Ad image

ಕಾಡುಗೊಲ್ಲ ಅಭಿವೃದ್ಧಿ ನಿಗಮ: ವಿವಿಧ ಸಾಲ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ

Vijayanagara Vani

ಬಳ್ಳಾರಿ,ಜೂ.06
ಕರ್ನಾಟಕ ಕಾಡುಗೊಲ್ಲ ಅಭಿವೃದ್ಧಿ ನಿಗಮ ವತಿಯಿಂದ 2025-26ನೇ ಸಾಲಿಗೆ ಅನುಷ್ಠಾನಗೊಳಿಸಲಾಗುತ್ತಿರುವ ವಿವಿಧ ಯೋಜನೆಗಳಡಿ ಸಹಾಯಧನ ಮತ್ತು ಸಾಲ-ಸೌಲಭ್ಯಕ್ಕಾಗಿ ಆನ್‌ಲೈನ್ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
*ಅರ್ಹತೆ:*
ನಿಗಮದ ಯೋಜನೆಗಳಲ್ಲಿ ಸೌಲಭ್ಯಗಳನ್ನು ಪಡೆಯಲು ಇಚ್ಛಿಸುವವರು ಕಾಡುಗೊಲ್ಲ ಜಾತಿಗೆ ಸೇರಿರಬೇಕು. ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕಡ್ಡಾಯ. ವಯೋಮಿತಿ 18 ವರ್ಷಗಳಿಂದ 55 ವರ್ಷಗಳ ಮಿತಿಯಲ್ಲಿರಬೇಕು. ಅರ್ಜಿ ಸಲ್ಲಿಸುವಾಗ ಅರ್ಜಿದಾರರು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು.
ಅರಿವು ಯೋಜನೆಯಡಿ ವಯೋಮಿತಿ 18 ವರ್ಷಗಳಿಂದ 30 ವರ್ಷಗಳ ಮಿತಿಯಲ್ಲಿರಬೇಕು ಮತ್ತು ವಾರ್ಷಿಕ ವರಮಾನ ರೂ.3.50 ಲಕ್ಷ. ಸ್ವಾವಲಂಬಿ ಸಾರಥಿ ಯೋಜನೆಯಡಿ ಅರ್ಜಿದಾರರು 21 ವರ್ಷ ಮೇಲ್ಪಟ್ಟು 45 ವರ್ಷದ ಮಿತಿಯಲ್ಲಿರಬೇಕು. ಅರ್ಜಿದಾರರು ತಮ್ಮ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಯನ್ನು ತಮ್ಮ ಆಧಾರ್ ಸಂಖ್ಯೆಗೆ ಜೋಡಣೆ ಮಾಡಿರಬೇಕು.
ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ರೂ.98 ಸಾವಿರ ಮತ್ತು ನಗರ  ಪ್ರದೇಶದವರಿಗೆ  ರೂ.1 ಲಕ್ಷ, 20 ಸಾವಿರ ಮಿತಿಯೊಳಗಿರಬೇಕು. ಆಯ್ಕೆ ಮಾಡುವಾಗ ಮಹಿಳೆಯರಿಗೆ ಶೇ.33, ವಿಕಲಚೇತನರಿಗೆ ಶೇ.5 ಹಾಗೂ ತೃತೀಯ ಲಿಂಗಿಗಳಿಗೆ ಶೇ.1 ಮೀಸಲಾತಿ ಇರಿಸಿದೆ.
ಅರ್ಜಿ ಸಲ್ಲಿಸುವಾಗ ಅರ್ಜಿದಾರರು ಕಡ್ಡಾಯವಾಗಿ ಆಧಾರ್ ಕಾರ್ಡ್ನಲ್ಲಿರುವಂತೆ  ಅರ್ಜಿದಾರರ ಹೆಸರು/ವಿಳಾಸ/ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಮತ್ತು ಬ್ಯಾಂಕ್ ಪಾಸ್ ಪುಸ್ತಕಗಳಲ್ಲಿ ತಾಳೆಯಾಗಬೇಕು (ಶ್ರೀ/ಶ್ರೀಮತಿ/ಕುಮಾರಿ ಮುಂತಾದ ಮಾಹಿತಿಗಳು).
2023-24 ಹಾಗೂ 2024-25ನೇ ಸಾಲಿನಲ್ಲಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಅರ್ಜಿದಾರರು ಮತ್ತೊಮ್ಮೆ ಬೇರೆ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
*ಯೋಜನೆಗಳ ವಿವರ:*
ಸ್ವಯಂ ಉದ್ಯೋಗ ಸಾಲ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆ, ಅರಿವು-ಶೈಕ್ಷಣಿಕ ನೇರಸಾಲ ಯೋಜನೆ(ಹೊಸದು), ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ಸ್ವಯಂ ಉದ್ಯೋಗ ನೇರಸಾಲ ಯೋಜನೆ (ವಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ).
ಅರ್ಜಿಗಳನ್ನು ಬೆಂಗಳೂರು-ಒನ್/ಕರ್ನಾಟಕ-ಒನ್/ಅಟಲ್-ಜಿ ಜನಸ್ನೇಹಿ ಕೇಂದ್ರ ಮತ್ತು ನಾಗರೀಕ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್ ಸೇವಾಸಿಂಧು ಪೋರ್ಟಲ್‌ನಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜು.02 ಕೊನೆಯ ದಿನ.
ಹೆಚ್ಚಿನ ಮಾಹಿತಿಗಾಗಿ ನಗರದ ಅನಂತಪುರ ರಸ್ತೆಯ ನೂತನ ಜಿಲ್ಲಾಡಳಿತ ಭವನ ಕಚೇರಿಯ ಎರಡನೇ ಮಹಡಿಯ ಬಿ ಬ್ಲಾಕ್ ನ ಕಾಡುಗೊಲ್ಲ ಅಭಿವೃದ್ಧಿ ನಿಗಮ ಕಚೇರಿ ಅಥವಾ ಸಹಾಯವಾಣಿ ಸಂಖ್ಯೆ 08022374848 / 7899899039 ಗೆ ಸಂಪರ್ಕಿಸಬಹುದು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕ ಟಿ.ಹೊನ್ನುರಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
error: Content is protected !!
";