Ad image

ಗಮಗಮ ಸುವಾಸನೆಯ ಏಲಕ್ಕಿ

Vijayanagara Vani
ಗಮಗಮ ಸುವಾಸನೆಯ ಏಲಕ್ಕಿ
ಬೆಳಗ್ಗೆ ಎದ್ದ ಕೂಡಲೇ ಮಾಡುವ ಚಹ ಇರಲಿ, ಯಾವುದೇ ಸಿಹಿತಿಂಡಿಯಿರಲಿ ಎಲ್ಲಕ್ಕೂ ಏಲಕ್ಕಿ ಬೇಕೇ ಬೇಕು. ಊಟವಾದ ನಂತರ ತಾಂಬೂಲದಲ್ಲಿ, ಊಟದಲ್ಲಿ ಸೇವಿಸಿದ ಆಹಾರದ ವಾಸನೆ ಬಾಯಿಯಿಂದ ಹೊರ ಹೋಗಲು
ಏಲಕ್ಕಿ ಸೇವನೆಯಿಂದ ಮಾತ್ರ ಸಾಧ್ಯ. ನಮ್ಮ ಅಡುಗೆ ಮನೆಯ ಮಸಾಲೆ ಸಾಮಾನುಗಳ ಸಾಮ್ರಾಜ್ಯದಲ್ಲಿ ಅಗ್ರಸ್ಥಾನವನ್ನು ಪಡೆದಿರುವ ಏಲಕ್ಕಿ ತಾಂಬೂಲದಿಂದ ಹಿಡಿದು ಎಲ್ಲಾ ಸಿಹಿ ಅಡುಗೆಗಳಲ್ಲೂ ಬಳಸಲಾಗುತ್ತದೆ.
ಯಾರಿಗಾದರೂ ಹಿರಿದಾದ ಸನ್ಮಾನ ಮಾಡಬೇಕೆಂದರೆ
ಶಾಲನ್ನು ಹೊದಿಸಿ ಏಲಕ್ಕಿಯಿಂದ ತಯಾರಿಸಿದ ಹಾರವನ್ನು ಹಾಕಿ ಸನ್ಮಾನ ಮಾಡುತ್ತಾರೆ. ಇದು ಏಲಕ್ಕಿಗೆ ಇರುವ ಗತ್ತು…ಗಮ್ಮತ್ತು..
ದಂಪತಿಗಳ ನಡುವೆಯಂತೂ ಏಲಕ್ಕಿ ಪ್ರಣಯದ ಸುಗಂಧವನ್ನು ಸೂಸುವ ಮುಖ್ಯ ವಸ್ತು. ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುವ ದೇಹಕ್ಕೆ ತಂಪನ್ನು ನೀಡುವ ಏಲಕ್ಕಿಯ ಸೇವನೆ ನವ ದಂಪತಿಗಳಲ್ಲಿ ಕಡ್ಡಾಯ.
ಹೋಳಿಗೆಯ ಹೂರಣದಿಂದ ಹಿಡಿದು ಮಾದಲಿಯವರೆಗೆ ಎಲ್ಲ ಪದಾರ್ಥಗಳಲ್ಲಿ ಬೆಲ್ಲ ಮತ್ತು ಗೋಧಿಯ ಉಷ್ಣತೆಯನ್ನು ಸಮತೋಲನಗೊಳಿಸಲು ಏಲಕ್ಕಿಯನ್ನು ಕುಟ್ಟಿ ಪುಡಿ ಮಾಡಿ ಬಳಸುತ್ತಾರೆ.
