ಧಾರವಾಡ ಜು.2: ಬೆಂಗಳೂರಿನ ಯಳಚೆನಹಳ್ಳಿಯ ನಿವಾಸಿ ಪರಶುರಾಮ ಬಿ ಹಾಗೂ ಹುಬ್ಬಳ್ಳಿಯ ವಿದ್ಯಾನಗರದ ನಿವಾಸಿ ಸಂದ್ಯಾ ಮೇತ್ರಾಣಿ ಎಂಬುವವರು ಎದುರುದಾರರು ಅಭಿವೃದ್ದಿಪಡಿಸುತ್ತಿರುವ ಗಾಮನಗಟ್ಟಿ ಲೇಔಟ್ನಲ್ಲಿ ಪ್ಲಾಟ್ ನಂ.53 ಮತ್ತು ಪ್ಲಾಟ್ ನಂ.17ನ್ನು ಖರೀದಿಸುವ ಸಲುವಾಗಿ ಮುಂಗಡ ಹಣ ಪಾವತಿಸಿ ಖರೀದಿ ಕರಾರು ಒಪ್ಪಂದ ಮಾಡಿಕೊಂಡಿದ್ದರು. ಅದರಂತೆ ಬಾಕಿ ಹಣ ಪಡೆದು ಎದುರುದಾರರು ಖರೀದಿ ಪತ್ರ ಮಾಡಿಕೊಡದೇ ದೂರುದಾರರಿಗೆ ಸತಾಯಿಸುತ್ತಿದ್ದರು. ಅಲ್ಲದೆ ದೂರುದಾರರ ಪಾವತಿ ಮಾಡಿದ ಹಣವನ್ನು ಸಹ ಮರಳಿ ಕೊಟ್ಟಿರಲಿಲ್ಲ. ಎದುರುದಾರರ ಅಂತಹ ನಡಾವಳಿಕೆಯಿಂದ ಅವರು ತಮಗೆ ಸೇವಾ ನ್ಯೂನ್ಯತೆ ಎಸಗಿ ಮೋಸ ಮಾಡಿದ್ದಾರೆಂದು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:01/02/2025 ರಂದು ದೂರು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿ.ಅ. ಬೋಳಶೆಟ್ಟಿ ಸದಸ್ಯರು ದೂರುದಾರರಿಂದ ಮುಂಗಡವಾಗಿ ಪಡೆದ ಹಣವನ್ನು ಡೆವಲಪರ್ ತಮ್ಮ ವೈಯಕ್ತಿಕ ಅಭಿವೃದ್ಧಿಗಾಗಿ ಉಪಯೋಗಿಸಿಕೊಂಡು ಅವರಿಗೆ ಪ್ಲಾಟನ್ನು ಕೊಡದೇ ಇರುವುದು ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ಅಭಿಪ್ರಾಯಪಟ್ಟಿದೆ. ಆ ಬಗ್ಗೆ ಎದುರುದಾರರ ಮಾಲೀಕರಾದ ಶಿವನಗೌಡ ಪಾಟೀಲ ಇವರಿಗೆ ದೂರುದಾರರಿಂದ ಪಡೆದಂತಹ ಮುಂಗಡ ಹಣ ಬಡ್ಡಿ ಲೆಕ್ಕಿ ಹಾಕಿ ಸಂದಾಯ ಮಾಡುವಂತೆ ಆದೇಶಿಸಿದೆ. ಜೊತೆಗೆ ಸೇವಾ ನ್ಯೂನ್ಯತೆಯಿಂದ ದೂರುದಾರರಿಗೆ ಆಗಿರುವ ತೊಂದರೆ ಹಾಗೂ ಮಾನಸಿಕ ಹಿಂಸೆಗೆ ತಲಾ ರೂ.50,000 ಪರಿಹಾರ ಹಾಗೂ ತಲಾ ರೂ.10,000 ಪ್ರಕರಣದ ಖರ್ಚು ವೆಚ್ಚ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ನೀಡುವಂತೆ ಎದುರುದಾರರಿಗೆ ಆಯೋಗ ಆದೇಶಿಸಿದೆ.