Ad image

ಬಿಸಿಯೂಟ ವಿತರಿಸುತ್ತಿರುವ ಏಜನ್ಸಿಗಳೆ ಮೊಟ್ಟೆ, ಬಾಳೆಹಣ್ಣು ಪೂರೈಸಲು ಕ್ರಮವಹಿಸಲಿ; ಇಲ್ಲದಿದ್ದರೆ ಶೀಘ್ರ ಪರ್ಯಾಯ ವ್ಯವಸ್ಥೆ; ಶಿಕ್ಷಕರಿಗೆ ಶೈಕ್ಷಣಿಕೇತರ ಕಾರ್ಯ, ಒತ್ತಡ ತಪ್ಪಿಸಲು ಅಗತ್ಯ ಕ್ರಮ: ಜಿಲ್ಲಾ ಉಸ್ತುವಾರಿ ಸಂತೋಷ ಲಾಡ್ ಆದೇಶ

Vijayanagara Vani
ಬಿಸಿಯೂಟ ವಿತರಿಸುತ್ತಿರುವ ಏಜನ್ಸಿಗಳೆ ಮೊಟ್ಟೆ, ಬಾಳೆಹಣ್ಣು ಪೂರೈಸಲು ಕ್ರಮವಹಿಸಲಿ; ಇಲ್ಲದಿದ್ದರೆ ಶೀಘ್ರ ಪರ್ಯಾಯ ವ್ಯವಸ್ಥೆ; ಶಿಕ್ಷಕರಿಗೆ ಶೈಕ್ಷಣಿಕೇತರ ಕಾರ್ಯ, ಒತ್ತಡ ತಪ್ಪಿಸಲು ಅಗತ್ಯ ಕ್ರಮ: ಜಿಲ್ಲಾ ಉಸ್ತುವಾರಿ ಸಂತೋಷ ಲಾಡ್ ಆದೇಶ
ಧಾರವಾಡ ಜು.2: ಧಾರವಾಡ ಜಿಲ್ಲೆಯಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಹಾಗೂ ಶಿಕ್ಷಕರು ನಿರಂತರವಾಗಿ ಶಾಲೆಯಲ್ಲಿದ್ದು ಎಲ್ಲ ಮಕ್ಕಳಿಗೂ ವರ್ಗವಾರು ಕಲಿಕಾ ಗುಣಮಟ್ಟ ಹೆಚ್ಚಿಸಲು ಜಿಲ್ಲಾಡಳಿತದಿಂದ ಜಾರಿಯಾಗಿರುವ ಮಿಷನ್ ವಿದ್ಯಾಕಾಶಿ ಯೋಜನೆ ಯಶಸ್ವಿಗೆ ವಿವಿಧ ಪ್ರಕಾರದ ಸುಧಾರಣಾ ಕ್ರಮಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಬಿಸಿಯೂಟ ವಿತರಿಸುತ್ತಿರುವ ಸರ್ಕಾರೇತರ ಸಂಸ್ಥೆಗಳೆ ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೆಹಣ್ಣು ಪೂರೈಸಲು ಕ್ರಮವಹಿಸಬೇಕು. ಇಲ್ಲದಿದ್ದಲ್ಲಿ ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿ, ಶಿಕ್ಷಕರಿಗೆ ಆಗುತ್ತಿರುವ ಶೈಕ್ಷಣಿಕೇತರ ಕಾರ್ಯ, ಒತ್ತಡಗಳನ್ನು ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಹೇಳಿದರು.
ಅವರು ನಿನ್ನೆ (ಜು.1) ಸಂಜೆ ಧಾರವಾಡದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ ಸಿಇಓ, ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಬಿಸಿಯೂಟ ಪೂರೈಸುವ ಸರ್ಕಾರೇತರ ಸಂಸ್ಥೆಗಳೊಂದಿಗೆ ಸಭೆ ಜರುಗಿಸಿ, ಶಿಕ್ಷಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಚರ್ಚಿಸಿದರು.