ಏಲಕ್ಕಿಯು ತನ್ನ ತಂಪಿನ ಗುಣದಿಂದ ಹೆಸರಾಗಿದ್ದು ಬೇಸಿಗೆಯಲ್ಲಿ ಚಹಾ ಮಾಡುವವರು ಕುಟ್ಟಿದ ಏಲಕ್ಕಿ ಪುಡಿ ಇಲ್ಲವೇ ಏಲಕ್ಕಿ ಸಿಪ್ಪೆಯನ್ನು ಚಹಕ್ಕೆ ಬಳಸುತ್ತಾರೆ. (ಚಳಿಗಾಲದಲ್ಲಿ ಹಸಿ ಶುಂಠಿಯ ಚಹಾ ಬಳಕೆ ಇರುತ್ತದೆ). ಮತ್ತೆ ಕೆಲವರು ಒಂದು ಬಟ್ಟಲು ಏಲಕ್ಕಿ, ಅರ್ಧ ಬಟ್ಟಲು ಲವಂಗ, ಅರ್ಧ ಬಟ್ಟಲು ದಾಲ್ಚಿನ್ನಿ ಯನ್ನು ಸಣ್ಣಗಿನ ಉರಿಯಲ್ಲಿ ಕಮ್ಮಗೆ ಹುರಿದು ಪುಡಿ ಮಾಡಿಟ್ಟುಕೊಳ್ಳುತ್ತಾರೆ. ಚೆನ್ನಾಗಿ ಕುದಿಸಿದ ಚಹಾದ ಎಸರಿಗೆ ಹಾಲನ್ನು ಹಾಕಿ ಮತ್ತೊಮ್ಮೆ ಕುದಿಸಿ ಇನ್ನೇನು ಇಳಿಸಬೇಕು ಎನ್ನುವಾಗ ಒಂದಷ್ಟು ಈ ಚಹಾದ ಮಸಾಲೆ ಪುಡಿಯನ್ನು ಹಾಕಿ ಮತ್ತೆ ಒಂದರ್ಧ ನಿಮಿಷ ಕುದಿಸಿ ಸೋಸುತ್ತಾರೆ. ಇದು ಮಸಾಲಾ ಚಹಾ ಎಂದು ಕರೆಸಿಕೊಳ್ಳುತ್ತದೆ.
ಇನ್ನು ಬೇಸಿಗೆಯಲ್ಲಿ ದೂರದ ಊರುಗಳಿಗೆ ಪಯಣಿಸುವ ಸಮಯದಲ್ಲಿ ನಮ್ಮ ತಾಯಂದಿರು ಮೆದುವಾಗಿ ಅನ್ನವನ್ನು ಮಾಡಿ ಬಿಸಿ ಇರುವಾಗಲೇ ಚೆನ್ನಾಗಿ ಮೆಸೆದು ಅದಕ್ಕೆ ಹಾಲು ಕೆನೆ ಮೊಸರನ್ನು ಹಾಕಿ ಕಲಸಿ ಮೊಸರನ್ನವನ್ನು ತಯಾರಿಸಿ ತುಸು ಏಲಕ್ಕಿ ಪುಡಿಯನ್ನು ಕಲಸುತ್ತಾರೆ. ಬೇಸಿಗೆಯ ಬಿಸಿಲಿನಲ್ಲಿ ತಣ್ಣಗಿನ ಏಲಕ್ಕಿ ಹಾಕಿದ ಮೊಸರನ್ನ ಜೊತೆಗೆ ಒಂದು ಹೋಳು ಉಪ್ಪಿನಕಾಯಿ ಇದ್ದರೆ ಮತ್ತಿನ್ನೇನು ಬೇಕು ಸ್ವರ್ಗಕ್ಕೆ ಕಿಚ್ಚು ಹಚ್ಚಲು!
ನಮ್ಮ ಜನಪದರು ಏಲಕ್ಕಿಯನ್ನು ಹಾಡಿ ಹೊಗಳಿದ್ದಾರೆ. ದಂಪತಿಗಳ ಸರಸ ಸಂಭಾಷಣೆಯಲ್ಲಿ
ತೊಟ್ಟು ಬಿಡಿಸಿದ ಎಲೆಗೆ ಸುಣ್ಣವನ್ನು ಹಚ್ಚಿ ಏಲಕ್ಕಿ ಲವಂಗ ಅಡಿಕೆಗಳನ್ನು ಹದವಾಗಿ ಸೇರಿಸಿ ಪತ್ನಿ ತನ್ನ ಗಂಡನಿಗೆ ತಾಂಬೂಲ ಮಾಡಿ ತಿನ್ನಲು ಕೊಡುವುದು
ತಾಂಬೂಲದ ಮಹತ್ವವನ್ನು ಹೇಳುತ್ತದೆ.
ಯಾರಿಗಾದರೂ ಭೂರಿ ಭೋಜನ ಮಾಡಿ ಹೊಟ್ಟೆ ಭಾರವಾಗಿದೆ ಎಂದು ಹೇಳಿದಾಗ ಏಲಕ್ಕಿಯನ್ನು ಸೇವಿಸಲು ಹೇಳುತ್ತಾರೆ. ಏಲಕ್ಕಿಯು ನಮ್ಮ ದೇಹದಲ್ಲಿರುವ ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸಿ ಆಹಾರವು ಬೇಗನೆ ಜೀರ್ಣವಾಗಲು ಸಹಕಾರಿ.
