ಹುಬ್ಬಳ್ಳಿ ಏ.9: ಹುಬ್ಬಳ್ಳಿ ನಗರದಲ್ಲಿ ಮೇಲ್ಸೆತುವೆ ಕಾಮಗಾರಿ ಪ್ರಗತಿಯಲ್ಲಿದೆ. ಈಗಾಗಲೇ ಶೇ.50 ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ. ಉಳಿದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಎಲ್ಲರ ಸಹಕಾರ ಅವಶ್ಯವಾಗಿದೆ ಎಂದು ಜಿಲ್ಲಾಧಿಕಾರಿಗಳಾದ ದಿವ್ಯಪ್ರಭು ಜಿ.ಆರ್.ಜೆ ಹೇಳಿದರು.
ಇಂದು ಹುಬ್ಬಳ್ಳಿ ನಗರದ ಚನ್ನಮ್ಮ ವೃತ್ತ, ಹಳೇ ಕೋರ್ಟ್ ವೃತ್ತ, ಇಂದಿರಾ ಗಾಜಿನ ಮನೆ ವೃತ್ತದಲ್ಲಿ ಪ್ರಗತಿಯಲ್ಲಿರುವ ಮೇಲ್ಸೆತುವೆ ಕಾಮಗಾರಿಯನ್ನು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ, ಸರ್ಕ್ಯೂಟ್ ಹೌಸನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ನಗರದಲ್ಲಿ 2022 ರಿಂದ ಮೇಲ್ಸೆತುವೆ ಕಾಮಗಾರಿ ಪ್ರಗತಿಯಲ್ಲಿದೆ. ವಿಜಯಪುರ ರಸ್ತೆಯ ಕಡೆಯಿಂದ (710.00ಮೀ.), ಗದಗ ರಸ್ತೆಯಿಂದ (700.00 ಮೀ), ಚೆನ್ನಮ್ಮಾ ವೃತ್ತದಿಂದ ಹೊಸೂರ ವೃತ್ತದವರೆಗೆ (850.00 ಮೀ), ಗೋಕುಲ ರಸ್ತೆಯಲ್ಲಿ ಏರ್‌ಪೋರ್ಟ್ ಕಡೆಗೆ (689.00ಮೀ), ಧಾರವಾಡ ರಸ್ತೆ ಕಡೆಗೆ (310.00 ಮೀ), ಹಾಗೂ 350 ಮೀ. ಅಪರ‌್ಯಾಂಪ್ ಸೇರಿ ಒಟ್ಟು 3.600 ಕಿ.ಮೀ ಮೇಲ್ಸೆತುವೆ ನಿರ್ಮಿಸಲು ಉದ್ದೇಶಿಸಲಾಗಿದೆ. ಏಪ್ರೀಲ್ 20 ರಿಂದ ಆಗಸ್ಟ 19 ರವರೆಗೆ ಸುಮಾರು 4 ತಿಂಗಳ ಕಾಲ ಚನ್ನಮ್ಮ ವೃತ್ತದಿಂದ ಬಸವ ವನದವರೆಗೆ (500 ಮೀ.), ವಿಜಯಪುರ ರಸ್ತೆಯಲ್ಲಿ ಚನ್ನಮ್ಮ ವೃತ್ತದಿಂದ ಕೋರ್ಟ್ ವೃತ್ತದವರೆಗೆ (150 ಮೀ.) ಹಾಗೂ ಚನ್ನಮ್ಮ ವೃತ್ತದಲ್ಲಿ ಆಯ್ದ ಭಾಗಗಳಲ್ಲಿ ಪಿಲ್ಲರ್ ಕಾಮಗಾರಿಗಳಿಗೆ ಬ್ಯಾರಿಕೇಡಿಂಗ್ ಮಾಡಲು ಚನ್ನಮ್ಮ ವೃತ್ತಕ್ಕೆ ಸಂಪರ್ಕಿಸುವ ರಸ್ತೆಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗುವುದು. ಚೆನ್ನಮ್ಮ ವೃತ್ತದಿಂದ ಬಸವವನದವರೆಗೆ ಹಾಗೂ ವಿಜಯಪುರ ರಸ್ತೆಯಲ್ಲಿ 80 