Ad image

ನಾನು ನನ್ನಿಂದ ಎಂಬ ಅಹಂ….. ಭಾವ

Vijayanagara Vani
ನಾನು ನನ್ನಿಂದ ಎಂಬ ಅಹಂ….. ಭಾವ

 

ಸುವರ್ಣ ಸೇತುವೆ ಎಂಬ ಚಲನಚಿತ್ರದಲ್ಲಿ ಜಂಬದ ಅಜ್ಜಿಯ ಕಥೆಯೊಂದನ್ನು ನಾಟಕವಾಗಿಸಿ ತೆರೆಯ ಮೇಲೆ ಪ್ರಯೋಗಿಸಿದ್ದರು. ತುಂಬಾ ಚಿಕ್ಕಂದಿನಲ್ಲಿ ಆ ಚಿತ್ರವನ್ನು ತೆರೆಯ ಮೇಲೆ ನೋಡಿದ ನನ್ನ ಮನಸ್ಸಿನ ಮೇಲೆ ಆ ಚಿತ್ರದ ಕಥೆಗಿಂತ ಮಕ್ಕಳು ಭಾಗವಹಿಸಿದ ದೃಶ್ಯ ಕಥಾನಕವು ಬಹಳ ಪರಿಣಾಮ ಬೀರಿತ್ತು.

ಎಲ್ಲರಿಗೂ ಗೊತ್ತಿರುವ ಆ ಕಥೆಯಲ್ಲಿ ಅತ್ಯಂತ ಜಂಬಗಾತಿ ಅಜ್ಜಿ ಒಬ್ಬಳ ಪಾತ್ರ. ಆಕೆ ಕೋಳಿಯೊಂದನ್ನು ಸಾಕಿದ್ದಳು. ಪ್ರತಿದಿನ ಮುಂಜಾನೆ ಆಕೆಯ ಕೋಳಿ ಕೂಗಿದ ಮೇಲೆಯೇ ಇಡೀ ಊರಿನ ಜನ ಎದ್ದು ತನ್ನ ದೈನಂದಿನ ಕರ್ಮಗಳನ್ನು ಮಾಡುತ್ತಾರೆ ಎಂಬುದು ಆಕೆಯ ಭಾವನೆಯಾಗಿತ್ತು. ಅದೊಂದು ದಿನ ತನ್ನೂರಿನ ಜನರ ಮೇಲೆ ಯಾವುದೋ ಕಾರಣಕ್ಕೆ ಮುನಿಸಿಕೊಂಡ ಅಜ್ಜಿ ಅವರಿಗೆ ಬುದ್ಧಿ ಕಲಿಸಬೇಕು ಎಂಬ ಆಶಯದಿಂದ ತನ್ನ ಕೋಳಿಯನ್ನು ತನ್ನ ಬಗಲಲ್ಲಿಟ್ಟುಕೊಂಡು ಕಾಡಿನತ್ತ ಹೊರಟು ಹೋದಳು. ನಾನು ನನ್ನ ಕೋಳಿಯನ್ನು ಕಾಡಿಗೆ ತೆಗೆದುಕೊಂಡು ಬಂದಿದ್ದೇನೆ… ನನ್ನೂರಿನಲ್ಲಿ ಬೆಳಕೇ ಆಗಿರುವುದಿಲ್ಲ ಹೀಗೆ ಆಗಬೇಕು ನನ್ನೂರಿನ ಜನರಿಗೆ ಎಂದು ಹಲ್ಲು ಕಡಿಯುತ್ತ ರಾತ್ರಿಯೆಲ್ಲ ಬಡಬಡಿಸಿದಳು ಆ ಮುದುಕಿ.

ಮರುದಿನ ಮುಂಜಾನೆಯ ಸೂರ್ಯನ ಬಿಸಿಲು ಚುರುಗುಟ್ಟಿದಾಗ ತನ್ನ ಗುಡಿಸಲಿಗೆ ಅಜ್ಜಿ ಹಿಂದಿರುಗಲು
ಊರಿನಲ್ಲಿ ಬೆಳಕಾಗಿದ್ದು ಎಲ್ಲ ಜನರು ತಮ್ಮ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿರುವುದನ್ನು ಕಂಡು ಆಶ್ಚರ್ಯ ಪಡುತ್ತಾಳೆ.

