ಸರಿಯಾದ ನೀರು ಪೂರೈಕೆಯನ್ನು ಖಾತ್ರಿ ಪಡಿಸಲಾಗುತ್ತಿದೆ ಎಂದು ಹೇಳಿದರು.
*ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ:* ಜಿಲ್ಲೆಯಲ್ಲಿ 2024-25 ರಲ್ಲಿ ಕುಷ್ಟಗಿ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಹನುಮನಾಳ ಆರೋಗ್ಯ ಕೇಂದ್ರವನ್ನು 30 ಹಾಸಿಗೆಯ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲು ಅನುಮೋದನೆಯಾಗಿರುತ್ತದೆ. 2024-25ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಹೊಸದಾಗಿ 7 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು 01 ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲು ಮಂಜೂರಾತಿ ನೀಡಲಾಗಿದ್ದು, ಈ ಭಾಗದ ಜನರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗಿದೆ. ಮುಂದುವರೆದು ಗಂಗಾವತಿ ಉಪವಿಭಾಗ ಆಸ್ಪತ್ರೆಯನ್ನು 150 ಹಾಸಿಗೆಗಳ ಸಾಮರ್ಥ್ಯಕ್ಕೆ ಮೇಲ್ದರ್ಜೆಗೆ ಏರಿಸಲಾಗಿದೆ ಎಂದರು.
*ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ:* ಒಟ್ಟು 53 ಸ್ವಂತ ಕಟ್ಟಡಗಳಿದ್ದು, 5 ವಸತಿ ನಿಲಯಗಳಿಗೆ ಸ್ವಂತ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು, 10 ನಿಲಯಗಳಿಗೆ ಕೆ.ಕೆ.ಆರ್.ಡಿ.ಬಿ. ಅನುದಾನದಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಅನುಮೋದನೆಗಾಗಿ ಕ್ರಮವಹಿಸಲಾಗಿದೆ. ಒಟ್ಟು 7 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 4 ವಸತಿ ಶಾಲೆಗಳು ಸ್ವಂತ ಕಟ್ಟಡದಲ್ಲಿ ನಿರ್ವಹಣೆಯಾಗುತ್ತಲಿವೆ. 3 ವಸತಿ ಶಾಲೆಗಳಿಗೆ ನಿವೇಶನಗಳು ಲಭ್ಯವಿದ್ದು, ಕಟ್ಟಡ ಕಾಮಗಾರಿ ಪ್ರಾರಂಭಿಸಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. 2024-25ನೇ ಸಾಲಿನಲ್ಲಿ ಕೊಪ್ಪಳ ಜಿಲ್ಲೆಗೆ 5 ಬಾಲಕರ 6 ಬಾಲಕಿಯರ ತಲಾ 100 ಸಂಖ್ಯಾಬಲದ ಒಟ್ಟು 11 ಮೆಟ್ರಿಕ್ ನಂತರ ನಿಲಯಗಳು, ಮತ್ತು ಕನಕಗಿರಿ ಪಟ್ಟಣಕ್ಕೆ ಹೊಸದಾಗಿ 100 ಸಂಖ್ಯಾಬಲದ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆ ಮಂಜೂರಾಗಿದ್ದು, ಈ ಶಾಲೆಯನ್ನು ಪ್ರಸ್ತುತ ಸಾಲಿನಿಂದ ಪ್ರಾರಂಭಿಸಲು ಕ್ರಮವಹಿಸಲಾಗಿದೆ. 2024-25ನೇ ಸಾಲಿನಲ್ಲಿ ಶುಲ್ಕ ಮರುಪಾವತಿ 2020-21 ರಿಂದ 2024-25 ನೇ ಸಾಲಿನ ವರೆಗೆ 6149 ವಿದ್ಯಾರ್ಥಿಗಳಿಗೆ ರೂ. 312.91 ಲಕ್ಷಗಳನ್ನು ಡಿ.ಬಿ.ಟಿ. ಮೂಲಕ ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಜಮಾ ಮಾಡಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
