ಲಕ್ಷ್ಮೀದೇವಿಯು ಶ್ರೀಮನ್ಮಹಾವಿಷ್ಣುವಿನ ಪತ್ನಿ.
ಬೃಗು ಮಹರ್ಷಿಗಳ ಮಗಳಾದ ಆಕೆ ಅಸುರರು ಮತ್ತು ದೇವತೆಗಳು ಅಮೃತಕ್ಕಾಗಿ ಹಣಾಹಣಿ ಮಾಡುವಾಗ ಅವರವರಲ್ಲಿ ಜಗಳವು ಪ್ರಾರಂಭವಾಗಿ ಅಂತಿಮವಾಗಿ ತ್ರಿಮೂರ್ತಿಗಳ ಆದೇಶದಂತೆ ವಿಂದ್ಯಗಿರಿಗೆ ವಾಸುಕಿಯನ್ನು ಕಟ್ಟಿ ಕ್ಷೀರಸಾಗರವನ್ನು ಮಂಥನ ಮಾಡಲು ಆರಂಭಿಸಿದರು. ಹಾಗೆ ಮಂಥನ ಮಾಡಿದಾಗ ಬಹಳ ಕಾಲದ ನಂತರ ಒಂದೊಂದೇ ವಸ್ತುಗಳು ಮೇಲೆ ಬರಲಾರಂಭಿಸಿದವು. ಒಂದು ಬಾರಿ ತಾಯಿ ಲಕ್ಷ್ಮಿ ದೇವಿಯ ಕೂಡ ಹಾಲಿನ ಕಡಲಿಂದ ಜನಿಸಿ ಬಂದಳು.
ಹಾಗೆ ಹಾಲಿನ ಕಡಲಿಂದ ಜನಿಸಿ ಬಂದು ಲಕ್ಷ್ಮಿ ದೇವಿಯನ್ನು ಶ್ರೀಮನ ಮಹಾವಿಷ್ಣುವು ಕನ್ನಡ ಧರ್ಮಪತ್ನಿಯಾಗಿ ಸ್ವೀಕರಿಸಿದನು. ಸ್ಥಿತಿಕರ್ತನಾದ ಮಹಾವಿಷ್ಣುವಿನ ಪತ್ನಿಯಾದ ಮಹಾಲಕ್ಷ್ಮಿಯು
ಸಿಡಿ ಸಂಪತ್ತು ಹಣ ಐಶ್ವರ್ಯ ಒಡವೆಗಳ ಅಧಿದೇವತೆಯಾಗಿ ನಿಂತಳು.
ಆಕೆಯನ್ನು ಪೂಜಿಸಿದ ಭಕ್ತರಿಗೆ ತನ್ನ ವರದ ಹಸ್ತದಿಂದ
ಅನುಗ್ರಹಿಸುವ ಮೂಲಕ ಅವರ ಕಷ್ಟ ಕಾರ್ಪಣ್ಯಗಳನ್ನು ಬಡತನವನ್ನು ಮಹಾಲಕ್ಷ್ಮಿ ತಾಯಿಯು ದೂರ ಮಾಡುತ್ತಾಳೆ ಎಂಬ ಪ್ರತೀತಿ ನಮ್ಮ
ಜನಮಾನಸದಲ್ಲಿ ಇದೆ..
ದೀಪವು ಇರುವಲ್ಲಿ ಲಕ್ಷ್ಮಿ ದೇವಿಯು ಸದಾ ನೆಲೆಸಿರುತ್ತಾಳೆ ಎಂಬ ಆಖ್ಯಾಯಿಕೆಯುಂಟು. ಆದ್ದರಿಂದ ಸದಾ ಮನೆಯಲ್ಲಿ ಒಂದು ದೀಪವನ್ನು ಹಚ್ಚಿಡಬೇಕು ಅದು ಧನಾತ್ಮಕತೆಯನ್ನು ಸೂಸುತ್ತದೆ.
