Ad image

ಕಣ್ಣಿಗೆ ಕಾಣುವುದೆಲ್ಲ ನಿಜವಲ್ಲ…. ಬದುಕಿನ ಮಹತ್ತರ ಪಾಠ

Vijayanagara Vani
ಕಣ್ಣಿಗೆ ಕಾಣುವುದೆಲ್ಲ ನಿಜವಲ್ಲ…. ಬದುಕಿನ ಮಹತ್ತರ ಪಾಠ
ಒಂದು ಬೃಹತ್ ಹಡಗಿನಲ್ಲಿ ದಂಪತಿಗಳು ಪ್ರಯಾಣಿಸುತ್ತಿದ್ದರು. ಕೆಲ ಸಮಯದ ನಂತರ ಆ ಹಡಗು ಮುಳುಗಲಾರಂಭಿಸಿತು. ಎಲ್ಲೆಡೆ ಆಹಾಕಾರ ಜೀವ ಉಳಿಸಿಕೊಳ್ಳಲು ಎಲ್ಲರೂ ಓಡಾಡತೊಡಗಿದರು. ದಂಪತಿಗಳಿಗೆ ದೊರೆತ ಜೀವ ರಕ್ಷಕ ಬೋಟ್ ನಲ್ಲಿ ಇವರಿಬ್ಬರು ಇಳಿಯಬೇಕಿತ್ತು. ಆದರೆ ಅತ್ಯಂತ ಇಕ್ಕಟ್ಟಾದ ಆ ಬೋಟಿನಲ್ಲಿ ಕೇವಲ ಒಬ್ಬರು ಮಾತ್ರ ಒಳಗೆ ಆರಾಮಾಗಿ ಕುಳಿತುಕೊಳ್ಳಬಹುದಿತ್ತು. ಗಂಡ ಎನಿಸಿಕೊಂಡ ಪತಿ ಮಹಾಶಯ ಯಾವುದೇ ರೀತಿಯ ಮುಜುಗರವಿಲ್ಲದೆ ತನ್ನ ಪತ್ನಿಯನ್ನು ಸಮುದ್ರದಲ್ಲಿ ಹಾಗೆಯೇ ಬಿಟ್ಟು ತಾನು ಮಾತ್ರ ಆ ಜೀವ ರಕ್ಷಕ ಬೋಟ್ನಲ್ಲಿ ಹತ್ತಿ ಕುಳಿತುಕೊಂಡ. ಪತ್ನಿ ನಿಧಾನವಾಗಿ ಮುಳುಗಲಾರಂಭಿಸಿದಳು. ಅಂತಿಮವಾಗಿ ಮುಳುಗುವ ಮುನ್ನ ಆಕೆ ತನ್ನ ಪತಿಯನ್ನು ಕುರಿತು ಒಂದು ಮಾತು ಹೇಳಿದಳು. ಅದೇನಿರಬಹುದು ಎಂದು ನೀವು ಊಹೆ ಮಾಡಬಲ್ಲಿರಾ? ಎಂದು ಪಠ್ಯದಲ್ಲಿನ ಕಥೆಯನ್ನು ಹೇಳುತ್ತಿದ್ದ ಉಪನ್ಯಾಸಕಿ ತನ್ನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಈ ಪ್ರಶ್ನೆ ಕೇಳಿದಳು. ಆ ಕಾಲೇಜಿನಲ್ಲಿ ಭಾಷಾ ಶಾಸ್ತ್ರವನ್ನು ಬೋಧಿಸುತ್ತಿದ್ದ ಆಕೆ ಹೊಸ ಶೈಕ್ಷಣಿಕ ವರ್ಷದ ಮೊದಲ ತರಗತಿಯನ್ನು ಈ ರೀತಿ ಆರಂಭಿಸಿದಳು.