*ಸಮಾಜ ಕಲ್ಯಾಣ ಇಲಾಖೆ:* ಕೊಪ್ಪಳ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ 33 ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಲ್ಲಿ 4868 ವಿದ್ಯಾರ್ಥಿಗಳು, 18 ಮೆಟ್ರಿಕ್ ನಂತರದ ವಸತಿ ನಿಲಯಗಳಲ್ಲಿ 3787 ವಿದ್ಯಾರ್ಥಿಗಳು ಹಾಗೂ 1 ಆಶ್ರಮ ಶಾಲೆಯಲ್ಲಿ 148 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಒಟ್ಟಾರೆ 52 ವಸತಿ ನಿಲಯಗಳ ಪೈಕಿ 44 ವಸತಿ ನಿಲಯಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಉಳಿದ 8 ವಸತಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿದ್ದು, ಕಾರ್ಯನಿರ್ವಹಿಸುತ್ತಿದ್ದು, ಆ ಪೈಕಿ 5 ವಸತಿ ನಿಲಯಗಳ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿ ಹಂತದಲ್ಲಿರುತ್ತವೆ. ಬಾಕಿ ಉಳಿದ 2 ವಸತಿ ನಿಲಯಗಳಿಗೆ ನಿವೇಶನಗಳನ್ನು ಗುರುತಿಸಲಾಗಿರುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿಯಲ್ಲಿ ಒಟ್ಟಾರೆ 24 ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ವಸತಿ ಶಾಲೆಗಳಲ್ಲಿ 5420 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 24 ವಸತಿ ಶಾಲೆಗಳ ಪೈಕಿ 12 ವಸತಿ ಶಾಲೆಗಳು ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶವನ್ನು ಪಡೆದುಕೊಂಡಿರುತ್ತವೆ ಎಂದರು.
*ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ:* 2024-25ನೇ ಸಾಲಿನಲ್ಲಿ ಹೊಸದಾಗಿ ಕೊಪ್ಪಳ ತಾಲ್ಲೂಕಿನ ಹಿಟ್ನಾಳ ಗ್ರಾಮ ಹಾಗೂ ಕನಕಗಿರಿ ತಾಲ್ಲೂಕಿನ ಕನಕಗಿರಿ ಪಟ್ಟಣದಲ್ಲಿ ತಲಾ 250 ಸಂಖ್ಯಾಬಲದ 2 ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗಿರುತ್ತದೆ. 2024-25ನೇ ಸಾಲಿನಲ್ಲಿ ಹೊಸದಾಗಿ 100 ಸಂಖ್ಯಾಬಲದೊಂದಿಗೆ ಕೊಪ್ಪಳ ನಗರದಲ್ಲಿ 2 ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ. 1 ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಹಾಗೂ ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ 1 ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಒಟ್ಟು 4 ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಪ್ರಾರಂಭಿಸಲಾಗಿರುತ್ತದೆ. ಇದರಿಂದಾಗಿ ಒಟ್ಟು 400 ವಿದ್ಯಾರ್ಥಿಗಳ ದಾಖಲಾತಿಗೆ ಅವಕಾಶ ಕಲ್ಪಿಸಲಾಗಿರುತ್ತದೆ ಎಂದರು.
