ಚಿತ್ರದುರ್ಗಜುಲೈ01:
ಪರೀಕ್ಷಾ ಗೌಪ್ಯತೆ ಹಾಗೂ ಪಾವಿತ್ರತೆಗೆ ತೊಂದರೆಯಾಗದಂತೆ ಎಸ್.ಎಸ್.ಎಲ್.ಸಿ ಪರೀಕ್ಷೆ-3 ನಿಯೋಜಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮನ್ವಯದಿಂದ ಕಾರ್ಯ ನಿರ್ವಹಿಸುವ ಮೂಲಕ ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದೇ ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ಪರೀಕ್ಷಾ ಕಾರ್ಯ ನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಎಸ್.ಎಸ್.ಎಲ್.ಸಿ ಪರೀಕ್ಷೆ-3 ಸಂಬಂಧ ಜರುಗಿದ ಪೂರ್ವ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರೀಕ್ಷಾ ಮಾರ್ಗದರ್ಶಿ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಮಂಡಳಿಯಿಂದ ಸರಬರಾಜು ಆಗುವ ಪ್ರಶ್ನೆ ಪತ್ರಿಕೆಗಳನ್ನು ಸಂಗ್ರಹಿಸಿಡುವ ತಾಲೂಕು ಖಜಾನೆಗಳಲ್ಲಿ ಹೆಚ್ಚಿನ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಬೇಕು. ಪರೀಕ್ಷೆಯ ಪಾವಿತ್ರತೆ ಕಾಪಾಡಲು ವೆಬ್ ಕಾಸ್ಟಿಂಗ್ ಘಟಕ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಲು ಅಗತ್ಯ ಕ್ರಮವಹಿಸಬೇಕು ಎಂದು ಹೇಳಿದರು.
24 ಪರೀಕ್ಷಾ ಕೇಂದ್ರ 7453 ವಿದ್ಯಾರ್ಥಿಗಳು: ಇದೇ ಜುಲೈ 05 ರಿಂದ 11 ರವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆ-3 ನಡೆಯಲಿದೆ. ಜುಲೈ 05 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.15 ರವರೆಗೆ ಪ್ರಥಮ ಭಾಷೆ, ಜುಲೈ 07ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.15 ರವರೆಗೆ ವಿಜ್ಞಾನ, ಜುಲೈ 08ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ದ್ವಿತೀಯ ಭಾಷೆ, ಜುಲೈ 09ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.15 ರವರೆಗೆ ಗಣಿತ, ಜುಲೈ 10ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ತೃತೀಯ ಭಾಷೆ ಮತ್ತು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12.15 ರವರೆಗೆ ಎನ್ಎಸ್ಕ್ಯೂಎಫ್ ವಿಷಯಗಳು, ಜುಲೈ 11ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.15 ರವರೆಗೆ ಸಮಾಜ ವಿಜ್ಞಾನ ವಿಷಯದ ಪರೀಕ್ಷೆ ನಡೆಯಲಿದೆ. ಎಸ್ಎಸ್ಎಲ್ಸಿ ಪರೀಕ್ಷೆ-3ಗೆ 7453 ವಿದ್ಯಾರ್ಥಿಗಳು ನೊಂದಣಿಯಾಗಿದ್ದು, ಚಳ್ಳಕೆರೆ-06 ಪರೀಕ್ಷಾ ಕೇಂದ್ರಗಳು, ಚಿತ್ರದುರ್ಗ-07 ಪರೀಕ್ಷಾ ಕೇಂದ್ರಗಳು, ಹಿರಿಯೂರು-04 ಪರೀಕ್ಷಾ ಕೇಂದ್ರಗಳು, ಹೊಳಲ್ಕೆರೆ-02 ಪರೀಕ್ಷಾ ಕೇಂದ್ರಗಳು, ಹೊಸದುರ್ಗ-03 ಪರೀಕ್ಷಾ ಕೇಂದ್ರಗಳು ಹಾಗೂ ಮೊಳಕಾಲ್ಮುರು-02 ಪರೀಕ್ಷಾ ಕೇಂದ್ರಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 24 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಈಗಾಗಲೇ ಮುಖ್ಯ ಅಧೀಕ್ಷಕರು ಮತ್ತು ಕಸ್ಟೋಡಿಯನ್ ಅವರನ್ನು ನೇಮಕ ಮಾಡಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಎನ್.ಆರ್.ತಿಪ್ಪೇಸ್ವಾಮಿ ಸಭೆಗೆ ಮಾಹಿತಿ ನೀಡಿದರು.