ಅಡುಗೆಗೆ ಬೇಕಾಗುವ ಎಲ್ಲಾ ಮಸಾಲೆ ಪದಾರ್ಥಗಳಲ್ಲಿ ಇರುವ ಉಷ್ಣ ಗುಣಗಳನ್ನು ಸಮತೋಲನಗೊಳಿಸುವ ಶಕ್ತಿ ಮತ್ತು ರುಚಿ ಏಲಕ್ಕಿಗೆ ಇದೆ… ಜೊತೆಗೆ ಮಧುರವಾದ ವಾಸನೆ ಕೂಡ.
ಮಸಾಲೆಗಳ ರಾಣಿ” ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಏಲಕ್ಕಿ ಬಹುಮುಖ ಮತ್ತು ಪರಿಮಳಯುಕ್ತ ಮಸಾಲೆಯಾಗಿದ್ದು, ಇದನ್ನು ಶತಮಾನಗಳಿಂದ ಬಳಸಲಾಗುತ್ತದೆ. ಭಾರತೀಯ ಉಪಖಂಡಕ್ಕೆ ಸ್ಥಳೀಯವಾಗಿರುವ ಈ ಪ್ರಾಚೀನ ಮಸಾಲೆಯು ಅದರ ರುಚಿಕರವಾದ ಸುವಾಸನೆಗಾಗಿ ಮಾತ್ರವಲ್ಲದೆ ಅದರ ಸಂಭಾವ್ಯ ಆರೋಗ್ಯ ಪ್ರಯೋಜನಗಳಿಗಾಗಿಯೂ ಹೆಚ್ಚು ಉಪಯೋಗಿಸಲ್ಪಡುತ್ತದೆ.
ವೈಜ್ಞಾನಿಕವಾಗಿ ಎಲೆಟೇರಿಯಾ ಕಾರ್ಡಮೊಮಮ್ ಎಂದು ಕರೆಯಲ್ಪಡುವ ಏಲಕ್ಕಿ, ಶುಂಠಿ ಕುಟುಂಬದ ಸದಸ್ಯನಾಗಿರುವ ಏಲಕ್ಕಿಯು ಭಾರತ, ಭೂತಾನ್ ಮತ್ತು ನೇಪಾಳದ ಉಷ್ಣವಲಯದ ಪ್ರದೇಶಗಳಿಗೆ ಸ್ಥಳೀಯವಾಗಿದೆ. ಇದು ಎರಡು ಪ್ರಾಥಮಿಕ ಪ್ರಭೇದಗಳಲ್ಲಿ ಬರುತ್ತದೆ: ಹಸಿರು ಮತ್ತು ಕಪ್ಪು (ಕಂದು ಎಂದೂ ಕರೆಯುತ್ತಾರೆ).
ಏಲಕ್ಕಿಯನ್ನು ಜೀರ್ಣಕಾರಕವಾಗಿ ಬಳಸುತ್ತಾರೆ. ಏಲಕ್ಕಿಯಲ್ಲಿರುವ ಕಿಣ್ವಗಳನ್ನು ಒಡೆಯುವ ಜೀರ್ಣಕಾರಕ ಅಂಶವು ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ತೊಂದರೆಗಳಿಂದ ಪಾರು ಮಾಡುತ್ತದೆ.
ಸಂಧಿವಾತ ಮತ್ತು ಸ್ನಾಯುಗಳ ತೊಂದರೆಗಳಲ್ಲಿ ಏಲಕ್ಕಿಯು ಉತ್ತಮ ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ.
ಏಲಕ್ಕಿಯಲ್ಲಿ ಉತ್ಕರ್ಷಣ ನಿರೋಧಕವಾದ ನಾರಿನ ಅಂಶಗಳು ಇದ್ದು ಹೃದಯದ ರಕ್ತನಾಳಗಳ ಕಾಳಜಿ ಮಾಡುತ್ತದೆ. ಆ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸಿ, ಹೃದಯದ ಆರೋಗ್ಯವನ್ನು ಕಾಯುತ್ತದೆ.
ಏಲಕ್ಕಿಯು ಆಂಟಿ ಮೈಕ್ರೋಬಿಯಲ್ ಗುಣಗಳನ್ನು ಹೊಂದಿರುವುದರಿಂದ ಬಾಯಿಯ ದುರ್ವಾಸನೆಯನ್ನು ನಿವಾರಿಸಲು, ಉಸಿರಿನ ತಾಜಾತನವನ್ನು ಕಾಯ್ದುಕೊಳ್ಳಲು ಏಲಕ್ಕಿ ಉತ್ತಮ ಆಯ್ಕೆ.