ಎಲ್ಲ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಿತ್ತು. ಒಂದು ಬಾರಿ ಇಡೀ ತರಗತಿಯನ್ನು ವೀಕ್ಷಿಸಿದ ಆಕೆ ಮತ್ತೊಮ್ಮೆ ಕಥೆಯನ್ನು ಪುನರಾವರ್ತಿಸಿದಳು. ಇದೀಗ ತರಗತಿಯಲ್ಲಿ ಸಂಪೂರ್ಣ ನಿಶ್ಯಬ್ದ ತಾಂಡವವಾಡತೊಡಗಿತು. ಕೆಲ ಕ್ಷಣಗಳ ಕಾಲ ಸುಮ್ಮನಿದ್ದು ಮತ್ತೊಮ್ಮೆ ತನ್ನ ವಿದ್ಯಾರ್ಥಿಗಳನ್ನುದ್ದೇಶಿಸಿ ಉಪನ್ಯಾಸಕಿ ಸಾಯುತ್ತಿದ್ದ ಮಹಿಳೆ ತನ್ನ ಪತಿಗೆ ಏನೆಂದು ಕೂಗಿ ಹೇಳಿರಬಹುದು? ಎಂದು ಕೇಳಿದಳು.
ನಿಧಾನವಾಗಿ ಒಬ್ಬೊಬ್ಬರೇ ವಿದ್ಯಾರ್ಥಿಗಳ ಕೈಗಳು ಮೇಲೆ ಬಂದವು.
“ಐ ಹೇಟ್ ಯು” ಎಂದು ಹೇಳಿರಬಹುದು ಎಂದು ಓರ್ವ ವಿದ್ಯಾರ್ಥಿ ಹೇಳಿದ.
“ನೀನು ಈ ರೀತಿ ನನಗೆ ಮೋಸ ಮಾಡಬಹುದೇ” ಎಂದು ಕೇಳಿರಬಹುದು ಎಂದು ಮತ್ತೋರ್ವ ವಿದ್ಯಾರ್ಥಿ ಹೇಳಿದ
“ನೀನೊಬ್ಬ ಹೇಡಿ… ನಿನ್ನ ಪತ್ನಿಯನ್ನು ಉಳಿಸಿಕೊಳ್ಳದೆ ನೀನು ಮಾತ್ರ ಬಚಾವಾಗಿ ಹೋಗುತ್ತಿರುವೆ ಎಂದು ಹೇಳಿರಬಹುದು ” ಎಂದು ಮಗದೊಬ್ಬ ಹೇಳಿದ.
ಆ ದೇವರು ನಿನಗೆ ಶಿಕ್ಷೆ ಕೊಟ್ಟೆ ಕೊಡುತ್ತಾನೆ ಎಂದು ಮಗದೊಬ್ಬ ವಿದ್ಯಾರ್ಥಿನಿ ಹೇಳಿದಳು.
ಓರ್ವ ವಿದ್ಯಾರ್ಥಿಯ ಹೊರತು ಎಲ್ಲರೂ ತಮ್ಮ ತಮ್ಮಲ್ಲೇ ಜೋರಾಗಿ ಈ ಕುರಿತು ಚರ್ಚಿಸಲಾರಂಭಿಸಿದರು. ಅವರವರಲ್ಲೇ ತುಸು ಜೋರಾಗಿ ವಾದ ಏರ್ಪಟ್ಟಿತು. ಉಪನ್ಯಾಸಕಿ ನಿಧಾನವಾಗಿ ನಡೆದು ಏನೊಂದೂ ಮಾತನಾಡದೆ ಸುಮ್ಮನೆ ಕುಳಿತ ಆ ವಿದ್ಯಾರ್ಥಿಯ ಬಳಿ ನಿಂತು “ನಿನ್ನ ಅಭಿಪ್ರಾಯ ಏನು? ಆಕೆ ಏನು ಹೇಳಿರಬಹುದು ಎಂದು ನಿನ್ನ ಅಭಿಪ್ರಾಯ” ಎಂದು ಕೇಳಿದಳು.
ಆತ ನಿಧಾನವಾಗಿ ತಲೆ ಕೆಳಗೆ ಮಾಡಿ ನೆಲವನ್ನು ನೋಡುತ್ತಾ “ಬಹುಶಹ ಆಕೆ ‘ನಮ್ಮ ಮಕ್ಕಳ ಕಾಳಜಿ ಮಾಡಿ'” ಎಂದು ಹೇಳಿರಬಹುದು ಎಂದು ಉತ್ತರಿಸಿದ.
ಅಚ್ಚರಿಗೊಂಡ ಉಪನ್ಯಾಸಕಿ ಒಂದು ಹೆಜ್ಜೆ ಹಿಂದೆ ಸರಿದು ‘ಹಾಗಾದರೆ ನಿನಗೆ ಈ ಕಥೆ ಗೊತ್ತೇ?’ ಎಂದು ಕೇಳಿದಳು.
ಆತ ತನ್ನ ತಲೆಯನ್ನು ಅಲ್ಲಾಡಿಸುತ್ತಾ “ಇಲ್ಲ ನನ್ನ ತಾಯಿ ತೀವ್ರ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಬದುಕುವ ಯಾವುದೇ ಭರವಸೆ ಇರಲಿಲ್ಲ. ಅದು ಅವರಿಗೂ ಗೊತ್ತಾಗಿತ್ತು. ತೀರ ಸಾಯುವ ಸಮಯದಲ್ಲಿ ನನ್ನ ತಂದೆಗೆ ಅವರು ಈ ಮಾತನ್ನು ಹೇಳಿದ್ದರು” ಎಂದು ಸಂತಪ್ತನಾಗಿ ಆ ವಿದ್ಯಾರ್ಥಿ ಹೇಳಿದಾಗ ಉಪನ್ಯಾಸಕಿಯ ಕಣ್ಣುಗಳಲ್ಲಿ ನೀರು ತುಂಬಿತ್ತು. ಆಕೆ ‘ನೀನು ಹೇಳಿದ್ದು ಸರಿಯಾಗಿದೆ’ ಎಂದು ಹೇಳುತ್ತಾ ಯಾರಿಗೂ ಕಾಣದಂತೆ ಕಣ್ಣೀರನ್ನು ಒರೆಸಿಕೊಂಡು ಮತ್ತೆ ಬೋರ್ಡಿನ ಕಡೆ ತನ್ನ ಸ್ಥಳಕ್ಕೆ ಹಿಂತಿರುಗಿದಳು.
ಪಾಠವನ್ನು ಮುಂದುವರಿಸಿದ ಉಪನ್ಯಾಸಕಿ ಆ ಕಥೆಯನ್ನು ಮತ್ತೆ ಮುಂದೆ ಕೊಂಡೊಯ್ದಳು.
ಹಡಗು ಮುಳುಗಿತ್ತು. ಅದರೊಂದಿಗೆ ಆತನ ಪತ್ನಿಯು ಕೂಡ ಮುಳುಗಿದಳು. ಆ ವ್ಯಕ್ತಿ ಬಚಾವಾಗಿ ಮನೆಗೆ ಹಿಂತಿರುಗಿದ. ತಮ್ಮಿಬ್ಬರ ಪ್ರೀತಿಯ ದ್ಯೋತಕವಾದ ಮಗಳನ್ನು ಚೆನ್ನಾಗಿ ಓದಿಸಿ ಬೆಳೆಸಿದ. ಒಳ್ಳೆಯ ಯುವಕನನ್ನು ನೋಡಿ ಮದುವೆ ಮಾಡಿಕೊಟ್ಟ. ಅವರಿಬ್ಬರ ಅನ್ನೋನ್ಯ ದಾಂಪತ್ಯವನ್ನು ಕಂಡು ಸಂತಸ ಪಟ್ಟ. ಕೆಲವು ವರ್ಷಗಳ ನಂತರ ತನ್ನ ತಂದೆಯ ಮರಣದ ನಂತರ ಆತನ ಮಗಳು ಮನೆಯ ವಸ್ತುಗಳ ನಡುವೆ ತನ್ನ ತಂದೆಯ ಪುಸ್ತಕವನ್ನು ನೋಡಿದಳು. ಏನನ್ನು ಬರೆದಿರಬಹುದು ಎಂದು ಕುತೂಹಲದಿಂದ
ಆಕೆ ಓದಿದಳು.
ಎಂದೂ ವಾಸಿಯಾಗದ ಕಾಯಿಲೆಯಿಂದ ಆಕೆ ಬಳಲುತ್ತಿದ್ದಳು. ಆಕೆಯ ಕೊನೆಯ ದಿನಗಳ ಆಸೆಯಂತೆ ನಾನು ಆಕೆಯನ್ನು ಪ್ರವಾಸಕ್ಕೆ ಕರೆದೊಯ್ದೆ.
