ಚಿತ್ರದುರ್ಗ ಜುಲೈ 11:
ಬೀದಿ ನಾಯಿ ದಾಳಿ ಹಾಗೂ ಕಡಿತ ಪ್ರಕರಣಗಳ ನಿಯಂತ್ರಣ ಕಾರ್ಯಗಳಲ್ಲಿ ನಿರ್ಲಕ್ಷ್ಯ ತೋರುವ ಸಂಬಂಧಪಟ್ಟ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ, ಶುಕ್ರವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಬಂಧಿಸಿದ ಜಿಲ್ಲಾ ಕಣ್ಗಾವಲು ಸಮಿತಿ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿಗೆ ಸಂಬಂಧಿಸಿದಂತೆ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಕಾರ್ಯಕ್ರಮ ಅನುಷ್ಠಾನಗೊಳಿಸುವ ಹೊಣೆ ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯಿತಿ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಜವಾಬ್ದಾರಿಯಾಗಿದೆ. ನಗರಗಳು ಹಾಗೂ ಗ್ರಾಮಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಚಿತ್ರದುರ್ಗ ನಗರದಲ್ಲಿಯೇ ಸುಮಾರು 5000ಕ್ಕೂ ಅಧಿಕ ಬೀದಿ ನಾಯಿಗಳಿವೆ. ಈ ನಾಯಿಗಳು ರಾತ್ರಿಯ ವೇಳೆ ಸಾರ್ವಜನಿಕರ ಮೇಲೆ ದಾಳಿ ಮಾಡುತ್ತವೆ. ರಸ್ತೆಗಳು, ಸರ್ಕಾರಿ ಕಚೇರಿ ಆವರಣಗಳು ಬೀದಿನಾಯಿಗಳ ಆಶ್ರಯ ತಾಣವಾಗುತ್ತಿವೆ. ತಕ್ಷಣವೇ ನಗರಸಭೆ ಅಧಿಕಾರಿಗಳು ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣಕ್ಕೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ಎದುರು ಇರುವ ಗೂಡಂಗಡಿಗಳಲ್ಲಿ ತಂಬಾಕು ಉತ್ಪನ್ನಗಳಾದ ಬೀಡಿ, ಸಿಗರೇಟು, ಜರ್ದಾ, ಗುಟ್ಕಾ ಮುಂತಾದ ವಸ್ತುಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದ್ದು, ಇದರ ಜೊತೆಗೆ ಇಲ್ಲಿನ ಅಂಗಡಿಗಳಲ್ಲಿ ಸಾರ್ವಜನಿಕರಿ ತಿಂಡಿ ಆಹಾರ ಪೂರೈಕೆ ಮಾಡುತ್ತಾರೆ, ಆದರೆ ತ್ಯಾಜ್ಯವನ್ನು ರಸ್ತೆ ಸೇರಿದಂತೆ ಎಲ್ಲೆಂದರಲ್ಲಿ ಬಿಸಾಡುವುದರಿಂದ, ನಾಯಿ, ಹೆಗ್ಗಣಗಳ ಕಾಟ ವಿಪರೀತವಾಗಿದೆ. ನಾಯಿಗಳು ರಾತ್ರಿ ವೇಳೆ ದಾಳಿ ಮಾಡುತ್ತವೆ, ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ತಿಳಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ರವೀಂದ್ರ ಅವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಕೂಡಲೆ ನಗರಸಭೆ ಅಧಿಕಾರಿಗಳು ಈ ಬಗ್ಗೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ವಾಂತಿ ಬೇಧಿ, ಚಿಕನ್ ಗುನ್ಯಾ, ಡೆಂಗ್ಯೂ, ಮಲೇರಿಯಾ, ಇಲಿ ಜ್ವರ, ಹಂದಿ ಜ್ವರ, ಮೆದುಳು ಜ್ವರ, ಗಂಟಲು ಮಾರಿ, ದಡಾರ, ರೇಬಿಸ್, ಹಾವು ಕಡಿತ, ಮಂಗನ ಕಾಯಿಲೆ ಸೇರಿದಂತೆ ಕಣ್ಗಾವಲು ಅಡಿ ಅಧಿಸೂಚಿಸಿದ ರೋಗಗಳ ಬಗ್ಗೆ ವೈದ್ಯಾಧಿಕಾರಿಗಳು ನಿಗಾ ಇರಿಸಬೇಕು. ಹಾವು ಕಡಿತದಿಂದ ಮೃತಪಟ್ಟ ರೈತರಿಗೆ ಕೃಷಿ ಇಲಾಖೆಯಿಂದ ಸೂಕ್ತ ಪರಿಹಾರ ನೀಡಬೇಕು. ಜಿಲ್ಲಾ ಕಣ್ಗಾವಲು ಸಮಿತಿಯಲ್ಲಿರುವ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕ್ರಿಯಾಶೀಲರಾಗಿ ಕೆಲಸ ನಿರ್ವಹಿಸಬೇಕು. ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ನಿಯಮಿತವಾಗಿ ಪೌರಕಾರ್ಮಿಕರ ಆರೋಗ್ಯ ತಪಾಸಣೆ ನೆಡೆಸಿ ವಿವಿಧ ರೋಗಗಳಿಗೆ ವ್ಯಾಕ್ಸಿನೇಷನ್ ಕೊಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಮಲೇರಿಯಾ, ಚಿಕನ್ ಗುನ್ಯಾ, ಡೆಂಗ್ಯೂ ರೋಗಗಳು ಸೊಳ್ಳೆಗಳಿಂದ ಹರಡುತ್ತವೆ. ನೀರು ನಿಂತ ಪ್ರದೇಶಗಳಲ್ಲಿ ಲಾರ್ವ ಸಮೀಕ್ಷೆ ನಡೆಸಿ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು. ಕೆ.ಎಸ್.ಆರ್.ಟಿ. ಸಂಸ್ಥೆಗಳ ಡಿಪೋಗಳಲ್ಲಿ ಬಯಲಲ್ಲಿ ಇರಿಸಿರುವ ಟೈರ್ಗಳಲ್ಲಿ ನೀರು ಸಂಗ್ರಹವಾಗಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಕೂಡಲೇ ನಿರುಪಯುಕ್ತ ಟೈರ್ಗಳ ವಿಲೇವಾರಿಗೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಇತ್ತೀಚಿನ ದಿನಗಳಲ್ಲಿ ಪ್ರಾಣಿ ಜನ್ಯ ರೋಗಗಳು ಹೆಚ್ಚೆಚ್ಚು ವರದಿಯಾಗುತ್ತಿದ್ದು ಶೇ 60% ರಷ್ಟು ಸಾಂಕ್ರಾಮಿಕ ರೋಗಗಳು ಪ್ರಾಣಿ ಜನ್ಯ ರೋಗಗಳಾಗಿವೆ. ಶೇ 75 ರಷ್ಟು ಮರುಕಳಿಸಬಹುದಾದ ಸಾಂಕ್ರಾಮಿಕ ರೋಗಗಳು ಪ್ರಾಣಿ ಜನ್ಯ ರೋಗಗಳಾಗಿದ್ದು ಕಾಡು ಹಾಗೂ ಸಾಕು ಪ್ರಾಣಿಗಳೆರಡರಿಂದಲೂ ಹರಡುವಂತಹ ರೋಗಗಳು, ಮಾನವನಿಗೆ ಆರೋಗ್ಯದ ಜೊತೆಗೆ ಜೀವಹಾನಿ ಮತ್ತು ಆರ್ಥಿಕ ಹಾನಿ ಉಂಟುಮಾಡುತ್ತವೆ, ರೇಬೀಸ್, ಹಂದಿಜ್ವರ, ಹಕ್ಕಿಜ್ವರ, ಮೆದುಳು ಜ್ವರ, ಬ್ರುಸ್ಸೆಲ್ಲೋಸಿಸ್, ಮಂಗನ ಖಾಯಿಲೆ, ಸ್ಕ್ರಬ್ ಟೈಪಸ್, ಮುಂತಾದ ರೋಗಗಳು ಇವುಗಳಲ್ಲಿ ಮುಖ್ಯವಾಗಿವೆ.
