Ad image

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ನ್ಯಾಯಾಧೀಶರಾದ ರೋಣ ವಾಸುದೇವ್ ಮಾಹಿತಿ 90 ದಿನಗಳ ವಿಶೇಷ ಮಧ್ಯಸ್ಥಿಕೆ ಅಭಿಯಾನ ಜಿಲ್ಲೆಯಲ್ಲಿ 1015 ಪ್ರಕರಣಗಳ ಇತ್ಯರ್ಥಕ್ಕೆ ಮಾರ್ಗದರ್ಶನ

Vijayanagara Vani
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ನ್ಯಾಯಾಧೀಶರಾದ ರೋಣ ವಾಸುದೇವ್ ಮಾಹಿತಿ 90 ದಿನಗಳ ವಿಶೇಷ ಮಧ್ಯಸ್ಥಿಕೆ ಅಭಿಯಾನ ಜಿಲ್ಲೆಯಲ್ಲಿ 1015 ಪ್ರಕರಣಗಳ ಇತ್ಯರ್ಥಕ್ಕೆ ಮಾರ್ಗದರ್ಶನ
ಚಿತ್ರದುರ್ಗ(ಕರ್ನಾಟಕ ವಾರ್ತೆ)ಆಗಸ್ಟ್08:
ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಜುಲೈ 1 ರಿಂದ ಅಕ್ಟೋಬರ್ 7ನೇ ತಾರೀಖಿನ ವರೆಗೆ ಜಿಲ್ಲೆಯ ನ್ಯಾಯಾಲಯಗಳಲ್ಲಿ 90 ದಿನಗಳ ವಿಶೇಷ ಮಧ್ಯಸ್ಥಿಕೆ ಅಭಿಯಾನ ನಡೆಸಲಾಗುತ್ತಿದೆ. ಇದಕ್ಕಾಗಿ 1015 ಪ್ರಕರಣಗಳನ್ನು ಗುರುತಿಸಲಾಗಿದ್ದು, 51 ನುರಿತ ಮಧ್ಯಸ್ಥಿಕೆದಾರರು ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಪಕ್ಷಗಾರರಿಗೆ ಕಾನೂನಾತ್ಮಕ ಸಹಕಾರ ನೀಡಲಿದ್ದಾರೆ. ಈಗಾಗಲೇ 18 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ರೋಣ ವಾಸುದೇವ್ ಹೇಳಿದರು.
ನಗರದ ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ಗುರುವಾರ ವಿಶೇಷ ಮಧ್ಯಸ್ಥಿಕೆ ಅಭಿಯಾನ ಹಾಗೂ ಮುಂಬರುವ ಸೆಪ್ಟೆಂಬರ್ 13ರಂದು ಜರುಗಲಿರುವ ರಾಷ್ಟ್ರೀಯ ಲೋಕ ಅದಾಲತ್ ಕುರಿತು ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಜಿಲ್ಲಾ ಹಾಗೂ ತಾಲ್ಲೂಕು ಹಂತದ ನ್ಯಾಯಾಲಯಗಳಲ್ಲಿ ಚಾಲ್ತಿಯಲ್ಲಿರುವ ಕೌಟುಂಬಿಕ, ವೈವಾಹಿಕ, ಅಪಘಾತ ವಿಮಾ, ಚೆಕ್ ಅಮಾನ್ಯ, ಕಮರ್ಷಿಯಲ್ ಡಿಸ್ಪ್ಯೂಟ್, ಗ್ರಾಹಕರ ವ್ಯಾಜ್ಯಗಳು, ಸಾಲ ವಸೂಲಾತಿ, ಆಸ್ತಿ ವಿಭಾಗ, ಭೂಸ್ವಾಧೀನ ಸೇರಿದಂತೆ ಎಲ್ಲಾ ರೀತಿಯ ಸಿವಿಲ್ ಸ್ವರೂಪದ ಪ್ರಕರಣಗಳನ್ನು ಮಧ್ಯಸ್ಥಿಕೆ ಮುಖಾಂತರ ಇತ್ಯರ್ಥ ಪಡಿಸಲಿಕೊಳ್ಳಲು ಪಕ್ಷಗಾರರಿಗೆ ಸೂಕ್ತ ಮಾರ್ಗದರ್ಶನ ಮತ್ತು ವೇದಿಕೆಯನ್ನು ಕಲ್ಪಿಸಿಕೊಡಲಾಗುತ್ತಿದೆ. ಮಧ್ಯಸ್ಥಿಕೆದಾರರ ಸಮಕ್ಷಮ ಪಕ್ಷಗಾರರು ಮಾಡಿಕೊಂಡ ರಾಜಿ ಒಡಂಬಡಿಕೆ ಹಾಗೂ ಒಪ್ಪಂದಗಳು ಕಾನೂನಾತ್ಮಕವಾಗಿ ನ್ಯಾಯವಾಗಿವೆಯೇ ಎಂಬುದನ್ನು ಪರಾಮರ್ಶಿಸಿ ನ್ಯಾಯಾಲಯದಿಂದ ಅಧಿಕೃತ ಮೊಹರು ಹಾಕುವ ಮೂಲಕ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗುವುದು ಎಂದು ಜಿಲ್ಲಾ ನ್ಯಾಯಾಧೀಶರಾದ ರೋಣ ವಾಸುದೇವ್ ಹೇಳಿದರು.
