Ad image

ಗುಂಪು ವಿಮೆ ಪಾಲಿಸಿ-ಸೇವಾ ನ್ಯೂನ್ಯತೆ : ಸೂಕ್ತ ಪರಿಹಾರ ನೀಡಲು ಆದೇಶ

Vijayanagara Vani
ಶಿವಮೊಗ್ಗ,ಜು.2: ವೀಣಾ ಕೋಂ ಸುಂದರೇಶ ಮತ್ತು ಸುಂದರೇಶ್ ಬಿನ್ ಬಿ.ಆರ್. ಮಂಜಯ್ಯ, ಬೇಡನ ಹಿತ್ತಲು, ತೀರ್ಥಹಳ್ಳಿ, ಶಿವಮೊಗ್ಗ ಜಿಲ್ಲೆ ಇವರು ದಿ ನ್ಯೂ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್, ಶಿವಮೊಗ್ಗ, ಮೆಡಿ ಅಸಿಸ್ಟ್ ಟಿಪಿಎ ಪ್ರೈವೇಟ್ ಲಿಮಿಟೆಡ್., ಬೆಂಗಳೂರು ಮತ್ತು ಮಲ್ನಾಡ್ ಅರೆಕಾ ಮಾರ್ಕೆಟಿಂಗ್ ಸೊಸೈಟಿ ಪ್ರೈ. ಲಿ.., ಶಿವಮೊಗ್ಗ ಇವರ ವಿರುದ್ಧ ಸೇವಾ ನ್ಯೂನ್ಯತೆ ಕುರಿತು ಸಲ್ಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ಆದೇಶಿಸಿದೆ.
ದೂರುದಾರರು 10 ವರ್ಷಗಳಿಂದ 3ನೇ ಎದುರುದಾರರಲ್ಲಿ ಶೇರುದಾರರಾಗಿದ್ದು, 1 ಮತ್ತು 2ನೇ ಎದುರುದಾರರು 2020-2021 ನೇ ಸಾಲಿಗೆ ರೂ.7500/-ಗಳನ್ನು ಮತ್ತು 2021-22ನೇ ಸಾಲಿಗೆ ರೂ.15,000/-ಗಳ ಪಾಲಿಸಿ ಪ್ರಿಮಿಯಂ ಹಣವನ್ನು 3ನೇ ಎದುರುದಾರರಿಂದ ಪಡೆದು ಗುಂಪು ವಿಮೆ ಪಾಲಿಸಿಗಳನ್ನು ನೀಡಿರುತ್ತಾರೆ.
ದೂರುದಾರರು ದಿ:01.02.2023 ರಂದು ವೈದ್ಯಕೀಯ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು ದಿ:03.02.203ರಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುತ್ತಾರೆ. ತದನಂತರ ದೂರುದಾರರು 3ನೇ ಎದುರುದಾರರ ಬಳಿ ವೈದ್ಯಕೀಯ ಚಿಕಿತ್ಸೆಗೆ ಖರ್ಚಾದ ಮೊತ್ತ ರೂ.3,50,000/-ಗಳನ್ನು ಮರುಪಾವತಿಸಿಲು ಕೋರಿ ಎಲ್ಲಾ ದಾಖಲಾತಿಗಳನ್ನು ನೀಡಿರುತ್ತಾರೆ. ಆಗ 3ನೇ ಎದುರುದಾರರು ಆದಷ್ಟು ಬೇಗ ವೈದ್ಯಕೀಯ ವೆಚ್ಚವನ್ನು ಮರುಪಾವತಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿರುತ್ತಾರೆ. ಕೆಲವು ದಿನಗಳ ನಂತರ ದೂರುದಾರರು 3ನೇ ಎದುರುದಾರರ ಬಳಿ ವಿಚಾರಿಸಿ, ಇನ್ನೂ ವೈದ್ಯಕೀಯ ವೆಚ್ಚ ಪಾವತಿಸಲು ಕ್ರಮ ಕೈಗೊಳ್ಳದಿರುವುದರಿಂದ 1 ರಿಂದ 3ನೇ ಎದುರುದಾರರಿಗೆ ನೋಟಿಸ್ ನೀಡಿರುತ್ತಾರೆ. 2ನೇ ಎದುರುದಾರರು ನೋಟಿಸಿಗೆ ಉತ್ತರಿಸಿ ವೈದ್ಯಕೀಯ ಚಿಕಿತ್ಸೆ ವಿವರವನ್ನು ಮತ್ತು ಮೂಲ ದಾಖಲಾತಿಗಳನ್ನು ಸಲ್ಲಿಸಲು ತಿಳಿಸಿರುತ್ತಾರೆ. ಆಗ ದೂರುದಾರರು ಮತ್ತೆ 3ನೇ ಎದುರುದಾರರ ಬಳಿ ಹೋಗಿ ವಿಚಾರಿಸಿದಾಗ, ದಾಖಲಾತಿಗಳನ್ನು ಈಗಾಗಲೇ ಕಳುಹಿಸಲಾಗಿದೆ ಎಂದು ತಿಳಿಸಿರುತ್ತಾರೆ.