2024-25ನೇ ಸಾಲಿನಲ್ಲಿ ಹೊಸದಾಗಿ ಕೊಪ್ಪಳ ತಾಲೂಕಿನ ಕೊಪ್ಪಳ ನಗರ, ಕುಷ್ಟಗಿ ತಾಲ್ಲೂಕಿನ ಹನಮಸಾಗರ ಗ್ರಾಮ ಹಾಗೂ ಗಂಗಾವತಿ ತಾಲ್ಲೂಕಿನ ಶ್ರೀರಾಮನಗರ ಗ್ರಾಮದಲ್ಲಿ ತಲಾ 300 ಸಂಖ್ಯಾಬಲದ 3 ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆಗಳನ್ನು ಪ್ರಾರಂಭಿಸಲಾಗಿರುತ್ತದೆ. ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ಒಟ್ಟು 180 ವಿದ್ಯಾರ್ಥಿಗಳಿಗೆ ದಾಖಲಾತಿಗೆ ಅವಕಾಶ ಕಲ್ಪಿಸಲಾಗಿರುತ್ತದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ಅಲ್ಪಸಂಖ್ಯಾತರ ನಿರ್ದೇಶನಾಲಯದ ಶೇ. 50:50 ರ ಅನುಪಾತದಲ್ಲಿ ರೂ. 81 ಕೋಟಿಗಳ ವೆಚ್ಚದಲ್ಲಿ 9 ವಸತಿ ಶಾಲೆಗಳ ಉನ್ನತೀಕರಣ ಮತ್ತು ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲು ಉದ್ದೇಶಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ ಎಂದು ಹೇಳಿದರು.
*ಶಾಲಾ ಶಿಕ್ಷಣ ಇಲಾಖೆ:* ಸರಕಾರದ ಆದೇಶದ ಪ್ರಕಾರ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಯೋಜನೆಯಡಿ 2024-25ನೇ ಸಾಲಿಗೆ ಜಿಲ್ಲೆಯ ಯಲಬುರ್ಗಾ/ಕುಕನೂರು ಹಾಗೂ ಕೊಪ್ಪಳ ತಾಲೂಕಗಳಿಗೆ ಹೊಸದಾಗಿ ಒಟ್ಟು 12 ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಉನ್ನತೀಕರಿಸಿ ಪ್ರೌಢ ಶಾಲೆಗಳನ್ನಾಗಿ ಮಂಜೂರಾಗಿವೆ. ಶಾಲೆಗಳು ಪ್ರಾರಂಭವಾಗಿವೆ. 2024-25ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ “ಅಕ್ಷರ ಅವಿಸ್ಕಾರ’’ ಯೊಜನೆಯಡಿ ಜಿಲ್ಲೆಯ ಶಾಲೆಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ರೂ.59 ಕೋಟಿ ಅನುದಾನವು ಮಂಜೂರಾಗಿರುತ್ತದೆ. ಕಾಮಗಾರಿಗಳು ಪ್ರಗತಿಯಲ್ಲಿವೆ. ಶಾಲಾ ಪೋಷಣ ಅಭಿಯಾನ ಯೋಜನೆಯಡಿಯಲ್ಲಿ ಮಕ್ಕಳಿಗೆ ಪೌಷ್ಟಿಕಾಂಶ ಒದಗಿಸಲು ಸರಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಮತ್ತು ಕನೆ ಭರಿತ ಹಾಲು ನೀಡುವುದರ ಜೊತೆಗೆ ವಾರದಲ್ಲಿ 6 ದಿನ ಮೊಟ್ಟೆ/ಬಾಳೆಹಣ್ಣು/ಚೆಕ್ಕಿ ನೀಡುವ ಕಾರ್ಯಕ್ರಮವು ಮಂಜೂರಾಗಿರುತ್ತದೆ ಎಂದರು.
