ಬದುಕಿನಲ್ಲಿ ಬಹಳಷ್ಟು ಬಾರಿ ನಾವು ಎರಡು ವಿಷಯಗಳಲ್ಲಿ ನೋವನ್ನು ಅನುಭವಿಸುತ್ತೇವೆ.. ಒಂದು ಶಿಸ್ತಿನ ನೋವು ಮತ್ತೊಂದು ಪಶ್ಚಾತಾಪದ ನೋವು. ಇಂತಹ ನೋವಿನ ಒಂದು ನೀತಿ ಕಥೆಯನ್ನು ನಾವಿಲ್ಲಿ ನೋಡೋಣ.
ಗುಡ್ಡ ಬೆಟ್ಟಗಳಿಂದ ಆವೃತವಾದ ಅತ್ಯಂತ ಶಾಂತವಾದ ಆ ಹಳ್ಳಿಯಲ್ಲಿ ವಯಸ್ಸಾದ ಓರ್ವ ವ್ಯಕ್ತಿ ವಾಸಿಸುತ್ತಿದ್ದ. ದಯಾಳು ಮತ್ತು ಜಾಣನಾಗಿದ್ದ ಆತನ ಬಳಿ ಹಳ್ಳಿಯ ಸಾಕಷ್ಟು ಜನ ಸಲಹೆಯನ್ನು ಕೇಳಿಕೊಂಡು ಬರುತ್ತಿದ್ದರು. ಎಲ್ಲರ ತೊಂದರೆಗಳಿಗೆ ವೃದ್ಧ ವ್ಯಕ್ತಿ ಸಮಾಧಾನ ಮಾಡಿ ಕಳುಹಿಸುತ್ತಿದ್ದ.
ಒಂದು ದಿನ ಓರ್ವ ಯುವಕ ಆ ವೃದ್ಧನನ್ನು ಹುಡುಕಿಕೊಂಡು ಬಂದ. ತುಂಬಾ ದಣಿದಂತೆ ಕಾಣುತ್ತಿದ್ದ ಆತನ ಭುಜಗಳು ಕುಸಿದಂತೆ ತೋರುತ್ತಿದ್ದವು. ಆತನ ಕಣ್ಣಿನಲ್ಲಿ ನಿರಾಶೆ ಮಡುಗಟ್ಟಿತ್ತು. ಆತ ವೃದ್ದನನ್ನು ಉದ್ದೇಶಿಸಿ ಹೇಳಿದ
“ತಾತ ನನ್ನ ಹೃದಯದಲ್ಲಿ ಬಹಳಷ್ಟು ನೋವುಗಳನ್ನು ಹೊತ್ತು ನಿನ್ನ ಬಳಿ ಬಂದಿದ್ದೇನೆ. ಸೋಲು, ನಿರಾಶೆ, ಪಶ್ಚಾತಾಪ ಮತ್ತು ಜನರ ನಿಂದನೆಯ ನುಡಿಗಳು ನನ್ನನ್ನು ಇನ್ನಿಲ್ಲದಂತೆ ಧರಾಶಾಯಿಯಾಗಿಸಿವೆ. ನನಗೆ ಅರ್ಥವಾಗುತ್ತಿಲ್ಲ! ಬದುಕು ಇಷ್ಟೇಕೆ ನೋವಿನಿಂದ ತುಂಬಿದೆ ಎಂದು? ಎಂದು ಅತ್ಯಂತ ನೋವಿನಿಂದ ಹೇಳಿದ.
ವಯೋವೃದ್ಧ ವ್ಯಕ್ತಿ ತಣ್ಣನೆಯ ನಗುವನ್ನು ಸೂಸುತ್ತಾ
ಆ ಯುವಕನಿಗೆ ತನ್ನನ್ನು ಹಿಂಬಾಲಿಸುವಂತೆ ಹೇಳಿದ. ಯುವಕ ವೃದ್ಧನ ಹಿಂದೆ ಸಾಗಿದ. ಅವರಿಬ್ಬರೂ ಒಂದು ಶಾಂತವಾದ ಸುಂದರವಾದ ಕೊಳದ ಬಳಿ ತಲುಪಿದರು. ವೃದ್ಧ ನಸುನಗುತ್ತಾ ಅಲ್ಲಿಯೇ ಇದ್ದ ಕಲ್ಲೊಂದನ್ನು ಯುವಕನ ಕೈಯಲ್ಲಿ ಕೊಟ್ಟು ‘ಈ ಕಲ್ಲನ್ನು ಸರೋವರದಲ್ಲಿ ಎಸೆ’ ಎಂದು ಹೇಳಿದನು.
