ಕೊಪ್ಪಳ ಜುಲೈ 07: 2025-26 ನೇ ಸಾಲಿನಲ್ಲಿ ಕೃಷಿ ಪ್ರಶಸ್ತಿಯಡಿ ಮುಂಗಾರು ಹಂಗಾಮಿನ ಬೆಳೆ ಸ್ಪರ್ಧೆಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಕೃಷಿ ಪ್ರಶಸ್ತಿ ಮಾರ್ಗಸೂಚಿಯ ಕೆಲವು ಮಾನದಂಡಗಳನ್ನು ಪರಿಷ್ಕರಿಸಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುವುದು.
ಆಸಕ್ತ ರೈತ ಮತ್ತು ರೈತ ಮಹಿಳೆಯರು ಪ್ರತ್ಯೇಕವಾಗಿ ಅಗತ್ಯ ದಾಖಲಾತಿಗಳೊಂದಿಗೆ ರೈತರ ಎಫ್ಐಡಿಯನ್ನು ಬಳಸಿಕೊಂಡು K-Kisan Portal ರಡಿ Citizen Login ಅಥವಾ RSK Login ಮೂಲಕ ಹತ್ತಿರದ ರೈತ ಸಂಪರ್ಕ ಕೇಂದ್ರ /ನಾಗರಿಕ ಸೇವಾ ಕೇಂದ್ರ/ ಸ್ವತಃ ಆಗಸ್ಟ್ 30 ರೊಳಗೆ ಅರ್ಜಿ ಸಲ್ಲಿಸಬೇಕು.
ಈ ಹಿಂದೆ ಕೃಷಿ ಪ್ರಶಸ್ತಿ ಪಡೆದವರು ಮತ್ತೆ ಸ್ಪರ್ಧಿಸುವಂತಿಲ್ಲ. ಕೇಂದ್ರ ಅಥವಾ ರಾಜ್ಯ ಸರ್ಕಾರಿ ಸೇವೆಯಲ್ಲಿರುವ ಯಾವುದೇ ಇಲಾಖೆ/ವಿಶ್ವವಿದ್ಯಾಲಯ/ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ನೌಕರರು ಮತ್ತು ಅವರ ಕುಟುಂಬದ ಸದಸ್ಯರು ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ. ಆದರೆ ಕೃಷಿ ಮತ್ತು ಕೃಷಿ ಸಂಬAಧಿತವಾದ ಜಲಾನಯನ ಅಭಿವೃದ್ದಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ ಮತ್ತು ಪಶು ವೈದ್ಯಕೀಯ ಇಲಾಖೆ/ವಿಶ್ವವಿದ್ಯಾಲಯ/ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ತಾಂತ್ರಿಕ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ, ನಿವೃತ್ತರಾದ ನೌಕರರು ಮತ್ತು ಅವರ ಕುಟುಂಬವರ್ಗದವರನ್ನು ಹೊರತುಪಡಿಸಿ ಈ ಇಲಾಖೆಗಳಲ್ಲಿನ ನಿವೃತ್ತ ತಾಂತ್ರಿಕೇತರ ನೌಕರರು ಮತ್ತು ಈ ಇಲಾಖೆಗಳನ್ನು ಹೊರತುಪಡಿಸಿ ಉಳಿದ ಇಲಾಖೆಗಳ ನಿವೃತ್ತ ನೌಕರರು ಮತ್ತು ಅವರ ಕುಟುಂಬದವರು ಭಾಗವಹಿಸಬಹುದಾಗಿದೆ.
ಕೃಷಿ ಪ್ರಶಸ್ತಿ ಮಾರ್ಗಸೂಚಿಯ ಮಾನದಂಡಗಳ ಪ್ರಕಾರ ರಾಜ್ಯ/ಜಿಲ್ಲಾ/ತಾಲ್ಲೂಕು ಮಟ್ಟದ ಬೆಳೆ ಸ್ಪರ್ಧೆಗೆ ಅರ್ಹರಾಗಲು ಪುರುಷರ ವಿಭಾಗದಲ್ಲಿ ಕನಿಷ್ಟ 15 ಮತ್ತು ಮಹಿಳೆಯರ ವಿಭಾಗದಲ್ಲಿ ಕನಿಷ್ಟ 07 ಅರ್ಜಿಗಳ ನೋಂದಣಿ ಕಡ್ಡಾಯವಾಗಿರುತ್ತದೆ.
ಜಿಲ್ಲೆಯ ಆಸಕ್ತ ರೈತ ಮತ್ತು ರೈತ ಮಹಿಳೆಯರು ಕಾರ್ಯಕ್ರಮದಡಿ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಂಡು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಕೃಷಿ ಪ್ರಶಸ್ತಿ ಯೋಜನೆಯಡಿ ರಾಜ್ಯ/ಜಿಲ್ಲಾ/ತಾಲ್ಲೂಕು ಮಟ್ಟದ ಬೆಳೆ ಸ್ಪರ್ಧೆಗೆ ಮಳೆಯಾಶ್ರಿತ ಬೆಳೆಗಳಾದ ಶೇಂಗಾ, ತೊಗರಿ ಪೂರ್ಣ ಬೆಳೆ, ಮುಸುಕಿನ ಜೋಳ, ನವಣೆ, ಸಜ್ಜೆ ಹಾಗೂ ನೀರಾವರಿ ಬೆಳೆಯಾದ ಭತ್ತದ ಬೆಳೆಯನ್ನು ಸ್ಪರ್ಧೆಗೆ ಆಯ್ಕೆಮಾಡಲಾಗಿದೆ. ಬಹುಮಾನದ ಮೊತ್ತ ಹಾಗೂ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಭೇಟಿ ನೀಡಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.