ಕೊಪ್ಪಳ ಆಗಸ್ಟ್ 15 : ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರರು ಪ್ರತಿಯೊಬ್ಬ ಭಾರತೀಯರ ಮನದಲ್ಲೂ ಅಮರರಾಗಿ ಉಳಿದಿದ್ದಾರೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ ಹೇಳಿದರು.
ಅವರು ಶುಕ್ರವಾರ ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರೂ, ಸುಭಾಷ್‌ಚಂದ್ರ ಬೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್, ಲಾಲ್ ಬಹದ್ದೂರ್ ಶಾಸ್ತ್ರಿ, ಡಾ.ಬಿ.ಆರ್.ಅಂಬೇಡ್ಕರ್, ಗೋಪಾಲಕೃಷ್ಣ ಗೋಖಲೆ, ಲಾಲಾ ಲಜಪತರಾಯ್, ಬಾಲಗಂಗಾಧರ ತಿಲಕ್, ಮೌಲಾನಾ ಅಬುಲ್ ಕಲಾಂ ಅಜಾದ್, ಭಗತ್ ಸಿಂಗ್, ರಾಜ್‌ಗುರು, ಕಿತ್ತೂರು ರಾಣಿ ಚೆನ್ನಮ್ಮ, ಹೀಗೆ ಅನೇಕ ಮಹನೀಯರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರು ಪ್ರತಿಯೊಬ್ಬ ಭಾರತೀಯರ ಮನದಲ್ಲೂ ಅಮರರಾಗಿ ಉಳಿದಿದ್ದಾರೆ. ನಾವೆಲ್ಲರೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯೋಣ. ಜಾತಿ, ಧರ್ಮ, ಭೇದ-ಭಾವ ಮಾಡದೇ ಎಲ್ಲರೂ ಸಮಾನರಾಗಿ ಶಾಂತಿಯಿಮದ ಬಾಳೋಣ. ದೇಶಪ್ರೇಮ ಬೆಳೆಸಿಕೊಳ್ಳಲು ಪ್ರೇರಣೆಯಾದ ಈ ದಿನದಂದು ಸಮ ಸಮಾಜ ಕಟ್ಟಲು ಸಂಕಲ್ಪ ಮಾಡೋಣ ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ಕೊಪ್ಪಳ ಜಿಲ್ಲೆಯ ಹೋರಾಟಗಾರರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾದ ಕೊಪ್ಪಳ ಜಿಲ್ಲೆಯ ಮುಂಡರಗಿ ಭೀಮರಾಯರು, ಹಮ್ಮಿಗೆ ಕೆಂಚನಗೌಡರು, ಇಟಗಿಯ ವೀರಭದ್ರಯ್ಯನವರು, ಶಿರೂರು ವೀರಭದ್ರಪ್ಪನವರು, ಶಿವಮೂರ್ತಿಸ್ವಾಮಿ ಅಳವಂಡಿಯವರು, ಜನಾರ್ಧನರಾಯ ದೇಸಾಯಿಯವರು, ಎಲ್.ಕೆ.ಷರೀಫ್‌ರವರು, ಬಿಂದು ಮಾಧವರಾವ್ ಅವರು, ಬಿ.ಕೆ. ಪ್ರಾಣೇಶಾಚಾರ್ಯರು, ಮುರಡಿ ಭೀಮಜ್ಜ ಮೊದಲಾದ ಧೀಮಂತರುಗಳ ದೇಶ ಪ್ರೇಮದ ಗುಣವು ನಮಗೆಲ್ಲ ಸ್ಪೂರ್ತಿಯಾಗಲಿ. ಅವರ ಸೇವಾಗುಣವನ್ನು ಇಂದು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
*ಪಂಚ ಗ್ಯಾರಂಟಿ ಯೋಜನೆಗಳು:* ರಾಜ್ಯ ಸರ್ಕಾರದಿಂದ ಕಳೆದ ಎರಡುವರೆ ವರ್ಷಗಳಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳಾಗಿವೆ. ಪಂಚ ಗ್ಯಾರಂಟಿ ಯೋಜನೆಯಡಿ ಆರ್ಥಿಕವಾಗಿ ದುರ್ಬಲರಾಗಿರುವ ವರ್ಗದವರಿಗೆ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಮಹಿಳೆಯರು, ಪಡಿತರ ಚೀಟಿದಾರರು, ಯುವಕರು ಸೇರಿದಂತೆ ಹಲವಾರು ಜನರಿಗೆ ಇವುಗಳ ಸೌಲಭ್ಯ ದೊರೆಯುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳಿಂದ ಜನರ ಆರ್ಥಿಕ ಜೀವನ ಮಟ್ಟವು ಸುಧಾರಣೆಯಾಗಿದ್ದು, ಜನ ಸೇವೆಯೇ ನಮ್ಮ ಸರ್ಕಾರದ ಧ್ಯೇಯವಾಗಿದೆ. ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ಪ್ರತಿ ವರ್ಷದ ಬಜೆಟ್‌ನಲ್ಲಿ ಅನುದಾನವನ್ನು ಮೀಸಲಿಡಲಾಗುತ್ತಿದೆ ಎಂದರು.