ಧಾರವಾಡ ಜಿಲ್ಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಕ್ಕಳಿಗೆ ಪ್ರತಿದಿನ ಬಿಸಿಯೂಟ ಸರಬರಾಜು ಮಾಡುತ್ತಿರುವ ಸರ್ಕಾರೇತರ ಸಂಸ್ಥೆಗಳು, ಮಕ್ಕಳಿಗೆ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಿಸಬೇಕು. ಇವು ಸಹ ಪೂರಕ ಪೌಷ್ಠಿಕ ಆಹಾರಗಳಾಗಿರುವದರಿಂದ ಮಕ್ಕಳಿಗೆ ನಿಯಮಿತವಾಗಿ ತಲುಪಬೇಕು. ಪ್ರಸ್ತುತದಲ್ಲಿ ಶಿಕ್ಷಕರೇ ಮಾರುಕಟ್ಟೆಯಿಂದ ಮೊಟ್ಟ, ಬಾಳೆಹಣ್ಣು ತಂದು, ವಿದ್ಯಾರ್ಥಿಗಳಿಗೆ ವಿತರಿಸುವ ಕಾರ್ಯದಿಂದ ಬೋಧನೆಗೆ ಸಮಯದ ಅಭಾವ, ಒತ್ತಡ ಉಂಟಾಗುತ್ತಿದೆ. ಇದರಿಂದ ಶಿಕ್ಷಣದ ಗುಣಮಟ್ಟದ ಮೇಲೆ ವ್ಯತರಿಕ್ತ ಪರಿಣಾಮ ಬೀರುತ್ತಿದೆ. ಇದನ್ನು ತಪ್ಪಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರು ಶಾಲಾವಧಿಯಲ್ಲಿ ಶಾಲೆಗಳಲ್ಲಿದ್ದು, ಪಠ್ಯಕ್ರಮದ ಅನುಸಾರ ಪಾಠ ಮಾಡಬೇಕು. ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸಲು ಶಿಕ್ಷಕರನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲಾಗುತ್ತದೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಹೇಳಿದರು.
ಬಿಸಿಯೂಟದೊಂದಿಗೆ ಮೊಟ್ಟೆ ಹಾಗೂ ಬಾಳೆಹಣ್ಣು ಪೂರಕ ಪೌಷ್ಠಿಕ ಆಹಾರಗಳಾಗಿರುವದರಿಂದ ಸರಕಾರ ಕಡ್ಡಾಯವಾಗಿ ಮಕ್ಕಳಿಗೆ ವಿತರಿಸಲು ಸೂಚಿಸಿದೆ. ಮಕ್ಕಳ ಆರೋಗ್ಯ, ಪೂರ್ಣ ಬೆಳವಣಿಗೆಗಾಗಿ ಸರಕಾರ ಈ ಮಹತ್ವದ ಯೋಜನೆ ಜಾರಿಗೊಳಿಸಿದೆ. ಈಗಿರುವ ಸರ್ಕಾರೇತರ ಸಂಸ್ಥೆಗಳು ಬಿಸಿಯೂಟದೊಂದಿಗೆ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಿಸುವ ಕುರಿತು ತುರ್ತಾಗಿ ತಮ್ಮ ಅಭಿಪ್ರಾಯ ಅಥವಾ ಒಪ್ಪಿಗೆ ಬಗ್ಗೆ ತಿಳಸಬೇಕು. ಇಲ್ಲದಿದ್ದಲ್ಲಿ ಸರಕಾರಕ್ಕೆ ವರದಿ ಸಲ್ಲಿಸಿ, ಪರ್ಯಾಯ ವ್ಯವಸ್ಥೆ ಮಾಡಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.
ಶಿಕ್ಷಕರು ನಿಯಮಾನುಸಾರ ಶಾಲೆಯಲ್ಲಿದ್ದು, ಮಕ್ಕಳಿಗೆ ನಿರಂತರ ಪಾಠ ಬೋಧನೆ, ಸಮಗ್ರ ಬೆಳವಣಿಗೆಗೆ ಅಗತ್ಯ ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿರಂತರವಾಗಿ ಶಾಲೆಗಳಿಗೆ ಭೇಟಿ ನೀಡಿ, ಪರಿಶೀಲಿಸಿ, ಶಾಲಾ ಅವಧಿಯಲ್ಲಿ ಶಿಕ್ಷಕರು, ಮಕ್ಕಳು ಶಾಲೆಯಲ್ಲಿ ಇರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸಚಿವರು ನಿರ್ದೇಶಿಸಿದರು.
ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ, ಪರಿಹರಿಸಬೇಕು. ಶಾಲೆಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಈ ಕುರಿತು ಡಿಡಿಪಿಐ ಮತ್ತು ಬಿಇಓಗಳು ಸಕ್ರಿಯವಾಗಿ ತೊಡಗಿಸಿಕೊಂಡು ಸಮಸ್ಯೆಗಳನ್ನು ಪರಿಹರಿಸಬೇಕು. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರಿಗೂ ಮಾಹಿತಿ ಸಲ್ಲಿಸಬೇಕೆಂದು ಸಚಿವರು ಹೇಳಿದರು.
ಶಾಸಕ ಎನ್.ಎಚ್.ಕೋನರಡ್ಡಿ ಅವರು ಮಾತನಾಡಿ, ಮಕ್ಕಳ ದೈಹಿಕ ಮತ್ತು ಮಾನಸಿಕದ ಬೆಳವಣಿಗೆಗೆ ಮೊಟ್ಟೆ, ಬಾಳೆಹಣ್ಣು, ಪೂರಕ ಪೌಷ್ಠಿಕ ಆಹಾರಗಳು ಅಗತ್ಯವಾಗಿವೆ. ಇದು ರಾಜ್ಯ ಸರಕಾರದ ಮಹತ್ವದ ಯೋಜನೆ ಆಗಿದ್ದು, ನಿಯಮಾನುಸಾರ ಅನುಷ್ಠಾನವಾಗಬೇಕು. ಈಗಾಗಲೇ ಸರಕಾರೇತರ ಸಂಸ್ಥೆಗಳವರು ಜಿಲ್ಲೆಯ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಬಿಸಿಯೂಟ ನೀಡುತ್ತಿರುವದರಿಂದ ಮೊಟ್ಟೆ, ಬಾಳೆಹಣ್ಣುಗಳನ್ನು ವಿದ್ಯಾರ್ಥಿಗಳಿಗೆ ಅವರೇ ವಿತರಿಸದರೆ ಹೆಚ್ಚು ಸೂಕ್ತವಾಗುತ್ತದೆ. ಶಿಕ್ಷಕರಿಗೆ ಇದರಿಂದ ಆಗುತ್ತಿರುವ ಒತ್ತಡ ಕಡೆಮೆ ಆಗುತ್ತದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಮೊಟ್ಟೆ ಹಾಗೂ ಬಾಳೆಹಣ್ಣುಗಳನ್ನು ಪ್ರತ್ಯೇಕ ವ್ಯವಸ್ಥೆಯ ಮೂಲಕ ಶಾಲೆಗಳಲ್ಲಿ ವಿತರಣೆ ಮಾಡುತ್ತಿರುವದರಿಂದ ಬಹಳಷ್ಟು ಶಿಕ್ಷಕರಿಗೆ ಮತ್ತು ಮುಖ್ಯ ಶಿಕ್ಷಕರಿಗೆ ಕಾರ್ಯ ಒತ್ತಡ ಹೆಚ್ಚಾಗಿ ಪರಿಣಾಮಕಾರಿ ಬೋಧನೆಗೆ ಅನಾನುಕೂಲವಾಗುತ್ತಿದೆ. ಮೊಟ್ಟೆ ಹಾಗೂ ಬಾಳೆಹಣ್ಣುಗಳನ್ನು ವಿತರಣೆ ಹಾಗೂ ವಿತರಿಸಿದ ಬಗ್ಗೆ ದತ್ತಾಂಶ ದಾಖಲೀಕರಣದ ಕಾರಣದಿಂದಾಗಿ ಬಹಳಷ್ಟು ಸಮಯ ವ್ಯಯವಾಗುತ್ತಿದೆ. ಯೋಜನೆ ಅನುμÁ್ಠನದಲ್ಲಿ ಆಕಸ್ಮಿಕ ವಿಳಂಬ, ಸಣ್ಣಪುಟ್ಟ ತೊಂದರೆಗಳಾದರೂ ಶಿಕ್ಷಕರನ್ನೇ ಹೊಣೆ ಮಾಡುತ್ತಿರುವುದರಿಂದ ಶಿಕ್ಷಕರು ಅನಗತ್ಯ ಒತ್ತಡಗಳಿಗೆ ಒಳಗಾಗುತ್ತಿದ್ದಾರೆ. ಈ ಕುರಿತು ಮನವಿ ಸಲ್ಲಿಕೆಯಾಗಿದ್ದು, ಇದು ಮಕ್ಕಳ ಕಲಿಕೆಯ ಗುಣಮಟ್ಟದ ಮೇಲೆ ಪರಿಣಾಮವಾಗುತ್ತಿದೆ. ಪಠ್ಯೇತರ ಇಂತಹ ಕಾರ್ಯಗಳಿಂದ ಶಿಕ್ಷಕರಿಗೆ ಬಿಡುಗಡೆಗೊಳಿಸಿ, ಶೈಕ್ಷಣಿಕ ಕಾರ್ಯ ಚಟುವಟಿಕೆಗಳಿಗೆ ಒತ್ತು ನೀಡುವಂತೆ ಆಗಬೇಕೆಂದು ಅವರು ಹೇಳಿದರು.
