ಚಿತ್ರದುರ್ಗಜೂ.02:
ಶಾಲಾ ಕಾಲೇಜು ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಸೊಳ್ಳೆಗಳಿಂದ ದೂರವಿರಿ ಎಂದು ಜಿಲ್ಲಾ ಕೀಟಶಾಸ್ತ್ರಜ್ಞೆ ನಂದಿನಿ ಕಡಿ ಹೇಳಿದರು.
ಇಲ್ಲಿನ ಬುದ್ಧ ನಗರದ ವ್ಯಾಪ್ತಿಗೆ ಬರುವ ತರಳುಬಾಳು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಸೊಳ್ಳೆ ಲಾರ್ವ ಮುಕ್ತ ಶಾಲೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಳೆಗಾಲದಲ್ಲಿ ನಿಂತ ನೀರಿನ ತಾಣಗಳಲ್ಲಿ ಲಾರ್ವ ಸೊಳ್ಳೆಗಳು ಹೆಚ್ಚಾಗಿರುವುದು ಹಾಗೂ ಇದರಿಂದ ವಿವಿಧ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಮಾನ್ಸೂನ್ ಕಾಲದಲ್ಲಿ ಡೆಂಗ್ಯೂ, ಚಿಕನ್ ಗುನಿಯಾ, ಮಲೇರಿಯಾ ಇನ್ನಿತರ ಕಾಯಿಲೆಗಳಿಗೆ ಸೊಳ್ಳೆಗಳ ಕಡಿತ ಕಾರಣವಾಗುತ್ತದೆ. ಮುಖ್ಯವಾಗಿ ಈಡಿಸ್ ಸೊಳ್ಳೆಗಳು ಸ್ವಚ್ಛ ನಿಂತ ನೀರಿನಲ್ಲಿ ಉತ್ಪತ್ತಿಯಾಗುತ್ತವೆ. ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುವುದರಿಂದ ಡೆಂಗಿ ಮತ್ತು ಚಿಕನ್ ಗುನ್ಯಾ ರೋಗಗಳು ಸುಲಭವಾಗಿ ಹರಡುತ್ತವೆ. ಈ ರೋಗವು ಹರಡದಂತೆ ಎಚ್ಚರಿಕೆ ವಹಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.
ಪ್ರತಿಯೊಂದು ಮನೆಯಲ್ಲಿಯೂ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ನೀರಿನ ತೊಟ್ಟಿಗಳು, ಡ್ರಮ್, ಬ್ಯಾರೆಲ್ ಮತ್ತು ಟ್ಯಾಂಕ್ಗಳನ್ನು ಭದ್ರವಾಗಿ ಮುಚ್ಚಿಡಿ. ಮನೆಯ ಮೇಲೆ ಮತ್ತು ಸುತ್ತಮುತ್ತಲಿನ ಮಳೆಯ ನೀರು ಸಂಗ್ರಹವಾಗದಂತೆ ಪ್ಲಾಸ್ಟಿಕ್ ವಸ್ತುಗಳು, ಟೈರ್ಗಳು, ಒಡೆದ ತೆಂಗಿನ ಚಿಪ್ಪು ಇತ್ಯಾದಿಗಳನ್ನು ತಕ್ಷಣ ವಿಲೇವಾರಿ ಮಾಡಿ. ಏರ್ ಕೂಲರ್, ಹೂವಿನ ಕುಂಡ, ಫೈರ್ ಬಕೆಟ್ ಇತ್ಯಾದಿಗಳ ನೀರನ್ನು ಪ್ರತಿ ವಾರ ಖಾಲಿ ಮಾಡುವುದು ಕಡ್ಡಾಯ ಮಾಡಿಕೊಳ್ಳಿ. ಹಗಲಿನಲ್ಲಿ ನಿದ್ದೆ ಮಾಡುವ ಅಥವಾ ವಿಶ್ರಾಂತಿ ಪಡೆಯುವವರು ಸೊಳ್ಳೆ ನಿರೋಧಕ ಹಾಗೂ ಸೊಳ್ಳೆ ಪರದೆ ತಪ್ಪದೇ ಬಳಸಿ ಎಂದು ಹೇಳಿದರು..
ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಳಲಿ ಶ್ರೀನಿವಾಸ್, ಟಿ.ಶ್ರೀನಿವಾಸ ಮೂರ್ತಿ, ಕೀಟ ಸಂಗ್ರಹಕಾರರಾದ ಶ್ರೀಕಾಂತ್, ಕಾವ್ಯ ಮತ್ತು ಶಾಲೆಯ ಶಿಕ್ಷಕರು ಇದ್ದರು