ಅರುಣೋದಯ ಕ್ಯಾಂಪ್ ನಲ್ಲಿ ರೈತನಿಂದ ಲಂಚ ಪಡೆಯುತ್ತಿದ್ದ ವೇಳೆ ಸೋಮವಾರ ರಾತ್ರಿ ಸರ್ವೇಯರ್ ನನ್ನು ರೆಡ್ ಹ್ಯಾಂಡ್ ಆಗಿ ವಶಪಡಿಸಿಕೊಂಡ ಲೋಕಾಯುಕ್ತ ಪೊಲೀಸರು.
ಕಾರಟಗಿ: ತಾಲೂಕಿನ ರೈತರೊಬ್ಬರಿಗೆ ಸರ್ವೇ ಮಾಡಿಕೊಡಲು 50 ಸಾವಿರ ಡಿಮ್ಯಾಂಡ್ ಮಾಡಿದ್ದ ಲೈಸೆನ್ಸ್ ಸರ್ವೇಯರ್ ನನ್ನು ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ವಶಪಡಿಸಿಕೊಂಡ ಘಟನೆ ತಾಲೂಕಿನ ಅರುಣೋದಯ ತಾಂಡಾದಲ್ಲಿ ಸೋಮವಾರ ರಾತ್ರಿ ನಡೆದಿದೆ.
ವಿಜಯ್ ಚೌಹಾಣ್ ಎನ್ನುವ ಲೈಸೆನ್ಸ್ ಸರ್ವೇಯರ್ ರೈತರೊಬ್ಬರ 6 ಎಕರೆ ಜಮೀನು ಪೋಡಿ ಮಾಡಿಕೊಡಲು ವಿನಾ ಕಾರಣ ವಿಳಂಬ ಮಾಡಿದ್ದಾರೆ. ಜತೆಗೆ ರೈತನ ಕೆಲಸ ಮಾಡಿಕೊಡಲು ಸತಾಯಿಸಿದ್ದಾರೆ ಎನ್ನಲಾಗಿದೆ. ಇದರಿಂದ ರೋಷಿ ಹೋಗಿರುವ ರೈತ ಪರಿಪರಿಯಾಗಿ ಬೇಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಆಗ ಸರ್ವೇಯರ್ ರೈತನಿಗೆ 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾನೆ. ಆಗ ರೈತ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾನೆ. ಈ ವೇಳೆ ಲಂಚ ಪ್ರತಿಬಂಧಕ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು, ಲೋಕಾಯುಕ್ತ ಎಸ್ ಪಿ ಸತೀಶ್ ಚಿಟುಗುಬ್ಬಿ ಹಾಗೂ ಡಿವೈ ಎಸ್ ಪಿ ವಸಂತ್ ಕುಮಾರ್ ನೇತೃತ್ವದಲ್ಲಿ ಪಿಐಗಳಾದ ಚಂದ್ರಪ್ಪ ಇ ಟಿ, ಸುನಿಲ್ ಮೆಗಾಲ್ ಮನೆ, ನಾಗರತ್ನ ಹಾಗೂ ಕಾನ್ಸ್ಟೇಬಲ್ ಗಳಾದ ಬಸವರಾಜ, ಚನ್ನವಿರ, ವೀರನಗೌಡ, ಮಂಜುನಾಥ, ಗಣೇಶ್ ಗೌಡ ಒಳಗೊಂಡ ತಂಡ ಸೋಮವಾರ ರಾತ್ರಿ ಅರುಣೋದಯ ಕ್ಯಾಂಪ್ ನ ವಿಜಯ್ ಚೌಹಾಣ್ ನಿವಾಸದಲ್ಲಿ ರೈತನಿಂದ 30 ಸಾವಿರ ರೂ. ಲಂಚ ಸ್ವೀಕರಿಸವ ವೇಳೆ ದಾಳಿ ನಡೆಸಿ ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ವಶಪಡಿಸಿಕೊಂಡಿದ್ದಾರೆ. ಬಳಿಕ ಎಲ್ಲಾ ಪ್ರಕ್ರಿಯೆ ಗಳನ್ನು ಮುಗಿಸಿದ ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳಿಗ್ಗೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.