2023ರ ಜೂನ್ 11 ರಿಂದ ಆರಂಭಗೊಂಡ ಶಕ್ತಿ ಯೋಜನೆಯು ಜನಪ್ರಿಯ ಯೋಜನೆಯಾಗಿ ಮೆಚ್ಚುಗೆ ಗಳಿಸಿದ್ದು, 2025ರ ಜುಲೈ ಅಂತ್ಯದವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 8.37 ಕೋಟಿಗೂ ಅಧಿಕ ಮಹಿಳಾ ಪ್ರಯಾಣಿಕರು ಪ್ರಯಾಣಿಸಿ ಶಕ್ತಿ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದಾರೆ. ಇದಕ್ಕಾಗಿ 303.45 ಕೋಟಿ ರೂ.ಗಳು ವೆಚ್ಚ ಮಾಡಲಾಗಿದೆ. ಗೃಹಜ್ಯೋತಿ ಯೋಜನೆ 2025ರ ಜೂನ್ 30 ರವರೆಗೆ ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ಗೃಹ ಜ್ಯೋತಿ ಯೋಜನೆಯಲ್ಲಿ ಒಟ್ಟು 2,83,988 ಗ್ರಾಹಕರ ಪೈಕಿ 2,76,653 ಫಲಾನುಭವಿಗಳು ನೋಂದಾಯಿಸಿದ್ದು, ಶೇ 97.42ರಷ್ಟು ಪ್ರಗತಿಯಾಗಿದೆ. ಅನ್ನಭಾಗ್ಯ ಯೋಜನೆಯಡಿ ಕೊಪ್ಪಳ ಜಿಲ್ಲೆಯಲ್ಲಿ 37,224 ಅಂತ್ಯೋದಯ, 2,91,265 ಪಿ.ಹೆಚ್.ಹೆಚ್ ಪಡಿತರ ಚೀಟಿಗಳಿದ್ದು, ಅವುಗಳಲ್ಲಿನ 12,33,998 ಸದಸ್ಯರಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಂತೆ ಪ್ರತಿ ಸದಸ್ಯರಿಗೆ 10 ಕೆಜಿ ಆಹಾರ ಧಾನ್ಯ ಉಚಿತವಾಗಿ ವಿತರಿಸಲಾಗುತ್ತಿದೆ.
ಅದೇ ರೀತಿ ಯುವನಿಧಿ ಯೋಜನೆ 2023ರ ಡಿಸೆಂಬರ್ 26 ರಂದು ಮಾನ್ಯ ಮುಖ್ಯಮಂತ್ರಿಗಳಿಂದ ಯುವನಿಧಿ ಯೋಜನೆಯ ನೋಂದಣಿಗೆ ಚಾಲನೆ ನೀಡಲಾಯಿತು. ನಂತರ 2024ರ ಜನವರಿ 12 ರಂದು ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಅರ್ಹ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದು ನಿರುದ್ಯೋಗ ಪದವೀಧರರಿಗೆ ಪ್ರತಿ ತಿಂಗಳು ರೂ. 3000 ಹಾಗೂ ಡಿಪ್ಲೊಮಾದಾರರಿಗೆ ಪ್ರತಿ ತಿಂಗಳು ರೂ. 1500 ಗಳ ನಿರುದ್ಯೋಗ ಭತ್ಯೆ ನೀಡುವ ಯೋಜನೆಯಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ 2025ರ ಜುಲೈ 31 ರವರೆಗೆ 9,221 ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದು, ಇಲ್ಲಿಯವರೆಗೆ ಒಟ್ಟು ಮೊತ್ತ ರೂ. 15,17,71,500 ನಿರುದ್ಯೋಗ ಭತ್ಯೆಯನ್ನು ನೀಡಲಾಗಿದೆ.