ನಾವು ಹಲವಾರು ಸ್ಥಳಗಳನ್ನು ನೋಡಿದೆವು.. ಒಂದು ದಿನ ನಾವು ಹಡಗಿನಲ್ಲಿ ಪ್ರಯಾಣಿಸುವಾಗ ಆಕಸ್ಮಿಕ ಅಪಘಾತದಲ್ಲಿ ಹಡಗು ಮುಳುಗಿತು. ನಮ್ಮಿಬ್ಬರಲ್ಲಿ ಒಬ್ಬರು ಮಾತ್ರ ಬದುಕಿ ಬರುವ ಪರಿಸ್ಥಿತಿಯಲ್ಲಿದ್ದೆವು. ಹೇಗಿದ್ದರೂ ಆಕೆ ಬದುಕುವುದಿಲ್ಲ ಎಂಬುದು ನಮ್ಮಿಬ್ಬರಿಗೂ ಗೊತ್ತಿದ್ದ ಕಾರಣ ಆಕೆ ನನ್ನನ್ನು ಆ ವಿಪತ್ತಿನಿಂದ ಪಾರಾಗಿ ಹೋಗಲು ಒತ್ತಾಯಿಸಿದಳು ಎಂದು ಉಪನ್ಯಾಸಕಿ ಸಾದ್ಯಂತವಾಗಿ ನಡೆದ ಘಟನೆಯನ್ನು ವಿವರಿಸುತ್ತಿದ್ದರೆ ಇಡೀ ತರಗತಿ ಸ್ಥಬ್ದವಾಗಿ ಉಳಿದಿತ್ತು.
ಮೊದಲ ಬಾರಿಗೆ ಎಲ್ಲ ವಿದ್ಯಾರ್ಥಿಗಳಿಗೂ ಒಂದು ಹೊಸ ವಿಷಯ ಅರ್ಥವಾಗಿತ್ತು. ಎಷ್ಟೋ ಬಾರಿ ನಾವು ನೋಡಿದ ಎಲ್ಲ ವಸ್ತು, ವಿಷಯಗಳು ಮೇಲ್ನೋಟಕ್ಕೆ ಅವು ಕಾಣುವ ರೀತಿಯಲ್ಲಿ ಇರುವುದಿಲ್ಲ. ಆಳ ಪದರದಲ್ಲೆಲ್ಲೋ ಸತ್ಯ ಮುಚ್ಚಿ ಹೋಗಿರುತ್ತದೆ. ಅದನ್ನು ಅರಿಯುವ ತಾಳ್ಮೆ ನಮಗಿರಬೇಕು ನಮ್ಮ ಹಿರಿಯರು ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂದು ಹೇಳುವುದು ಕೂಡ ಇದೇ ಕಾರಣಕ್ಕೆ.
ಆ ದಿನ ವಿದ್ಯಾರ್ಥಿಗಳು ಸಹಾನುಭೂತಿಯ ಒಂದು ಹೊಸ ಪಾಠವನ್ನು ಕಲಿತರು. ಯಾವುದೇ ವಸ್ತುವಿರಲಿ, ವಿಷಯವಿರಲಿ ನೋಡಿದ ಕೂಡಲೇ ಅದರ ಬಗ್ಗೆ ನಿರ್ಣಯಾತ್ಮಕವಾಗಿ ಮಾತನಾಡಬಾರದು, ತೀವ್ರ ಪ್ರತಿಕ್ರಿಯಿಸಬಾರದು ಬಹಳಷ್ಟು ಬಾರಿ ಪ್ರೀತಿ ತ್ಯಾಗದಂತೆ ತೋರಿದರೆ ಅಚ್ಚರಿ ಇಲ್ಲ.
ಮನೆಯಲ್ಲಿ ಸ್ವಲ್ಪವೇ ಅಡುಗೆ ಮಿಕ್ಕಿದ್ದು ಮಕ್ಕಳಿಗೆ ಇನ್ನಷ್ಟು ಬೇಕೆನಿಸಿದಾಗ ಅಮ್ಮನಿಗೆ ಹಸಿವಿಲ್ಲದಂತಾಗುತ್ತದೆ. ಮಕ್ಕಳ ಶಾಲೆಯ ಫೀಸ್ ಕಟ್ಟುವ ಹೊತ್ತಿಗೆ ಅಪ್ಪನ ಚಪ್ಪಲಿಯಲ್ಲಿ ತೂತುಗಳಾಗಿದ್ದರೂ ಕೂಡ ಇನ್ನೂ ಒಂದು ವರ್ಷ ಆರಾಮಾಗಿ ಹಾಕಿಕೊಳ್ಳಬಹುದು ಎಂಬ ಮಾತು ಕೇಳಿ ಬರುತ್ತದೆ. ಮನೆಯ ಹಿರಿಯರು ಕೂಡ ಸಾಲ ಮಾಡಿ ತಮ್ಮ ಚಿಕಿತ್ಸೆ ಮಾಡಿಸಲು ಸಜ್ಜಾಗುವ ತಮ್ಮ ಮಕ್ಕಳನ್ನು ಈ ಬಿದ್ದು ಹೋಗುವ ಘಟಕ್ಕೆ ಅಷ್ಟೊಂದು ದುಬಾರಿ ಚಿಕಿತ್ಸೆಯ ಅಗತ್ಯವಿಲ್ಲ ಎಂದು ತಡೆಯುತ್ತಾರೆ.