ಗಿರ್ಡರ್ ಹಾಗೂ 16 ಸ್ಪಾನಗಳ ಸ್ಲಾಬ್‌ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಚೆನ್ನಮ್ಮ ವೃತ್ತದಲ್ಲಿ ರೋಟರಿ ಕಾಮಗಾರಿಗಾಗಿ ಪೋರ್ಟ್‌ಲ್ ಕ್ಯಾಪ್ ಹಾಗೂ 8 ಪಿಯರ್‌ಗಳ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯು ಸರ್ವಸಿದ್ಧತೆಯನ್ನು ಮಾಡಿಕೊಂಡಿದೆ. 4 ತಿಂಗಳ ಕಾಲ ನಗರ ಸಾರಿಗೆ ನಿಲ್ದಾಣವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುತ್ತದೆ. ಐಟಿ ಪಾರ್ಕ ಹತ್ತಿರದಲ್ಲಿ ತಾತ್ಕಾಲಿಕ ಬಸ್ ನಿಲ್ದಾಣ ಸ್ಥಾಪಿಸಲಾಗುವುದು. ಅಲ್ಲದೇ ಉಪ ನಗರ ಬಸ್ ನಿಲ್ದಾಣವನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧಿಕಾರಿಗಳು ನಿರ್ವಹಣೆ ಹಾಗೂ ರಕ್ಷಣೆ ಮಾಡಬೇಕು. ವಿಜಯಪುರ ಮತ್ತು ಗದಗ ಹಾಗೂ ಉಳಿದ ಪ್ರದೇಶದಿಂದ ಬರುವ ಬಸ್ಸುಗಳಿಗೆ ಕಾರವಾರ ರಸ್ತೆ, ಸಿ.ಬಿ.ಟಿ. ಹಾಗೂ ಹೊಸೂರ ಬಸ್ ನಿಲ್ದಾಣಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಟ್ರಾಫಿಕ್ ಸಮಸ್ಯೆಯಾಗದಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ರುದ್ರೇಶ ಘಾಳಿ, ಡಿಸಿಪಿ ರವೀಶ ಸಿ.ಆರ್., ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿದ ಅಧೀಕ್ಷಕ ಅಭಿಯಂತರರಾದ ಟಿ.ಪ್ರದೀಪ ಪತ್ರಿಕಾಗೋಷ್ಠಿಯಲ್ಲಿದ್ದರು.
ಸಂಚಾರ ಮಾರ್ಗಗಳ ಬದಲಾವಣೆ
ಧಾರವಾಡದಿಂದ ವಿಜಯಪುರ ಮತ್ತು ಗದಗಗೆ ಹೋಗುವ ಮಾರ್ಗ
ಹೊಸೂರ ವೃತ್ತದಿಂದ ಕಾಟನ ಮಾರ್ಕೆಟ್, ಶಾರದಾ ಹೋಟೆಲ್, ದೇಸಾಯಿ ವೃತ್ತದ ಮೂಲಕ ಪಿಂಟೋ ವೃತ್ತ ಅಥವಾ ಕೋರ್ಟ ವೃತ್ತದ ಮೂಲಕ ಗದಗ ಹಾಗೂ ವಿಜಯಪುರಕ್ಕೆ ಸಂಚರಿಸಬಹುದಾಗಿದೆ ಅಥವಾ ಹೊಸೂರ ವೃತ್ತದಿಂದ ಕಾಟನ ಮಾರ್ಕೆಟ್, ನೀಲಿಜಿನ ರಸ್ತೆ, ಚನ್ನಮ್ಮಾ ವೃತ್ತ, ಸರ್ ಸಿದ್ದಪ್ಪ ಕಂಬಳಿ ರಸ್ತೆ ಮೂಲಕವಾಗಿಯೂ ಸಹ ಗದಗ ಹಾಗೂ ಸಿ.ಬಿ.ಟಿಗೆ ಸಂಚರಿಸಬಹುದಾಗಿದೆ.
