ಕರ್ನಾಟಕದ ಸರ್ಕಾರಿ ನೌಕರರು, ನಿವೃತ್ತ ನೌಕರರು ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಜಾರಿಗಾಗಿ ಕಾದು ಕುಳಿತಿದ್ದಾರೆ. ರಾಜ್ಯದಲ್ಲಿ ಮತದಾನ ಮಗಿದರೂ ಸಹ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವ ತನಕ ವರದಿ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ.
ರಾಜ್ಯದಲ್ಲಿ ಜೂನ್ 6ರ ತನಕ ಲೋಕಸಭೆ ಚುನಾವಣೆ ನೀತಿ ಸಂಹಿತೆ, ಜೂನ್ 12ರ ತನಕ ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಬಳಿಕ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 7ನೇ ವೇತನಆಯೋಗದ ವರದಿ ಜಾರಿ ಬಗ್ಗೆ ತೀರ್ಮಾನವನ್ನು ಕೈಗೊಳ್ಳುವ ನಿರೀಕ್ಷೆ ಇದೆ.
ಈಗಾಗಲೇ ಮುಖ್ಯಮಂತ್ರಿಗಳು, ರಾಜ್ಯದ 7ನೇ ವೇತನ ಆಯೋಗವು ಮಾರ್ಚ್ 16ರಂದು ವರದಿ ಸಲ್ಲಿಸಿದೆ. ಸರ್ಕಾರಿ ನೌಕರರ ಮೂಲವೇತನದ ಶೇಕಡ 27.5 ರಷ್ಟು ಹೆಚ್ಚಳ ಮಾಡಲು ಶಿಫಾರಸು ಮಾಡಿದೆ. ವರದಿಯನ್ನು ಪರಿಶೀಲಿಸಿ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಸರ್ಕಾರಿ ನೌಕರರಿಗೆ ಭರವಸೆ ಕೊಟ್ಟಿದ್ದಾರೆ.
1/7/2022ರಿಂದ ವೇತನ ಆಯೋಗದ ಶಿಫಾರಸು ಜಾರಿಗೆ ಬರಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಆದರೆ ಸರ್ಕಾರ ಯಾವಾಗಿನಿಂದ, ಎಷ್ಟು ಏರಿಕೆ ಮಾಡಬೇಕು? ಎಂದು ಸರ್ಕಾರ ಅಂತಿಮ ತೀರ್ಮಾನವನ್ನು ಕೈಗೊಳ್ಳಲಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ವೇತನ ಎಷ್ಟು ಏರಿಕೆಯಾಗಲಿದೆ? ಎಂಬ ಪೋಸ್ಟ್ ವೈರಲ್ ಆಗಿದೆ.
ವೇತನ ಎಷ್ಟು ಏರಿಕೆ?: 7ನೇ ವೇತನ ಆಯೋಗದ ಶಿಫಾರಸು ಜಾರಿಗೆ ಬಂದರೆ ಮೂಲ ವೇತನ, ತುಟ್ಟಿಭತ್ಯೆ, ಮೂಲ ವೇತದನ ಮೇಲೆ ಫಿಟ್ಮೆಂಟ್, ಮನೆ ಬಾಡಿಗೆ ಭತ್ಯೆ, ಎಂಇಡಿ, ಸಿಸಿಎ, ವೇತನ ಆಯೋಗದ ಶಿಫಾರಸಿನಂತೆ ಆಗುವ ಏರಿಕೆ, ವೇತನದಲ್ಲಿ ಒಟ್ಟು ಆಗುವ ಹೆಚ್ಚಳದ ಕುರಿತು ಪಟ್ಟಿಯನ್ನು ನೀಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಹಾಕಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ದೊಡ್ಡಬಳ್ಳಾಪುರ ಶಾಖೆ ಉಪಾಧ್ಯಕ್ಷ ವಿ. ಧನಂಜಯ ಅವರು ಸಿದ್ಧಪಡಿಸಿರುವ ಪಟ್ಟಿ ಇದಾಗಿದೆ. ಮೂಲ ವೇತನ 17000 ರೂ. ವೇತನ ಶ್ರೇಣಿಯಿಂದ 150600 ಮೂಲ ವೇತನದ ತನಕ ಯಾವ ವರ್ಗದವರಿಗೆ ಎಷ್ಟು ವೇತನ, ಫಿಟ್ಮೆಂಟ್, ಮನೆ ಬಾಡಿಗೆ ಭತ್ಯೆ, ತುಟ್ಟಿಭತ್ಯೆ ಎಲ್ಲಾ ಸೇರಿ ಒಟ್ಟು ವೇತನ ಎಷ್ಟು ಏರಿಕೆಯಾಗಲಿದೆ? ಎಂದು ಪಟ್ಟಿಯಲ್ಲಿ ಮಾಹಿತಿ ನೀಡಲಾಗಿದೆ. ಇದು 7ನೇ ವೇತನ ಆಯೋಗವಾಗಲಿ, ಸರ್ಕಾರವಾಗಲಿ ಬಿಡುಗಡೆ ಮಾಡಿರುವ ಅಧಿಕೃತ ಪಟ್ಟಿಯಲ್ಲ. ಆಯೋಗ ಸಲ್ಲಿಸಿರುವ ಶಿಫಾರಸು ಆಧರಿಸಿ ಸರ್ಕಾರ ಅಷ್ಟು ಏರಿಕೆಗೆ ಒಪ್ಪಿದರೆ ಆಗಬಹುದಾದ ವೇತನ ಏರಿಕೆ ಲೆಕ್ಕಾಚಾರವಾಗಿದೆ. ಹಲವು ಸರ್ಕಾರಿ ನೌಕರರು ಇದನ್ನು ವಾಟ್ಸಪ್ ಗ್ರೂಪ್‌ಗಳಲ್ಲಿ ಫಾರ್ವರ್ಡ್ ಮಾಡುತ್ತಿದ್ದಾರೆ. ಆದರೆ ಈ ವೇತನ ಶ್ರೇಣಿ ಜಾರಿಯಾಗಲು ಸರ್ಕಾರ 7ನೇ ವೇತನ ಆಯೋಗ ಶಿಫಾರಸು ಮಾಡಿರುವ ಅಷ್ಟು ಅಂಶಗಳನ್ನು ಯಥಾವತ್ ಒಪ್ಪಬೇಕು. ಬಳಿಕ ಯಾವಾಗಿನಿಂದ ಜಾರಿಗೆ ಬರಬೇಕು? ಎಂದು ತೀರ್ಮಾನ ಮಾಡಬೇಕು ಬಳಿಕ ವೇತನ ಎಷ್ಟು ಏರಿಕೆಯಾಗಲಿದೆ? ಎಂಬುದು ತಿಳಿಯಲಿದೆ. ‘7ನೇ ರಾಜ್ಯ ವೇತನ ಆಯೋಗ ತನ್ನ ವರದಿಯಲ್ಲಿ ಕನಿಷ್ಠ ಮೂಲವೇತನವನ್ನು ರೂ. 17,000ದಿಂದ ರೂ. 27,000ಕ್ಕೆ ಹೆಚ್ಚಿಸುವಂತೆ ಶಿಫಾರಸು ಮಾಡಿದೆ. ಇದರೊಂದಿಗೆ ಇನ್ನೂ ಅನೇಕ ಶಿಫಾರಸುಗಳಿದ್ದು ವರದಿಯನ್ನು ಆರ್ಥಿಕ ಇಲಾಖೆಗೆ ನೀಡಲಾಗಿದೆ. ಆರ್ಥಿಕ ಇಲಾಖೆಯು ವರದಿಯನ್ನು ಕೂಲಂಕುಷವಾಗಿ ಅಧ್ಯಯನ ಮಾಡಿದ ನಂತರ ನೀಡುವ ಸಲಹೆಗಳ ಆಧಾರದಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಫೆಬ್ರವರಿ 16ರಂದು ಮಂಡಿಸಿದ 2024-25ನೇ ಸಾಲಿನ ಬಜೆಟ್‌ನಲ್ಲಿ 7ನೇ ವೇತನ ಆಯೋಗದ ವರದಿ ಜಾರಿಗಾಗಿಯೇ ಅನುದಾನ ಮೀಸಲಿಟ್ಟಿದ್ದಾರೆ. ಆದರೆ ವೇತನ ಎಷ್ಟು ಏರಿಕೆಗೆ ಸರ್ಕಾರ ಒಪ್ಪಿಗೆ ನೀಡಲಿದೆ ಎಂದು ಕಾದು ನೋಡಬೇಕಿದೆ.