“ಬ್ಲೆಸ್ಸಿಂಗ್ ಇನ್ ಡಿಸ್ ಗೈಸ್” ಎಂದು ಹೇಳುವಂತೆ ಬಹಳಷ್ಟು ಜನ ತಮ್ಮ ವೈಯುಕ್ತಿಕ ಆಸೆ ಆಕಾಂಕ್ಷೆಗಳನ್ನು, ಅವಶ್ಯಕತೆಗಳನ್ನು ತಮ್ಮವರ ಅನುಕೂಲಕ್ಕಾಗಿ ತ್ಯಾಗ ಮಾಡುತ್ತಾರೆ. ಅಣ್ಣ ತಮ್ಮಂದಿರ ಓದಿಗಾಗಿ ಅಕ್ಕ ತಾನು ಓದುವುದನ್ನು ಕೈ ಬಿಟ್ಟು ಚಿಕ್ಕಪುಟ್ಟ ಕೆಲಸ ಮಾಡಿ ಹಣ ಸಂಪಾದಿಸುತ್ತಾಳೆ. ಅಣ್ಣಂದಿರು ತಾವು ಕೂಲಿ ಮಾಡಿ ತಮ್ಮ ತಮ್ಮಂದಿರಿಗೆ ಶಾಲೆ ಕಾಲೇಜುಗಳಲ್ಲಿ ಓದಿಸುತ್ತಾರೆ. ತಾಯಿ ತಂದೆಯರಂತೂ ತಮ್ಮ ಮಕ್ಕಳಿಗಾಗಿ ಹೊಟ್ಟೆ ಬಟ್ಟೆ ಕಟ್ಟಿ ತಮ್ಮೆಲ್ಲರ ಆಸೆ ಆಕಾಂಕ್ಷೆಗಳನ್ನು ಗಂಟು ಕಟ್ಟಿ ಇಡುತ್ತಾರೆ. ಅವರ ಭವ್ಯ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ತಮ್ಮ ಇಂದಿನ ವರ್ತಮಾನವನ್ನು ದುಡಿಮೆಯಲ್ಲಿ ಕಳೆಯುತ್ತಾರೆ.
ರಸ್ತೆ ಬದಿಯಲ್ಲಿ ಮಾತನಾಡುತ್ತಾ ನಿಂತಿರುವ ಒಂದು ಗಂಡು ಹೆಣ್ಣಿನ ಜೋಡಿಯನ್ನು ನೋಡಿ ಗೇಲಿ ಮಾಡುವವರಿಗೆ ಅವರಿಬ್ಬರೂ ಅಕ್ಕ ತಮ್ಮ, ಅಣ್ಣ ತಂಗಿ ಒಳ್ಳೆಯ ಸ್ನೇಹಿತರು ಹೀಗೆ ಯಾರು ಬೇಕಾದರೂ ಆಗಿರಬಹುದು ಎಂಬ ಅರಿವಿಲ್ಲದೆ ಹೋಗಬಹುದು.
