Ad image

ಯುವಜನತೆಯ ಉದ್ಯೋಗಕ್ಕಾಗಿ ಹೊಸ ಕಾರ್ಯಯೋಜನೆ: ಚಂದ್ರಭೂಪಾಲ

Vijayanagara Vani
ಯುವಜನತೆಯ ಉದ್ಯೋಗಕ್ಕಾಗಿ ಹೊಸ ಕಾರ್ಯಯೋಜನೆ: ಚಂದ್ರಭೂಪಾಲ
ಶಿವಮೊಗ್ಗ, ಜೂ.16: ಯುವನಿಧಿ ಯೋಜನೆಯ ಫಲಾನುಭವಿ ಯುವಕ-ಯುವತಿಯರಿಗೆ ಭವಿಷ್ಯದಲ್ಲಿ ಅವರ ಸಾಮರ್ಥ್ಯಕ್ಕೆ ಅನುಸಾರವಾಗಿ ಯೋಗ್ಯ ಉದ್ಯೋಗವನ್ನು ಪಡೆಯಲು ಹಾಗೂ ಅವರನ್ನು ಸಮರ್ಥರನ್ನಾಗಿಸಲು ಮುಂದಿನ ದಿನಗಳಲ್ಲಿ ಪ್ರಾಧಿಕಾರದಿಂದ ಹೊಸ ಕಾರ್ಯ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎಸ್.ಚಂದ್ರಭೂಪಾಲ ತಿಳಿಸಿದರು.
ಸೋಮವಾರ ನಗರದ ಜಿಲ್ಲಾ ಪಂಚಾಯತ್‌ನ ನಜೀರ್ ಸಾಬ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ವಾರ್ಷಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷರತೆ ವಹಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ದಿ ನಿಗಮ, ಕೌಶಲ್ಯಾಭಿವೃದ್ದಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಮಾರ್ಗಸೂಚಿಯೊಂದಿಗೆ ಯುವನಿಧಿ ಫಲಾನುಭವಿಗಳನ್ನು ಉದ್ಯೋಗಸ್ಥರನ್ನಾಗಿ ಮಾಡಿ ಅವರ ಭವಿಷ್ಯವನ್ನು ರೂಪಿಸಲಾಗುವುದು.
ಈ ಉದ್ದೇಶದಿಂದ ಶಿವಮೊಗ್ಗ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರವು ಜಿಲ್ಲೆಯಲ್ಲಿನ ಫಲಾನುಭವಿಗಳಿಗೆ ಅನುಕೂಲವಾಗುವಂತೆ ಹಾಗೂ ಅವರ ಮುಂದಿನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಕಾರ್ಯಕ್ರಮವನ್ನು ರೂಪಿಸಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಪದವೀಧರರು ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳು ಸೇರಿದಂತೆ ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 6570 ಫಲಾನುಭವಿಗಳು ನೋಂದಣಿಯಾಗಿದ್ದು, ಫಲಾನುಭವಿಗಳ ಇಚ್ಛಾಶಕ್ತಿ ಹಾಗೂ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಕೌಶಲ್ಯ ಅಭಿವೃದ್ದಿ ಕ್ಷೇತ್ರದ ಸಹಯೋಗದೊಂದಿಗೆ ವಿವಿಧ ರೀತಿಯ ತರಬೇತಿಯನ್ನು ನೀಡಲಾಗುತ್ತದೆ. ಆ ಮೂಲಕ ಅವರ ಭವಿಷ್ಯವನ್ನು ರೂಪಿಸುವ ದಿಟ್ಟ ಕಾರ್ಯಕ್ಕೆ ಮುಂದಾಗಿದ್ದು, ಈ ಯೋಜನೆ ಪೂರ್ವ ಕಲಿಕೆಯ ಆಧಾರದ ಮೇಲೆ ಶಿಕ್ಷಣ ಮುಗಿಸಿ ಹೊರಬಂದಿರುವ ಫಲಾನುಭವಿಗಳನ್ನು ಉದ್ಯೋಗಸ್ಥರನ್ನಾಗಿಸಲು ನೆರವಾಗಲಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯರುಗಳು, ಜಿ.ಪಂ. ಸಿಇಓ ಎನ್. ಹೇಮಂತ್, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

Share This Article
error: Content is protected !!
";