Ad image

ಟೀಪುಡಿಗೆ ಹೆಚ್ಚಿನ ದರ ಪಡೆದು ಸೇವಾನ್ಯೂನ್ಯತೆ : ಪರಿಹಾರ ನೀಡಲು ಸೂಚನೆ

Vijayanagara Vani
ಶಿವಮೊಗ್ಗ.ಆ.06: ಟೀಪುಡಿಗೆ ಹೆಚ್ಚಿನ ದರವನ್ನು ಪಡೆದು ಸಾಗಿಸಿದ ಎದುರುದಾರ ಸಂಸ್ಥೆಗಳ ವಿರುದ್ದ ದಾಖಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಅರ್ಜಿದಾರರಿಗೆ ಸೂಕ್ತ ಪರಿಹಾರ ನೀಡುವಂತೆ ಆದೇಶಿಸಿದೆ.
ಮೆಹಬೂಬ್ ಮುದಸಿರ್ ಖಾನ್ ಸಿ.ಎ @ ಎಂ.ಎ.ಖಾನ್ ಶಿವಮೊಗ್ಗ ಇವರು ಸಿಇಓ ಫ್ಲಿಪ್‌ಕಾರ್ಟ್ ಇಂಟರ್‌ನೆಟ್ ಪ್ರೆöÊ.ಲಿ, ಬೆಂಗಳೂರು, ಹಿರಿಯ ವ್ಯವಸ್ಥಾಪಕರು ಫ್ಲಿಪ್‌ಕಾರ್ಟ್ ಇಂಟರ್‌ನೆಟ್ ಪ್ರೆöÊ.ಲಿ, ಬೆಂಗಳೂರು ಹಾಗೂ ವಿಜಿ ಫುಡ್ ಮತ್ತು ಕೇಟರ್ಸ್ ನವದೆಹಲಿ ಇವರ ವಿರುದ್ದ ದೂರನ್ನು ಸಲ್ಲಿಸಿ, ದೂರುದಾರರು ದಿ: 04-07-2024 ರಂದು 01 ಕೆ ಜಿ ತಾಜ್ ಮಹಲ್ ಟೀಪುಡಿಯನ್ನು ಎದುರುದಾರರಿಂದ ತರಿಸಲು ಆನ್‌ಲೈನ್‌ನಲ್ಲಿ ಬುಕ್ ಮಾಡಿದ್ದು, ಅದರ ಬೆಲೆ ರೂ.849 ಮತ್ತು ಸಾಗಣೆ ವೆಚ್ಚವಾಗಿ ರೂ.41 ಗಳನ್ನು ಒಟ್ಟು ರೂ.890 ಗಳನ್ನು ಎದುರುದಾರರಿಂದ ಪಡೆದು 01 ಕೆ ಜಿ ಟೀಪುಡಿಯ ಪೊಟ್ಟಣವನ್ನು ಕಳುಹಿಸಿರುತ್ತಾರೆ. ಆದರೆ ಟೀಪುಡಿಯ ಪೊಟ್ಟಣದ ಮೇಲೆ ನಮೂದಿಸಿರುವ ಗರಿಷ್ಟ ಮಾರಾಟ ಬೆಲೆ ರೂ.825/- ಗಳಾಗಿದ್ದು ದೂರುದಾರರಿಂದ ರೂ.849 ಗಳನ್ನು ಪಡೆದಿರುತ್ತಾರೆ.
ಈ ವಿಷಯವನ್ನು ಎದುರುದಾರರಿಗೆ ಇ-ಮೇಲ್ ಮೂಲಕ ತಿಳಿಸಿದ್ದು 1 ಮತ್ತು 2ನೇ ಎದುರುದಾರರು ಸದರಿ ಸಮಸ್ಯೆಯನ್ನು ಬಗೆಹರಿಸದ ಕಾರಣ ಎದುರುದಾರರಿಗೆ ಗರಿಷ್ಟ ಮಾರಾಟ ಬೆಲೆಗಿಂತ ಹೆಚ್ಚಿನ ಮೊತ್ತವನ್ನು ಪಡೆದಿದ್ದು ಉಳಿದ ಮೊತ್ತ ಹಿಂದಿರುಗಿಸಲು ತಿಳಿಸಿ ಪತ್ರ ಬರೆದಿರುತ್ತಾರೆ. ಈ ಪತ್ರಗಳು ಎದುರುದಾರರಿಗೆ ತಲುಪಿದ್ದರೂ ಸಹ ಯಾವುದೇ ಉತ್ತರವನ್ನು ನೀಡಿರುವುದಿಲ್ಲ. ಹಾಗೂ ಸಮಸ್ಯೆಯನ್ನು ಬಗೆಹರಿಸದೇ ಸೇವಾನ್ಯೂನ್ಯತೆ ಎಸಗಿದ್ದಾರೆಂದು ದೂರುನ್ನು ಸಲ್ಲಿಸಿರುತ್ತಾರೆ.
