ರಾಯಚೂರು ಜೂನ್ 21 ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ 2024ನೇ ಸಾಲಿನಲ್ಲಿ ರಾಯಚೂರು ಜಿಲ್ಲೆಯ 7 ಗ್ರಾಮ ಪಂಚಾಯತಿಗಳು ರಾಷ್ಟ್ರಮಟ್ಟದಿಂದಲ್ಲೇ ಕ್ಷಯಮುಕ್ತ ಗ್ರಾಮ ಪಂಚಾಯತಿಯಾಗಿ ಅಧಿಕೃತವಾಗಿ ಅರ್ಹತೆ ಪಡೆದುಕೊಂಡಿರುವುದಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ತುಕಾರಾಂ ಪಾಂಡ್ವೆ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಅವರು ಇತ್ತೀಚಿಗೆ ನಡೆದ ಜಿಲ್ಲಾ ಆರೋಗ್ಯ ಸಮಿತಿ ಸಭೆಯಲ್ಲಿ ಚರ್ಚಿಸಿದಂತೆ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯ ಏಳು ಗ್ರಾಮ ಪಂಚಾಯತಿಗಳಾದ ಅಮರಾಪೂರು, ಶಾವಂತಗೇರಾ, ಮಾರಲದಿನ್ನಿ, ಭೂತಲದಿನ್ನಿ, ಗಾಂಧೀನಗರ, ಯದ್ಲಾಪೂರು ಪಂಚಾಯತಗಳು ರಾಷ್ಟ್ರಮಟ್ಟದಿಂದಲ್ಲೇ ಕ್ಷಯ ಮುಕ್ತ ಗ್ರಾಮ ಪಂಚಾಯತ್ ಆಗಿ ಅಧಿಕೃತವಾಗಿ ಅರ್ಹತೆ ಪಡೆದುಕೊಂಡಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾದ ಸುರೇಂದ್ರ ಬಾಬು ಅವರು ಮಾತನಾಡಿ. ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದ ಅಂಕಿ ಅಂಶಗಳ ಕುರಿತು ಮಾಹಿತಿಯನ್ನು ವಿವರಿಸುತ್ತಾ 2 ವಾರಕ್ಕಿಂತ ಹೆಚ್ಚು ಕೆಮ್ಮು, ಸಂಜೆ ವೇಳೆ ಜ್ವರ, ಹಸಿವಾಗದೇ ಇರುವುದು, ತೂಕ ಕಡಿಮೆ ಆಗುವುದು ಈ ಲಕ್ಷಣಗಳು ಕಂಡು ಬಂದAತವರಿಗೆ ಸಿಬಿನ್ಯಾಟ್ ಪರೀಕ್ಷೆಯ ಮುಖಾಂತರ ಒಟ್ಟು 67,338 ಕಫ ಪರೀಕ್ಷೆ ಮಾಡಲಾಗಿದೆ. ಕಫ ಪರೀಕ್ಷೆ ಮಾಡಿದ ಮಾದರಿಗಳಲ್ಲಿ ಒಟ್ಟು 4,677 ಕ್ಷಯರೋಗ ದೃಡಪಟ್ಟಿರುತ್ತವೆ. ಎಕ್ಸರೇ ಪರೀಕ್ಷೆಯ ಮುಖಾಂತರ ಒಟ್ಟು 5790 ಎಕ್ಸರೇ ಪರೀಕ್ಷೆಯನ್ನು ಮಾಡಿದಾಗ ಇವುಗಳಲ್ಲಿ ಒಟ್ಟು 176 ಕ್ಷಯರೋಗ ದೃಡಪಟ್ಟಿರುತ್ತವೆ. ಸದರಿ ಕ್ಷಯರೋಗ ದೃಡಪಟ್ಟವರನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆಯನ್ನು ನೀಡಲಾಗಿದೆ ಎಂದು ತಿಳಿಸಿದರು.
2024ನೇ ಸಾಲಿನಲ್ಲಿ 100 ದಿನಗಳ ಕ್ಷಯರೋಗ ಅಭಿಯಾನದಲ್ಲಿ ಪ್ರತಿ ಗ್ರಾಮ ಪಂಚಾಯತ್ ನಲ್ಲಿ ಕ್ಷಯರೋಗದ ಕುರಿತು ಐ.ಇ.ಸಿ. ಪ್ರಕಟಣೆಯೊಂದಿಗೆ ಜನರಲ್ಲಿ ಕ್ಷಯರೋಗದ ಆರೋಗ್ಯ, ಶಿಕ್ಷಣದ ಮಾಹಿತಿಯನ್ನು ನೀಡಲಾಗಿರುತ್ತದೆ. 100 ದಿನಗಳ ಕ್ಷಯರೋಗ ಅಭಿಯಾನ ಅಂಗವಾಗಿ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಕ್ಷಯರೋಗ ಪರೀಕ್ಷೆಯನ್ನು ಮಾಡಲಾಗಿರುತ್ತದೆ ಹಾಗೂ ಈ ಅಭಿಯಾನದಲ್ಲಿ ಒಟ್ಟು 6,154 ಕಫ ಪರೀಕ್ಷೆ ಮಾಡಿದಾಗ ಅದರಲ್ಲಿ ಒಟ್ಟು 667 ಕ್ಷಯರೋಗಿಗಳನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಲಾಗಿದೆ.
ಕ್ಷಯ ರೋಗ ಕಾರ್ಯಕ್ರಮದ ಅಡಿಯಲ್ಲಿ ಗ್ರಾಮೀಣಮಟ್ಟದ ಜನರಲ್ಲಿ ಕ್ಷಯ ರೋಗ ಲಕ್ಷಣಗಳು ಕಂಡು ಬಂದರೆ, ತ್ವರಿತವಾಗಿ ಪರೀಕ್ಷೆ ಮಾಡಲು ಎಲ್ಲಾ ತಾಲೂಕು ಮಟ್ಟದಲ್ಲಿ ಮತ್ತು ಸಮುದಾಯ ಆರೋಗ್ಯ ಕೇಂದ್ರ ಮಟ್ಟದಲ್ಲಿ ಕಫಪರೀಕ್ಷೆ ಮಾಡುವ ಯಂತ್ರಗಳನ್ನು ಅಳವಡಿಸಲಾಗಿರುತ್ತದೆ, ಕ್ಷಯ ರೋಗ ಪತ್ತೆಹಚ್ಚಲು ಎದೆ ಗೂಡಿನ ಎಕ್ಸರೇ ತೆಗೆಯಲು, ವಿಶೇಷ ವಾಹನದ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಇತರರು ಇದ್ದರು.
ಜಿಲ್ಲೆಯ ಏಳು ಗ್ರಾಮ ಪಂಚಾಯತಿಗಳು ಕ್ಷಯರೋಗ ಮುಕ್ತ: ಸಿಇಓ ಪ್ರಶಂಸೆ