ಬಿಪಿಎಲ್, ಎಪಿಎಲ್, ಅಂತ್ಯೋದಯ ಕಾರ್ಡ್ನಲ್ಲಿ ನಮೂದಿಸಿರುವಂತೆ ಕುಟುಂಬದ ಅರ್ಹ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2,000 ರೂ. ಆರ್ಥಿಕ ಸೌಲಭ್ಯ ನೀಡುವ ಗೃಹಲಕ್ಷ್ಮೀ ಯೋಜನೆಯಿಂದ ಕೊಪ್ಪಳ ಜಿಲ್ಲೆಯ ಲಕ್ಷಾಂತರ ಮಹಿಳೆಯರಿಗೆ ಅನುಕೂಲವಾಗುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ಜೂನ್-2025ರ ಅಂತ್ಯಕ್ಕೆ ಒಟ್ಟು 3,26,823 ಫಲಾನುಭವಿಗಳು ಈ ಯೋಜನೆಯಡಿ ನೊಂದಣಿಯಾಗಿದ್ದು, ಇದುವರೆಗೂ 20 ಕಂತುಗಳಲ್ಲಿ ಒಟ್ಟು ಮೊತ್ತ ರೂ. 1,213.58 ಕೋಟಿ ರೂಪಾಯಿ ಸಹಾಯ ಧನ ಫಲಾನುಭವಿಗಳ ಖಾತೆಗೆ ಸಂದಾಯವಾಗಿರುತ್ತದೆ ಎಂದು ತಿಳಿಸಿದರು.
*ಜಿಲ್ಲಾ ಪಂಚಾಯತ್:* ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ 2024-25ನೇ ಸಾಲಿಗೆ 83 ಲಕ್ಷ ಮಾನವ ದಿನಗಳ ಸೃಜನೆಯ ಗುರಿಯಿದ್ದು 2025ರ ಆಗಸ್ಟ್ 6ಕ್ಕೆ 47.37 ಲಕ್ಷ ಮಾನವ ದಿನಗಳು ಸೃಜಿಸಿ ಶೇ. 57ರಷ್ಟು ಪ್ರಗತಿ ಸಾಧಿಸಲಾಗಿದೆ. ವಸತಿ ಯೋಜನೆಯಡಿ 2021-22ನೇ ಸಾಲಿನ ಬಸವ ವಸತಿ ಯೋಜನೆ ಮತ್ತು ಹೆಚ್ಚುವರಿ ಯೋಜನೆಯಡಿ 13,347 ಮನೆಗಳ ಗುರಿ ಇದ್ದು, ಈ ಪೈಕಿ ಇಲ್ಲಿಯವರೆಗೆ 13,156 ಮನೆಗಳನ್ನು ನಿಗಮದಿಂದ ಅನುಮೋದನೆ ಪಡೆಯಲಾಗಿದೆ. ಇದರಲ್ಲಿ 6,415 ಪ್ರಗತಿಯಲ್ಲಿದ್ದು 6,449 ಮನೆಗಳು ಮುಕ್ತಾಯಗೊಂಡಿರುತ್ತವೆ. ಡಾ.ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆ ಮತ್ತು ಹೆಚ್ಚುವರಿ ಯೋಜನೆಯಡಿ 4,207 ಮನೆಗಳ ಗುರಿ ಇದ್ದು ಈ ಪೈಕಿ ಇಲ್ಲಿಯವರೆಗೆ 4,143 ಮನೆಗಳನ್ನು ನಿಗಮದಿಂದ ಅನುಮೋದನೆ ಪಡೆಯಲಾಗಿದೆ. ಇದರಲ್ಲಿ 1,779 ಮನೆಗಳು ಪ್ರಗತಿಯಲ್ಲಿದ್ದು 2,207 ಮನೆಗಳು ಮುಕ್ತಾಯಗೊಂಡಿರುತ್ತವೆ ಎಂದರು.