ಅರೆ! ನನ್ನ ಕೋಳಿ ಕೂಗದೆ ಇಲ್ಲಿ ಬೆಳಕಾಯಿತೇ? ಎಂದು ಆಕೆ ಆಶ್ಚರ್ಯವನ್ನು ವ್ಯಕ್ತಪಡಿಸಿದಾಗ ಅದನ್ನು ಕೇಳಿಸಿಕೊಂಡ ಊರ ಜನ ಅಯ್ಯೋ! ಅಜ್ಜಿ ತಾನು ಸಾಕಿದ ಕೋಳಿ ಕೂಗಿದ್ರೇನೇ ಬೆಳಕಾಗುತ್ತೆ ಅಂತ ಅನ್ಕೊಂಡಿದ್ದಾಳೆ ಎಂದು ತಮಾಷೆ ಮಾಡಿ ನಗುತ್ತಾರೆ. ಎಲ್ಲರ ತಮಾಷೆಗೆ ಈಡಾದ ಅಜ್ಜಿಗೆ ಒಂದು ಸತ್ಯದ ಅರಿವಾಗುತ್ತದೆ… ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ ಮತ್ತು ಯಾರೂ ಕೂಡ.
ಅದರಲ್ಲೂ ನಾನು, ನನ್ನಿಂದ ಎಂಬ ಅಹಂಭಾವವಂತೂ ಇರಲೇ ಕೂಡದು.

ಕಳೆದ ಎರಡು ಮೂರು ದಶಕಗಳಿಂದ ಆ ಊರಿನಲ್ಲಿ ಇದ್ದ,ಈಗಾಗಲೇ ನೂರಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಉಪನ್ಯಾಸಗಳನ್ನು ನೀಡಿರುವ ಲೇಖಕರೊಬ್ಬರನ್ನು ಕೆಲವೇ ವರ್ಷಗಳ ಹಿಂದೆ ಜನರಿಗೆ ಪರಿಚಯವಾಗಿರುವ ವ್ಯಕ್ತಿಯೊಬ್ಬರು ಕೆಲವು ವರ್ಷಗಳ ಹಿಂದೆ ಇವರಿಗೆ ವೇದಿಕೆಯ ಮೇಲೆ ನಿಂತು ಮಾತನಾಡಲು ಧೈರ್ಯ ಇರಲಿಲ್ಲ, ಏನೇ ಕೆಲಸ ಕೊಡುವುದಿದ್ದರೂ ವೇದಿಕೆಯ ಹಿಂದಿನ ಕೆಲಸವನ್ನು ನೀಡಿ ಎಂದು ನನ್ನ ಬಳಿ ಅಲವತ್ತುಕೊಳ್ಳುತ್ತಿದ್ದರು, ಈಗ ನೋಡಿ ಅದೆಷ್ಟು ಚೆನ್ನಾಗಿ ಭಾಷಣ ಮಾಡುತ್ತಿದ್ದಾರೆ ಎಂದು ಅವರ ಕುರಿತು ಹೇಳುವ ನಿಟ್ಟಿನಲ್ಲಿ ತನ್ನನ್ನು ತಾನು ಹೊಗಳಿಕೊಂಡಿದ್ದರು. ಅಲ್ಲಿದ್ದ ಜನರಿಗೆ ಪರಿಚಯಿಸುತ್ತಿದ್ದ ವ್ಯಕ್ತಿಯ ಜಂಬದ ಬುದ್ಧಿ ಗೊತ್ತಿತ್ತು…. ಆರು ಮಕ್ಕಳನ್ನು ಹಡೆದಾಕಿಗೆ ಮೂರು ಹಡೆದಾಕಿ ಮಕ್ಕಳನ್ನು ಜೋಪಾನ ಮಾಡುವುದನ್ನು ಹೇಳಿಕೊಟ್ಟಳಂತೆ ಎಂದು ಗೇಲಿ ಮಾಡಿ ನಕ್ಕರು. ಆದರೆ ತುಸು ದಪ್ಪ ಚರ್ಮದ ಆತನಿಗೆ ಇದರಿಂದ ಏನೂ ಪರಿಣಾಮವಾಗಲಿಲ್ಲ… ಆಗುವುದಿಲ್ಲ ಕೂಡ. ಅವರೆಲ್ಲರೂ ಒಂದು ರೀತಿಯಲ್ಲಿ ಜಂಬದ ಕೋಳಿಯನ್ನು ಹೊಂದಿರುವ ಮುದುಕಿಯ ಹಾಗೆ. ತನ್ನಿಂದಲೇ ಆ ಊರಿಗೆ ಮಳೆ ಬೆಳೆ, ತಾನೇ ಆ ಊರಿನ ಎಲ್ಲಾ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದೇನೆ ಎಂಬಂತೆ ಅವರ ವರ್ತನೆ.

