Ad image

ಸಕ್ರಿಯವಲ್ಲದ ಪಕ್ಷಗಳಿಗೆ ರಾಜ್ಯ ಚುನಾವಣಾ ಆಯೋಗದಿಂದ ಶೋಕಾಸ್ ನೋಟೀಸ್ ದಾವಣಗೆರೆ ತಾಲ್ಲೂಕಿನ ವಿಚಾರ ಜಾಗೃತಿ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಜುಲೈ 18 ರಂದು ಆಯೋಗದ ವಿಚಾರಣೆಗೆ ಹಾಜರಾಗಲು ಸೂಚನೆ

Vijayanagara Vani
ದಾವಣಗೆರೆ ಜುಲೈ.02: ಚುನಾವಣಾ ಆಯೋಗದಲ್ಲಿ 1951 ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 29ಎ ರನ್ವಯ ಸಂಘ, ಸಂಸ್ಥೆಯನ್ನು ರಾಜಕೀಯ ಪಕ್ಷವಾಗಿ ನೊಂದಾಯಿಸಲಾಗುತ್ತದೆ. ನೊಂದಾಯಿಸಿದ ಅಂತಹ ಪಕ್ಷಗಳು ಚುನಾವಣೆಯಲ್ಲಿ ಭಾಗವಹಿಸಬೇಕು. ಆದರೆ ಕಳೆದ 6 ವರ್ಷಗಳಿಂದ ಯಾವುದೇ ಜನಪ್ರತಿನಿಧಿಗಳ ಸದನಗಳಿಗೆ, ವಿಧಾನಸಭೆ, ಉಪಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಗಳನ್ನು ವಿಚಾರ ಜಾಗೃತಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯನ್ನಾಗಿ ಮಾಡದಿರುವುದು ಕಂಡು ಬಂದಿದೆ.
ಸತತ ಆರು ವರ್ಷಗಳ ಕಾಲ ನೊಂದಾಯಿತ ಪಕ್ಷಗಳಿಂದ ಜನಪ್ರತಿನಿಧಿಗಳ ಸದನಗಳಿಗೆ ನಡೆಯುವ ಚುನಾವಣೆ, ವಿಧಾನಸಭೆ, ಉಪ ಚುನಾವಣೆಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸದಿದ್ದಲ್ಲಿ ಅಂತಹ ಗುರುತಿಸಲಾದ ರಾಜಕೀಯ ಪಕ್ಷಗಳನ್ನು ನೊಂದಾಯಿತ ಪಕ್ಷಗಳ ಪಟ್ಟಿಯಿಂದ ಕೈಬಿಡಲು ಸಂವಿಧಾನದ 324 ನೇ ವಿಧಿ ಮತ್ತು 1951 ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 29ಎ ರಡಿ ತೆಗೆದು ಹಾಕಲು ಅಧಿಕಾರ ನೀಡಲಾಗಿದೆ.
ದಾವಣಗೆರೆ ತಾಲ್ಲೂಕಿನ ಹೆಬ್ಬಾಳ ಗ್ರಾಮದ ಮನೆ ಸಂಖ್ಯೆ 275 ರ ವಿಳಾಸದಲ್ಲಿ ವಿಚಾರ ಜಾಗೃತಿ ಕಾಂಗ್ರೆಸ್ ಪಕ್ಷ ನೊಂದಣಿಯಾಗಿರುತ್ತದೆ. ಸದರಿ ಪಕ್ಷವು 2019 ರಿಂದ ಅಂದರೆ ಕಳೆದ 6 ವರ್ಷಗಳಿಂದ ಜನಪ್ರತಿನಿಧಿಗಳ ಸದನಗಳಿಗೆ ನಡೆಯುವ ಯಾವುದೇ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಯನ್ನು ನಿಲ್ಲಿಸದಿರುವುದರಿಂದ ಈ ಪಕ್ಷವು ರಾಜಕೀಯ ಪಕ್ಷವಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿರುವುದು ಸ್ಪಷ್ಟವಾಗಿರುತ್ತದೆ. ಆದ್ದರಿಂದ ಸದರಿ ಪಕ್ಷವನ್ನು ನೊಂದಾಯಿತ ರಾಜಕೀಯ ಪಕ್ಷಗಳ ಪಟ್ಟಿಯಿಂದ ಕೈಬಿಡುವ ಬಗ್ಗೆ ರಾಜ್ಯ ಚುನಾವಣಾ ಆಯೋಗದಲ್ಲಿ ಜುಲೈ 18 ರಂದು ವಿಚಾರಣೆ ನಿಗದಿ ಮಾಡಲಾಗಿದೆ.
ನೊಂದಾಯಿತ ರಾಜಕೀಯ ಪಕ್ಷಗಳು ಮುಂದುವರೆಯಲು ಬಯಸಿದಲ್ಲಿ ಪಕ್ಷದ ಅಧ್ಯಕ್ಷರು ಅಥವಾ ಪ್ರಧಾನ ಕಾರ್ಯದರ್ಶಿಯಿಂದ ಮತ್ತು ಪಕ್ಷ ಅಸ್ತಿತ್ವದಲ್ಲಿ ಮುಂದುವರೆಯಲು ಎಲ್ಲಾ ದಾಖಲೆಗಳೊಂದಿಗೆ ರಾಜ್ಯ ಚುನಾವಣಾ ಆಯೋಗದ ಕಚೇರಿಗೆ ಜುಲೈ 18 ರೊಳಗಾಗಿ ಸಲ್ಲಿಸಬೇಕು.
ದಾಖಲೆಗಳನ್ನು ಸಲ್ಲಿಸಿ ವಿಚಾರಣಾ ಸಭೆಗೆ ಪಕ್ಷದ ಅಧ್ಯಕ್ಷರು ಅಥವಾ ಪ್ರಧಾನ ಕಾರ್ಯದರ್ಶಿ ಅಥವಾ ಪಕ್ಷದ ಮುಖ್ಯಸ್ಥರು ಕಡ್ಡಾಯವಾಗಿ ಹಾಜರಾಗಬೇಕು. ಯಾವುದೇ ಉತ್ತರ ಬಾರದಿದ್ದಲ್ಲಿ ಆಯೋಗವು ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ರಾಜ್ಯ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.

Share This Article
error: Content is protected !!
";