*ಕೃಷಿ ಇಲಾಖೆ:* ಈ ವರ್ಷ 2025ರ ಆಗಸ್ಟ್ 2ರವರೆಗೆ ಜಿಲ್ಲೆಯಲ್ಲಿ ಸರಾಸರಿ ವಾಡಿಕೆ ಮಳೆ 232 ಮಿ.ಮೀ. ಇದ್ದು, ವಾಸ್ತವಿಕವಾಗಿ 312 ಮಿ.ಮೀ. ಮಳೆಯಾಗಿದೆ. ಶೇ. 35 ರಷ್ಟು ಅಧಿಕ ಮಳೆಯಾಗಿರುತ್ತದೆ. ಈ ವರ್ಷ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಿರುವುದರಿಂದ ಮುಂಗಾರು ಹಂಗಾಮು ಆಶಾದಾಯಕವಾಗಿದೆ. ಜಿಲ್ಲೆಯ ಬಿತ್ತನೆ ಗುರಿ 3.19 ಲಕ್ಷ ಹೆಕ್ಟರ್ ಆಗಿದ್ದು, 3.56 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಶೇ.110ರಷ್ಟು ಬಿತ್ತನೆಯಾಗಿದೆ. ರೈತರು ಮುಖ್ಯವಾಗಿ ಮೆಕ್ಕೆಜೋಳ ಬೆಳೆಯನ್ನು ಹೆಚ್ಚಾಗಿ ಬಿತ್ತನೆ ಮಾಡಿರುತ್ತಾರೆ. ಭತ್ತ, ಮೆಕ್ಕೆಜೋಳ, ಸಜ್ಜೆ, ನವಣೆ, ಹೆಸರು, ತೊಗರಿ, ಸೂರ್ಯಕಾಂತಿ ಇತ್ಯಾದಿ ವಿವಿಧ ಬಿತ್ತನೆ ಬೀಜಗಳ ಮೊತ್ತ 10,590 ಕ್ವಿಂಟಲ್ ದಾಸ್ತಾನು ಮಾಡಲಾಗಿದ್ದು, ಇದರಲ್ಲಿ 8,742 ಕ್ವಿಂಟಲ್ ಬೀಜ ರೈತರಿಗೆ ವಿತರಿಸಲಾಗಿದೆ. ಇನ್ನುಳಿದ 1,848 ಕ್ವಿಂಟಲ್ ಬೀಜ ದಾಸ್ತಾನಿನಲ್ಲಿ ಲಭ್ಯವಿದ್ದು, ಜಿಲ್ಲೆಯಲ್ಲಿ ಬಿತ್ತನೆ ಬೀಜದ ಕೊರತೆ ಇರುವುದಿಲ್ಲ ಎಂದು ಹೇಳಿದರು.
*ತೋಟಗಾರಿಕೆ ಇಲಾಖೆ:* ಕರ್ನಾಟಕ ಸರ್ಕಾರದಿಂದ 2025-26ನೇ ಸಾಲಿನ ಬಜೆಟ್‌ನಲ್ಲಿ ಅನುಮೋದನೆಗೊಂಡಿರುವ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಸಿರಿವಾರ ಗ್ರಾಮದಲ್ಲಿ 200 ಎಕರೆ ಪ್ರದೇಶದಲ್ಲಿ ಹೊಸದಾಗಿ ಅನುಷ್ಠಾನಗೊಳಿಸಲಾಗುತ್ತಿರುವ ತೋಟಗಾರಿಕೆ ತಂತ್ರಜ್ಞಾನ ಪಾರ್ಕ್ನ ಪ್ರಸ್ತುತ ವಿಸ್ತೃತ ಯೋಜನಾ ವರದಿಯನ್ನು ಸಲ್ಲಿಸಲಾಗಿದ್ದು, ದಿನಾಂಕ:17/07/2025ರಂದು ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಯಾಗಿರುತ್ತದೆ. ಮುಂದಿನ ದಿನಗಳಲ್ಲಿ ಕೊಪ್ಪಳ ಸೇರಿದಂತೆ ಕಲ್ಯಾಣ ಕರ್ನಾಟಕದ ರೈತರಿಗೆ ಈ ತೋಟಗಾರಿಕೆ ತಂತ್ರಜ್ಞಾನ ಪಾರ್ಕ್ ಒಂದು ವರದಾನವಾಗಲಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ: ಕುಟುಂಬ ಕಲ್ಯಾಣ ಕಾರ್ಯಕ್ರಮದಲ್ಲಿ 2024-25ನೇ ಸಾಲಿನಲ್ಲಿ ತಾತ್ಕಾಲಿಕ ವಿಧಾನವಾದ ಪಿ.ಪಿ.ಐ.ಯು.ಸಿ.ಡಿ ಯಲ್ಲಿ 10,759 ಫಲಾನುಭವಿಗಳಿಗೆ ಸೇವೆಯನ್ನು ನೀಡಲಾಗಿದ್ದು ಶೇ. 115.6 ರಷ್ಟು ಸಾಧನೆಯಾಗಿರುತ್ತದೆ ಎಂದರು.