*ಜಿಲ್ಲಾ ನಗರಾಭಿವೃದ್ಧಿ ಕೋಶ:* ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ (ಮುನಿಸಿಪಾಲಿಟಿ) ಯೋಜನೆ (ಹಂತ-4) ಯಡಿ ಒಟ್ಟು ರೂ. 125 ಕೋಟಿಗಳ ಮೊತ್ತದ ಅನುದಾನ ಹಂಚಿಕೆಯಾಗಿದ್ದು, ಈ ಅನುದಾನದಡಿಯಲ್ಲಿ ವೈಯಕ್ತಿಕ ಘಟಕದಡಿ 137 ಕಾರ್ಯಕ್ರಮಗಳು ಹಾಗೂ 118 ಸಿವಿಲ್ ಕಾಮಗಾರಿಗಳು ಸೇರಿದಂತೆ 255 ಕಾಮಗಾರಿಗಳ ಒಟ್ಟು ರೂ.105.77 ಕೋಟಿ ಮೊತ್ತಗಳಿಗೆ ಕ್ರಿಯಾ ಯೋಜನೆ ಮಂಜೂರಾಗಿರುತ್ತದೆ. ಒಟ್ಟು ರೂ.34.52 ಕೋಟಿ ಮೊತ್ತದ 42 ಕಾಮಗಾರಿಗಳು ಟೆಂಡರ್ ಪ್ರಕ್ರಿಯೆಯಲ್ಲಿರುತ್ತವೆ. ಒಟ್ಟು ರೂ.27.67 ಕೋಟಿಗಳ ಮೊತ್ತದ 38 ಕಾಮಗಾರಿಗಳು ಪ್ರಗತಿ ಹಂತದಲ್ಲಿರುತ್ತವೆ ಹಾಗೂ ಒಟ್ಟು ಬಿಡುಗಡೆಯಾದ ರೂ. 20.81ಕೋಟಿಗಳ ಅನುದಾನದಲ್ಲಿ ರೂ. 14.30ಕೋಟಿ ಮೊತ್ತದ ಅನುದಾನವನ್ನು ಖರ್ಚು ಮಾಡಲಾಗಿದ್ದು, ಒಟ್ಟು ಶೇ.69 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.
*ಪ್ರವಾಸೋದ್ಯಮ ಇಲಾಖೆ:* ಮುಖ್ಯಮಂತ್ರಿಗಳು, 2024-25ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ (372) ಪೌರಾಣಿಕ ಹಾಗೂ ಐತಿಹಾಸಿಕವಾಗಿ ಪ್ರಖ್ಯಾತಿ ಹೊಂದಿರುವ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರವಾಸಿ ಸೌಲಭ್ಯ ಅಭಿವೃದ್ಧಿಪಡಿಸಲು ರೂ. 100 ಕೋಟಿಗಳನ್ನು ಒದಗಿಸಲಾಗುವುದು ಎಂದು ಘೋಷಿಸಿರುತ್ತಾರೆ. ಮುಖ್ಯಮಂತ್ರಿಗಳು, 2024-25ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ (371) ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದಲ್ಲಿನ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಸ್ತುತ ಜಾರಿಯಲ್ಲಿರುವ ಕರ್ನಾಟಕ ಪ್ರವಾಸೋದ್ಯಮ ನೀತಿಯನ್ನು ಮತಷ್ಟು ಹೂಡಿಕೆದಾರರ ಹಾಗೂ ಪ್ರವಾಸಿಗರ ಸ್ನೇಹಿಯಾಗಿ ಮಾಡಲು, ಪರಿಷ್ಕೃತ ಪ್ರವಾಸೋದ್ಯಮ ನೀತಿ 2024-29 ಅನ್ನು ಜಾರಿಗೆ ತರಲಾಗುವುದು ಎಂದು ಘೋಷಿಸಿರುತ್ತಾರೆ. ಪ್ರವಾಸೋದ್ಯಮ ನೀತಿಯನ್ನು ಸಚಿವ ಸಂಪುಟ ಅನುಮೋದನೆ ನೀಡಲಾಗಿದೆ ಎಂದರು.
