Ad image

ನಿಗದಿಪಡಿಸಿದ ಸಮಯದಲ್ಲಿ ಅಂಜನಾದ್ರಿ ದೇವಸ್ಥಾನದ ಕೆಲಸಗಳು ಮುಗಿಯಬೇಕು: ಸಚಿವ ಎಚ್.ಕೆ. ಪಾಟೀಲ್

Vijayanagara Vani
—–
ಕೊಪ್ಪಳ ಜೂನ್ 16  ನಿಗದಿಪಡಿಸಿದ ಸಮಯದಲ್ಲಿ ಅಂಜನಾದ್ರಿ ದೇವಸ್ಥಾನದ ಕೆಲಸ ಹಾಗೂ ಕಾಮಗಾರಿಗಳು ಮುಗಿಯಬೇಕು. ಯಾವುದೇ ಕಾರಣಕ್ಕೆ ವಿಳಂಬವಾಗಬಾರದು ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್. ಕೆ. ಪಾಟೀಲ್ ಹೇಳಿದರು.
ಅವರು ಸೋಮವಾರ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಜಿಲ್ಲಾಡಳಿತ ಕೊಪ್ಪಳ ಇವರ ಸಹಯೋಗದಲ್ಲಿ ಅಂಜನಾದ್ರಿ ಬೆಟ್ಟದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂಜನಾದ್ರಿ ಮತ್ತು ಕೊಪ್ಪಳ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಂಜನಾದ್ರಿ ದೇವಸ್ಥಾನದ ವಸತಿ ಸಮುಚ್ಚಯದ ಕೆಲಸ ಈ ವರ್ಷದ ಡಿಸೆಂಬರ್ ತಿಂಗಳಲ್ಲಿ ಪೂರ್ಣಗೊಳಿಸಬೇಕು. ಶೌಚಾಲಯ ಮತ್ತು ಬಾತ್‌ರೂಂಗಳನ್ನು ಸೌದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಬಹಳ ಒಳ್ಳೆಯ ರೀತಿಯಲ್ಲಿ ಮಾಡಿದ್ದಾರೆ. ಅದನ್ನು ಒಂದು ಸಲ ನೋಡಿಕೊಂಡು ಬಂದು ಅದೇ ತರಹ ಇಲ್ಲಿಯೂ ಮಾಡಿ. ಬ್ಯಾಗ್ ಇಡಲು ಕ್ಲಾಕ್ ರೂಮ್ ಸಹ ಮಾಡಿದ್ದಾರೆ. ಅಂಜನಾದ್ರಿ ಬೆಟ್ಟಕ್ಕೆ ರೋಪ್‌ವೇ, ಕೇಬಲ್ ಕಾರ್ ಮಾಡುವುದರಿಂದ ಇಲ್ಲಿಗೆ ಭೇಟಿ ನೀಡುವ ಜನರಿಗೆ ಅನುಕೂಲವಾಗಲಿದೆ. ಎಸ್ಕಲೇಟರ್ ಮಾಡುವ ಸಲುವಾಗಿ ಒಂದು ವಾರದ ಒಳಗಾಗಿ ಸಮೀಕ್ಷೆ ಎಷ್ಟಿಮೇಟ್ ಅನ್ನು ಮಾಡಲಾಗುತ್ತಿದೆ ಎಂದರು.
ಸುಮಾರು 15 ವರ್ಷಗಳಿಂದ ಅಂಜನಾದ್ರಿ ಅಭಿವೃದ್ಧಿ ಕುರಿತು ಚರ್ಚೆಗಳು ನಡೆಯುತ್ತಿದ್ದವು. ಈ ಭಾಗದ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಆಂಜನೇಯ ಸ್ವಾಮಿ ಭಕ್ತರು ಸನ್ಮಾನ್ಯ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದರಿಂದ 2024- 25 ನೇ ಸಾಲಿನಲ್ಲಿ ನೂರು ಕೋಟಿ ರೂ. ಅನುದಾನ ನೀಡಿದ್ದು, ಇದರ ಕ್ರಿಯಾ ಯೋಜನೆ ತಯಾರಿಸಿ 600 ಕೊಠಡಿಗಳ ಪ್ರವಾಸಿ ಮಂದಿರ, ಸಮುದಾಯ ಭವನ, ನಿಲುಗಡೆ ಸ್ಥಳ, ಪ್ರದಕ್ಷಣಾ ಪಥ, ಸ್ನಾನ ಘಟ್ಟ, ವಿಐಪಿ ಅತಿಥಿ ಗೃಹ, ಸೇರಿದಂತೆ ಇತರೆ ಕೆಲಸಗಳ ಪ್ರಾಸ್ತಾವಿತ ಯೋಜನೆಗಳನ್ನು ರೂಪಿಸಲಾಗಿದೆ. ಇವುಗಳನ್ನು ನಿಗದಿಪಡಿಸಿದ ಸಮಯದಲ್ಲಿ ಮುಗಿಸಬೇಕೆಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ಎಸ್. ತಂಗಡಗಿ ಅವರು ಮಾತನಾಡಿ, ಹನುಮ ಮಾಲೆ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಅಂಜನಾದ್ರಿಗೆ ಬರುತ್ತಾರೆ. ಹಾಗಾಗಿ ಮಾರ್ಗ ಮಧ್ಯದ ಅಲ್ಲಲ್ಲಿ ಸ್ನಾನಗೃಹ ಹಾಗೂ ಶೌಚಾಲಯಗಳನ್ನು ನಿರ್ಮಿಸಬೇಕು. ಆನೆಗುಂದಿ ಹಾಗೂ ಕಡೆ ಬಾಗಿಲಿನಿಂದ ಇವುಗಳನ್ನು ಮಾಡಬೇಕು. ವಿಶೇಷವಾಗಿ ಅಂಜನಾದ್ರಿಗೆ ಭಕ್ತರು ಡಿಸೆಂಬರ್ ಮತ್ತು ಹನುಮ ಜಯಂತಿ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಎಂದು ಹೇಳಿದರು.
ಸಭೆಗೂ ಮುಂಚೆ ಸಚಿವರು ಅಂಜನಾದ್ರಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ವೀಕ್ಷಿಸಿದ ನಂತರ ಅಂಜನಾದ್ರಿ ದೇವಸ್ಥಾನದ ಪಾದಗಟ್ಟಿಯಲ್ಲಿ ಪೂಜೆ ಸಲ್ಲಿಸಿದರು. ಸಭೆಯ ನಂತರ ಕೊಪ್ಪಳ ಜಿಲ್ಲೆಯ ಪ್ರವಾಸಿ ತಾಣಗಳ ಕುರಿತ ಬ್ರಾö್ಯಂಡ್ ಕೊಪ್ಪಳ ವೆಬ್‌ಸೈಟ್ ಉದ್ಘಾಟಿಸಿದರು.
ಈ ಸಭೆಯಲ್ಲಿ ಕೊಪ್ಪಳ ಸಂಸದರಾದ ರಾಜಶೇಖರ ಬಸವರಾಜ ಹಿಟ್ನಾಳ, ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಸಲ್ಮಾ ಫಾಯಿಮಾ, ಆಯುಕ್ತರಾದ ರಾಜೇಂದ್ರ ಕೆ.ವಿ., ರಾಜವಂಶಸ್ಥರಾದ ಲಲಿತಾ ರಾಣಿ, ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯಾ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಾದ ನಾಗರಾಜ, ಆನೆಗುಂದಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಹುಲಿಗೆಮ್ಮ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
error: Content is protected !!
";