*ಸಮಾಜ ಕಲ್ಯಾಣ ಇಲಾಖೆ:* ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪಿ.ಯು.ಸಿ.ಗೆ ರೂ. 20,000 ಗಳು, ಪದವಿಯಲ್ಲಿ ರೂ. 25,000 ರಿಂದ ಸ್ನಾತಕೋತ್ತರ ಪದವಿಗೆ ರೂ. 30,000 ಗಳು ಮತ್ತು ವೃತ್ತಿಪರ ಕೋರ್ಸ್ಗಳಾದ ಮೆಡಿಕಲ್ ಅಥವಾ ಇಂಜಿನಿಯರಿAಗ್‌ನಲ್ಲಿ ರೂ. 35,000 ಗಳವರೆಗೆ ಪ್ರೋತ್ಸಾಹಧನ ವಿತರಿಸಲಾಗಿರುತ್ತದೆ. ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯಗಳಾದ ಸಿ.ಸಿ. ರಸ್ತೆ, ಚರಂಡಿ, ಇತ್ಯಾದಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಒಟ್ಟಾರೆ ರೂ. 769.16 ಲಕ್ಷಗಳ ವೆಚ್ಚ ಭರಿಸಲಾಗಿರುತ್ತದೆ ಎಂದು ತಿಳಿಸಿದರು.
*ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ:* ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ವಸತಿ ನಿಲಯಗಳಲ್ಲಿ ಒಟ್ಟು 56 ಸ್ವಂತ ಕಟ್ಟಡಗಳಿದ್ದು, 1 ವಸತಿ ನಿಲಯದ ಸ್ವಂತ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. 4 ವಸತಿ ನಿಲಯಗಳಿಗೆ ಕೆ.ಕೆ.ಆರ್.ಡಿ.ಬಿ. ಅನುದಾನದಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ದೊರಕಿದೆ. ಜಿಲ್ಲೆಯಲ್ಲಿ ಒಟ್ಟು 7 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, 4 ವಸತಿ ಶಾಲೆಗಳಿಗೆ ಸ್ವಂತ ಕಟ್ಟಡಗಳಿವೆ. 3 ವಸತಿ ಶಾಲೆಗಳಿಗೆ ನಿವೇಶನಗಳು ಲಭ್ಯವಿದ್ದು, ಕನಕಗಿರಿ ಹಾಗೂ ಹನುಮನಾಳ ವಸತಿ ಶಾಲೆಗಳ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಮಂಜೂರಾತಿ ನೀಡಲಾಗಿದೆ ಎಂದು ಹೇಳಿದರು.
*ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ:* ಶಿಕ್ಷಣದಿಂದ ವಂಚಿತರಾಗಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ದೂರ ಶಿಕ್ಷಣ ಮಾದರಿಯಲ್ಲಿ ಉಚಿತ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದರು.
*ಶಿಕ್ಷಣ ಇಲಾಖೆ:* 2025-26ನೇ ಸಾಲಿನಲ್ಲಿ ಅಕ್ಷರ ಆವಿಷ್ಕಾರ ಯೋಜನೆಯಡಿ ಜಿಲ್ಲೆಯ ಶಾಲೆಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ರೂ.59.09 ಕೋಟಿಗಳ ಅನುದಾನವು ಮಂಜೂರಾಗಿರುತ್ತದೆ. ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಸುವುದು ಪ್ರಗತಿಯಲ್ಲಿವೆ. ಕೊಪ್ಪಳ ಜಿಲ್ಲೆಯ ಇಟಗಿ, ಟಣಕನಕಲ್, ತಳುವಗೇರಾ ಹಾಗೂ ಕನಕಗಿರಿ ಸೇರಿ ಜಿಲ್ಲೆಯಲ್ಲಿ ಒಟ್ಟು 4 ಸರಕಾರಿ ಆದರ್ಶ ಪದವಿ ಪೂರ್ವ ಕಾಲೇಜುಗಳನ್ನು 2025-26ನೇ ಸಾಲಿನಿಂದ ಪ್ರಾರಂಭ ಮಾಡಲಾಗಿದೆ. 2024-25ನೇ ಸಾಲಿಗೆ ಕೆ.ಕೆ.ಆರ್.ಡಿ.ಬಿ ಅನುದಾನದಿಂದ ಕುಕನೂರು ತಾಲೂಕಿನ ರಾಜೂರು-ಆಡೂರು ಹಾಗೂ ಯಲಬುರ್ಗಾ ತಾಲೂಕಿನ ಮುಧೋಳ-ಕರಮುಡಿ ಸೇರಿ ಜಿಲ್ಲೆಯಲ್ಲಿ 2 ಹೊಸ ಪದವಿ ಪೂರ್ವ ಕಾಲೇಜುಗಳು ಮಂಜೂರಾಗಿರುತ್ತವೆ ಎಂದು ತಿಳಿಸಿದರು.
