ತಮ್ಮ ದೇ ರಕ್ತ ಮಾಂಸ ಹಂಚಿಕೊಂಡು ಹುಟ್ಟಿದ ಮಕ್ಕಳಿಗೆ ತಂದೆ ತಾಯಿಯಾಗುವುದೆಂದರೆ ಅದು ಬಹಳ ಖುಷಿಯ ವಿಚಾರ, ಆದರೆ ಮೊಮ್ಮಕ್ಕಳಿಗೆ ಅಜ್ಜ ಅಜ್ಜಿ ಆಗೋದೆಂದರೆ ಡಬಲ್ ಧಮಾಕ. ಹರೆಯದ ವಯಸ್ಸಿನ ಕೌಟುಂಬಿಕ ಜವಾಬ್ದಾರಿ, ವಿಶ್ರಾಂತಿರಹಿತ ಜೀವನ ಮನೆಯ ಕೆಲಸಗಳ ಅವಿರತ ಹೋರಾಟಗಳ ನಡುವೆ ಕಾಲದೊಂದಿಗೆ ಗುದ್ದಾಡುತ್ತಾ ಮಕ್ಕಳನ್ನು ಬೆಳೆಸುವುದು ಆಕೆಯ ಪಾಲಿಗೆ ಒಂದು ಯುದ್ಧವೇ ಸರಿ.
ಮಕ್ಕಳ ಎಲ್ಲ ರೀತಿಯ ಬೆಳವಣಿಗೆಗೆ, ಒಳ್ಳೆಯ ಮತ್ತು ಕೆಟ್ಟ ಭಾವಗಳಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಆಕೆಯೇ ಕಾರಣ ಎಂಬ ಕುಟುಂಬದ ಉಳಿದ ಸದಸ್ಯರ ಭಾವ ಆಕೆಯಲ್ಲಿ ಇನ್ನಿಲ್ಲದ ಜವಾಬ್ದಾರಿಯನ್ನು ತುಂಬಿ
ಮಕ್ಕಳನ್ನು ಬೆಳೆಸುವ ನಿಟ್ಟಿನಲ್ಲಿ ಆಕೆಯನ್ನು ತುಸು ಹೆಚ್ಚೇ ಶಿಸ್ತಿನ ಸಿಪಾಯಿಯನ್ನಾಗಿಸುತ್ತದೆ ಎಂದರೆ ತಪ್ಪಿಲ್ಲ. ಅದೆಷ್ಟೇ ಮಕ್ಕಳನ್ನು ಪ್ರೀತಿಸಿದರೂ ಅದನ್ನು ತೋರಿಸಿಕೊಳ್ಳಲಾಗದ, ತೋರಿಸಿಕೊಂಡರೂ ಒಂದು ಬಿಗುವಿನಲ್ಲಿ ಇರಬಹುದಾದ ಅವಶ್ಯಕತೆಗಳನ್ನು ಆಕೆ ಮನಗಂಡಿರುತ್ತಾಳೆ. ತಾನು ತಾಯಿ ಆಗಿರುವಾಗ ಪಾಲಕತ್ವ ಆಕೆಗೆ ತುಸು ಕಷ್ಟ. ಹತ್ತು ಹಲವು ಹೊಸ ಅನುಭವಗಳನ್ನು ಆಕೆ ಕಂಡುಕೊಂಡಿರುತ್ತಾಳೆ.
ಆದರೆ ಮೊಮ್ಮಕ್ಕಳ ಸಮಯ ಬಂದಾಗ ಆಕೆ ಪ್ರಭುದ್ಧ ಗೃಹಿಣಿ ಮಾಗಿದ ತಾಯಿ, ಅನುಭವಸ್ಥ ಪಾಲಕಿ. ವಯೋಸಹಜವಾಗಿ ಕೆಲವು ಸಾಂಸಾರಿಕ ಜವಾಬ್ದಾರಿಗಳಿಂದ ನಿವೃತ್ತಿ ಪಡೆದಿರುವ ಆಕೆಗೆ ಇದೀಗ ಯಥೇಚ್ಛ ಸಮಯವಿರುತ್ತದೆ.. ಅನುಭವಗಳಿಂದ ಪಕ್ವವಾದ ಆಕೆ ಮಾನಸಿಕವಾಗಿ, ದೈಹಿಕವಾಗಿ ಪ್ರಬುದ್ಧಳಾಗಿದ್ದರೂ ಭಾವನಾತ್ಮಕವಾಗಿ ಮಗುವಿನಂತಹ ಮನಸ್ಥಿತಿಯನ್ನು ಹೊಂದಿರುತ್ತಾಳೆ.
