ಧಾರವಾಡ ಜು.31: ಹುಬ್ಬಳ್ಳಿಯ ಅಕ್ಷಯ ಕಾಲೋನಿಯ ನಿವಾಸಿ ಕುಮಾರಿ ಯಶಸ್ವಿ ನಾಯ್ಕ ಇವರು ಎದುರುದಾರರ ಕಂಪನಿಯಿಂದ ದಿನಾಂಕ:07.06.2023 ರಂದು ಹೇರ್ ರಿಮೂವಲ್ ಮಷಿನನ್ನು ರೂ: 8,749/- ಗಳನ್ನು ಯುಪಿಐ ಮುಖಾಂತರ ಪಾವತಿಸಿದ್ದರು. ಮಷಿನ್ ಒಂದು ವರ್ಷದ ವಾರಂಟಿಯನ್ನು ಹೊಂದಿತ್ತು. ಖರೀದಿಸಿದ ಕೆಲವೇ ತಿಂಗಳುಗಳಲ್ಲಿ ಅದರಕಾರ್ಯ ಸ್ಥಗಿತವಾಯಿತು. ದೂರುದಾರರು ಎದುರುದಾರರಿಗೆ ವಿಷಯ ತಿಳಿಸಿದಾಗ ಅವರು ಬೇರೆ ಮಷಿನನ್ನು ದೂರುದಾರರಿಗೆ ಕಳುಹಿಸಿದರು, ಆ ಮಷಿನು ಸಹ ಖರೀದಿಸಿದ ಕೆಲವೇ ತಿಂಗಳಗಳಲ್ಲಿ ಕಾರ್ಯ ಸ್ಥಗಿತಗೊಳಿಸಿತ್ತು. ಎದುರುದಾರರಿಗೆ ದೂರುದಾರರು ತಿಳಿಸಿದಾಗ ಅವರು ಮಷಿನಿನ ವಾರಂಟಿ ಅವಧಿ ಮುಗಿದಿರುವುದರಿಂದ ಅದರ ಬದಲಿಗೆ ಹೊಸ ಮಷಿನನ್ನು ಕೊಡಲು ನಿರಾಕರಿಸಿದರು. ಸಾಕಷ್ಟು ಸಲ ಎದುರುದಾರರಿಗೆ ವಿನಂತಿಸಿದ ದೂರುದಾರರು ಎದುರುದಾರರ ಇಂತಹ ನಡವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ: 07/03/2025 ರಂದು ದೂರನ್ನು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಸದಸ್ಯರು, ದೂರುದಾರರು ಎದುರುದಾರರಿಂದ ಹೇರ್ ರಿಮೂವಲ್ ಮಷಿನನ್ನು ಖರೀದಿಸಿರುವದು ದಾಖಲೆಗಳ ಮುಖಾಂತರ ಕಂಡು ಬಂದಿರುತ್ತದೆ. ಅಲ್ಲದೇ ಮೊದಲನೇ ಮಷಿನು ಸರಿಯಾಗಿ ಕೆಲಸ ಮಾಡದೇ ಇದ್ದ ಕಾರಣ ಎದುರುದಾರರು ಬೇರೆ ಮಷಿನು ಕಳುಹಿಸಿರುತ್ತಾರೆ, ಅದು ಕೂಡ ಸರಿಯಾಗಿ ಕೆಲಸ ಮಾಡದೆ ಇದ್ದ ಕಾರಣ ಹಾಗೂ ಇನ್ನು ವಾರಂಟಿ ಅವಧಿಯಲ್ಲಿದ್ದರು ಎದುರುದಾರರು ಅದನ್ನು ಸರಿಪಡಿಸಿ ಅಥವಾ ಬೇರೆ ಮಷಿನನ್ನು ಕೊಡಲು ನಿರಾಕರಿಸಿರುತ್ತಾರೆ. ದೂರುದಾರರು ಮಷಿನನ್ನು ಖರೀದಿಸಿದ ಉದ್ದೇಶ ಈಡೇರದೆ ಇದ್ದ ಕಾರಣ ದೂರುದಾರರಿಗೆ ಸೇವಾ ನ್ಯೂನ್ಯತೆ ಎಸಗಿರುವುದು ಕಂಡು ಬಂದಿರುತ್ತದೆ. ಅಲ್ಲದೇ ಎದುರುದಾರರ ಇಂತಹ ನಡವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆಯಡಿ ಅನುಚಿತ ವ್ಯಾಪಾರ ಪದ್ಧತಿ ಮಾಡಿದ್ದಾರೆಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ಈ ಎಲ್ಲ ಸಂಗತಿಗಳನ್ನು ಆಧರಿಸಿದ ಆಯೋಗ ಎದುರುದಾರರು ದೂರುದಾರರು ಪಾವತಿಸಿದ ಮಷಿನ್ ಮೊತ್ತ ರೂ:8,749 ಶೇಕಡಾ 8 ರಂತೆ ಬಡ್ಡಿ ಲೆಕ್ಕ ಹಾಕಿ ಕೊಡುವಂತೆ ಆದೇಶಸಿದೆ. ಅಲ್ಲದೇ ದೂರುದಾರರಿಗೆ ಆಗಿರುವ ಅನಾನುಕೂಲ, ತೊಂದರೆ ಹಾಗೂ ಮಾನಸಿಕ ಹಿಂಸೆಗಾಗಿ ರೂ.25,000 ಪರಿಹಾರಮತ್ತು ರೂ.5,000 ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ERIKKA India, Ghaziadad/Noida ಗೆ ನಿರ್ದೇಶಿಸಿದೆ.