ತನ್ನ ಮಗುವಿನ ಆರೋಗ್ಯ ಸರಿಯಿಲ್ಲ ಎಂದು ಶಾಲೆಯಿಂದ ಕರೆ ಬಂದಾಗ ಗಾಬರಿಯಲ್ಲಿ ಪಕ್ಕದ ಮನೆಯವರ ಬೈಕ್ ನಲ್ಲಿ ಹೋಗುತ್ತಿರುವ ಹೆಣ್ಣು ಮಕ್ಕಳಿರಬಹುದು, ಇಲ್ಲವೇ ಆಕೆಗೆ ಸಹಾಯ ಮಾಡುವ ಗಂಡಸರಿಗೆ ಯಾವುದೇ ಕೆಟ್ಟ ಉದ್ದೇಶ ಇರದೇ ಹೋಗಬಹುದು. ಅವರಿಬ್ಬರ ನಡುವೆ ನೆರೆಹೊರೆ ಎಂಬ ಸಾಮಾಜಿಕ ಬಂಧದ ಹೊರತು ಬೇರೊಂದು ಸಂಬಂಧ ಇಲ್ಲದೆ ಹೋದರೂ ಕೂಡ ತಮ್ಮ ಕೀಳು ನಾಲಿಗೆಯನ್ನು ಕೆಟ್ಟದಾಗಿ ಚಾಚುವ ಮೂಲಕ ಅವರ ಚಾರಿತ್ರ್ಯವಧೆ ಮಾಡುವ ಜನರು ನಮ್ಮ ನಡುವೆ ಇದ್ದಾರೆ. ಅಥವಾ ನಾವು ಕೂಡ ಅವರೇ ಆಗಿರಬಹುದು. ನಮ್ಮಿಂದ ಬೇರೆಯವರಿಗೆ ಒಳ್ಳೆಯದನ್ನು ಮಾಡಲು ಸಾಧ್ಯವಾಗದೇ ಇದ್ದರೂ ಕೂಡ ಕೆಡುಕಾಗದಂತೆ ವರ್ತಿಸುವುದು ನಮ್ಮ ಸಾಮಾಜಿಕ ಜವಾಬ್ದಾರಿ. ಮಾನವೀಯತೆ ಕೂಡ ಹೌದು.
ಚಲನಚಿತ್ರಗಳಲ್ಲಿ ತೋರಿಸುವಂತೆ ನಮಗಾಗಿ ಹೋರಾಡುವ ವ್ಯಕ್ತಿ ಮಾತ್ರ ನಾಯಕನಲ್ಲ… ನಮಗೆ ಗೊತ್ತಿಲ್ಲದಂತೆ ನಮ್ಮೆಲ್ಲ ಅವಶ್ಯಕತೆಗಳನ್ನು ಪೂರೈಸುವ, ಅದಕ್ಕಾಗಿ ಯಾವುದೇ ತೊಂದರೆಗಳನ್ನು ಎದುರಿಸಲು ಸಿದ್ದರಾಗುವ ವೈಯುಕ್ತಿಕ ಹಿತಾಸಕ್ತಿಗಳನ್ನು ಕಡೆಗಣಿಸುವ ನಾಯಕರು ನಮ್ಮ ಬದುಕಿನಲ್ಲಿ ಇರುತ್ತಾರೆ.
ಅಂತಹ ನಾಯಕರು ತಮ್ಮ ತ್ಯಾಗವನ್ನು ಕುರಿತು ದೊಡ್ಡದಾಗಿ ಮಾತನಾಡುವುದಿಲ್ಲ ಯಾರಲ್ಲಿಯೂ ಹೇಳಿಕೊಳ್ಳುವುದಿಲ್ಲ… ಗಿಡದ ಮೇಲೆ ಕುಳಿತ ಹಕ್ಕಿ ತನ್ನ ಪಾಡಿಗೆ ತಾನು ಹಾರಿಹೋಗುವಂತೆ, ಮೇಲಿಂದ ನೀರು ಕೆಳಗೆ ಹರಿದು ಹೋಗುವಂತೆ ಅತ್ಯಂತ ಸಹಜವಾಗಿ ತಮ್ಮ ಕರ್ತವ್ಯ ಎಂದು ಪಾಲಿಸಿರುತ್ತಾರೆ.
ಅವರಿಗೆ ಯಾವ ಬಿರುದು ಬಾವಲಿಗಳು ಬೇಕಾಗಿಲ್ಲ, ಬದುಕನ್ನು ಅತ್ಯಂತ ಸರಳವಾಗಿ ಜೀವಿಸಲು ಅತ್ತ್ಯವಶ್ಯಕವಾದ ಕ್ರಮಗಳನ್ನು ಅವರು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿರುತ್ತಾರೆ.
ಅಂತಹ ಕಾಣದ ಕೈಗಳ ಅಗೋಚರ ಶಕ್ತಿಗೆ ನಮ್ಮೆಲ್ಲರ ಶತಕೋಟಿ ಪ್ರಣಾಮಗಳನ್ನು ಸಲ್ಲಿಸೋಣ.
ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ

Share This Article
error: Content is protected !!
";