ಬಳ್ಳಾರಿ,ಜು10
ಸಾರ್ವಜನಿಕರು ಬಿಸಿಯಾದ ಆಹಾರ ಪದಾರ್ಥ ಸೇವಿಸಬೇಕು ಮತ್ತು ಕುದಿಸಿ ಆರಿಸಿ ಸೋಸಿದ ನೀರು ಕುಡಿಯುವ ಮೂಲಕ ಸಂಭಾವ್ಯ ವಾಂತಿ-ಭೇದಿ ತಡೆಗೆ ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶಬಾಬು ಅವರು ಹೇಳಿದರು.
ನಗರದ ಮರಿಸ್ವಾಮಿಮಠ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಬಾಪೂಜಿನಗರ ಬಡಾವಣೆಯಲ್ಲಿ ಶಂಕಿತ ವಾಂತಿ-ಭೇದಿ ಪ್ರಕರಣ ವರದಿ ಹಿನ್ನಲೆಯಲ್ಲಿ ಮನೆ ಭೇಟಿ ನೀಡಿ ಜಾಗೃತಿ ಮೂಡಿಸಿ ಸಾರ್ವಜನಿಕರೊಂದಿಗೆ ಮಾತನಾಡಿದರು.
ಮನೆ ಮುಂದೆ ಇರುವ ನಳಗಳ ತಗ್ಗಿನಲ್ಲಿ ಸಂಗ್ರಹಿಸಿದ ನೀರು ಪೈಪ್ನಲ್ಲಿ ಪುನಃ ಹೋಗುವ ಸಾಧ್ಯತೆ ಇರುವುದರಿಂದ ಮಹಾನಗರ ಪಾಲಿಕೆ ಸರಬರಾಜು ಮಾಡುವ ನೀರನ್ನು ನಳದ ಮೂಲಕ ಸಂಗ್ರಹಿಸುವ ಪೂರ್ವದಲ್ಲಿ ಎರಡು ಮೂರು ನಿಮಿಷ ಹರಿಯಲು ಬಿಡಬೇಕು. ಆಹಾರ ಸುರಕ್ಷಿತವಾಗಿಟ್ಟುಕೊಳ್ಳುವ ಮೂಲಕ ಬಿಸಿಯಾದ ಆಹಾರ ಪದಾರ್ಥ ಸೇವನೆಗೆ ಆದ್ಯತೆ ನೀಡಬೇಕು ಎಂದರು.
ಮನೆಯ ಮುಂದೆ ಅಥವಾ ಬಡಾವಣೆಗಳಲ್ಲಿ ನೀರಿನ ಪೈಪ್ ಸೋರಿಕೆಯಾಗುತ್ತಿದ್ದರೆ, ತಕ್ಷಣವೇ ಅರೋಗ್ಯ ಇಲಾಖೆ ಅಥವಾ ಮಹಾನಗರಪಾಲಿಕೆಯ ಗಮನಕ್ಕೆ ತರಬೇಕು ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ ನೇತೃತ್ವದಲ್ಲಿ ಜಿಲ್ಲಾ ಕಾಲರಾ ತಂಡ ನೀರನ್ನು ಪರೀಕ್ಷೆ ಮಾಡುತ್ತಿದ್ದು, ಮನೆಯ ಆವರಣದಲ್ಲಿ ನೀರು ಸಂಗ್ರಹ ಮಾಡಿಕೊಳ್ಳುವ ಸಂಪ್ಗಳಿಗೆ ಬಸಿ ನೀರು ಬರದಿರುವಂತೆ ಮುಂಜಾಗೃತೆ ವಹಿಸಬೇಕು ಹಾಗೂ ಊಟದ ಪೂರ್ವ, ಶೌಚದ ನಂತರ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಕನಿಷ್ಟ 20 ಸೆಕೆಂಡ್ ತೊಳೆಯಬೇಕು ಎಂದು ಸೂಚಿಸಿದರು.
ರಸ್ತೆ ಬದಿ ತೆರದಿಟ್ಟ ಆಹಾರ ಸೇವಿಸದಂತೆ, ಕುಡಿಯುವ ನೀರನ್ನು ಸರಿಯಾಗಿ ಮುಚ್ಚಳ ಮುಚ್ಚುವಂತೆ, ಬಾಧಿತರಿಗೆ ಇಲಾಖೆಯ ಸಿಬ್ಬಂದಿ ಕೊಡುವ ಜೀವಜಲ ಓಆರ್ಎಸ್ ದ್ರಾವಣವನ್ನು ಶುದ್ದ ನೀರಿನಲ್ಲಿ ತಯಾರಿಸಿ ಕುಡಿಯುವ ಮೂಲಕ ಇಪ್ಪತ್ನಾಲ್ಕು ಗಂಟೆಯೊಳಗೆ ಬಳಸಬೇಕು. ವಾಂತಿ ಭೇದಿ ಕಂಡು ಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆ ಅಥವಾ ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಲಭ್ಯವಿದ್ದು, ಪಡೆಯಬೇಕು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಮರಿಸ್ವಾಮಿ ಮಠ ನಗರ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸೌಜನ್ಯ, ಡಾ.ಮಹಮ್ಮದ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಜಿಲ್ಲಾ ಎಪಡಮಲಾಜಿಸ್ಟ್ ಡಾ.ವಿಶಾಲಾಕ್ಷಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಿವಕುಮಾರ, ಹೆಚ್ಐಓ ತಿಪ್ಪೇಸ್ವಾಮಿ, ಉಮಾದೇವಿ, ಸವಿತಾ, ಖಾಸಿಂ, ಮಂಜುಳಮ್ಮ, ಹೆಚ್.ಜಿ.ನಾಗರಾಜ, ಬಸವರಾಜ್ ಸೇರಿದಂತೆ ಆಶಾ ಕಾರ್ಯಕರ್ತೆಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.