ಪರೀಕ್ಷೆಯ ಪಾವಿತ್ರತೆ ಕಾಪಾಡಲು ಚಿತ್ರದುರ್ಗ ಜಿಲ್ಲಾ ಪಂಚಾಯತ್ನಲ್ಲಿ ಕೇಂದ್ರಿಕೃತ ವೀಕ್ಷಣಾ ಘಟಕವನ್ನು ಸ್ಥಾಪಿಸಿದೆ. ಇಲ್ಲಿಗೆ ನೋಡಲ್ ಅಧಿಕಾರಿಗಳು ಮತ್ತು ವೀಕ್ಷಕರ ತಂಡವನ್ನು ರಚಿಸಲಾಗಿದೆ. ತಾಂತ್ರಿಕ ಸಹಾಯಕರನ್ನು ಸಹ ನೇಮಕ ಮಾಡಲಾಗಿದೆ. ಈ ತಂಡಕ್ಕೆ ಲ್ಯಾಪ್ಟಾಪ್, ಕಂಪ್ಯೂಟರ್ಗಳನ್ನು ಒದಗಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಎಲ್ಲ ಪರೀಕ್ಷಾ ಕೊಠಡಿಗಳಲ್ಲಿಯೂ ಸಿಸಿಟಿವಿ ಲಭ್ಯತೆ ಇರುತ್ತದೆ ಎಂದು ತಿಳಿಸಿದರು.
ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆಗಳನ್ನು ವಿತರಿಸಲು ಹಾಗೂ ಉತ್ತರ ಪತ್ರಿಕೆಗಳನ್ನು ಹಿಂಪಡೆದು ತಾಲ್ಲೂಕು ಹಂತಕ್ಕೆ ತಲುಪಿಸಲು ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ. ಆಯಾ ತಾಲ್ಲೂಕಿನ ಸಂಖ್ಯೆಗನುಗುಣವಾಗಿ ಮಾರ್ಗಾಧಿಕಾರಿಗಳಿಗೆ ವಾಹನಗಳನ್ನು ಒದಗಿಸಲು ಕೋರಿದರು. ಮಾರ್ಗಾಧಿಕಾರಿಗಳ ವಾಹನಗಳಿಗೆ ಸಂಬಂಧಿಸಿದ ತಾಲ್ಲೂಕು ಖಜಾನೆಯಿಂದ ಪರೀಕ್ಷಾ ಕೇಂದ್ರಗಳಿಗೆ ತೆರಳುವವರೆಗೆ ಹಾಗೂ ಉತ್ತಮ ಪತ್ರಿಕೆಗಳನ್ನು ತಾಲ್ಲೂಕು ಹಂತಕ್ಕೆ ಹಿಂದಿರುಗಿಸುವವರೆಗೆ ಸಶಸ್ತ್ರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ಕೋರಿದರು.
ಜಿಲ್ಲೆಯ 24 ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ 4 ರಿಂದ 5 ಪರೀಕ್ಷಾ ಕೇಂದ್ರಗಳಿಗೆ ಒಬ್ಬರಂತೆ ಜಿಲ್ಲಾ ಹಂತದ, ತಾಲ್ಲೂಕು ಹಂತದ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಕ ಮಾಡಬೇಕು. ಎಲ್ಲ ಪರೀಕ್ಷಾ ಕೇಂದ್ರಗಳಿಗೂ ಪೊಲೀಸ್ ಸಿಬ್ಬಂದಿಯನ್ನು ಪರೀಕ್ಷೆ ನಡೆಯುವ ನಿಯೋಜಿಸಲು ತಿಳಿಸಿದರು.
ಪರೀಕ್ಷಾ ಪಾವಿತ್ರತೆ ಕಾಪಾಡಲು ಹಾಗೂ ಪರೀಕ್ಷಾ ಸುರಕ್ಷತಾ ಹಿತದೃಷ್ಠಿಯಿಂದ ಪರೀಕ್ಷೆ ನಡೆಯುವ ದಿನಗಳಂದು ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ಪ್ರದೇಶವನ್ನು 144 ಸೆಕ್ಷನ್ ಪ್ರಕಾರ ನಿಷೇಧಿತ ಪ್ರದೇಶ ಎಂದು ಘೋಷಣೆ ಮಾಡಬೇಕು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ ಅವರು, ಪರೀಕ್ಷಾ ನಡೆಯುವ ದಿನದಂದು ವಿದ್ಯುತ್ ಅಡಚಣೆಯಾಗದಂತೆ ಬೆಸ್ಕಾಂ ಕಾರ್ಯಪಾಲಕ ಅಭಿಯಂತರರಿಗೆ ಕೋರಿದರು.
ಸಭೆಯಲ್ಲಿ ಡಯಟ್ ಪ್ರಾಂಶುಪಾಲ ನಾಸಿರುದ್ದಿನ್, ಶಿಕ್ಷಣಾಧಿಕಾರಿ ಸಿದ್ದಪ್ಪ, ಆರು ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ.ಕಾಳೇಸಿಂಘೆ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಇದ್ದರು.