ಪ್ರತಿ ಶುಕ್ರವಾರದ ದಿನ ನಮ್ಮ ಹೆಣ್ಣು ಮಕ್ಕಳು ವಿಶೇಷವಾಗಿ ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ, ದೀಪಾವಳಿ ಹಬ್ಬ ಕೂಡ ಲಕ್ಷ್ಮಿ ದೇವಿಯ ಹೆಸರಿನಲ್ಲಿ ಆಚರಿಸಲ್ಪಡುತ್ತದೆ. ಹಿಂದೂಗಳ ಪಾಲಿಗೆ ಅತ್ಯಂತ ಪವಿತ್ರವಾದ ಮಾಸವಾದ ಶ್ರಾವಣದಲ್ಲಿ ಪ್ರತಿ ಶುಕ್ರವಾರದ ದಿನ ಸಂಪತ್ ಶುಕ್ರವಾರ ವ್ರತ ಆಚರಿಸುತ್ತಾರೆ.
ಆದರೆ ಸಾಮಾನ್ಯವಾಗಿ ಶ್ರಾವಣ ಮಾಸದ ಎರಡನೇ ಶುಕ್ರವಾರ ಅದಕ್ಕೂ ಹೆಚ್ಚಾಗಿ ಶ್ರಾವಣದ ನೂಲ ಹುಣ್ಣಿಮೆಗೆ ಮುಂಚೆ ಬರುವ ಶುಕ್ರವಾರದ ದಿನ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸುತ್ತಾರೆ.
ಹೆಸರೇ ಹೇಳುವಂತೆ ಮಹಾಲಕ್ಷ್ಮಿ ದೇವಿಯನ್ನು ಭಕ್ತರು ತಮ್ಮ ಮನೋಭೀಷ್ಟಗಳನ್ನು ಪೂರೈಸಲು ಕೇಳಿಕೊಳ್ಳುವ, ಮತ್ತು ತನ್ನ ಭಕ್ತರಿಗೆ ಅವರ ಬೇಡಿಕೆಯನ್ನು ಪೂರೈಸುವ ವರವನ್ನು ನೀಡುವ ಮಹಾಲಕ್ಷ್ಮಿ ದೇವಿಯನ್ನು ಸಡಗರ, ಸಂಭ್ರಮ ಮತ್ತು ಭಕ್ತಿ ಭಾವದಿಂದ ಪೂಜಿಸುವ ಹಬ್ಬವೇ ವರಮಹಾಲಕ್ಷ್ಮಿ ಹಬ್ಬ.
ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಈ ದಿನ ವಿಶೇಷವಾಗಿ ವರಮಹಾಲಕ್ಷ್ಮಿ ದೇವಿಯ ಪೂಜೆ ಆರಾಧನೆಗಳು ನಡೆಯುತ್ತವೆ.
ನವ ವಿವಾಹಿತ ಸ್ತ್ರೀಯು ತನ್ನ ಮದುವೆಯಾದ ನಂತರ 9 ಇಲ್ಲವೇ 11 ವರ್ಷಗಳವರೆಗೆ ವರಮಹಾಲಕ್ಷ್ಮಿ ವ್ರತವನ್ನು ಆಚರಿಸುತ್ತಾರೆ.
ಸಂಸ್ಕೃತ ಮೂಲದ ಲಕ್ಷ್ಮಿ ಎಂಬ ಪದದ ಅರ್ಥ ಸಂಪತ್ತು ಮತ್ತು ಸಮೃದ್ಧಿ. ಲಕ್ಷ್ಮೀದೇವಿಯು ನಾಲ್ಕು ಕೈಗಳನ್ನು ಹೊಂದಿದ್ದು ಅವುಗಳು ಚತುರ್ವಿಧ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ಅಂಶಗಳನ್ನು ಪ್ರತಿನಿಧಿಸುತ್ತವೆ.
ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಆರ್ಥಿಕ ಸಮೃದ್ಧಿ, ಯಶಸ್ಸು ಸಿಗುತ್ತದೆ. ಆದ್ದರಿಂದಲೇ ಈ ದಿನವನ್ನು ವರಮಹಾಲಕ್ಷ್ಮಿ ಹಬ್ಬವಾಗಿ ಆ ಆಚರಿಸುತ್ತಾರೆ. ಶಿವನು ಪಾರ್ವತಿ ದೇವಿಗೆ ವರಮಹಾಲಕ್ಷ್ಮಿ ಹಬ್ಬದ ಆಚರಣೆ ಮಾಡಲು ಹೇಳಿದ ಎಂಬ ಪೌರಾಣಿಕ ಇತಿಹಾಸವು ಇದೆ.ಧನ ಧಾನ್ಯ ಸೌಭಾಗ್ಯಗಳ ಪ್ರಾಪ್ತಿಗಾಗಿ ಹೆಂಗಳೆಯರು ಈ ವ್ರತವನ್ನು ಆಚರಿಸುತ್ತಾರೆ.
ಲಕ್ಷ್ಮಿ ದೇವಿಯು ಅಷ್ಟರೂಪಗಳನ್ನು ಹೊಂದಿದ್ದು ಅವುಗಳು ಆದಿ ಲಕ್ಷ್ಮಿ, ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ಗಜಲಕ್ಷ್ಮಿ, ಸಂತಾನ ಲಕ್ಷ್ಮಿ, ವೀರಲಕ್ಷ್ಮಿ, ವಿಜಯಲಕ್ಷ್ಮಿ ಮತ್ತು ವಿದ್ಯಾಲಕ್ಷ್ಮಿ ಎಂದು ಗುರುತಿಸಲ್ಪಟ್ಟಿವೆ.
ಹಬ್ಬದ ಹಿಂದಿನ ದಿನವೇ ಹಬ್ಬಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ತಂದಿಟ್ಟುಕೊಂಡರೆ ಹಬ್ಬದ ದಿನ ಮುಂಜಾನೆ ಮನೆಯನ್ನು ಸಾರಿಸಿ, ಗುಡಿಸಿ, ವಿಧವಿಧದ ರಂಗೋಲಿಗಳಿಂದ ಅಂಗಳವನ್ನು ಅಲಂಕರಿಸುತ್ತಾರೆ. ಬಾಗಿಲಿಗೆ ತಳಿರು ತೋರಣಗಳನ್ನು ಕಟ್ಟಿ ಹೂವಿನ ಅಲಂಕಾರವನ್ನು ಮಾಡಿ ಸಿಂಗರಿಸುತ್ತಾರೆ.
ಹಬ್ಬದ ಪೂಜಾ ವಿಧಾನ. ನಿಶ್ಚಿತ ದಿಕ್ಕಿನಲ್ಲಿ ಸಣ್ಣ ಟೀಪಾಯಿ ಇಲ್ಲವೇ ದೊಡ್ಡ ಊಟದ ಮೇಜಿನ ಮೇಲೆ ಬಾಳೆ ಎಲೆಯ ಮೇಲೆ ಅಕ್ಕಿಯನ್ನು ಹಾಕಿ ಅದಕ್ಕೆ ಸ್ವಸ್ತಿಕದ ಚಿಹ್ನೆಯನ್ನು ಬಿಡಿಸಬೇಕು. ನಂತರ ಅದರ ಮೇಲೆ ನೀರು ತುಂಬಿದ ಕಲಶವನ್ನು ಇಟ್ಟು ಅದಕ್ಕೆ ನೀರು ಕುಂಕುಮ ಅರಿಶಿಣ ಮತ್ತು ಹೂವು, ಅಕ್ಷತೆಯನ್ನು ಹಾಕಿ ಆ ಕಲಶದಲ್ಲಿ ಗಂಗಾಮಾತೆಯನ್ನು ಆಹ್ವಾನಿಸಬೇಕು. ಕೆಲವರು ಪುಟ್ಟ ಹವಳ ಇಲ್ಲವೇ ಮುತ್ತಿನ ಆಭರಣವನ್ನು ಅದರಲ್ಲಿ ಹಾಕುತ್ತಾರೆ. ನಂತರ ಅದರಲ್ಲಿ ಮಾವಿನ ಇಲ್ಲವೇ ವೀಳ್ಯದ 5 