ವೃದ್ಧ ಹೇಳಿದಂತೆ ಯುವಕ ಕಲ್ಲನ್ನು ಎಸೆದ. ಆ ಕಲ್ಲು ನೀರಿನ ಮೇಲ್ಭಾಗವನ್ನು ತಾಕುತ್ತಾ ಅಲೆ ಅಲೆಯಾಗಿ ತರಂಗಗಳನ್ನು ಎಬ್ಬಿಸಿತು.
ಈಗ ಮೊದಲಿಗಿಂತ ದೊಡ್ಡ ಕಲ್ಲನ್ನು ಆರಿಸಿಕೋ. ಅದನ್ನು ಕೂಡ ಸರೋವರದಲ್ಲಿ ಎಸೆ ಎಂದು ವೃದ್ಧ ಯುವಕನನ್ನು ಕುರಿತು ಆದೇಶಿಸಿದ.
ಯುವಕ ಅತ್ಯಂತ ಕಷ್ಟಪಟ್ಟು ದೊಡ್ಡದಾದ ಕಲ್ಲನ್ನು ಆರಿಸಿ ತಂದ ಮತ್ತು ಶಕ್ತಿಯನ್ನು ಬಳಸಿ ನೀರಿನಲ್ಲಿ ಎಸೆದ. ದೊಡ್ಡ ಕಲ್ಲು ನೀರಿನಲ್ಲಿ ದೊಡ್ಡ ತರಂಗಗಳನ್ನು ಎಬ್ಬಿಸುತ್ತಾ ಬಹಳ ಬೇಗನೆ ಮುಳುಗಿ ಹೋಯಿತು. ಆದರೆ ಈ ಬಾರಿ ತರಂಗಗಳ ತೀವ್ರತೆ ಬೇಗನೆ ಕಡಿಮೆಯಾಯಿತು
ವೃದ್ದ ವ್ಯಕ್ತಿ ಯುವಕನೆಡೆ ತಿರುಗಿ ಹೇಳಿದ…. ‘ನಮ್ಮ ಬದುಕು ಈ ಸರೋವರದ ನೀರಿನಂತೆ. ಚಿಕ್ಕದಿರಲಿ ದೊಡ್ಡವಿರಲಿ ಎಲ್ಲಾ ಕಲ್ಲುಗಳನ್ನು ಈ ಸರೋವರವು ಒಪ್ಪಿಸಿಕೊಳ್ಳುತ್ತದೆ. ಅದೆಷ್ಟೇ ದೊಡ್ಡ ಕಲ್ಲಿದ್ದರೂ ಅದು
ಕೊಳದಲ್ಲಿ ತರಂಗಗಳನ್ನು ಎಬ್ಬಿಸುತ್ತದೆ ಆದರೆ ಸ್ವಲ್ಪ ಹೊತ್ತಿನ ನಂತರ ಸರೋವರದ ನೀರು ಶಾಂತವಾಗುತ್ತದೆ”.
ಮುಂದುವರೆಸಿದ ಅಜ್ಜ “ಅದೆಷ್ಟೇ ದೊಡ್ಡ ನೋವಿದ್ದರೂ ಕೂಡ ಅದು ಕೆಲ ಕಾಲ ನಿನ್ನ ಮನಸ್ಸನ್ನು ಅಶಾಂತಗೊಳಿಸುತ್ತದೆ. ನೀನು ಈ ನೋವನ್ನು ಅನುಭವಿಸಿದ್ದೇ ಆದರೆ ಕೆಲ ಸಮಯದಲ್ಲಿ ಅದರ ತೀವ್ರತೆ ಕಡಿಮೆಯಾಗಿ ಶಾಂತಿ ನೆಲೆಸುತ್ತದೆ’ ಎಂದು ಹೇಳಿದ.