ಮತ್ತೆ ಕೆಲವರು ಏನನ್ನಾದರೂ ಖರೀದಿಸಲು ಹೋದಾಗ ಅದನ್ನು ಖರೀದಿಸಲು ಬಿಡದೆ ಅದಕ್ಕಿಂತ ಕಮ್ಮಿ ಬೆಲೆಯಲ್ಲಿ ತಾನು ಖರೀದಿಸಿಕೊಡುತ್ತೇನೆ ಇಲ್ಲವೇ ಬೇರೆ ಕಡೆ ಹುಡುಕಿದರೆ ಇನ್ನಷ್ಟು ಕಡಿಮೆ ಬೆಲೆಯಲ್ಲಿ ಖಂಡಿತವಾಗಿಯೂ ಸಿಕ್ಕೆ ಸಿಗುತ್ತದೆ ಎಂದು ಹೇಳಿ ಖರೀದಿಸುವವರನ್ನು ಬಿಡಿಸಿ ಬಿಡುತ್ತಾರೆ. ಇವರ ಮಾತನ್ನು ಕೇಳಿ ಖರೀದಿಸುವುದನ್ನು ಬಿಟ್ಟವರಿಗೆ
ಅತ್ತ ತಾವು ಖರೀದಿಸಬೇಕೆಂದು ಬಯಸಿದ ವಸ್ತುವೂ ಸಿಗುವುದಿಲ್ಲ… ಇತ್ತ ಹಾಗೆ ಹೇಳಿ ಬಿಡಿಸಿದವರು ಕೂಡ ತಂದು ಕೊಡುವುದಿಲ್ಲ.

ಇಂತಹ ವ್ಯಕ್ತಿಗಳು ನಮ್ಮ ಬದುಕಿನಲ್ಲಿ ಅಲ್ಲಲ್ಲಿ ಕಾಣಸಿಗುತ್ತಾರೆ. ಅವರ ಈ ತೆರನಾದ ವ್ಯಕ್ತಿತ್ವದಿಂದ ಬೇಸತ್ತ ಸಾಕಷ್ಟು ಜನರು ಅವರಿಂದ ದೂರ ಸರಿದಿರುತ್ತಾರೆ.

ಕೆಲ ಜನರು ಬೇರೆಯವರನ್ನು ಪರಿಚಯಿಸುವಾಗ ತಮ್ಮಿಂದಲೇ ಅವರು ಬದುಕಿನಲ್ಲಿ ಮುಂದೆ ಬಂದರು ಎಂಬಂತೆ ಹೇಳುತ್ತಾರೆ… ಇದು ಸ್ವಲ್ಪಮಟ್ಟಿಗೆ ನಿಜ ಇರಬಹುದು, ಆದರೆ ಅದು ಕೇವಲ ಒಂದು ಪಾಲು ಮಾತ್ರ. ಇನ್ನುಳಿದ ಮೂರು ಪಾಲು ಮುಂದೆ ಬಂದವರ ಪ್ರಯತ್ನ ಇರುತ್ತದೆ. ಎಲ್ಲವೂ ನಾನೇ ನನ್ನಿಂದಲೇ ಎಂಬ ಮಾತನ್ನು ಹೇಳುವ ವ್ಯಕ್ತಿಗೆ ಆತನ ಅಹಂ ತಣಿಸಲು ಮಾತ್ರ ಈ ಮಾತುಗಳು. ಹಲವಾರು ಜನರನ್ನು ತಾನೇ ಪರಿಚಯಿಸಿದೆ ಎಂದು ಹೇಳುವ ವ್ಯಕ್ತಿ ತಾನೇಕೆ ಜನರಿಗೆ ಪರಿಚಯವಾಗಲಿಲ್ಲ! ಎಂಬುದು ಆಶ್ಚರ್ಯದ ಸಂಗತಿ ಅಲ್ಲವೇ?

