Ad image

ಭಗವಾನ ಮಹಾವೀರರು ಜಗತ್ತಿಗೆ ಅಹಿಂಸೆ, ಅಪರಿಗ್ರಹ, ಶಾಂತಿ, ಸಹೋದರತ್ವದ ಮೌಲ್ಯಗಳನ್ನು ನೀಡಿದ್ದಾರೆ : ವಿದ್ವಾಂಸ ಪ್ರೊ. ಶುಭಚಂದ್ರ

Vijayanagara Vani
ಭಗವಾನ ಮಹಾವೀರರು ಜಗತ್ತಿಗೆ ಅಹಿಂಸೆ, ಅಪರಿಗ್ರಹ, ಶಾಂತಿ, ಸಹೋದರತ್ವದ ಮೌಲ್ಯಗಳನ್ನು ನೀಡಿದ್ದಾರೆ : ವಿದ್ವಾಂಸ ಪ್ರೊ. ಶುಭಚಂದ್ರ
ಧಾರವಾಡ  ಏ.10: ಭಗವಾನ ಮಹಾವೀರರು ಜಗತ್ತಿಗೆ ಅಹಿಂಸೆ, ಶಾಂತಿ ಸೇರಿದಂತೆ ಸುಂದರ ಸಮಾಜ ರೂಪಗೊಳ್ಳಲು ಅಗತ್ಯವಿರುವ ನೀತಿ, ತತ್ತ್ವ, ಸಿದ್ದಾಂತಗಳನ್ನು ಬೋಧಿಸಿದರು. ಜೈನ ಧರ್ಮವು, ಭಾರತವು ಜಗತ್ತಿಗೆ ನೀಡಿದ ಬಹು ದೊಡ್ಡ ಕೊಡುಗೆ ಆಗಿದೆ ಎಂದು ಅಂತರಾಷ್ಟ್ರೀಯ ಜೈನ ವಿದ್ವಾಂಸರಾದ ಮೈಸೂರಿನ ಡಾ.ಶುಭಚಂದ್ರ ಅವರು ಹೇಳಿದರು.
ಅವರು ಇಂದು ಸಂಜೆ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಭಗವಾನ್ ಶ್ರೀ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಪ್ರಧಾನ ಉಪನ್ಯಾಸ ನೀಡಿ, ಮಾತನಾಡಿದರು.
ಬುದ್ದ ಮಹಾವೀರರು ಪ್ರಾಕೃತ ಭಾಷೆಯ ಬಳಿಸಿ, ಸಾಹಿತ್ಯ ಸೃಷ್ಟಿಸಿದರು. ಸಂಸ್ಕೃತವನ್ನು ಬಳಸಿ ಉಪದೇಶ ಮಾಡಿದರೆ ಅಂದಿನ ಜನಸಾಮನ್ಯರಿಗೆ ತಲುಪುವ ಅವಕಾಶ ಕಡಿಮೆ ಇದೆ ಎಂದು ಅವರು ಭಾವಿಸಿದ್ದರು. ಮಾಗದಿ ಬಾಷೆಯಲ್ಲಿ ಬುದ್ದ, ಅರ್ಧಮಾಗದಿಯಲ್ಲಿ ಮಹಾವೀರು ತಮ್ಮ ಧರ್ಮೋಪದೇಶಗಳನ್ನು ನೀಡಿದರು ಎಂದು ಡಾ.ಶುಭಚಂದ್ರ ಅವರು ಹೇಳಿದರು.
ಮಹಾವೀರರು ಅಹಿಂಸಾ ಅಣುವೃತ ಪಾಲನೆಯನ್ನು ಸಂಸಾರಿಕರಿಗೆ ಬೋಧಿಸಿದರು. ಸಂಕಲ್ಪ ಹಿಂಸೆಯನ್ನು ಜೈನ ಧರ್ಮ ವಿರೋಧಿಸುತ್ತದೆ. ಎಲ್ಲ ಜೀವಿಗಳನ್ನು ಸಮಭಾವದಿಂದ ಕಾಣುವ ಮನೋಧರ್ಮ ಜೈನರಲ್ಲಿದೆ.
ಅಧರ್ಮವನ್ನು ಉಂಟುಮಾಡುವ ಯಾವ ಕೆಲಸವನ್ನು ಮಾಡಬಾರದು. ಭಾರತೀಯ ಧರ್ಮಗಳು ನೀತಿ, ಸಂಸ್ಕಾರವನ್ನು ಸದಾ ಕಾಲವೂ ಬೋಧಿಸುತ್ತಾ ಬಂದಿವೆ ಎಂದು ಡಾ.ಶುಭಚಂದ್ರ ಅವರು ತಿಳಿಸಿದರು.
ಲೌಕಿಕ ಪ್ರಪಂಚದಲ್ಲಿ ಬದುಕುವದನ್ನು ಜೈನ ಧರ್ಮ ಕಲಿಸಿದೆ. ಜೈನ ಸಮಾಜದ ತತ್ತ್ವಗಳನ್ನು ತಪ್ಪಾಗಿ ಅರ್ಥೈಸಬಾರದು. ಸದೃಡ ಸಮಾಜಕ್ಕೆ ಜೈನ, ಬೌದ್ದ ಸೇರಿದಂತೆ ಅನೇಕ ಧರ್ಮಗಳು ತಮ್ಮ ಕೊಡುಗೆಗಳನ್ನು ನೀಡಿವೆ. ಇದನ್ನು ಎಲ್ಲರೂ ಅಳವಡಿಸಿಕೊಳ್ಳಬೇಕೆಂದು ಡಾ.ಶುಭಚಂದ್ರ ಅವರು ಹೇಳಿದರು.