ಅತ್ಯಂತ ವಿಚಾರಪೂರ್ವಕವಾಗಿ ಯುವಕ ಸರೋವರದ ನೀರಿನತ್ತ ನೋಡಿದ. ಆತನ ಮನಸ್ಸಿನಲ್ಲಿಯೂ ವಿಚಾರದ ತರಂಗಗಳೇಳುತ್ತಿದ್ದವು.
ವಿಚಾರಗಳು ಕಡಿಮೆಯಾದಾಗ ಆತನ ಮುಖದಲ್ಲಿ ಸಮಾಧಾನದ ನಗೆ ಇತ್ತು. ಅಜ್ಜನ ಎರಡು ಕೈಗಳನ್ನು ಹಿಡಿದು ತನ್ನ ಹಣೆಗೊತ್ತಿಕೊಂಡ ಯುವಕ. ಆತನ ಮುಖದಲ್ಲಿಯ ನೆಮ್ಮದಿ ಎಂದು ಕಂಡು ವೃದ್ಧನಿಗೂ ಸಂತಸವಾಯಿತು.
ಮುಂದೆ ಆ ಯುವಕ ಯಾವುದೇ ರೀತಿಯಲ್ಲಿಯೂ ನೋವನ್ನು ತಲೆಯ ಮೇಲೆ ಹೊತ್ತು ತಿರುಗಲಿಲ್ಲ. ನಿನ್ನ ಕರ್ಮವನ್ನು ನೀನು ಮಾಡು ಫಲಾಫಲಗಳನ್ನು ಆ ಭಗವಂತನು ಕೊಡುತ್ತಾನೆ ಎಂಬ ಮಾತಿನಂತೆ ತನ್ನ ಕೆಲಸ ಕಾರ್ಯಗಳನ್ನು ತಾನು ಮಾಡುತ್ತಾ ನೆಮ್ಮದಿಯಿಂದ ಬಾಳಿದ.
ನಿಜ ಅಲ್ವಾ ಸ್ನೇಹಿತರೆ?
ಗಂಡನನ್ನು ಕಳೆದುಕೊಂಡ ಪತ್ನಿ ತನ್ನ ಬದುಕಿನ ಊರುಗೋಲೆ ಹೋಯಿತು ಎಂದು ಗೋಳಾಡಿ ಅಳುತ್ತಾಳೆ ನಿಜ. ನಂತರ ಆಕೆಯ ದುಃಖ ನಿಧಾನವಾಗಿ ಕಡಿಮೆಯಾಗುತ್ತದೆ. ಮುಂದಿನ ಬದುಕಿನ ಕುರಿತು ಆಕೆ ಯೋಚಿಸಲೇಬೇಕಾಗುತ್ತದೆ. ಬದುಕು ನಿಂತ ನೀರಲ್ಲ. ಅದು ಸದಾ ಹರಿಯುವ ಜೀವದಾಯಿನಿ.
ನೋವು ನಮ್ಮ ಬದುಕಿನ ಭಾಗ ನಿಜ! ಆದರೆ ನೋವೇ ನಮ್ಮನ್ನು ಆಳಬಾರದು. ನೋವನ್ನು ನಾವು ಒಪ್ಪಿಕೊಂಡರೆ ಅದರ ಸಾಮರ್ಥ್ಯ ಕುಂದುತ್ತದೆ. ಅದು ನಮಗೆ ಸಹ್ಯವಾಗುತ್ತದೆ. ಆಗ ಮಾತ್ರ ಬದುಕಿನಲ್ಲಿ ನಾವು ಶಾಂತಿ, ಸಮಾಧಾನ ಮತ್ತು ಬೆಳವಣಿಗೆಯನ್ನು ಕಾಣಬಹುದು. ನೋವು ನಮ್ಮನ್ನು ನಿರಾಶೆಯ ಕಡಲಿನಲ್ಲಿ ಮುಳುಗಿಸುತ್ತದೆ…. ಆದರೆ ನೋವನ್ನು ನಾವು ಕಡಲಿನಲ್ಲಿ ಮುಳುಗಿಸಿದರೆ ಅದು ನಮ್ಮನ್ನು ಮೇಲೆ ತೇಲುವಂತೆ ಮಾಡುತ್ತದೆ.
ಏನಂತೀರಾ?
ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್