ಈ ಸಮಯದಲ್ಲಿ ಆಕೆ ಮೊಮ್ಮಕ್ಕಳನ್ನು ಎತ್ತಿ ಆಡಿಸುವುದೆಂದರೆ ಬದುಕಿನಲ್ಲಿ ಎರಡೆರಡು ಬಾರಿ ಮಡಿಲು ತುಂಬಿದಂತೆ. ಒಂದು ಬಾರಿ ತಮ್ಮ ಮಕ್ಕಳನ್ನು ಪ್ರೀತಿಸುವ ಮತ್ತೊಮ್ಮೆ ಅವರ ಮಕ್ಕಳನ್ನು ಪ್ರೀತಿಸುವ ಎರಡೆರಡು ಬಗೆಯ ತಾಯ್ತನಗಳಿಂದ ಆಕೆ ಮತ್ತಷ್ಟು ಪ್ರೀತಿ, ವಿಶ್ವಾಸ ಮತ್ತು ಅನುಭವಗಳ ಭಾವನಾತ್ಮಕ ಶ್ರೀಮಂತಿಕೆಯನ್ನು ಗಳಿಸುತ್ತಾಳೆ
ತನ್ನ ಮೊಮ್ಮಗುವನ್ನು ಜೋಳಿಗೆಯಲ್ಲಿ ಹಾಕಿ ತೂಗುವಾಗ ಆಕೆ ಪ್ರತಿ ದಿನ ಹೊಸದೆಂಬಂತೆ ತನ್ನ ಮಗುವನ್ನು ಜೋಳಿಗೆಯಲ್ಲಿ ಹಾಕಿದಾಗ ಅವರು ಮಾಡುತ್ತಿದ್ದುದನ್ನು ಹೇಳುತ್ತಾಳೆ. ಮೊಮ್ಮಗುವಿನ ಆಟ ಪಾಠಗಳನ್ನು ನೋಡುತ್ತಾ ತನ್ನ ಮಕ್ಕಳ ಆಟ ಪಾಠಗಳಿಗೆ ಹೋಲಿಸಿ ನೆನಪುಗಳನ್ನು ತಾಜಾ ಮಾಡಿಕೊಳ್ಳುವ ಮೂಲಕ ಮರಳಿ ತನ್ನ ಯೌವನದ ಆ ದಿನಗಳನ್ನು ಕಾಣುತ್ತಾಳೆ. ಆಕೆಯ ಮನಸ್ಸು ಮುದಗೊಳ್ಳುತ್ತದೆ, ಚೇತೋಹಾರಿಯಾಗುತ್ತಾಳೆ.