*ಜಿಲ್ಲಾ ನಗರಾಭಿವೃದ್ಧಿ ಕೋಶ:* ಕೊಪ್ಪಳ ಜಿಲ್ಲೆಯ 7 ನಗರ ಸ್ಥಳೀಯ ಸಂಸ್ಥೆಗಳಿಗೆ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸಲು ಅಮೃತ 2.0 ಯೋಜನೆಯಡಿಯಲ್ಲಿ ಕೊಪ್ಪಳ-ಭಾಗ್ಯನಗರ ಸಂಯುಕ್ತ ಕುಡಿಯವ ನೀರಿನ ಯೋಜನೆಯ ಕಾಮಗಾರಿ ಮೊತ್ತ ರೂ.139.94 ಕೋಟಿ, ಯಲಬುರ್ಗಾ-ಕುಕನೂರು ಸಂಯುಕ್ತ ಕುಡಿಯವ ನೀರಿನ ಯೋಜನೆಯ ಕಾಮಗಾರಿ ಮೊತ್ತ ರೂ.242.23 ಕೋಟಿ. ಕನಕಗಿರಿ-ಕಾರಟಗಿ ಸಂಯುಕ್ತ ಕುಡಿಯವ ನೀರಿನ ಯೋಜನೆಯ ಕಾಮಗಾರಿ ಮೊತ್ತ 195.79 ಕೋಟಿ ರೂಪಾಯಿ ಮೊತ್ತಕ್ಕೆ ಗುತ್ತಿಗೆದಾರರಿಗೆ ಕಾಮಗಾರಿ ಆದೇಶ ನೀಡಲಾಗಿದೆ. ಕುಷ್ಟಗಿ ಕುಡಿಯವ ನೀರಿನ ಯೋಜನೆಯ 28 ಕೋಟಿ ರೂ. ಮೊತ್ತದ ಕಾಮಗಾರಿ ಪ್ರಗತಿಯಲ್ಲಿರುತ್ತದೆ ಎಂದರು.
*ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ:* 2024-25ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನದಲ್ಲಿ 265 ಶಾಲೆಗಳಿಗೆ ಹೊಸ ಕೊಠಡಿಗಳ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಸದರಿ ಅನುದಾನದಲ್ಲಿ 18 ಹೊಸ ಅಂಗನವಾಡಿಗಳು ಮತ್ತು 4 ಬಾಲ ಭವನಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, 7 ಸಮುದಾಯ ಆರೋಗ್ಯ ಕೇಂದ್ರಗಳಿಗೆ ವೈದ್ಯಕೀಯ ಉಪಕರಣಗಳನ್ನು ಖರೀದಿಸಲಾಗಿದೆ ಹಾಗೂ 6 ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣ ಮತ್ತು ವೈದ್ಯಕೀಯ ಉಪಕರಣಗಳನ್ನು ಖರೀದಿಸಲಾಗಿದೆ. ಜಿಲ್ಲೆಯಲ್ಲಿ 29 ವಸತಿ ನಿಲಯಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಮುನಿರಾಬಾದ ತೋಟಗಾರಿಕೆ ಮಹಾವಿದ್ಯಾಲಯಕ್ಕೆ 2024-25ನೇ ಸಾಲಿನಲ್ಲಿ ಸದರಿ ಅನುದಾನದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ ಮತ್ತು ಪ್ರಯೋಗಾಲಯ ಉಪಕರಣಗಳನ್ನು ಖರೀದಿಸಲಾಗಿದೆ ಎಂದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸ್ಥಾಪನೆಯಿಂದ ನಮ್ಮ ಭಾಗದ ಸರ್ವತೋಮುಖ ಅಭಿವೃದ್ಧಿಗೆ ತುಂಬಾ ಅನುಕೂಲವಾಗಿದೆ. 2025-26ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಕೊಪ್ಪಳ ಜಿಲ್ಲೆಗೆ ಮೈಕ್ರೋ ವಲಯದಲ್ಲಿ ರೂ. 236.39 ಕೋಟಿ ಹಾಗೂ ಮ್ಯಾಕ್ರೋ ವಲಯದಲ್ಲಿ ರೂ. 99.68 ಕೋಟಿ ಹೀಗೆ ಒಟ್ಟು ರೂ. 336.08 ಕೋಟಿ ಅನುದಾನವನ್ನು ನಿಗದಿಪಡಿಸಲಾಗಿದೆ. ಜಿಲ್ಲೆಗೆ ನಿಗದಿಪಡಿಸಿದ ಅನುದಾನಕ್ಕೆ ಕ್ರಿಯಾ ಯೋಜನೆಯನ್ನು ರೂಪಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
*ಕಾರ್ಮಿಕ ಇಲಾಖೆ:* ಕಾರ್ಮಿಕ ಇಲಾಖೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 1,65,649 ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ನೊಂದಣಿಯಾಗಿದ್ದು, ನೊಂದಾಯಿತ ಕಟ್ಟಡ ಕಾರ್ಮಿಕರಿಗಾಗಿ ವಿವಿಧ ಸೌಲಭ್ಯಗಳಾದ ಮದುವೆ ಧನಸಹಾಯ, ಹೆರಿಗೆ ಸೌಲಭ್ಯ, ಅಂತ್ಯಕ್ರಿಯೆ ವೆಚ್ಚ, ಪಿಂಚಣಿ ಸೌಲಭ್ಯ, ದುರ್ಬಲತೆ ಪಿಂಚಣಿ, ಟ್ರೈನಿಂಗ್ ಕಮ್ ಟೂಲ್‌ಕಿಟ್ ಸೌಲಭ್ಯ, ವಸತಿ ಸೌಲಭ್ಯ, ತಾಯಿ ಮಗು ಸಹಾಯ ಹಸ್ತ, ವೈದ್ಯಕೀಯ ಸಹಾಯಧನ, ಅಪಘಾತ ಪರಿಹಾರ, ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನ, ಶೈಕ್ಷಣಿಕ ಧನಸಹಾಯ ಸೌಲಭ್ಯಗಳನ್ನು ನೀಡುತ್ತಿದೆ ಎಂದರು.
*ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ:* ಮರಣ ಹೊಂದಿದ ಕುರಿ, ಮೇಕೆ ಮಾಲೀಕರಿಗೆ ಅನುಗ್ರಹ ಕೊಡುಗೆ ಯೋಜನೆಯಡಿ ಪರಿಹಾರ ಧನ ವಿತರಿಸುವುದು ಆಕಸ್ಮಿಕ ಮರಣಹೊಂದಿದ 3 ರಿಂದ 6 ತಿಂಗಳ ಕುರಿ-ಮೇಕೆ ಮರಿಗಳಿಗೆ ರೂ. 3500 ಮತ್ತು 6 ತಿಂಗಳ ಮೇಲ್ಪಟ್ಟ ಕುರಿ-ಮೇಕೆ ಮಾಲೀಕರಿಗೆ ಗರಿಷ್ಟ ರೂ. 5000 ಗಳ ಪರಿಹಾರಧನವನ್ನು ವಿತರಿಸಲಾಗುತ್ತಿದೆ. 2024-25ನೇ ಸಾಲಿನಲ್ಲಿ ಒಟ್ಟು 8,410 ಕುರಿ-ಮೇಕೆಗಳ 7,802 ಮಾಲೀಕರಿಗೆ ರೂ. 414 ಲಕ್ಷ ಪರಿಹಾರ ಧನವನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಸಕಲ ಜಾತಿ, ಧರ್ಮ, ಭಾಷೆ, ಪ್ರದೇಶಗಳ ಜನರೆಲ್ಲಾ ಒಗ್ಗಟ್ಟಾಗಿ ಬೃಹತ್ ಪ್ರಜಾ ಪ್ರಭುತ್ವದ ಯಶಸ್ಸಿಗಾಗಿ ನಾವೆಲ್ಲರೂ ಸಹೋದರತ್ವದಿಂದ ಬಾಳುತ್ತಿದ್ದೇವೆ. ಬಹುಜನರ ಒಳಿತಿಗಾಗಿ ಬಹುಜನರ ಕಲ್ಯಾಣಕ್ಕಾಗಿ ಎಂಬ ಮಂತ್ರವನ್ನು ಸಾರುತ್ತಾ ಭವ್ಯಭಾರತ ಕಟ್ಟುವ ಸಂಕಲ್ಪ ಮಾಡೋಣ, ಭಾರತಕ್ಕೊಂದು ಹೊಸ ಭಾಷ್ಯ ಬರೆಯೋಣ ಎಂಬ ಸಂದೇಶವನ್ನು ಸಾರುತ್ತಾ ಮತ್ತೊಮ್ಮೆ ತಮಗೆಲ್ಲರಿಗೂ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಶುಭಾಷಯಗಳನ್ನು ತಿಳಿಸುತ್ತೇನೆ ಎಂದು ಹೇಳಿದರು.