ಇಲ್ಲವೇ 9 ಎಲೆಗಳನ್ನು ಒಳಮುಖವಾಗಿ ಜೋಡಿಸಿ ಅದರ ಮೇಲೆ ಐದೆಳೆಯ ದಾರವನ್ನು ಸುತ್ತಿದ ಸಿಪ್ಪೆಯ ತೆಂಗಿನಕಾಯಿಯನ್ನು ಕೂರಿಸಬೇಕು. ಅದಕ್ಕೆ ಲಕ್ಷ್ಮಿಯ ಮುಖವಾಡವನ್ನು ಕೂಡ ಕೂರಿಸಬಹುದು. ಲಕ್ಷ್ಮಿಯ ಮುಖವಾಡಕ್ಕೆ ಮೂಗುತಿ, ಕಿವಿಯೋಲೆ ಮತ್ತು ತಲೆಯ ಭಾಗದಲ್ಲಿ ದಂಡೆಯನ್ನು ಹಾಕಿ ಅಲಂಕರಿಸಬಹುದು. ದೇವಿಯ ಮುಂದೆ ಐದು ವಿಧದ ಹಣ್ಣುಗಳನ್ನು ಜೋಡಿಸಿದ ಬುಟ್ಟಿಯಲ್ಲಿ ಎಲೆ ಅಡಿಕೆ ಮತ್ತು ಉಡಿ ಬಟ್ಟಲ ( ಕೊಬ್ಬರಿ ಬಟ್ಟಲಿನಲ್ಲಿ ತುಸು ಅಕ್ಕಿ ಬೆಲ್ಲ ಅರಿಶಿಣ ಕೊಂಬು ಐದೆಳೆಯ ನೂಲಿನ ದಾರ, ಉತ್ತತ್ತಿ )ನ್ನು ಇಟ್ಟು ಅದರಲ್ಲಿ ಬೆಳ್ಳಿಯ ನಾಣ್ಯಗಳನ್ನು ಇಡುತ್ತಾರೆ. ವ್ರತವನ್ನು ಮಾಡುವ ಮುತ್ತೈದೆಯು ಗಣಪತಿ ಪೂಜೆಯಿಂದ ಆರಂಭಿಸಿ ಸಂಕಲ್ಪವನ್ನು ಮಾಡಿ ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಪುರೋಹಿತರ ಮೂಲಕ ಅಥವಾ ತಾವೇ ಖುದ್ದಾಗಿ ಶಾಸ್ತ್ರೋಕ್ತವಾಗಿ ಪೂಜೆಯನ್ನು ಮಾಡಬೇಕು. ಪೂಜೆಯ ಸಂದರ್ಭದಲ್ಲಿ ಅರಿಶಿಣದ ದಾರವನ್ನು ಒಂಬತ್ತು ಇಲ್ಲವೇ 12 ಗಂಟನ್ನು ತೆಗೆದು ಬಲಗೈಗೆ ಕಟ್ಟಿಕೊಳ್ಳಬೇಕು. ಕೆಲವರು ಅರಿಶಿನದ ದಾರಕ್ಕೆ 12 ಗಂಟುಗಳನ್ನು ಬಿಗಿದು ಪೂಜಿಸಿ ನಂತರ ತಮ್ಮ ಕೊರಳಲ್ಲಿರುವ ತಾಳಿಯಲ್ಲಿ ಸೇರಿಸಿ ಕಟ್ಟಿಕೊಳ್ಳುತ್ತಾರೆ. 5 ರಿಂದ 9 ವಿಧದ ಸಿಹಿ ತಿಂಡಿಗಳನ್ನು ನೈವೇದ್ಯಕ್ಕೆ ಮಾಡಬೇಕು. ಎಲ್ಲ ಪೂಜಾ ವಿಧಿಗಳ ನಂತರ ವರಮಹಾಲಕ್ಷ್ಮಿ ವ್ರತ ಮಹಾತ್ಮೆಯ ಚರಿತ್ರೆಯನ್ನು ಓದಬೇಕು. ಮಂಗಳಾರತಿಯನ್ನು ಮಾಡಿ ದೇವಿಗೆ ಕಡಲೆ ಬೇಳೆ ಪಾಯಸ (ಹಯಗ್ರೀವ), ಹೆಸರು ಬೇಳೆ ಪಾಯಸ, ಬೇಳೆಯ ಹೋಳಿಗೆ, ಕೋಸಂಬರಿ, ಚಿತ್ರಾನ್ನ, ಪುಳಿಯೋಗರೆ ಹುಳಿಯನ್ನ ಹೀಗೆ ಹತ್ತು ಹಲವು ವಿಧದ ನೈವೇದ್ಯಗಳನ್ನು ಮಾಡಿ ಕಾಯಿ ಒಡೆದು ಅರ್ಪಿಸಬೇಕು.