ಪ್ರತಿದಿನವೂ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸೂರ್ಯ ನಮ್ಮ ಬದುಕನ್ನು ಬೆಳಗುತ್ತಾನೆ. ನಾವು ನಡೆದಾಡುವ ನೆಲ, ಹರಿಯುವ ನೀರು ನಾವು ಉಸಿರಾಡುವ ಗಾಳಿ ಕೂಡ ಮೌನವಾಗಿ ತಮ್ಮ ಕೆಲಸಗಳನ್ನು ನಿರ್ವಹಿಸುತ್ತವೆ. ಸಜ್ಜನರು ಕೂಡ ತಮ್ಮ ಸ್ವಂತ ಗುಣಗಾನ ಮಾಡಿಕೊಳ್ಳದೆ ಮೌನವಾಗಿ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಆದರೆ ತಾವು ಸಜ್ಜನರು ಎಂದುಕೊಂಡ ಸಾಕಷ್ಟು ಜನ ಕೈಯಲ್ಲಿ ತಮಟೆ ಇಲ್ಲದಿದ್ದರೂ ಇಡೀ ಊರಿಗೆ ಡಂಗುರ ಸಾರಿ ಬರುವ ಛಾತಿ ಉಳ್ಳವರು.

ಇದನ್ನೆಲ್ಲಾ ಮನಗಂಡೇ ನಮ್ಮ ಹಿರಿಯರು ತುಂಬಿದ ಕೊಡ ತುಳುಕುವುದಿಲ್ಲ ಎಂದು ಹೇಳಿರುವುದು…. ಮತ್ತು ವಿಪರೀತ ಧಿಮಾಕು ತೋರಿಸುವವರನ್ನು ಅರೆ ಬೆಂದ ಮಡಿಕೆ ಎಂದು ಹೀಗಳೆಯುವುದು ಇದೇ ಕಾರಣಕ್ಕೆ ಇರಬಹುದು.

ಆದರೂ ಸ್ನೇಹಿತರೆ…. ಒಂದು ವಿಷಯವನ್ನು ಮಾತ್ರ ನೆನಪಿನಲ್ಲಿಟ್ಟುಕೊಳ್ಳೋಣ. ಸಾಧ್ಯವಾದಷ್ಟು ಇಂತಹ ಅಹಂಕಾರಿಗಳಿಂದ, ಅವರ ಮಾತು-ನಡತೆಗಳು ನಮ್ಮ ಆತ್ಮ ಸಂಯಮವನ್ನು ಕೆಣಕದಿರುವಂತೆ ಅಂತರವನ್ನು ಕಾಯ್ದುಕೊಳ್ಳೋಣ.

ಅವರ ಬೊಗಳೆ ಮಾತುಗಳಿಗೆ ನಸುನಕ್ಕು ಸುಮ್ಮನಾಗಿ ಬಿಡೋಣ. ಇಂಥವರೊಂದಿಗೆ ವಾದ ಕೂಡ ಸಲ್ಲದು…. ಅದು ಕೆಸರಿಗೆ ಕಲ್ಲು ಹಾಕಿದಂತೆ ನಮಗೇ ಮರಳಿ ಸಿಡಿಯುತ್ತದೆ.

ಕಣ್ಣು ಕಾಣದ ಅಂಧರಿಗೆ ವಸ್ತು ಸ್ಥಿತಿಯ ಅರಿವಾಗಬಹುದು ಆದರೆ ಜ್ಞಾನಾಂಧರಿಗಲ್ಲ.
ಅವರನ್ನು ಎಚ್ಚರಿಸುವುದು ಎಂದರೆ ನಿದ್ರೆಯ ನಟನೆ ಮಾಡುತ್ತಿರುವವರನ್ನು ಎಚ್ಚರಿಸಿದಂತೆ…. ಅಲ್ವೇ ಸ್ನೇಹಿತರೇ?

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ್

Share This Article
error: Content is protected !!
";