ಏಲಕ್ಕಿಯು ಆಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿರುವುದರಿಂದ ರಾಡಿಕಲ್ಗಳನ್ನು ರಕ್ಷಿಸಲು ಮತ್ತು
ತೀವ್ರ ತೊಂದರೆಗಳಿಂದ ತಪ್ಪಿಸಿಕೊಳ್ಳಲು ಏಲಕ್ಕಿ ಬಳಕೆ ಮಾಡುತ್ತಾರೆ.
ಏಲಕ್ಕಿಯು ಅಸ್ತಮಾ ಮತ್ತು ಕೆಮ್ಮಿನಂತಹ ಸಮಸ್ಯೆಗಳಿಗೆ ಉತ್ತಮ ಪರಿಣಾಮಕಾರಿ ಮದ್ದು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಉಸಿರಾಟಕ್ಕೆ ಅತ್ಯುತ್ತಮ ದಾರಿಯನ್ನು ಮಾಡಿ ಕೊಡುವ ಮತ್ತು ಶ್ಲೇಷ್ಮವನ್ನು ಕಳೆದುಕೊಳ್ಳಲು ಏಲಕ್ಕಿ ಅತ್ಯವಶ್ಯಕ ಆಯುರ್ವೇದ ಔಷಧಿಯಾಗಿ ಬಳಸಲ್ಪಡುತ್ತದೆ.
ಅಡುಗೆ ಆಹಾರ ಮತ್ತು ಆಯುರ್ವೇದ ಔಷಧಿಗಳಲ್ಲಿ ಮಾತ್ರವಲ್ಲ ಏಲಕ್ಕಿಯನ್ನು ಪಾಶ್ಚಾತ್ಯ ಅಡುಗೆ ವಿಧಾನವಾದ ಬೇಕಿಂಗ್, ಕುಕಿಂಗ್ ಮತ್ತು ಪಾನಿಯಗಳಲ್ಲಿ ಬಳಸಲಾಗುತ್ತದೆ. ವಿವಿಧ ಬಗೆಯ ಮಸಾಲೆಗಳನ್ನು ತಯಾರಿಸಲು ಕೂಡ ಏಲಕ್ಕಿಯನ್ನು ಕಡ್ಡಾಯವಾಗಿ ಬಳಸಲಾಗುತ್ತದೆ.
ಏಲಕ್ಕಿಯಲ್ಲಿರುವ ಧರ್ಮೋಜನಿಕ್ ಗುಣಗಳಿಂದ ಇದು ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುತ್ತದೆ. ತನ್ಮೂಲಕ ದೇಹದ ತೂಕವನ್ನು ಇಳಿಸಿಕೊಳ್ಳಲು ಸಹಾಯಕವಾಗಿ ಕಾರ್ಯನಿರ್ವಹಿಸುತ್ತದೆ.
ಹೀಗೆ ಏಲಕ್ಕಿ ತನ್ನ ಕಮ್ಮನೆಯ ವಾಸನೆ ತಂಪುಕಾರಕ ಗುಣ ಮತ್ತು ಮಧುರ ರುಚಿಯ ಮೂಲಕ ನಮ್ಮೆಲ್ಲರ ಮನಸ್ಸನ್ನು ಪ್ರಸನ್ನಗೊಳಿಸುವ ಶಕ್ತಿಯನ್ನು ಹೊಂದಿದೆ. ಹಿತ ಮಿತವಾದ ಏಲಕ್ಕಿಯ ಸೇವನೆ ನಮ್ಮ ದೇಹಕ್ಕೆ ಇರಲೇಬೇಕು ಎಂಬ ಕಾರಣದಿಂದ ಬಹುಶಹ ನಮ್ಮ ಹಿರಿಯರು ನಮ್ಮ ಪ್ರತಿದಿನದ ತಾಂಬೂಲ ಚರ್ವಣದಲ್ಲಿ ಸಿಹಿ ಅಡುಗೆಗಳಲ್ಲಿ ಬಳಸಲಾರಂಭಿಸಿದ್ದು ಉತ್ತಮ ಔಷಧೀಯ ಗುಣಗಳ ಆಗರವಾಗಿದೆ ಎಂದರೆ ತಪ್ಪಿಲ್ಲ. ಹಿತ ಮಿತವಾಗಿ ಏಲಕ್ಕಿಯನ್ನು ಸೇವಿಸಿ ಆರೋಗ್ಯವನ್ನು ಕಾಯ್ದುಕೊಳ್ಳಿ.
ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

Share This Article
error: Content is protected !!
";