ಮುಖ್ಯವಾಗಿ ಮನೆಯ ಎಲ್ಲಾ ಸದಸ್ಯರು ಪೂಜೆಯಲ್ಲಿ ಭಾಗವಹಿಸಿ ಮಂಗಳಾರತಿಯವರೆಗೂ ನಿಂತು ಪೂಜೆಯನ್ನು ನೆರವೇರಿಸಿದರೆ ಎಲ್ಲರಿಗೂ ಸಂತೃಪ್ತಿ ತುಂಬಿದ ಭಕ್ತಿ ಭಾವ.
ನಂತರ ಮುತ್ತೈದೆಯರಿಗೆ ಉಣ ಬಡಿಸಿ ತಾವು ಕೂಡ ಭೂರಿ ಭೋಜನ ಸೇವಿಸುವ ಮನೆಯವರು ತುಸು ವಿಶ್ರಾಂತಿ ತೆಗೆದುಕೊಳ್ಳುತ್ತಾರೆ. ಸಾಯಂಕಾಲ ಸುತ್ತಮುತ್ತಲಿನ ಎಲ್ಲ ಮಹಿಳೆಯರನ್ನು ಕರೆದು ಅವರಿಗೆ ಅರಿಶಿಣ ಕುಂಕುಮ ನೀಡಿ, ಹೂವು ಕೊಟ್ಟು ಉಡಿ ತುಂಬಿ ಆರತಿ ಬೆಳಗುತ್ತಾರೆ. ಹಾಗೆಯೇ ಉಡಿ ತುಂಬಿಸಿಕೊಂಡ ಹೆಣ್ಣು ಮಕ್ಕಳು ಕೂಡ ದೇವಿಗೆ ಮಂಗಳಾರತಿ ಮತ್ತಿತರ ದೇವರ ಹಾಡುಗಳನ್ನು ಹಾಡಿ ದೇವಿಗೆ ಆರತಿಯನ್ನು ಬೆಳಗುತ್ತಾರೆ. ಸಡಗರ ಸಂಭ್ರಮದಿಂದ ವರಮಹಾಲಕ್ಷ್ಮಿ ದೇವಿಯನ್ನು ಪೂಜಿಸಿ ಆಶೀರ್ವಾದ ಮತ್ತು ಕೃಪೆ ನೀಡೆಂದು ಭಕ್ತಿಯಿಂದ ಭಜಿಸುತ್ತಾರೆ. ವ್ರತದ ನಿಯಮವಿರುವ ಮನೆಯಲ್ಲಿ ವಿವಾಹವಾದ ಮುತ್ತೈದೆಯರು ಮದುವೆಯಾದ ಮೊದಲು 9 ವರ್ಷಗಳು ಈ ವ್ರತವನ್ನು ಮಾಡಿ 9ನೇ ವರ್ಷಕ್ಕೆ ಈ ವ್ರತದ ಉದ್ಯಾಪನೆ ಮಾಡಿ ಮುತ್ತೈದೆಯರಿಗೆ ಬಾಗಿನ ನೀಡಿ ಈ ವ್ರತವನ್ನು ಸಮಾಪ್ತಗೊಳಿಸುತ್ತಾರೆ.