ಗಾಳಿಗೆ ಇಟ್ಟಾಗ ಪುಸ್ತಕದ ಪುಟಗಳು ಒಂದೇ ಸಮನೆ ಹೊರಳುವಂತೆ ವರ್ಷಗಳು ಉರುಳಿ ಹೋಗುವುದನ್ನು ಆಕೆ ಕಂಡಿದ್ದಾಳೆ. ಇದೀಗ ಜೀವನದ ಸಂಧ್ಯಾಕಾಲದಲ್ಲಿ ತನ್ನ ಮೊಮ್ಮಕ್ಕಳನ್ನು ಎತ್ತಿ ಆಡಿಸುವಾಗ ಆಕೆಗೆ ಸಮಯ ಎಷ್ಟು ಬೇಗ ಸರಿದು ಹೋಯಿತು ಎಂಬುದರ ಅನುಭವವಾಗುತ್ತದೆ. ಮೊಮ್ಮಗುವನ್ನು ತನ್ನ ಎದೆಗಪ್ಪಿಕೊಂಡು ಲಾಲಿ ಹಾಡಿ ಮಲಗಿಸುತ್ತಿದ್ದರೆ ಕಾಲ ತಟಸ್ಥವಾಗಿದೆ ಎಂಬಂತೆ ಆಕೆಗೆ ಭಾಸವಾಗುತ್ತದೆ. ತೃಪ್ತಿ, ಶಾಂತಿ, ಸಮಾಧಾನಗಳು ಆಕೆಯ ಮುಖದಲ್ಲಿ ಪ್ರತಿಬಿಂಬಿಸುತ್ತವೆ. ಆಕೆ ಮತ್ತೆ ಪುಟ್ಟ ಮಗುವಿನಂತಾಗುತ್ತಾಳೆ. ತನ್ನ ಮಾತನ್ನು, ಮಗುವಿನ ಮಾತನ್ನು ತಾನೇ ಕಲ್ಪಿಸಿಕೊಂಡು ಮಾತನಾಡುತ್ತಾ ತನ್ನ ಮತ್ತು ಮಗುವಿನ ನಡುವಿನ ಸಂಭಾಷಣೆಯನ್ನು ಜಾರಿಯಲ್ಲಿರುತ್ತಾಳೆ. ಈ ಹಿಂದೆ ತನ್ನ ಮಕ್ಕಳು ಆರೋಗ್ಯ ಕೆಟ್ಟಾಗ, ಕಿರುಚಿದಾಗ, ಬಿದ್ದು ಪೆಟ್ಟು ಮಾಡಿಕೊಂಡಾಗ ಗಾಬರಿ ಆತಂಕಗಳಿಗೆ ಈಡಾಗುತ್ತಿದ್ದ ಆಕೆ ತನ್ನ ಮೊಮ್ಮಕ್ಕಳ ಅಳು ಚೀರಾಟಗಳಿಗೆ ಕಾರಣವನ್ನು ಅರಿತು ತನ್ನ ಮಕ್ಕಳಿಗೆ ಬಾಲ್ಯದಲ್ಲಿ ಮಕ್ಕಳಿಗೆ ಇದೆಲ್ಲ ಸಹಜ ಎಂದು ಸಮಾಧಾನ ಮಾಡುವ ಮತ್ತು ಅದೇ ಸಮಯದಲ್ಲಿ ಮೊಮ್ಮಗುವಿಗೆ ಅವಶ್ಯಕವಾದ ಮತ್ತು ಅತ್ಯಗತ್ಯವಾದ ಸಾಂತ್ವನವನ್ನು ನೀಡುವ ಅಜ್ಜಿ ಮಮತೆಯ ಖನಿಯಾಗುತ್ತಾಳೆ
.ಮಗು ತನ್ನನ್ನು ಕರೆಯುವುದು ಅಜ್ಜಿ ಎಂದು ಆಕೆಗೆ ಗೊತ್ತು, ಆದರೂ ಕೂಡ ಪ್ರತಿ ಬಾರಿ ಮಗು ತನ್ನನ್ನು ಅಜ್ಜಿ ಎಂದು ಕರೆದಾಗ ಮಂಜುಳ ನಿನಾದದಂತೆ ಆಕೆಗೆ ತೋರುತ್ತದೆ, ದೇವರ ಗಂಟೆ ಬಾರಿಸಿದ ನಂತರದ ನಾದ ವಾತಾವರಣದಲ್ಲಿ ಮೂಡಿಸುವ ಸುಂದರ ಶಬ್ದ ತರಂಗವನ್ನು ಆಕೆ ಪ್ರತಿ ಬಾರಿಯೂ ಅನುಭವಿಸುತ್ತಾಳೆ ಮತ್ತು ಪುಲಕಗೊಳ್ಳುತ್ತಾಳೆ. ತನ್ನೆಲ್ಲ ಕೆಲಸ ಕಾರ್ಯಗಳನ್ನು ಹಿಂದಿಕ್ಕಿ ಮಗುವಿನ ಆದ್ಯತೆಗಳಿಗೆ ಓಗೊಡುತ್ತಾಳೆ.