*ಸಂಗೊಳ್ಳಿ ರಾಯಣ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ:* ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಸಚಿವರು, ಶಾಸಕರು ಮತ್ತು ಸಂಸದರು ಸೇರಿದಂತೆ ಇತರೆ ಜನಪ್ರತಿನಿಧಿಗಳು ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
*ಆಕರ್ಷಕ ಪಥಸಂಚಲನ:* 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ನಿಮಿತ್ತ ಪೊಲೀಸ್ ಇಲಾಖೆ, ಸಶಸ್ತç ಮೀಸಲು ಪಡೆ, ಗೃಹ ರಕ್ಷಕದಳ, ಭಾರತ ಸೇವಾದಳ, ಎನ್.ಸಿ.ಸಿ, ಭಾರತ್ ಸ್ಕೌಟ್ಸ್ & ಗೈಡ್ಸ್ ತಂಡಗಳು ಜಿಲ್ಲಾ ಕ್ರೀಡಾಂಗಣದಲ್ಲಿ ಆಕರ್ಷಕ ಪಥಸಂಚಲನ ನಡೆಸಿ, ಸಚಿವರಿಗೆ ಗೌರವ ವಂದನೆ ಸಲ್ಲಿಸಿದವು.
*ಸನ್ಮಾನ:* ಕೊಪ್ಪಳ ಜಿಲ್ಲೆಯ ಕವಲೂರು ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಹನುಮಂತಗೌಡ ಪಾಟೀಲ್ ಮತ್ತು ರಾಯಚೂರಿನ ಕೃಷಿ ವಿಶ್ವವಿದ್ಯಾಲಯದಿಂದ ಇತ್ತೀಚೆಗೆ ಗೌರವ ಡಾಕ್ಟರೇಟ್ ಪಡೆದ ಜಿಲ್ಲೆಯ ಪ್ರಗತಿಪರ ರೈತರಾದ ದೇವೇಂದ್ರಪ್ಪ ಬಳೂಟಗಿ ಹಾಗೂ ಮುಖ್ಯಮಂತ್ರಿಗಳ ಪದಕಕ್ಕೆ ಪುರಸ್ಕೃತಗೊಂಡ ಪೊಲೀಸ್ ಇಲಾಖೆಯ ಭೀಮಸೇನರಾವ್ ಕುಲಕರ್ಣಿ, ಮೌನೇಶ್ವರ ಮಾಲಿಪಾಟೀಲ್ ಮತ್ತು ಪರುಶುರಾಮ ಗರೇಬಾಳ ಅವರಿಗೆ ಹಾಗೂ ಇತರೆ ಸಾಧಕರಿಗೂ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
*ಲ್ಯಾಪ್‌ಟಾಪ್ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ:* ಈ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಕೊಪ್ಪಳ ಜಿಲ್ಲೆಯ ಮತ್ತು ಕೊಪ್ಪಳ ತಾಲ್ಲೂಕಿನ ಮೂರು ಟಾಪರ್ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಪ್ರೋತ್ಸಾಹದಾಯಕವಾಗಿ ಲ್ಯಾಪ್‌ಟಪ್‌ಗಳನ್ನು ವಿತರಣೆ ಮಾಡಲಾಯಿತು ಮತ್ತು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.
*ಸಾಂಸ್ಕೃತಿಕ ಕಾರ್ಯಕ್ರಮ, ಬಹುಮಾನ ವಿತರಣೆ:* ಸ್ವಾತಂತ್ರ್ಯೋತ್ಸವ ದಿನಾಚರಣೆ ಪ್ರಯುಕ್ತ ಕೊಪ್ಪಳದ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಮತ್ತು ಜ್ಞಾನಬಂಧು ಪಿಯು ಕಾಲೇಜು ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ನೃತ್ಯ ಮಾಡಿ, ಎಲ್ಲ ಗಮನ ಸೆಳೆದ ವಿದ್ಯಾರ್ಥಿಗಳಿಗೆ ಮತ್ತು ಪಥಸಂಚಲನದಲ್ಲಿ ಭಾಗವಹಿಸಿದ ತಂಡಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ, ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೊಪ್ಪಳ ಸಂಸದರಾದ ಕೆ.ರಾಜಶೇಖರ ಹಿಟ್ನಾಳ, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ಕೊಪ್ಪಳ ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಶ್ರೀನಿವಾಸ್ ಗುಪ್ತಾ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ್, ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್ ಅರಸಿದ್ಧಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ್ ಕುಮಾರ್, ಕೊಪ್ಪಳ ತಹಶಿಲ್ದಾರ ವಿಠ್ಠಲ ಚೌಗಲಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬಗೌಡರ್ ಸೇರಿದಂತೆ ಇತರೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿ, ಸಿಬ್ಬಂದಿಗಳು ಮತ್ತು ವಿವಿಧ ಶಾಲಾ ಕಾಲೇಜುಗಳಿಂದ ಆಗಮಿಸಿದ ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಇತರೆ ಹಲವಾರು ಜನರು ಉಪಸ್ಥಿತರಿದ್ದರು.