ಸಾರ್ವಜನಿಕರು ಈ ರೋಗಳ ಬಗ್ಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಾಗಿದ್ದು, ಸಾರ್ವಜನಿಕರು ರೋಗ ಬಾರದಂತೆ ಅಗತ್ಯ ಸೂಕ್ತ ಲಸಿಕೆ / ಚಿಕಿತ್ಸೆ ತೆಗೆದುಕೊಳ್ಳಬೇಕು. ಪ್ರಾಣಿಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವ ಸಾರ್ವಜನಿಕರು, ಅರಣ್ಯ ರಕ್ಷಕರು/ವಾಸಿಗಳು, ಪಶುಪಾಲನೆ ಮತ್ತು ಹೈನುಗಾರಿಕೆ ಉದ್ಯೋಗ ಮಾಡುವ ವ್ಯಕ್ತಿಗಳು, ಸಾಕುಪ್ರಾಣಿಗಳನ್ನು ಹೊಂದಿರುವವರು ಸೂಕ್ತವಾಗಿ ಲಭ್ಯವಿರುವ ಮುನ್ನೆಚ್ಚರಿಕಾ ಲಸಿಕೆಗಳನ್ನು ಪಡೆಯಬೇಕು.
ಪ್ರತಿ ವರ್ಷ ಜುಲೈ 6ನೇ ತಾರೀಖು ವಿಶ್ವ ಪ್ರಾಣಿ ಜನ್ಯ ರೋಗಗಳ ದಿನಾಚರಣೆ ಆಚರಿಸುತ್ತಿದ್ದು ಇದರಲ್ಲಿ ಆರೋಗ್ಯ ಇಲಾಖೆ, ಪಶುಪಾಲನಾ ಇಲಾಖೆ, ಅರಣ್ಯ ಇಲಾಖೆ, ಪರಿಸರ ವಿಜ್ಞಾನ ಇಲಾಖೆಗಳ ಸಮನ್ವಯದಿಂದ ಕೆಲಸ ಮಾಡುತ್ತಿದ್ದು ಇದರಲ್ಲಿ ಸಾರ್ವಜನಿಕರ ಪಾತ್ರ ಮಹತ್ವದಾಗಿರುತ್ತದೆ ಹಾಗೂ ಯಾವುದೇ ತರಹದ ಸಾಂಕ್ರಾಮಿಕ ರೋಗಗಳು ಗಮನಕ್ಕೆ ಬಂದಿದ್ದಾದಲ್ಲಿ ತಕ್ಷಣವೆ ಆರೋಗ್ಯ / ಪಶುಪಾಲನಾ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಡಿಹೆಚ್ಒ ಡಾ. ರೇಣುಪ್ರಸಾದ್ ತಿಳಿಸಿದರು.
ಸಭೆಯಲ್ಲಿ ನಾಯಿ ಕಡಿತ ಹಾಗೂ ರೇಬಿಸ್ ರೋಗದ ನಿಯಂತ್ರಣ ಕುರಿತಂತೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಕರಪತ್ರಗಳನ್ನು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಬಿಡುಗಡೆ ಮಾಡಿದರು. ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್, ಪೊಲೀಸ್ ಉಪಾಧೀಕ್ಷಕ ಉಮೇಶ್ ಈಶ್ವರ ನಾಯ್ಕ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕಂಬಾಳಿ ಮಠ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಮಂಜುನಾಥ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ, ಆಶ್ರಿತ ರೋಗ ನಿಯಂತ್ರಣಾಧಿಕಾರಿ ಡಾ.ಕಾಶಿ, ಪಶು ಪಾಲನ ಮತ್ತು ಪಶು ವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ.ಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.