ಇದೀಗ ಆಕೆ ಈ ಹಿಂದಿನಂತೆ ತನ್ನ ಕನಸುಗಳ ಹಿಂದೆ ಓಡುವುದಿಲ್ಲ, ತನ್ನ ವೈಯಕ್ತಿಕ ಕೆಲಸಗಳನ್ನು ಬದಿಗೊತ್ತುವ ಆಕೆಯನ್ನು ಕರ್ತವ್ಯ ಕೂಡ ಈ ಮುಂಚಿನಂತೆ ಕರೆಯುವುದಿಲ್ಲ. ತನ್ನ ದೈಹಿಕ ಇತಿಮಿತಿಗಳನ್ನು ಮರೆತು, ಮೊಣಕಾಲು ನೋವನ್ನು ಹತ್ತಿಕ್ಕಿ ಮೊಮ್ಮಕ್ಕಳ ಪುಟ್ಟ ಪಾದಗಳನ್ನು ಆಕೆ ಹಿಂಬಾಲಿಸುತ್ತಾಳೆ. ಮೊಮ್ಮಕ್ಕಳ ಹಿಂದೆ ಹಿಂದೆ ಓಡಾಡುತ್ತಾ ಅವರ ಎಲ್ಲ ಕೆಲಸಗಳನ್ನು ಮಾಡಿಕೊಡುವುದರಲ್ಲಿ ಸಂತಸವನ್ನು ಕಾಣುತ್ತಾಳೆ. ಮಗುವಿನ ಪುಟ್ಟ ಪುಟ್ಟ ತೊದಲು ಮಾತುಗಳಲ್ಲಿ ಹಿರಿದಾದ ಅರ್ಥವನ್ನು ಕಲ್ಪಿಸಿಕೊಂಡು ಸಂತಸ ಪಡುತ್ತಾಳೆ. ಅದನ್ನು ಮತ್ತೆ ಮತ್ತೆ ಮನೆಯ ಎಲ್ಲ ಜನರಿಗೆ ಹೇಳಿ ಮತ್ತೊಮ್ಮೆ ಖುಷಿ ಪಡುತ್ತಾಳೆ ಮಗುವಿನೊಂದಿಗೆ ಮತ್ತೊಮ್ಮೆ ತಾನು ಮಗುವಾಗಿ ಬಿಡುತ್ತಾಳೆ. ಮುಂಜಾನೆ ಎದ್ದ ಗಳಿಗೆಯಿಂದ ರಾತ್ರಿ ಮಲಗುವವರೆಗೆ ಆ ಮನೆಯಲ್ಲಿ ಮಗುವಿನದೇ ಮಾತು, ಆಟ ಪಾಠ ಮತ್ತು ಮಗುವಿನ ಕುರಿತಾದ ಮಾತು ಇವುಗಳದ್ದೇ ಕಾರುಬಾರು ಅಜ್ಜಿಯ ಬಾಯಲ್ಲಿ ಪದೇ ಪದೇ ಕೇಳಿ ಎಲ್ಲರಿಗೂ ಅದು ಬಾಯಿಪಾಠವಾಗುತ್ತದೆ. ಮನೆಯ ಉಳಿದ ಸದಸ್ಯರೇನೂ ಕಮ್ಮಿ ಇಲ್ಲ, ಅವರು ಕೂಡ ಅಜ್ಜಿಗೆ ಈ ವಿಷಯದಲ್ಲಿ ಜೊತೆಗೂಡುತ್ತಾರೆ.