ದೂರುದಾರರು 3ನೇ ಎದುರುದಾರರ ಬಳಿ ಕ್ಲೇಂ ಅನ್ನು ಬೇಗನೆ ಇತ್ಯರ್ಥಗೊಳಿಸಿಕೊಡಲು ಕೋರಿರುತ್ತಾರೆ. ಆದರೆ ಇದುವರೆವಿಗೂ ವಿಮಾ ಹಣವನ್ನು ನೀಡದೇ ಎಲ್ಲಾ ಎದುರುದಾರರು ಸೇವಾ ನ್ಯೂನತೆಯನ್ನುಂಟು ಮಾಡಿರುತ್ತಾರೆಂದು ಆಯೋಗದ ಮುಂದೆ ದೂರನ್ನು ಸಲ್ಲಿಸಿರುತ್ತಾರೆ.
1ನೇ ಎದುರುದಾರರು ತಕರಾರನ್ನು ಸಲ್ಲಿಸಿ, 3ನೇ ಎದುರುದಾರರಿಗೆ ಗುಂಪು ವಿಮೆ ಪಾಲಿಸಿಯ 2457 ಸದಸ್ಯರಿಗೆ ದಿ:01.01.2022 ರಿಂದ 31.12.2022ರ ಅವಧಿಯವರೆಗೆ ನೀಡಿದ್ದು, 3ನೇ ಎದುರುದಾರರು ದಿ:13.12.2022ರ ನಂತರ ಪಾಲಿಸಿಯನ್ನು ನವೀಕರಿಸಲು ಕ್ರಮ ಕೈಗೊಂಡಿರುವುದಿಲ್ಲ. ಆದ್ದರಿಂದ ದೂರುದಾರರು ಕ್ಲೇಂ ಮಾಡಿರುವ ವಿಮಾ ಮೊತ್ತವನ್ನು ಪಾವತಿಸುವ ಕುರಿತು ಯಾವುದೇ ಸೇವಾನ್ಯೂನ್ಯತೆ ಎಸಗದೇ ಇರುವುದರಿಂದ ದೂರನ್ನು ತಿರಸ್ಕರಿಸಲು ಕೋರಿರುತ್ತಾರೆ.
ದೂರುದಾರರು, ಹಾಗೂ 1 ಮತ್ತು 3ನೇ ಎದುರುದಾರರು ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ದಾಖಲಾತಿಗಳನ್ನು ಪರಿಶೀಲಿಸಿ, ವಾದ-ವಿವಾದಗಳನ್ನು ಆಲಿಸಿ, ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ, 3ನೇ ಎದುರುದಾರರು ದೂರುದಾರರ ಗುಂಪು ವಿಮೆ ಸದಸ್ಯತ್ವ ಪಾಲಿಸಿಯನ್ನು ನಿಗಧಿತ ಅವಧಿಗೆ ನವೀಕರಿಸಲು ಕ್ರಮವಹಿಸದೇ ಸೇವಾ ನ್ಯೂನತೆ ಮಾಡಿರುತ್ತಾರೆ ಎಂದು ತೀರ್ಮಾನಿಸಿ, 3ನೇ ಎದುರುದಾರರು ದೂರುದಾರರಿಗೆ ವೈದ್ಯಕೀಯ ವೆಚ್ಚ ರೂ.246289/-ಗಳಿಗೆ ವಾರ್ಷಿಕ ಶೇ 9ರಷ್ಟು ಬಡ್ಡಿಯನ್ನು ಸೇರಿಸಿ, ದಿ:02.09.2203 ರಿಂದ ಈ ಆದೇಶವಾದ 45 ದಿನಗಳೊಳಗೆ ಪಾವತಿಸುವುದು, ತಪ್ಪಿದ್ದಲ್ಲಿ ವಾರ್ಷಿಕ ಶೇ. 12 ರಷ್ಟು ಬಡ್ಡಿಯನ್ನು ಸೇರಿಸಿ, ಈ ಆದೇಶವಾದ ದಿನದಿಂದ ಪೂರ್ತಿ ಹಣ ಪಾವತಿಸುವವರೆಗೆ ನೀಡತಕ್ಕದ್ದು ಹಾಗೂ ಮಾನಸಿಕ ಹಿಂಸೆಗೆ ಪರಿಹಾರವಾಗಿ ಮತ್ತು ದೂರಿನ ಖರ್ಚು ವೆಚ್ಚಕ್ಕಾಗಿ ರೂ.30,000/- ಗಳನ್ನು ಈ ಆದೇಶವಾದ 45 ದಿನಗಳ ಒಳಗಾಗಿ ಪಾವತಿಸುವುದು. ತಪ್ಪಿದ್ದಲ್ಲಿ ವಾರ್ಷಿಕ ಶೇ. 12g Àಂತೆ ಬಡ್ಡಿಯನ್ನು ಸೇರಿಸಿ, ಈ ಆದೇಶವಾದ ದಿನದಿಂದ ಪೂರ್ತಿ ಹಣ ಪಾವತಿಸುವವರೆಗೆ ನೀಡತಕ್ಕದೆಂದು ಹಾಗೂ 1 ಮತ್ತು 2ನೇ ಎದುರುದಾರರ ವಿರುದ್ಧದ ದೂರನ್ನು ವಜಾಗೊಳಿಸಿರುವುದಾಗಿ ಆಯೋಗದ ಅಧ್ಯಕ್ಷರಾದ ಟಿ. ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ ಯೋಗಾನಂದ ಭಾಂಡ್ಯರವರನ್ನು ಒಳಗೊಂಡ ಪೀಠ ದಿ:17/07/2025 ರಂದು ಆದೇಶಿಸಿದೆ.

Share This Article
error: Content is protected !!
";