ರಾಯಚೂರ ಜುಲೈ 07 : ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಬೋಸರಾಜು ಅವರು ಜುಲೈ 7ರಂದು ರಾಯಚೂರ ನಗರದ ಐತಿಹಾಸಿಕ ಕೋಟೆ ಪ್ರದೇಶಕ್ಕೆ ಭೇಟಿ ನೀಡಿದರು.
ಮೊದಲಿಗೆ ಬಸ್ ನಿಲ್ದಾಣಕ್ಕೆ ಹತ್ತಿರದ ಕೋಟೆಯ ಕಂದಕದ ಕಾಮಗಾರಿಯ ವೀಕ್ಷಣೆ ನಡೆಸಿದರು. ಈಗಾಗಲೇ ಹಲವಾರು ದಿನಗಳಿಂದ ಜೆಸಿಬಿಗಳ ಮೂಲಕ ಕಂದಕದ ಶುಚಿತ್ವ ಕಾರ್ಯ ನಡೆಯುತ್ತಿದೆ. ಇದಕ್ಕೆ ನಗರದ ನಿವಾಸಿಗಳು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನು ವೈಜ್ಞಾನಿಕವಾಗಿ ಪೂರ್ಣ ಪ್ರಮಾಣದಲ್ಲಿ ಸರಿಪಡಿಸಬೇಕು. ಶಾಶ್ವತವಾಗಿ ಈ ಪ್ರದೇಶ ಸುಂದರವಾಗಿ ಕಾಣುವಂತಾಗಬೇಕು ಎಂಬುದು ಜನರ ಒತ್ತಾಸೆಯಾಗಿದೆ ಎಂದು
ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಸಚಿವರಿಗೆ ಮಾಹಿತಿ ನೀಡಿದರು.
ಈ ಕೋಟೆ ಕಂದಕದ ಕಾಮಗಾರಿಯು ಅಚ್ಚುಕಟ್ಟಾಗಿ ನಡೆದು ಇದು ಜನಾಕರ್ಷಣೀಯವಾಗಿ ಕಾಣಲು ಕೋಟೆ ಪ್ರದೇಶದಲ್ಲಿ ಲೈಟಿಂಗ್ ವ್ಯವಸ್ಥೆ ಮಾಡಿಸಬೇಕು. ಹಾಳಾಗಿರುವ ಗ್ರಿಲಗಳನ್ನು ಸರಿಪಡಿಸಿ ಪುನರೋತ್ಥಾನಕ್ಕೆ ಕ್ರಮವಹಿಸಲು ಸಚಿವರು ಸೂಚನೆ ನೀಡಿದರು.
ಲೈಟಿಂಗ್ ಮಾಡಿಸಲು ಈಗಾಗಲೇ ಪ್ರಸ್ತಾವಣೆ ಸಿದ್ದಪಡಿಸಲಾಗಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೋಹಪಾತ್ರ ಅವರು ತಿಳಿಸಿದರು. ಬಳಿಕ ಸಚಿವರು, ಸೂಪರ್ ಬಜಾರ್ ಹತ್ತಿರದ ಕಾಟಾ ದರ್ವಾಜ್ ಮತ್ತು ತೀನ್ ಕಂದಿಲ್ ವೃತ್ತಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅಭಿವೃದ್ಧಿಪಡಿಸಲು ತಿಳಿಸಿದರು.
ರಾಯಚೂರಿನ ಐತಿಹಾಸಿಕ ಕೋಟೆ ಪ್ರದೇಶಕ್ಕೆ ಸಚಿವರಾದ ಎನ್ ಎಸ್ ಬೋಸರಾಜು ಭೇಟಿ;ಪರಿಶೀಲನೆ

ಈ ವೇಳೆ ಮಹಾಪೌರರಾದ ನರಸಮ್ಮ ಮಾಡಗಿರಿ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಶ್ರೀಕೃಷ್ಣ ಶಾವಂತಗೇರಿ, ಲೋಕೋಪಯೋಗಿ ಇಲಾಖೆಯ ಅಭಿಯಂತರರಾದ ಮಹೇಶ, ರಾಘವೇಂದ್ರ, ಮೇನಕಾ ಪಟೇಲ್ ಹಾಗೂ ಇತರರು ಇದ್ದರು.