2024-25ನೇ ಸಾಲಿನ ಕಲ್ಯಾಣ ಕರ್ನಾಟಕದ ಮೈಕ್ರೋ ಯೋಜನೆ ಅಡಿಯಲ್ಲಿ ಕೊಪ್ಪಳ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸುವುದು ಹಾಗೂ ಇತರೆ ಮೂಲಭೂತ ಸೌಕರ್ಯಗಳನ್ನು ರೂ. 200 ಲಕ್ಷಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಕ್ರಮವಹಿಸಲಾಗುತ್ತಿದೆ. 2024-25ನೇ ಸಾಲಿನ ಕಲ್ಯಾಣ ಕರ್ನಾಟಕದ ಮೈಕ್ರೋ ಯೋಜನೆ ಅಡಿಯಲ್ಲಿ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಕಬ್ಬರಗಿ ಜಲಪಾತದ ಹತ್ತಿರ ಮೂಲಭೂತ ಸೌಕರ್ಯಗಳನ್ನು ರೂ. 100 ಲಕ್ಷ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಕ್ರಮವಹಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿAದ 2024-25ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಕೊಪ್ಪಳ ಜಿಲ್ಲೆಗೆ ಮೈಕ್ರೋ ವಲಯದಲ್ಲಿ 238.81 ಕೋಟಿ ರೂ. ಹಾಗೂ ಮ್ಯಾಕ್ರೋ ವಲಯದಲ್ಲಿ 128.59 ಕೋಟಿ ರೂ. ಹೀಗೆ ಒಟ್ಟು 367.40 ಕೋಟಿ ಅನುದಾನವನ್ನು ನಿಗದಿಪಡಿಸಲಾಗಿರುತ್ತದೆ. ಈ ಪೈಕಿ ಒಟ್ಟು 317.18 ಕೋಟಿ ಕ್ರಿಯಾಯೋಜನೆ ಅನುಮೋದನೆಯಾಗಿದ್ದು, ವಿವಿಧ ಹಂತದಲ್ಲಿ ಕಾಮಗಾರಿಗಳು ಪ್ರಗತಿ ಹಂತದಲ್ಲಿದೆ ಎಂದು ಹೇಳಿದರು.
ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ನಾವೆಲ್ಲರೂ ಕೂಡಿ ಬಾಳೋಣ, ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಇಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ, ಪಾರಸಿಕ, ಜೈನರು ಸೇರಿದಂತೆ ಎಲ್ಲಾ ಧರ್ಮ, ಜಾತಿ ಜನಾಂಗದವರು ಸಹೋದರರಂತೆ ಬಾಳುತ್ತಿದ್ದೇವೆ. ಈ ಮೂಲಕ ವಿವಿಧತೆಯಲ್ಲಿ ಏಕತೆಯನ್ನು ಇಡೀ ವಿಶ್ವಕ್ಕೆ ಸಾರಿದ ದೇಶ ನಮ್ಮದಾಗಿದೆ. ಈ ಸಂವಿಧಾನದ ಆಶಯಗಳನ್ನು ಎಲ್ಲರೂ ಸೇರಿ ಮುನ್ನಡೆಸೋಣವೆಂದು ಹೇಳುತ್ತಾ ನನ್ನ ಮಾತಿಗೆ ವಿರಾಮ ಹೇಳುತ್ತೇನೆ ಎಂದರು.
*ಸಂಗೊಳ್ಳಿ ರಾಯಣ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ:* ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಸಚಿವರು ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
*ಆಕರ್ಷಕ ಪಥಸಂಚಲನ:* 76ನೇ ಗಣರಾಜ್ಯೋತ್ಸವ ದಿನಾಚರಣೆ ನಿಮಿತ್ತ ಪೊಲೀಸ್ ಇಲಾಖೆ, ಸಶಸ್ತ್ರ ಮೀಸಲು ಪಡೆ, ಗೃಹ ರಕ್ಷಕದಳ, ಭಾರತ ಸೇವಾದಳ, ಎನ್.ಸಿ.ಸಿ, ಭಾರತ್ ಸ್ಕೌಟ್ಸ್ & ಗೈಡ್ಸ್ ತಂಡಗಳು ಜಿಲ್ಲಾ ಕ್ರೀಡಾಂಗಣದಲ್ಲಿ ಆಕರ್ಷಕ ಪಥಸಂಚಲನ ನಡೆಸಿ, ಸಚಿವರಿಗೆ ಗೌರವ ವಂದನೆ ಸಲ್ಲಿಸಿದವು.