ವಿಜಯಪುರದಿಂದ ಧಾರವಾಡ ಹೋಗುವ ಮಾರ್ಗ
ಸರ್ವೋದಯ ವೃತ್ತದಿಂದ ಡಿ.ಆರ್.ಎಮ್ ಆಫೀಸ್, ಸ್ಟೇಶನ ರಸ್ತೆ, ಚನ್ನಮ್ಮ ವೃತ್ತ ಕಾರವಾರ ರಸ್ತೆ ಭಾರತ ಮಿಲ್ ವೃತ್ತ ಮತ್ತು ವಾಣಿ ವಿಲಾಸ ವೃತ್ತದ ಮೂಲಕ ಧಾರವಾಡಕ್ಕೆ ಸಂಚರಿಸಬಹುದಾಗಿದೆ.
ಗದಗದಿಂದ ಧಾರವಾಡ ಹೋಗುವ ಮಾರ್ಗ
ಸ್ಟೇಶನ ರಸ್ತೆ, ಚನ್ನಮ್ಮ ವೃತ್ತ, ಕಾರವಾರ ರಸ್ತೆ, ಭಾರತ ಮಿಲ್ ವೃತ್ತ ಮತ್ತು ವಾಣಿ ವಿಲಾಸ ವೃತ್ತದ ಮೂಲಕ ಧಾರವಾಡಕ್ಕೆ ಸಂಚರಿಸಬಹುದಾಗಿದೆ.
ನೀಲಿಜಿನ ರಸ್ತೆ
ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ನೀಲಿಜಿನ ರಸ್ತೆಯನ್ನು ಕೇವಲ ವಾಯುವ್ಯ ಸಾರಿಗೆ ಸಂಚಾರಕ್ಕೆ ತೆರೆಯಲಾಗುವುದು. ಲಘು ವಾಹನಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿರುತ್ತದೆ.
ಉಪನಗರ ಸಾರಿಗೆ ವಾಹನಗಳ ಕಾರ್ಯಚರಣೆ ಮಾಡಲು ಪ್ರಸ್ತಾಪಿತ ಮಾರ್ಗ
ಹೊಸೂರ ಸರ್ಕಲ್, ಕಾಟನ್ ಮಾರ್ಕೇಟ್ ರಸ್ತೆ, ಸಾಂಸ್ಕೃತಿಕ ಭವನ ಮುಂಚಿನ ಬಲ ತಿರುವು, ಉತ್ತರ ಸಂಚಾರ ಪೋಲೀಸ್ ಠಾಣೆ ಪಕ್ಕದ ಬಲ ತಿರುವು, ಅಟೋ ಹೌಸ್ (ಸ್ವಿಮ್ಮಿಂಗ್ ಪೂಲ್) ಬಳಿ ಬಲ ತಿರುವು ಪಡೆದು, ಗ್ಲಾಸ್ ಹೌಸ್ ಕಂಪೌಂಡ್ ಪಕ್ಕದಲ್ಲಿರುವ ಬಸ್ ನಿಲುಗಡೆ ಮುಖಾಂತರ ಮರಳಿ ಹೊಸೂರು ಸರ್ಕಲ್ ತೆರಳುವುದು. ಈ ಸಂಪೂರ್ಣ ರಸ್ತೆಯನ್ನು ಉಪನಗರ ಸಾರಿಗೆ ನಿಲುಗಡೆ ಮತ್ತು ಕಾರ್ಯಾಚರಣೆ ಮಾಡಲಿದೆ. ಕಮರಿಪೇಟ ಪೋಲಿಸ್ ಠಾಣೆಯಿಂದ ಚೆನ್ನಮ್ಮ ಸರ್ಕಲ್‌ಗೆ ಬರುವ ವಾಹನಗಳನ್ನು ನಿರ್ಬಂಧಿಸಲಾಗಿದೆ ಎಂದು ವಿವರಿಸಿದರು