ಬಿಸಿಯೂಟ ಸರಬರಾಜು ಮಾಡುವ ಏಜನ್ಸಿಗಳೇ ಮೊಟ್ಟೆ, ಬಾಳೆಹಣ್ಣು ವಿತರಿಸುವದರಿಂದ ಮಕ್ಕಳಿಗೆ, ಶಿಕ್ಷಕರಿಗೆ ಅನುಕೂಲವಾಗುತ್ತದೆ. ಇದರಲ್ಲಿ ಆಗುವ ಸಣ್ಣಪುಟ್ಟ ತಪ್ಪುಗಳಿಗೆ ಶಿಕ್ಷಕರು ಹೊಣೆ ಆಗುವದನ್ನು ತಪ್ಪಿಸಬೇಕು. ಈ ನಿಟ್ಟಿನಲ್ಲಿ ತುರ್ತು ಕ್ರಮದ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಜಿಲ್ಲೆಯಲ್ಲಿ ಪ್ರಸ್ತುತವಾಗಿ ಶಾಲೆಗಳಿಗೆ ಬಿಸಿಯೂಟ ಸರಬರಾಜು ಮಾಡುತ್ತಿರುವ ಇಸ್ಕಾನ್ ಮತ್ತು ಅದಮ್ಯಚೇತನ ಸಂಸ್ಥೆಯ ಪ್ರತಿನಿಧಿಗಳು ತಮ್ಮ ಟ್ರಸ್ಟ್ ಮುಖ್ಯಸ್ಥರೊಂದಿಗೆ ಚರ್ಚಿಸಿ, ಶೀಘ್ರವಾಗಿ ಸಚಿವರ ನಿರ್ದೇಶನದ ಕುರಿತು ತಮ್ಮ ತೀರ್ಮಾನವನ್ನು ಸಲ್ಲಿಸುವದಾಗಿ ಸಭೆಯಲ್ಲಿ ಸಚಿವರಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಮಕೃಷ್ಣ ಸದಲಗಿ, ಉಮೇಶ ಬೊಮ್ಮಕ್ಕನವರ, ಶಿವಾನಂದ ಮಲ್ಲಾಡದ, ಅಶೋಕ ಸಿಂದಗಿ, ಮಹಾದೇವಿ ಮಾಡಲಗೇರಿ, ಉಮಾದೇವಿ ಬಸಾಪುರ, ಡಿವಾಯ್ಪಿಸಿಗಳಾದ ಎಸ್.ಎಂ.ಹುಡೇದಮನಿ, ವಿಜಯಲಕ್ಷ್ಮಿ ಹಂಚನಾಳ, ಸಹಾಯಕ ಯೋಜನಾ ಸಮನ್ವಯಾಧಿಕಾರಿಗಳಾದ ಡಾ. ರೇಣುಕಾ ಅಮಲಝೆರಿ, ಪ್ರಕಾಶ ಬೂತಾಳೆ, ಅಕ್ಷರದಾಸೋಹ ಜಿಲ್ಲಾ ಶಿಕ್ಷಣ ಅಧಿಕಾರಿ ರೂಪಾ ಪುರಂಕರ ಮಾತನಾಡಿದರು.
ಸಭೆಯಲ್ಲಿ ಬಿಸಿಯೂಟ ವಿಭಾಗದ ತಾಲೂಕು ಸಹಾಯಕ ನಿರ್ದೇಶಕರು ಹಾಗೂ ಕುಂದಗೋಳದ ತಿರುಮಲ ಏಜನ್ಸಿ ಪ್ರತಿನಿಧಿಗಳು ಭಾಗವಹಿಸಿದ್ದರು.
**

Share This Article
error: Content is protected !!
";