1 ಮತ್ತು 2ನೇ ಎದುರುದಾರರು ತಕರಾರನ್ನು ಸಲ್ಲಿಸಿ, ದೂರುದಾರರು ಬುಕ್ ಮಾಡಿರುವ ಟೀಪುಡಿ ಪೊಟ್ಟಣವು 3ನೇ ಎದುರುದಾರರು ಒದಗಿಸಿದ್ದು, 1 ಮತ್ತು 2ನೇ ಎದುರುದಾರರು ಸಾಗಣೆ ಮಾಡುವವರಾಗಿದ್ದು ಹಾಗೂ ಗರಿಷ್ಟ ಬೆಲೆಗಿಂತ ಹೆಚ್ಚಿನ ಮೊತ್ತ ಪಡೆದಿರುವವರು 3ನೇ ಎದುರುದಾರರು ಆದ್ದರಿಂದ 1 ಮತ್ತು ನೇ ಎದುರುದಾರರು ಯಾವುದೇ ಸೇವಾ ನ್ಯೂನ್ಯತೆ ಮಾಡಿಲ್ಲದಿರುವುದರಿಂದ ತಮ್ಮ ವಿರುದ್ದದ ದೂರನ್ನು ವಜಾ ಮಾಡಲು ಕೋರಿರುತ್ತಾರೆ.
ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವಂತಹ ಪ್ರಮಾಣ ಪತ್ರ, ದಾಖಲಾತಿಗಳನ್ನು ಪರಿಶೀಲಿಸಿ, ಉಭಯ ಪಕ್ಷಗಾರರ ವಾದ-ವಿವಾದಗಳನ್ನು ಆಲಿಸಿ, ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶಗಳನ್ವಯ ಎದುರುದಾರರು ಸೇವಾ ನ್ಯೂನ್ಯತೆಯನ್ನು ಎಸಗಿರುತ್ತಾರೆಂದು ತೀರ್ಮಾನಿಸಿ ದೂರನ್ನು ಪುರಸ್ಕರಿಸಿ ದೂರುದಾರರು ಸದರಿ ಟೀಪುಡಿ ಪೊಟ್ಟಣವನ್ನು ಎದುರುದಾರರಿಗೆ ಹಿಂದಿರುಗಿಸಲು ಮತ್ತು 1 ರಿಂದ 3 ನೇ ಎದುರುದಾರರು ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ದೂರುದಾರರಿಗೆ ರೂ.890/- ಗಳನ್ನು ವಾರ್ಷಿಕ ಶೇ.9 ರಂತೆ ಬಡ್ಡಿಯನ್ನು ಸೇರಿಸಿ ದಿ: 19-09-2024 ರಿಂದ ಈ ಆದೇಶವಾದ 45 ದಿನಗಳ ಒಳಗಾಗಿ ಪಾವತಿಸಬೇಕು. ತಪ್ಪಿದಲ್ಲಿ ವಾರ್ಷಿಕ ಶೇ.12 ರಂತೆ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ಪಾವತಿಸುವವರೆಗೆ ನೀಡತಕ್ಕದ್ದು. ಹಾಗೂ 1 ರಿಂದ 3ನೇ ಎದುರುದಾರರು ರೂ.25000/- ಗಳನ್ನು ಮಾನಸಿಕ ಹಿಂಸೆಗೆ ಮತ್ತು ದೂರಿನ ಖರ್ಚು ವೆಚ್ಚಗಳಿಗಾಗಿ ಈ ಆದೇಶವಾದ 45 ದಿನಗಳ ಒಳಗಾಗಿ ಪಾವತಿಸುವುದು. ತಪ್ಪಿದಲ್ಲಿ ಸದರಿ ಮೊತ್ತಕ್ಕೆ ವಾರ್ಷಿಕ ಶೇ.12 ರಷ್ಟು ಬಡ್ಡಿಯನ್ನು ಸೇರಿಸಿ ಪಾವತಿಸುವಂತೆ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಜು.29 ರಂದು ಆದೇಶಿಸಿದೆ.

Share This Article
error: Content is protected !!
";