ಶಿವಮೊಗ್ಗ,ಮೇ.23: ಜಿಲ್ಲಾ ಕೃಷಿ ಇಲಾಖೆಯಿಂದ ದೇಸಿ ತಳಿಗಳ ಸಂರಕ್ಷಣೆ ಮತ್ತು ಉತ್ತೇಜನ ಕಾರ್ಯಕ್ರಮದಡಿ ಕಣ್ಮರೆಯಾಗುತ್ತಿರುವ ಹಾಗೂ ನಶಿಸಿಹೋಗುತ್ತಿರುವ ಸ್ಥಳೀಯ ಬೆಳೆಗಳನ್ನು ಸಂಗ್ರಹಿಸಲು ಮತ್ತು ಸಂರಕ್ಷಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಒಂದು ಸಮುದಾಯ ಬೀಜ ಬ್ಯಾಂಕ್ ಸ್ಥಾಪಿಸಲಾಗುತ್ತಿದ್ದು, ರೈತರು ನೋಂದಣಿ ಮಾಡಿಕೊಳ್ಳುವಂತೆ ತಿಳಿಸಿದೆ.
ಆಯಾ ಪ್ರದೇಶದಲ್ಲಿ ಸ್ಥಳೀಯ ಅಥವಾ ಸಾಂಪ್ರದಾಯಕವಾಗಿ ಕೃಷಿ ಪದ್ದತಿಯಿಂದ ಅಭಿವೃದ್ದಿ ಮತ್ತು ನಿರ್ವಹಿಸುವ ತಳಿಗಳನ್ನು ದೇಶಿ ತಳಿಗಳೆಂದು ಕರೆಯಲಾಗಿದ್ದು, ಈ ಕಾರ್ಯಕ್ರಮದಡಿ ಆಯ್ಕೆಯಾದ ಭತ್ತ, ರಾಗಿ, ಜೋಳ, ತೊಗರಿ, ಹುರುಳಿ, ಅವರೆ, ಅಲಸಂದೆ, ಮಡಕಿಕಾಳು, ಹುಚ್ಚೆಳ್ಳು, ಕುಸುಬೆ, ಎಳ್ಳು, ನವಣೆ, ಊದಲು, ಕೊರಲೆ, ಹಾರಕ, ಬರಗು ಮತ್ತು ಇತರೆ ಬೆಳೆಗಳಲ್ಲಿ ದೇಸಿ ತಳಿಗಳಿದ್ದರೆ ಅದನ್ನು ಸಲಹಾ ಸಮಿತಿಗೆ ಶಿಫಾರಸು ಮಾಡಲು ರೈತರು ಸಮೀಪದ ರೈತ ಸಂಪರ್ಕ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳುವುದು.
ಇತ್ತೀಚಿಗೆ ಕಣ್ಮರೆಯಾಗುತ್ತಿರುವ ದೇಸಿ ತಳಿಗಳನ್ನು ಮೂಲ ಸಮೀಕ್ಷೆ ಮೂಲಕ ಗುರುತಿಸಿ ಸಂರಕ್ಷಣೆಯನ್ನು ಮಾಡುವ ಗುರಿಯನ್ನು ಹೊಂದಲಾಗಿದ್ದು, ಯೋಜನೆಯನ್ನು ದೇಸಿ ತಳಿಗಳ ಸಂರಕ್ಷಣೆ ಮತ್ತು ಕೃಷಿಯಲ್ಲಿ ತೊಡಗಿರುವ ರೈತರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿಗೆ ಇರಬೇಕು. ಹಾಗೂ ಬೀಜ ಬ್ಯಾಂಕ್‌ನಲ್ಲಿರಿಸಲು ರೈತರು ಕಡ್ಡಾಯವಾಗಿ ಅಗತ್ಯ ಪ್ರಮಾಣದ ದೇಸಿ ತಳಿಗಳ ಬೀಜಗಳನ್ನು ನೀಡಲು ಸಿದ್ದರಿರಬೇಕು. ಜಾನುವಾರು ನಿರ್ವಹಣೆ, ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ, ಪುನರುತ್ಪಾದಕ ಕೃಷಿ ಮತ್ತು ಇತರೆ ಸುಸ್ಥಿರ ಕೃಷಿ ಚಟುವಟಿಕೆಗಳನ್ನು ಕೈಗೊಂಡಿರಬೇಕು.
ಈ ಯೋಜನೆಯಡಿ ತಳಿಗಳನ್ನು ನೋಂದಾಯಿಸಿಕೊಳ್ಳಲು ಇಚ್ಚಿಸುವರು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.