ವಿಜಯನಗರ ವಾಣಿ ಸುದ್ದಿ
ಕೊಟ್ಟೂರು: ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳಲ್ಲಿ ಕೊಠಡಿಗಳ ಜೊತೆ ಮಕ್ಕಳ ಕಲಿಕೆಗೆ ಪೂರಕವಾದ ವಿದ್ಯುತ್, ಲ್ಯಾಬ್, ಕಂಪ್ಯೂಟರ್ ಕಲಿಕೆಗೆ 13 ಕೋಟಿ ವೆಚ್ಚದಲ್ಲಿ ಅಕ್ಷರ ಅವಿಷ್ಕಾರ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಕೂಡ್ಲಿಗಿ ಶಾಸಕರಾದ ಡಾ. ಎನ್‌ಟಿ ಶ್ರೀನಿವಾಸ್ ಹೇಳಿದರು.
ಕೂಡ್ಲಿಗಿ ಕ್ಷೇತ್ರದ ಕೊಟ್ಟೂರು ತಾಲೂಕಿನ ವ್ಯಾಪ್ತಿಯ ಹಿರೇವಡೆರಹಳ್ಳಿ ಗ್ರಾಮದಲ್ಲಿ 20 ಲಕ್ಷ ವೆಚ್ಚದ ಶಾಲಾ ಕೊಠಡಿಗೆ ಭೂಮಿ ಪೂಜೆ ಉದ್ಘಾಟಿಸಿ ಅವರು ಶನಿವಾರ ಮಾತನಾಡಿದರು
ನನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸುವ ಮೂಲಕ ವಿಶೇಷ ಯೋಜನೆ ರೂಪಿಸಲಾಗುವುದು ಹಾಗೂ ಮಕ್ಕಳಿಗೆ ವ್ಯವಸ್ಥಿತ ಕಟ್ಟಡ ಸೇರಿದಂತೆ ಈ ಬಾರಿ 60 ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಅಕ್ಷರ ಆವಿಷ್ಕಾರ ಎಂಬ ಯೋಜನೆಯನ್ನು ರೂಪಿಸಿ, ಶಾಲೆಗಳನ್ನು ಉನ್ನತಿಕರಿಸಲಾಗುವುದು ಎಂದರು.
ಉಜ್ಜಯಿನಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ 100 ಹಾಸಿಗೆ ಆಸ್ಪತ್ರೆ ಮಂಜೂರಾಗಿದ್ದು ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂದು ಇದೇ ವೇಳೆ ಹೇಳಿದರು.
ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆರೆಗಳಿಗೆ ನದಿ ನೀರು ತುಂಬಿಸುವ ಯೋಜನೆ ಮುಕ್ತಾಯಹಂತಕ್ಕೆ ತಲುಪಿದ್ದು, ಒಂದೆರಡು ದಿನಗಳಲ್ಲಿ ಜಾಕ್ವೆಲ್ ಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದರು.
ನಂತರ ಜೋಳದ ಕೂಡ್ಲಿಗಿ ಹಾಗೂ ಚಿನ್ನೇನಹಳ್ಳಿ ಗ್ರಾಮಗಳಲ್ಲಿ ಸಿಸಿ ರಸ್ತೆ ಹಾಗೂ ಕಾಳಾಪುರ, ಹನುಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು
ಈ ಸಂದರ್ಭದಲ್ಲಿ ತಾಪಂ ಇಒ ಡಾ. ಆನಂದ್ ಕುಮಾರ್ ರಾಜ್ಯ ಬೀಜ ನಿಗಮದ ನಿರ್ದೇಶಕ ಎಸ್ ರಾಜೇಂದ್ರ ಪ್ರಸಾದ್ ಭಂಡಾರಿ ಸಿದ್ದೇಶ್ ಹಾಗೂ ಕಾಳಾಪುರ, ನಾಗರಕಟ್ಟೆ, ತೂಲಹಳ್ಳಿ, ನಿಂಬಳಗೇರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು & ಉಪಾಧ್ಯಕ್ಷರು, ಸದಸ್ಯರು ಆಯಾ ಗ್ರಾಮಗಳ ಪ್ರಮುಖ ಮುಖಂಡರುಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು