Ad image

ನೆನಪಿಸಿಕೋ….ನಿನ್ನನ್ನು ಬೆಳೆಸಿದವರು ಯಾರು?

Vijayanagara Vani
ನೆನಪಿಸಿಕೋ….ನಿನ್ನನ್ನು ಬೆಳೆಸಿದವರು ಯಾರು?

 

ಪ್ರತಿಯೊಬ್ಬ ವ್ಯಕ್ತಿಯು ತನ್ನ ಬದುಕಿನಲ್ಲಿ ಪಾಲಕರ ಹಾರೈಕೆ, ಸ್ನೇಹಿತರೊಂದಿಗೆ ಆಟ ಪಾಠ, ವಿದ್ಯೆ, ಉದ್ಯೋಗ, ಸಾಂಗತ್ಯ ಮಕ್ಕಳು ಎಂದು ತನ್ನ ಬದುಕಿನಲ್ಲಿ ಹಲವಾರು ಮಜಲುಗಳನ್ನು ಕಾಣುತ್ತಾನೆ. ಎಷ್ಟೋ ಬಾರಿ ಔದ್ಯೋಗಿಕವಾಗಿ ಆರ್ಥಿಕವಾಗಿ, ಉನ್ನತ ಸ್ಥಾನಕ್ಕೆ ಹೋದಾಗ ಆತ ಕೆಲ ಸಂಗತಿಗಳನ್ನು ಮರೆತುಬಿಡುತ್ತಾನೆ. ಎಲ್ಲವೂ ತಾನೇ ತನ್ನಿಂದ ಎಂಬ ಅಹಂಭಾವ ಆತನಲ್ಲಿ ಉಂಟಾಗುತ್ತದೆ. ಅಂತಹ ಸಮಯದಲ್ಲಿ ಆತ ನೆನಪಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳು ಹೀಗಿವೆ.

ತನ್ನನ್ನು ಬೆಳೆಸಿದ್ದು ತನ್ನ ಪಾಲಕರು. ತನ್ನೆಲ್ಲ ಬೇಕು ಬೇಡಗಳನ್ನು ಅವಶ್ಯಕತೆಗಳನ್ನು ಪೂರೈಸಿದ್ದು ಪಾಲಕರು. ಹಗಲು ರಾತ್ರಿ ತಾವು ಎಚ್ಚರವಿದ್ದು ಮಕ್ಕಳನ್ನು ಬೆಳೆಸಿದವರು ತನ್ನ ಪಾಲಕರು. ತಮ್ಮ ಕಷ್ಟಗಳನ್ನು ತಮಗೆ ಮಾತ್ರ ಇಟ್ಟುಕೊಂಡು ಮಕ್ಕಳಿಗೆ ಸುಖವನ್ನು ಧಾರೆ ಎರೆದವರು. ಮಕ್ಕಳ ಇಚ್ಚಿಸಿದ ಎಲ್ಲವನ್ನು ತಂದುಕೊಟ್ಟವರು ಅವರ ಪಾಲಕರು. ಮನುಷ್ಯನ ಮೂಲಭೂತ ಅವಶ್ಯಕತೆಗಳಾದ ಆಹಾರ, ಬಟ್ಟೆ, ಸೂರು ಮತ್ತು ವಿದ್ಯೆ ದಯಪಾಲಿಸಿ ತನ್ನ ಕಾಲ ಮೇಲೆ ತಾನು ನಿಲ್ಲುವಂತೆ ಬೆಳೆಸಿದವರು ಅವರೇ ತನ್ನ ಪಾಲಕರು.

ತಾವಿಷ್ಟಪಟ್ಟ ಪುಸ್ತಕವನ್ನು ಜತನವಾಗಿ ಇಟ್ಟುಕೊಳ್ಳುವಂತೆ, ರೆಪ್ಪೆಯು ಕಣ್ಣನ್ನು ಕಾಯುವಂತೆ ತಮ್ಮ ಮಕ್ಕಳ ಕಾಳಜಿ ಮಾಡಿದವರು. ಹೊತ್ತು ಹೊತ್ತಿಗೆ ಹೊಟ್ಟೆ ನೆತ್ತಿಯ ನೋಡಿದವರು, ಆರೋಗ್ಯವನ್ನು ಕಾಯ್ದವರು, ಚಾಕರಿ ಮಾಡಿ ಸೋತರೂ ಮುಖದಲ್ಲಿ ಹುಸಿನಗೆ ಚಲ್ಲಿದವರು.

ಧಾವಂತದಿಂದಲೇ ಎದ್ದು ಲಗುಬಗೆಯಿಂದ ಅಡುಗೆ ತಿಂಡಿಗಳನ್ನು ಮಾಡಿ ಮಕ್ಕಳನ್ನು ಎಬ್ಬಿಸಿ ಅವರನ್ನು ಅನುನಯಿಸುತ್ತಲೇ ಅವರ ಹಲ್ಲುಜ್ಜಿಸಿ ಮುಖ ತೊಳೆಸಿ, ಹಾಲು ಕುಡಿಸಿ ಸ್ನಾನ ಮಾಡಿಸಿ ತಿಂಡಿ ತಿನಿಸಿ ಪುಸ್ತಕಗಳನ್ನು ಹೊಂದಿಸಿಕೊಟ್ಟು ಶಾಲೆಗೆ ಕಳಿಸಿದವರು. ಸಂಜೆ ಮನೆಗೆ ಬರುವಾಗ ಬಾಗಿಲಲ್ಲಿ ಕಾಯ್ದು ಅಪ್ಪಿದವರು. ಮುಂದೆ ಮಕ್ಕಳು ದೊಡ್ಡವರಾಗಿ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಂಡಾಗ ಸಂತಸ ಪಟ್ಟವರು, ನಿಮ್ಮ ಏಳಿಗೆಗಾಗಿ ತಮ್ಮ ಹಗಲಿರುಳು
ಸವೆಸಿದವರು.

ಮುಂದೆ ಅದೆಷ್ಟೇ ದೊಡ್ಡವನಾದರೂ ನೀನು ತಾಯಿಯ ಮಡಿಲನ್ನು ಮರೆಯಬೇಡ ತಂದೆಯ ಪ್ರೀತಿಯ ಕಡೆಗಣಿಸಬೇಡ, ಒಡಹುಟ್ಟಿದವರ ಸ್ನೇಹಿತರ ಕಲಿಸಿದ ಗುರುಗಳ ತೊರೆಯದಿರು, ಹುಟ್ಟಿದ ಮನೆಯ ಚಂದದ ಮಧುರ ನೆನಪುಗಳು ನಿನ್ನಲ್ಲಿರಲಿ. ಅದಷ್ಟೇ ದೊಡ್ಡ ಹುದ್ದೆಯಲ್ಲಿ ನೀನಿದ್ದರೂ ನೀನು ಒಂದು ಮನೆಯ ಹೆಮ್ಮೆಯ ಕುಡಿಯಾಗಿರು. ನಿನ್ನ ನೆನಪಾದಾಗ ಅವರ ಮುಖ ಅರಳುವಂತೆ ಬದುಕಿನಲ್ಲಿ ಸಾಗುತ್ತಿರು.

ನಿನ್ನನ್ನು ಕಟೆದು ಶಿಲ್ಪಿಯನ್ನಾಗಿಸಲು ಅವರು ಪಟ್ಟ ಶ್ರಮವನ್ನು ಅವರೆಂದೂ ನಿನಗೆ ಹೇಳರು, ಅವರು ತ್ಯಾಗದ ಪರಿಯನ್ನು ನೀನೆಂದೂ ಅರಿಯಲಾರೆ. ನಿನ್ನ ಉತ್ತಮ ಇಂದುಗಳಿಗೆ ತಮ್ಮ ನಿನ್ನೆಗಳನ್ನು ಕಳೆದುಕೊಂಡವರು. ತಮ್ಮ ಶ್ರಮ, ತಾಳ್ಮೆ, ಕಷ್ಟಗಳನ್ನು ಅವರೊಂದು ಹೇಳಿಕೊಳ್ಳುವುದಿಲ್ಲ ನಿಜ, ಆದರೆ ಅವರ ಕಣ್ಣಲ್ಲಿ ನೋವು,ಪರಿತಾಪ ಮತ್ತು ಪಶ್ಚಾತಾಪಗಳು ಮೂಡದಿರುವಂತೆ ನಿನ್ನ ವರ್ತನೆ ಇರಲಿ.

ಅವರೇನೇ ಮಾಡಿದರೂ ಅದು ನಿನಗಾಗಿ ಮಾತ್ರ. ಪ್ರಕೃತಿ ಸಹಜವಾಗಿ ಯಾವುದೇ ಸದ್ದು ಗದ್ದಲಗಳಿಲ್ಲದೆ, ಅತೀವ ಪ್ರೀತಿಯಿಂದ ನಂಬಿಕೆಯಿಂದ ನಿನಗಾಗಿ ತಮ್ಮದೆಲ್ಲವನ್ನು ಕೊಟ್ಟವರು.ಜನರ ಮನ್ನಣೆ ಸಿಗಲಿ ಎಂದು ಅವರು ಬಯಸಿಲ್ಲ ನಿಜ ಚಪ್ಪಾಳೆಯ ಮೂಲಕ ಪ್ರೀತಿಯನ್ನು ಕೊಡಲಿ ಎಂದು ಕೇಳಿಲ್ಲ ಆದರೆ ನಿಮ್ಮ ಹಿಡಿ ಪ್ರೀತಿಗಾಗಿ, ಪುಟ್ಟ ಗೌರವಕ್ಕಾಗಿ ಅವರು ಕಾದಿಹರು. ಅವರ ಕಾತರದ ಪ್ರೀತಿಗೆ ಒಡನಾಟಕ್ಕೆ ನೀನು ಅದೆಷ್ಟು ಕೃತಜ್ಞನಾಗಿದ್ದರೂ ಕಮ್ಮಿಯೇ….. ಅವರನ್ನೆಂದೂ ಕಾಯಿಸದಿರು, ನೋಯಿಸದಿರು ಬೇಯಿಸದಿರು.

ನೀನು ಪಾಲಕನಾಗುವವರೆಗೆ ನಿನ್ನ ಪಾಲಕರ ಪ್ರೀತಿ, ಕಾಳಜಿ, ಶ್ರಮ ಮತ್ತು ತೀರದ ಜವಾಬ್ದಾರಿಗಳ ಅರಿವು ನಿನಗಾಗುವುದು. ನನಗಾಗಿ ಇಷ್ಟೆಲ್ಲ ನನ್ನ ಪಾಲಕರು ಮಾಡಿದಾಗಲೇ ನಾನು ಒಬ್ಬ ಮನುಷ್ಯನಾಗಿದ್ದು ಎಂಬ ಜ್ಞಾನೋದಯವಾಗುವುದು. ಎಲ್ಲ ಪಾಲಕರು ಮಾಡಿರುವುದನ್ನೇ ನೀವು ಮಾಡಿದ್ದೀರಿ ಅದರಲ್ಲಿ ಹೆಚ್ಚುಗಾರಿಕೆ ಏನು? ಎಂದು ಪ್ರಶ್ನಿಸದಿರಿ. ಅತ್ಯಂತ ಕಡಿಮೆ ಅನುಕೂಲಗಳಲ್ಲಿ ಅವರು ನಿಮ್ಮನ್ನು ಯಾವ ತೊಂದರೆಗಳು ಕಾಡದಂತೆ ಬೆಳೆಸಿದ್ದಾರಲ್ಲವೇ? ಹಾಗೆ ಬೆಳೆಸಲು ಪಟ್ಟ ಶ್ರಮದ ಅರಿವು ನಿಮಗಾಗುವುದು ನೀವು ಕೂಡ ಪಾಲಕತ್ವದ ಆ ಸುರಂಗವನ್ನು ಹೊಕ್ಕಾಗಲೇ.

ಪಾಲಕರು ನಮ್ಮ ಜೊತೆ ಇದ್ದಾಗ ಕಡೆಗಣಿಸಿ ನಂತರ ಅವರನ್ನು ನೆನೆಯುವುದು ಬೇಡ. ನಿನ್ನನ್ನು ನೀನು ನೋಡಿಕೊಳ್ಳಲು ಸಾಧ್ಯವಾಗದ ಸಮಯದಲ್ಲಿ ಅವರು ನಿನ್ನ ಆರೈಕೆ ಮಾಡಿದ್ದಾರೆ. ಸಾಕಿ ಸಲಹಿದ್ದಾರೆ, ಪ್ರೀತಿಯಿಂದ ಪೊರೆದಿದ್ದಾರೆ….. ಇದೀಗ ನಿನ್ನ ಸರದಿ.
ಅವರು ದೈಹಿಕವಾಗಿ ಅನಾರೋಗ್ಯಕ್ಕೆ ಈಡಾದಾಗ, ಭಾವನಾತ್ಮಕವಾಗಿ ಪ್ರೀತಿಯ ಕೊರತೆಯಿಂದ ಬಳಲಿದಾಗ, ಆರ್ಥಿಕವಾಗಿ ಹಣದ ತೊಂದರೆಗೆ ಈಡಾದಾಗ ಅವರನ್ನು ಕೈ ಹಿಡಿದು ಮುನ್ನಡೆಸಬೇಕಾದದ್ದು ನಿನ್ನ ಜವಾಬ್ದಾರಿ… ಕರ್ತವ್ಯ ಕೂಡ.

ಮುಂದೆ ಅವರಿಲ್ಲದ ಸಮಯದಲ್ಲಿ ಮಾಡುವ ಪ್ರತಿ ಕೆಲಸದಲ್ಲೂ ಅವರ ಛಾಯೆಯನ್ನು ನೀನು ಹುಡುಕುವೆ. ಅವರ ಮಾತುಗಳನ್ನು ಕೇಳ ಬಯಸುವೆ, ಅವರ ಪ್ರೀತಿಗಾಗಿ ಆಶಿಸುವೆ…. ಅದು ಮುಂದಿನ ಮಾತು ನಿಜ ಈಗ ಅವರ ನಿನ್ನ ಕಣ್ಣ ಮುಂದೆ ಇರುವಾಗಲೇ ನಿನ್ನ ಪ್ರೀತಿಯನ್ನು ತೋಡಿಕೋ ಕಾಳಜಿಯನ್ನು ವ್ಯಕ್ತಪಡಿಸು ಗೌರವದಿಂದ ವರ್ತಿಸು. ಅವರೆಂದೂ ನಿನ್ನ ಮುಂದೆ ದೀನರಾಗದಿರಲಿ ಎಂದು ಪ್ರಾರ್ಥಿಸು.

ಆಗ ನಿನಗೆ ಅರಿವಾಗುವುದು ನಿನ್ನ ಹೃದಯದ
ಅಂತರಾಳದಲ್ಲಿ, ಬೆಚ್ಚಗಿನ ಸ್ಪರ್ಶದಲ್ಲಿ, ಹುಣ್ಣಿಮೆಯ ಬೆಳದಿಂಗಳಂತಹ ಅವರ ಪ್ರೀತಿ…. ಅವರು ಕೇವಲ ನಿನ್ನ ಬದುಕಿನ ಭಾಗವಾಗಿರಲಿಲ್ಲ ನಿನ್ನ ಬದುಕೇ ಅವರಾಗಿದ್ದರು…… ನಿನ್ನ ಬದುಕಿನ ಪುಟ್ಟ ಸಸಿ ಹೆಮ್ಮರವಾಗಿ ಬೆಳೆದು ಆಕಾಶವನ್ನು ಚುಂಬಿಸಲು ಕಾರಣವಾದ ಮೂಲಬೇರು ಅವರಾಗಿದ್ದರು. ಕಣ್ಣಿಗೆ ಕಾಣಿಸದೆ ಹೋದರೂ ಆಳದಲ್ಲಿ ಅವರ ಹಿಡಿತದ ಸುಖದಲ್ಲಿ ನೀನು ಗಗನಚುಂಬಿಯಾಗಲು ಮೂಲಕ ಕಾರಣ ಅವರೇ. ಅವರೇ ನಿನ್ನ ಹೆತ್ತವರು. ಅವರನ್ನೆಂದೂ ಮರೆಯದಿರು.

ಬದುಕೆಂಬ ಈ ಸಮುದ್ರದಲ್ಲಿ ನಿನ್ನ ಅಸ್ತಿತ್ವದ ನಾವೆಗೆ ದಿಕ್ಸೂಚಿಯಾದವರು ಅವರೇ ನಿನ್ನ ಹೆತ್ತವರು…. ಅವರನ್ನೆಂದೂ ಕೊರಗಿಸದಿರು.

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

Share This Article
error: Content is protected !!
";