ಮತ್ತೆ ಕೆಲವರು ಪ್ರತಿ ವರ್ಷವೂ ವ್ರತವನ್ನು ಆಚರಿಸುತ್ತಾರೆ. ಒಟ್ಟಿನಲ್ಲಿ ಇದು ಮಹಿಳೆಯರು ಭಕ್ತಿಯ ಜೊತೆಗೆ ಉಟ್ಟು ತೊಟ್ಟು ಸಂಭ್ರಮಿಸುವ ಹಬ್ಬ. ಹಾಗೆಂದು ವರಮಹಾಲಕ್ಷ್ಮಿ ಹಬ್ಬವನ್ನು ಅದ್ದೂರಿಯಾಗಿ ಮಾತ್ರವೇ ಮಾಡಬೇಕೆಂಬ ತಪ್ಪು ಕಲ್ಪನೆ ಇದ್ದರೆ ಬಿಟ್ಟು ಬಿಡಿ.
ದೇವಿ ಸರ್ವ ಸಂತೃಪ್ತಳು. ಮನೆಯಲ್ಲಿ ಏನೂ ಇರದಿದ್ದರೂ ಪರವಾಗಿಲ್ಲ ಪುಟ್ಟ ಬಾಳೆಯ ಎಲೆಯ ಮೇಲೆ ಸ್ವಲ್ಪವೇ ಅಕ್ಕಿಯನ್ನು ಹಾಕಿ ಚೆನ್ನಾಗಿ ತೇದ ಗಂಧದಲ್ಲಿ ಅರಿಶಿಣದ ಹುಡಿಯನ್ನು ಕಲಸಿ ಅದರಿಂದ ಪುಟ್ಟಗೌರಿಯ ಮುಖವನ್ನು ಮಾಡಿ ತಮ್ಮ ಶಕ್ತ್ಯಾನುಸಾರ ಪೂಜೆ ಮಾಡಿದರೆ ಸಾಕು. ಸಾಲ ಮಾಡಿಯಾದರೂ ವರಮಹಾಲಕ್ಷ್ಮಿಯ ವ್ರತವನ್ನು ಮಾಡುತ್ತೇನೆ ಎನ್ನುವುದಾದರೆ ಅದನ್ನು ಬಹುಶಃ ದೇವಿಯು ಕೂಡ ಒಪ್ಪಳು.
ಎಷ್ಟೇ ಆಗಲಿ ಹಿಡಿ ಅವಲಕ್ಕಿಗೆ ತೃಪ್ತನಾದ ಮಹಾವಿಷ್ಣುವಿನ ಪತ್ನಿಯಲ್ಲವೇ ಆಕೆ!
ಎಲ್ಲರೂ ಅವರವರ ಅನುಕೂಲಕ್ಕೆ ತಕ್ಕಂತೆ ಮಾಡಿದರೂ ಸಾಕು. ವರಮಹಾಲಕ್ಷ್ಮಿ ಹಬ್ಬದ ದಿನ ಆಕೆಯನ್ನು ಪೂಜಿಸಿದರೆ ಅಷ್ಟಲಕ್ಷ್ಮಿಯರು ಒಲಿಯವರು ಎಂಬ ಪ್ರತೀತಿಯೂ ಇದೆ.
ಮಹಾಲಕ್ಷ್ಮಿ ಚ ವಿದ್ಮಹಿ,
ವಿಷ್ಣು ಪತ್ನಿಚ ಧೀಮಹಿ
ತನ್ನೋ ಲಕ್ಷ್ಮಿ ಪ್ರಚೋದಯಾತ್
ಎಲ್ಲರಿಗೂ ವರಮಹಾಲಕ್ಷ್ಮಿಯು ಆಯುರಾರೋಗ್ಯ, ಸುಖ, ನೆಮ್ಮದಿ, ಸಂತಸಗಳನ್ನು ದಯಪಾಲಿಸಲಿ.
ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್