*ವಿವಿಧ ಇಲಾಖೆಗಳ ಪ್ರಗತಿಯ ಪುಸ್ತಕ ಬಿಡುಗಡೆ:* ಕೊಪ್ಪಳ ಜಿಲ್ಲಾಡಳಿತವು ಹೊರತಂದ ವಿವಿಧ ಇಲಾಖೆಗಳ ಪ್ರಗತಿ ಮಾಹಿತಿಯನ್ನೊಳಗೊಂಡ `ವಿಕಾಸ್’ ಎಂಬ ಪುಸ್ತಕವನ್ನು ಸಚಿವರು, ಸಂಸದರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು
ಸಾಂಸ್ಕೃತಿಕ ಕಾರ್ಯಕ್ರಮ, ಬಹುಮಾನ ವಿತರಣೆ: ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ಕೊಪ್ಪಳದ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಮತ್ತು ಜ್ಞಾನಬಂಧು ಪಿಯು ಕಾಲೇಜು ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ನೃತ್ಯ ಮಾಡಿದರು. ಪಥಸಂಚಲನದಲ್ಲಿ ಭಾಗವಹಿಸಿದ ತಂಡಗಳಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಮಕ್ಕಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು.
*ಸನ್ಮಾನ:* 2025ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾವನಾಗಿರುವ ಕೊಪ್ಪಳ ಜಿಲ್ಲೆಯ ತೊಗಲುಗೊಂಬೆಯಾಟ ಕಲಾವಿದೆ ಭೀಮವ್ವ ಶಿಳ್ಳೇಕ್ಯಾತರ ಅವರಿಗೆ ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾದ ಹಿರಿಯ ಪತ್ರಕರ್ತರಾದ ಹೆಚ್.ಎಸ್.ಹರೀಶ್ ಹಾಗೂ ಸೀರಾಜ್ ಬಿಸರಳ್ಳಿ ಮತ್ತು ಅಕಾಡೆಮಿಯ ದತ್ತಿ ಪ್ರಶಸ್ತಿಗೆ ಆಯ್ಕೆಯಾದ ಪತ್ರಕರ್ತ ಮೋಹಮ್ಮದ್ ಅಖೀಲ್ ಉಡೇವು ಮತ್ತು ಇತರೆ ಸಾಧಕರಿಗೂ ಸನ್ಮಾನಿಸಲಾಯಿತು.
*ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ:* ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿ ಕೊಪ್ಪಳ ನಗರದಲ್ಲಿ ಹಮ್ಮಿಕೊಂಡಿರುವ ವಿವಿಧ ಕಾಮಗಾರಿಗಳಿಗೆ ಸಚಿವರು ಕಾರ್ಯಕ್ರಮದಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.
*ಯಂತ್ರಚಾಲಿತ ದ್ವಿಚಕ್ರ ವಾಹನಗಳ ವಿತರಣೆ:* 2024-25ನೇ ಸಾಲಿನ ರಾಜ್ಯ ಹಣಕಾಸು ಆಯೋಗ ಜಿಲ್ಲಾ ಪಂಚಾಯತ್ ಅನಿರ್ಬಂಧಿತ ಶೇ.5ರ ಅನುಧಾನದಲ್ಲಿ ದೈಹಿಕ ವಿಕಲಚೇತನರಿಗೆ 15 ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ಅರ್ಹ ಫಲಾನುಭವಿಗಳಿಗೆ ಸಚಿವರು ವಿತರಣೆ ಮಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೊಪ್ಪಳ ಸಂಸದರಾದ ಕೆ.ರಾಜಶೇಖರ ಹಿಟ್ನಾಳ, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ಕೊಪ್ಪಳ ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಶ್ರೀನಿವಾಸ್ ಗುಪ್ತಾ, ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್ ಅರಸಿದ್ದಿ, ಕೊಪ್ಪಳ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯ ಚತಿರ್ವೇದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ್ ಕುಮಾರ್, ಕೊಪ್ಪಳ ತಹಶಿಲ್ದಾರ ವಿಠ್ಠಲ ಚೌಗಲಾ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿ, ಸಿಬ್ಬಂದಿಗಳು ಮತ್ತು ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಇತರೆ ಹಲವಾರು ಜನರು ಉಪಸ್ಥಿತರಿದ್ದರು.
Share This Article
error: Content is protected !!
";