Ad image

ರಾಷ್ಟ್ರಧ್ವಜ ಸಂಹಿತೆಯಂತೆ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣಕ್ಕೆ ಸೂಚನೆ. ಜಿಲ್ಲಾಡಳಿತದಿಂದ ಡಾ.ಪುನೀತ್ ರಾಜಕುಮಾರ್ ಕ್ರೀಡಾಂಗಣದಲ್ಲಿ ರಾಷ್ಟ್ರಧ್ವಜಾರೋಹಣ.

Vijayanagara Vani
ರಾಷ್ಟ್ರಧ್ವಜ ಸಂಹಿತೆಯಂತೆ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣಕ್ಕೆ ಸೂಚನೆ. ಜಿಲ್ಲಾಡಳಿತದಿಂದ ಡಾ.ಪುನೀತ್ ರಾಜಕುಮಾರ್ ಕ್ರೀಡಾಂಗಣದಲ್ಲಿ ರಾಷ್ಟ್ರಧ್ವಜಾರೋಹಣ.
ವಿಜಯನಗರ(ಹೊಸಪೇಟೆ), ಜು.25 : ಆಗಷ್ಟ್ 15 ರಂದು ನಡೆಯುವ 79 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಾಷ್ಟ್ರಧ್ವಜ ಸಂಹಿತೆಯನ್ನು ಪಾಲನೆ ಮಾಡುವ ಮೂಲಕ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜು, ಕಚೇರಿಗಳಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸುವಂತೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ 79 ನೇ ಸ್ವಾತಂತ್ರ್ಯ ದಿನಾಚರಣೆ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಗುರುವಾರ ಅವರು ಮಾತನಾಡಿದರು. ಧ್ವಜಾರೋಹಣ ವೇಳೆಯಲ್ಲಿ ಯಾವುದೇ ಅವಘಡಗಳು ನಡೆಯದಂತೆ ನಿಗಾವಹಿಸಿ ರಾಷ್ಟ್ರಧ್ವಜ ಸಂಹಿತೆ ಪಾಲನೆ ಕಡ್ಡಾಯವಾಗಿ ಮಾಡಬೇಕು ಎಂದರು.
ಜಿಲ್ಲಾಡಳಿತದಿಂದ ಡಾ.ಪುನೀತ್ ರಾಜಕುಮಾರ್ ಕ್ರೀಡಾಂಗಣದಲ್ಲಿ ರಾಷ್ಟ್ರಧ್ವಜಾರೋಹಣಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಸೂಚಿಸಿ ಆಗಸ್ಟ್ 15 ರಂದು ಬೆಳಗ್ಗೆ 8 ಗಂಟೆಗೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಹಾಗೂ ಅಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ರಾಷ್ಟ್ರಧ್ವಜಾರೋಹಣ ನೆರವೇರಲಿದೆ.
ಸ್ವಾತಂತ್ರೋತ್ಸವ ಆಚರಣೆ ಹಿನ್ನಲೆಯಲ್ಲಿ ರಚಿಸಲ್ಪಟ್ಟ ವಿವಿಧ ಉಪಸಮಿತಿಗಳು ತಮಗೆ ವಹಿಸಲಾದ ಜವಾಬ್ದಾರಿಗಳನ್ನು ತಪ್ಪದೇ ನಿರ್ವಹಿಸಬೇಕು. ಯಾವುದೇ ನಿಯಮ ಉಲ್ಲಂಘನೆ ಆಗದಂತೆ ಹಾಗೂ ಸರ್ಕಾರದ ಶಿಷ್ಟಾಚಾರ ಪಾಲನೆಯೊಂದಿಗೆ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಹಾಗೂ ಅರ್ಥಪೂರ್ಣವಾಗಿ ಆಯೋಜನೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು ತಮ್ಮ ಸಿಬ್ಬಂದಿಗಳೊಂದಿಗೆ ಕಡ್ಡಾಯವಾಗಿ ಧ್ವಜಾರೋಹಣ ಕಾರ್ಯಕ್ರಮಕ್ಕೆ ಹಾಜರಾಗಬೇಕು. ದಿನಾಚರಣೆ ಅಂಗವಾಗಿ ನಡೆಯುವ ಪಥಸಂಚಲನವು ಶಿಸ್ತುಬದ್ಧ ಮತ್ತು ಅಚ್ಚುಕಟ್ಟಾಗಿರಬೇಕು. ಇದಕ್ಕಾಗಿ ಸಂಬಂಧಿಸಿದ ತಂಡಗಳಿಗೆ ಅಗತ್ಯ ಪೂರ್ವಭಾವಿ ತರಬೇತಿ ನೀಡಬೇಕು. ಕ್ರೀಡಾಂಗಣದಲ್ಲಿ ಆರೋಗ್ಯ ಇಲಾಖೆಯಿಂದ ತುರ್ತು ಪರಿಸ್ಥಿತಿ ನಿರ್ವಹಣೆಗಾಗಿ ಅಗತ್ಯ ಸಿಬ್ಬಂದಿಯೊಂದಿಗೆ ಅಂಬ್ಯುಲೆನ್ಸ್, ಅಗ್ನಿಶಾಮಕ ಇಲಾಖೆಯಿಂದ ಅಗ್ನಿಶಾಮಕ ವಾಹನಗಳನ್ನು ಕ್ರೀಡಾಂಗಣದಲ್ಲಿ ಕಾಯ್ದಿರಿಸಬೇಕು. ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬಾರದು. ಬೆಳಗಿನ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ಅಚ್ಚುಕಟ್ಟಾಗಿ ದೇಶಭಕ್ತಿ ಸಾರುವ ಆಕರ್ಷಕ ಮೂರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲು ತಿಳಿಸಿ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸುವಂತೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಕ್ರಮ ವಹಿಸಬೇಕೆಂದು ತಿಳಿಸಿದರು.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ, ಸಹಾಯಕ ಆಯುಕ್ತರಾದ ವಿವೇಕಾನಂದ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

Share This Article
error: Content is protected !!
";