ಮಗುವಿಗೆ ಹೇಳಲೆಂದೇ ನೂರಾರು ಕಥೆಗಳನ್ನು ನೆನಪಿಸಿಕೊಳ್ಳುತ್ತಾಳೆ. ಮಂತ್ರ ಶ್ಲೋಕ ವಚನಗಳನ್ನು ಬಾಯಿಪಾಠ ಮಾಡಿ ಮಗುವಿಗೆ ಕಲಿಸುತ್ತಾಳೆ. ತನ್ನ ತೊದಲು ನುಡಿಯಲ್ಲಿ ಮಗು ಅವುಗಳನ್ನು ಪುನರುಚ್ಚರಿಸಿದಾಗ ಸಂತಸದಿಂದ ಚಪ್ಪಾಳೆ ತಟ್ಟುತ್ತಾಳೆ. ತನ್ನ ಮಕ್ಕಳನ್ನು ಬೆಳೆಸುವಾಗ ತನಗೆ ದೊರೆಯದೆ ಇದ್ದ ವಿರಾಮ ಸಮಯವನ್ನು ಇಂದು ಆಕೆ ದಂಡಿಯಾಗಿ ಅನುಭವಿಸುತ್ತಿದ್ದಾಳೆ. ಮಗುವಿನ ಪುಟ್ಟ ಪುಟ್ಟ ಕೈಗಳಿಂದ ದೊಡ್ಡ ದೊಡ್ಡ ಕೆಲಸಗಳನ್ನು ಮಾಡಿಸುವ ಯೋಜನೆಗಳು ಆಕೆಯದ್ದು. ತನ್ನ ಮಕ್ಕಳಿಂದ ಅಸಾಧ್ಯವಾದದ್ದನ್ನು ಮೊಮ್ಮಕ್ಕಳು ಸಾಧಿಸಲಿ ಎಂಬ ಹೆಬ್ಬಯಕೆ ಆಕೆಗೆ.
ಪ್ರೀತಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂಬುದರ ಅರಿವು ಆಕೆಗಿದೆ. ತನ್ನ ಮಕ್ಕಳೊಂದಿಗೆ ತೋರುತ್ತಿದ್ದ ಸಿಟ್ಟು ಸೆಡವುಗಳನ್ನು ಇಂದು ಆಕೆ ಹಿಂದೆ ತಳ್ಳಿದ್ದು ಮೊಮ್ಮಕ್ಕಳನ್ನು ಸಾಧ್ಯವಾದಷ್ಟು ಪ್ರೀತಿ ವಿಶ್ವಾಸದಿಂದ ಅನುನಯಿಸುತ್ತಾಳೆ. ತಮ್ಮ ತಂದೆ ತಾಯಿಯ ಬಳಿ ಹಠ ಮಾಡುವ ಮಕ್ಕಳು ಕೂಡ ಅಜ್ಜಿಯ ಮಾತನ್ನು ಕೇಳುತ್ತಾರೆ… ಕಾರಣ ಇಷ್ಟೇ ತಂದೆ ತಾಯಿಗಳು ಹೇಳಿದ ವಿಷಯವನ್ನೇ ಮೆದುವಾದ ಕಣಕದ ಒಳಗೆ ಹೂರಣವನ್ನು ನಯವಾಗಿ ತುಂಬುವಂತೆ ಅಜ್ಜಿ ಮೊಮ್ಮಕ್ಕಳಿಗೆ ಪ್ರೀತಿಯಿಂದ ಮನದಟ್ಟು ಮಾಡಿಸುತ್ತಾಳೆ. ತಾಯಿಯಾಗಿ ತಾನು ಮಾಡಲಾಗದ ಮಕ್ಕಳ ಅನುನಯಿಸುವಿಕೆಯಲ್ಲಿ ಅಜ್ಜಿಯಾಗಿ ಆಕೆ ಯಶಸ್ವಿಯಾಗಿದ್ದಾಳೆ.
