ಧಾರವಾಡ ಫೆಬ್ರವರಿ 20: ಬೆಳಗಾವಿ ಕೇಂದ್ರಸ್ಥಾನ ಅಪರ ಅಬಕಾರಿ ಆಯುಕ್ತರು (ಜಾರಿ ಮತ್ತು ಅಪರಾಧ) ಡಾ. ವೈ ಮಂಜುನಾಥ ಅವರ ಮಾರ್ಗದರ್ಶನದಲ್ಲಿ ಇಂದು (ಫೆ.20) ರಂದು ಬೆಳಗ್ಗೆ 5 ಗಂಟೆ ಸಮಯದಲ್ಲಿ ಕಲಘಟಗಿ ಶಹರದ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಿರುವಾಗ ಬಂದ ಮಾಹಿತಿಯಲ್ಲಿ, ಕಲಘಟಗಿ ಪಟ್ಟಣದ ಕಡೆಗೆ ಟಾಟಾ ಕಂಪನಿಯ ಟ್ಯಾಂಕರ ವಾಹನ ನೊಂದಣಿ ಸಂಖ್ಯೆ: ಜಿಜೆ 39 ಟಿ 2941 ನೇದ್ದರಲ್ಲಿ ಅಕ್ರಮವಾಗಿ ಮದ್ಯಸಾರವನ್ನು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಕಲಘಟಗಿ ಶಹರದ ನ್ಯೂ ಶೆಟ್ಟಿ ಲಂಚ್ ಹೋಮ್ ಮುಂಭಾಗದಲ್ಲಿ ವಾಹನವನ್ನು ತಡೆದು ತಪಾಸಣೆ ನಡೆಸಲಾಗಿ ಟ್ಯಾಂಕರನಲ್ಲಿ ಒಟ್ಟು 40 ಸಾವಿರ ಲೀಟರ ಮದ್ಯಸಾರ ಇದ್ದು, ಸದರಿ ಮದ್ಯಸಾರವನ್ನು ಗೋವಾ ರಾಜ್ಯಕ್ಕೆ ಸಾಗಾಣಿಕೆ ಮಾಡುವ ಬಗ್ಗೆ ವಾಹನ ಚಾಲಕನಿಂದ ತಿಳಿದು ಬಂದಿರುತ್ತದೆ.
ಸದರಿ ಮದ್ಯಸಾರದ ಮೌಲ್ಯ ರೂ. 24 ಲಕ್ಷ ಹಾಗೂ ವಾಹನದ ಮೌಲ್ಯ ರೂ. 55 ಲಕ್ಷ ಹೀಗೆ ಒಟ್ಟು ಮೌಲ್ಯ ರೂ. 79 ಲಕ್ಷ ಆಗುತ್ತಿದ್ದು, ವಾಹನ ಚಾಲಕನಾದ ಓಂ ಪ್ರಕಾಶ ವಿರಾದ ರಾಮ್, ಬಾರಮರ ಜಿಲ್ಲೆ, ರಾಜಸ್ಥಾನ ರಾಜ್ಯ ಆಗಿದ್ದು, ಸದರಿ ವಾಹನ ಮಾಲಿಕನ ಹೆಸರು ಸುಖದೇವ ಬಯ್ಯಾರಾಮ, ಇಂದಿರಾ ನಗರ, ಕಜ್ ಗುಜರಾತ ರಾಜ್ಯ ಎಂಬುದು ತಿಳಿದು ಬಂದಿರುತ್ತದೆ.
ಈ ಕುರಿತು ಅಬಕಾರಿ ಉಪ ಅಧೀಕ್ಷಕರು, ಧಾರವಾಡ ಉಪ ವಿಭಾಗ ಇವರು ಮೊಕದ್ದಮೆ ಸಂಖ್ಯೆ :14/2024-25 ನ್ನು ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿರುತ್ತಾರೆ. ಸದರಿ ಮದ್ಯಸಾರ ಸಾಗಾಣಿಕೆಯಲ್ಲಿ ದೊಡ್ಡ ಜಾಲವಿದ್ದು ತನಿಖೆಯಿಂದ ಪತ್ತೆ ಹಚ್ಚಬೇಕಾಗಿರುತ್ತದೆ.
ಈ ದಾಳಿಯಲ್ಲಿ ಧಾರವಾಡ ಅಬಕಾರಿ ಉಪ ಆಯುಕ್ತರ ಕಚೇರಿಯ ಅಬಕಾರಿ ಅಧೀಕ್ಷಕ ಆತ್ಮಲಿಂಗಯ್ಯ ಮಠಪತಿ, ಧಾರವಾಡ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ (ಪ್ರಭಾರ) ಲಿಂಗರಾಜ ಕೆ. ಹಾಗೂ ಕಲಘಟಗಿ ವಲಯದ ಅಬಕಾರಿ ನಿರೀಕ್ಷಕ ಶಿವಪ್ಪ ಸಣ್ಣಮನಿ ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ಈ ದಾಳಿಯಲ್ಲಿ ಭಾಗವಹಿಸಿದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೆ ಬೆಳಗಾವಿ ಕೇಂದ್ರಸ್ಥಾನದ ಅಪರ ಅಬಕಾರಿ ಆಯುಕ್ತರು (ಜಾರಿ ಮತ್ತು ಅಪರಾಧ) ಡಾ. ವೈ ಮಂಜುನಾಥ, ಅವರು ಅಭಿನಂದಿಸಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.