ಕಾರ್ಯಕ್ರಮವನ್ನು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಅಪ್ಪಾಸಿ ಬಬಲೇಶ್ವರ ಅವರು ಉದ್ಘಾಟಿಸಿ, ಮಾತನಾಡಿ, ಭಾರತದಲ್ಲಿನ ಧರ್ಮದಾರ್ಶನಿಕರು ಶಾಂತಿ, ಸಂಸ್ಕಾರ, ಮೌಲ್ಯಯುತ ಬದುಕನ್ನು ವಿಶ್ವಕ್ಕೆ ನೀಡಿದ್ದು ಮಹಾನ್ ಕೊಡುಗೆ ಆಗಿದೆ. ಭಗವಾನ ಮಹಾವೀರರು ಬೋಧಿಸಿದ ಸತ್ಯ, ಅಹಿಂಸೆ, ಶಾಂತಿಯನ್ನು ಇಂದು ಎಲ್ಲೆಡೆ ಪಸರಿಸಬೇಕು ಎಂದರು.
ಜೈನ ಧರ್ಮ ಸೇರಿದಂತೆ ಭಾರತೀಯ ಎಲ್ಲ ಧರ್ಮಗಳ ಸಾರವನ್ನು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಯುವಕರಾದಿಯಾಗಿ ಮಕ್ಕಳವರೆಗೂ ತಲುಪಿಸಬೇಕು ಎಂದರು.
ಕರ್ನಾಟಕ ರಾಜ್ಯ ಬಾಲ ವಿಕಾಸ ಅಕೆಡಾಮಿಯಿಂದ ಮಹಾನ ಪುರುಷರ, ದಾರ್ಶನಿಕರ ತತ್ತ್ವಗಳನ್ನು ಮತ್ತು ಧರ್ಮದ ಮೌಲ್ಯಗಳನ್ನು ಮಕ್ಕಳಿಗೆ ತಲುಪಿಸುವ ಮತ್ತು ಸಂಸ್ಕಾರವಂತ ಸಮಾಜ ರೂಪಿಸಲು ವಿನೂತನ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಸಂಗಮೇಶ ಬಬಲೇಶ್ವರ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ, ಮಾತನಾಡಿದರು.
ವೇದಿಕೆಯಲ್ಲಿ ಕೇರಳ ರಾಜ್ಯದ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿದ್ದು ಆಲಗೂರ, ಉಪ ಪೊಲೀಸ ಆಯುಕ್ತ ಮಾನಿಂಗ ನಂದಗಾವಿ, ಧಾರವಾಡ ದಿಗಂಬರ ಜೈನ್ ಸಮಾಜ ಟ್ರಸ್ಟ್ ಅಧ್ಯಕ್ಷ ಡಾ.ಅಶೋಕ ರೋಖಡೆ, ಶ್ವೇತಾಂಬರ ಜೈನ ಸಮಾಜದ ಅಧ್ಯಕ್ಷರಾದ ಫತೇಚಂದ ಸಾಗರಮಲಜಿ ಸೋಲಂಕಿ, ಸನ್ಮತಿ ಸೇವಾ ಸಮಿತಿ ಅಧ್ಯಕ್ಷ ಅಶೋಕ ಬಾಗಿ, ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿ ಡಾ.ಅಜೀತ ಪ್ರಸಾದ, ಸಮಾಜದ ಮುಖಂಡರಾದ ದತ್ತಾ ಡೋರ್ಲೆ, ಸಹಾಯಕ ಪೊಲೀಸ ಆಯುಕ್ತ ಪ್ರಶಾಂತ ಸಿದ್ದನಗೌಡರ, ಸಿಪಿಐ ದಯಾನಂದ ಹಾಗೂ ಇತರರು ಇದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಜಿನದತ್ತ ಹಡಗಲಿ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಕುಲಪತಿ ಡಾ.ಸಿದ್ದು ಆಲಗೂರ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜೈನ ಸಮುದಾಯದ ಮುಖಂಡರು, ಜೈನ ಮಹಿಳಾ ಮಂಡಳದ ಸದಸ್ಯರು, ಭಗವಾನ ಮಹಾವೀರರ ಭಕ್ತರು, ಸಾರ್ವಜನಿಕರು ಭಾಗವಹಿಸಿದ್ದರು.

Share This Article
error: Content is protected !!
";