ಈ ಹಿಂದೆ ಆಕೆಗೆ ತನಗೆ ಎಲ್ಲವೂ ತಿಳಿದಿದೆ ತಾನು ಜಾಣೆ ಎಂಬ ಭಾವವಿತ್ತು. ಆದರೆ ನಿಜ ಹೇಳಬೇಕೆಂದರೆ ಆಕೆ ಇದೀಗ ತನ್ನ ಮೊಮ್ಮಕ್ಕಳೊಂದಿಗೆ ಹೊಸತಾಗಿ ಎಲ್ಲವನ್ನು ಕಲಿಯುತ್ತಿದ್ದಾಳೆ. ಮೊಮ್ಮಕ್ಕಳದೇ ಆದ ಗ್ರಹಿಕೆಯಲ್ಲಿ ವಿಚಾರಗಳು ಆಕೆಗೆ ಹೊಸದರಂತೆ ಭಾಸವಾಗುತ್ತಿವೆ. ಮೊಮ್ಮಕ್ಕಳ ದೃಷ್ಟಿಕೋನದ ವಿಚಾರಗಳು ಆಕೆಯನ್ನು ಹೊಸ ಮನುಷ್ಯಳನ್ನಾಗಿಸಿವೆ, ಆಕೆಯ ಹೃದಯ ಈಗ ಮುಂಚಿನಿಂದಲೂ ವಿಶಾಲವಾಗಿದೆ, ಪ್ರೀತಿ ಪ್ರೇಮ ವಿಶ್ವಾಸಗಳ ಗಣಿಯಾಗಿದೆ ಸಿಟ್ಟು ಸೆಡವುಗಳಿಗೆ ಅಲ್ಲಿ ಯಾವುದೇ ಅವಕಾಶವಿಲ್ಲದಂತಾಗಿದೆ.
ಈ ಮೊದಲು ಗಂಡ ಮಕ್ಕಳ ಸಂತಸದಲ್ಲಿಯೇ ತನ್ನ ಸಂತಸವನ್ನು ಕಾಣುತ್ತಿದ್ದ ಆಕೆ ಇದೀಗ ಮೊಮ್ಮಕ್ಕಳ ಕಣ್ಣಲ್ಲಿ ಜಿನುಗುವ ಉತ್ಸಾಹ ಮತ್ತು ಸಂತಸಗಳನ್ನು ಕಂಡು ಖುಷಿಪಡುತ್ತಾಳೆ.. ಮೊಮ್ಮಕ್ಕಳ ಅತಿ ಸಣ್ಣ ಯಶಸ್ಸು ಕೂಡ ಆಕೆಯ ಕಣ್ಣಲ್ಲಿ ಆನಂದ ಭಾಷ್ಪವನ್ನು ತರಿಸುತ್ತದೆ. ಮೊಮ್ಮಕ್ಕಳಿಗೆ ಉಂಟಾಗುವ ಅತಿ ಚಿಕ್ಕ ನೋವು ಕೂಡ ಆಕೆಗೆ ಆತಂಕವನ್ನು, ಭಯವನ್ನು ಉಂಟುಮಾಡುತ್ತದೆ. ಈ ನಿಟ್ಟಿನಲ್ಲಿ ಮಕ್ಕಳು ಅದೆಷ್ಟೇ ಗೇಲಿ ಮಾಡಿದರೂ ಆಕೆ ಬದಲಾಗಳು.
“ಅಸಲಿಗಿಂತ ಬಡ್ಡಿಯ ಮೇಲೆ ಪ್ರೀತಿ ಜಾಸ್ತಿ” ಎನ್ನುವ ಹಾಗೆ ತನ್ನ ಮಕ್ಕಳನ್ನು ಪ್ರೀತಿಸುವ ತಾಯಿ ಅದಕ್ಕಿಂತಲೂ ಹೆಚ್ಚು ತನ್ನ ಮೊಮ್ಮಕ್ಕಳನ್ನು ಪ್ರೀತಿಸುತ್ತಾಳೆ. ಆದರೆ ತನ್ನ ಮಕ್ಕಳಿಗೆ ಮೊಮ್ಮಕ್ಕಳ ಲಾಲನೆ ಪಾಲನೆಯಲ್ಲಿ ಉಂಟಾಗುವ ತೊಂದರೆಯನ್ನು ಕೂಡ ಆಕೆ ಸಹಿಸಲಾರಳು. ಮಕ್ಕಳು ಮತ್ತು ಮೊಮ್ಮಕ್ಕಳ ಆರೈಕೆಯಲ್ಲಿ ತಾನು ಸೋತು ಹೋದರೂ
ಚಿಂತಿಸಳು ಆಕೆ.
ಕಾಲ ಬದಲಾಗಿದೆ… ಎಲ್ಲವೂ ಬದಲಾಗಿದೆ ನಿಜ. ಆದರೆ ಮೊಮ್ಮಕ್ಕಳ ಮೇಲಿನ ಅಜ್ಜಿಯ ಪ್ರೀತಿಯಲ್ಲಿ ಮಾತ್ರ ಕೊಂಚವೂ ಕಡಿಮೆಯಾಗಿಲ್ಲ. ಇದೀಗ ಅಜ್ಜಿಯರು ತಮ್ಮ ವೈಯುಕ್ತಿಕ ಸಮಯವನ್ನು ಕೂಡ ಆಸ್ತೆಯಿಂದ ಅನುಭವಿಸುತ್ತಲೇ ಮೊಮ್ಮಕ್ಕಳನ್ನು ಕೂಡ ಬೆಳೆಸುತ್ತಾರೆ.
ಮತ್ತೆ ಕೆಲವೊಮ್ಮೆ ಮೊಮ್ಮಕ್ಕಳ ಪಾಲನೆಯ ಕೆಲಸ ವಯೋ ಸಹಜವಾಗಿ ಅವರಿಗೆ ಹೊರೆಯಾಗಬಹುದಾದ ಸಾಧ್ಯತೆಗಳು ಕೂಡ ಇವೆ. ಕೆಲ ಹೆಣ್ಣು ಮಕ್ಕಳು ತಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿಯಾಗುತ್ತಾರೆ ಎಂದು ರಜೆ ಬಿಟ್ಟೊಡನೆ ತಮ್ಮ ಮಕ್ಕಳನ್ನು ತಮ್ಮ ತಂದೆ ತಾಯಿಯರ ಬಳಿ ಬಿಟ್ಟು ತಾವು ಹೊರಟುಬಿಡುತ್ತಾರೆ. ಮಕ್ಕಳ ಊಟ, ತಿಂಡಿ, ನಿದ್ರೆ, ನೀರಡಿಕೆಗಳ ಸಂಪೂರ್ಣ ಜವಾಬ್ದಾರಿ ಅಜ್ಜಿಯರ ಮೇಲೆ ಬಿದ್ದಾಗ ಅವರು ಸಹಜವಾಗಿ ದಣಿಯುತ್ತಾರೆ . ಬೇಸರಪಟ್ಟುಕೊಳ್ಳುತ್ತಾರೆ ಮೇಲಾಗಿ ತಮ್ಮನ್ನು ಬಳಸಿಕೊಳ್ಳಲಾಗುತ್ತಿದೆ ಎಂದಾದಾಗ ನೋಯುತ್ತಾರೆ.
ಇದನ್ನು ಅವರ ಮಕ್ಕಳು ಪ್ರಜ್ಞಾಪೂರ್ವಕವಾಗಿ ಗಮನಿಸಿ ತಮ್ಮ ಪಾಲಕರಿಗೆ ವೈಯುಕ್ತಿಕ ಸಮಯವನ್ನು ಕಳೆಯಲು ಅವಕಾಶ ಮಾಡಿಕೊಡಬೇಕು.ಅದು ಅವರ ಜವಾಬ್ದಾರಿಯೂ ಹೌದು.
ತಮ್ಮ ಮಕ್ಕಳು ತಮ್ಮ ಜವಾಬ್ದಾರಿಯೇ ಹೊರತು ತಮ್ಮ ಪಾಲಕರ ಪಾಲಿನ ಹೊರೆ ಅಲ್ಲ ಎಂಬುದನ್ನು ಅರಿತು ಮಕ್ಕಳ ಪಾಲಿಗೆ ಅಜ್ಜಿಯಂದಿರನ್ನು ಆಯಾಗಳಾಗಿ ಭಾವಿಸದೆ ಅವರನ್ನು ಮಾನಸಿಕ ಇಬ್ಬಂದಿತನಕ್ಕೆ ಈಡು ಮಾಡದೆ ಅಜ್ಜಿಯಂದಿರಿಗೆ ಉಪಕರಿಸಬೇಕು.
ಅಜ್ಜಿಯ ಪ್ರೀತಿ ವಿಶ್ವಾಸ ಹಾರೈಕೆಯಲ್ಲಿ ಮೊಮ್ಮಕ್ಕಳು ಅರಳಲಿ.
ಏನಂತೀರಾ ಸ್ನೇಹಿತರೆ?
ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್