ಹೊಸದಾಗಿ ಮದುವೆಯಾದ ಯುವಜನತೆಯಲ್ಲಿ ಹೊಂದಾಣಿಕೆ ಸಮಸ್ಯೆಯಿಂದಾಗಿ ಮನಸ್ತಾಪಗಳು ಉಂಟಾಗುತ್ತಿವೆ. ಈ ಹಂತದಲ್ಲಿ ಕುಟುಂಬದ ಹಿರಿಯರ ಮಾರ್ಗದರ್ಶನವಿಲ್ಲದೇ ವೈವಾಹಿಕ ಸಂಬಂಧಗಳಲ್ಲಿ ಬಿರುಕು ಉಂಟಾಗಿ, ವಿಚ್ಚೇಧನ ಹಂತಕ್ಕೆ ಹೋಗುತ್ತಿವೆ. ದುರದೃಷ್ಟಕರ ಸಂಗತಿ ಎಂದರೆ, ನ್ಯಾಯಾಲಯಗಳಲ್ಲಿ ವಿಚ್ಚೇಧನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ನ್ಯಾಯಾಧೀಶರು ವೈವಾಹಿಕ ಸಂಬಂಧ ಗಟ್ಟಿಗೊಳಿಸುವ ಹಿನ್ನಲೆಯಲ್ಲಿ ಸರ್ವ ಪ್ರಯತ್ನಗಳನ್ನು ಮಾಡುತ್ತಾರೆ. ಪ್ರತಿ ಲೋಕ ಅದಾಲತ್ನಲ್ಲಿಯೂ ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿದ 8 ರಿಂದ 10 ಜೋಡಿಗಳನ್ನು ಪುನಃ ಒಂದು ಮಾಡಲಾಗುತ್ತಿದೆ ಎಂದು ತಿಳಿಸಿದರು.
ವಾಜ್ಯಪೂರ್ವ ಪ್ರಕರಣಗಳಲ್ಲಿ ಬ್ಯಾಂಕ್, ಬಿ.ಎಸ್.ಎನ್.ಎಲ್, ಬೆಸ್ಕಾಂ, ನಗರ ಸಭೆಗೆ ಸಂಬಂಧಿಸಿದ ವ್ಯಾಜ್ಯಗಳು ಹೆಚ್ಚಿರುತ್ತವೆ. ಕೆಲವೊಮ್ಮೆ ನ್ಯಾಯಾಲಯ ಮಧ್ಯಸ್ಥಿಕೆ ವಹಿಸಿ ಬ್ಯಾಂಕ್ ಸಾಲ ಹಾಗೂ ಬಡ್ಡಿ ಮರುಪಾವತಿ, ಬಿಲ್ಗಳ ಪಾವತಿಯಲ್ಲಿ ರಿಯಾಯಿತಿ ನೀಡುವಂತೆ ಮಾಡುತ್ತದೆ. ಇದರಿಂದ ಸಾರ್ವಜನಿಕರಿಗೆ ಹಾಗೂ ಸರ್ಕಾರಿ ಸಂಸ್ಥೆಗಳಿಗೆ ಅನುಕೂಲವಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಜ್ಯ ಪ್ರಕರಣಗಳು ಸಹ ವಿಲೇವಾರಿಯಾಗುತ್ತವೆ. ವಿಚ್ಚೇದನ ಪ್ರಕರಣಗಳೊಂದಿಗೆ ಜೀವನಾಂಶ ಕೋರಿಕೆ, ಕೌಟುಂಬಿಕ ದೌರ್ಜನ್ಯ, ವರದಕ್ಷಿಣಿ ಪ್ರಕರಣಗಳು ತಳುಕು ಹಾಕಿಕೊಂಡಿರುತ್ತವೆ. ವಿಚ್ಛೇದನ ಪ್ರಕರಣದಲ್ಲಿ ಸತಿ ಪತಿಯನ್ನು ಒಂದು ಮಾಡುವುದರಿಂದ ಸಾಕಷ್ಟು ಪ್ರಕರಣಗಳನ್ನು ಆರಂಭದಲ್ಲಿಯೇ ಅಂತ್ಯಗೊಳಿಸಬಹುದು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಾರ್ವಜನಿಕರಿಗೆ ದೊರಕಬೇಕಾದ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದೆ. ಚಿತ್ರದುರ್ಗ ತಾಲ್ಲೂಕಿನ ಜೋಡಿ ಚಿಕ್ಕೇನಹಳ್ಳಿಗೆ ಬಸ್ ಸೌಕರ್ಯವಿರಲಿಲ್ಲ. ಇದರಿಂದ ಶಾಲೆಗೆ ಹೋಗುವ ಮಕ್ಕಳಿಗೆ ತೊಂದರೆ ಉಂಟಾಗಿತ್ತು. ಈ ಕುರಿತು ಬಿತ್ತರವಾದ ವರದಿಯನ್ನು ಗಂಭೀರವಾಗಿ ಪರಿಗಣಿಸಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೆ.ಎಸ್.ಆರ್.ಟಿ.ಸಿಗೆ ನಿರ್ದೇಶನ ನೀಡಿದ ಫಲವಾಗಿ ಜೋಡಿ ಚಿಕ್ಕೇನಹಳ್ಳಿಗೆ ಬಸ್ ಸೌಲಭ್ಯ ದೊರಕಿದೆ ಎಂದು ನ್ಯಾಯಾಧೀಶ ರೋಣ ವಾಸುದೇವ್ ಹೇಳಿದರು.
ಸೆಪ್ಟಂಬರ್ 13ರಂದು ರಾಷ್ಟ್ರೀಯ ಲೋಕ ಅದಾಲತ್: ಮುಂಬರುವ ಸೆಪ್ಟಂಬರ್ 13ರಂದು ರಾಷ್ಟ್ರೀಯ ಲೋಕ ಅದಾಲತ್ ಆಯೋಜನೆ ಮಾಡಲಾಗಿದೆ. ಕಳೆದ ಲೋಕ ಅದಾಲತ್ನಲ್ಲಿ ಜಿಲ್ಲೆಯ ನ್ಯಾಯಾಲಯಗಳಲ್ಲಿ ಚಾಲ್ತಿಯಲ್ಲಿದ್ದ 50,000 ಅಧಿಕ ಪ್ರಕರಣಗಳಲ್ಲಿ 4,321 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಇದರೊಂದಿಗೆ 99,272 ವ್ಯಾಜ್ಯಪೂರ್ವ ಪ್ರಕರಣಗಳು ಸೇರಿ 1,03,593 ಪ್ರಕರಣಗಳು ವಿಲೇವಾರಿಯಾಗಿವೆ. ವಿಚ್ಚೇಧನಕ್ಕಾಗಿ ಅರ್ಜಿ ಸಲ್ಲಿಸಿದ್ದ 06 ಜೋಡಿಗಳನ್ನು ಒಂದು ಮಾಡಲಾಗಿದೆ ನ್ಯಾಯಾಧೀಶ ರೋಣ ವಾಸುದೇವ್ ಮಾಹಿತಿ ನೀಡಿದರು.
ಪಕ್ಷಗಾರರು ವಿಶೇಷ ಮಧ್ಯಸ್ಥಿಕೆ ಅಭಿಯಾನ ಹಾಗೂ 2025ರ ಸೆಪ್ಟಂಬರ್ 13ರಂದು ನಡೆಯುವ ರಾಷ್ಟ್ರೀಯ ಲೋಕ ಅದಾಲತ್ ಸದುಪಯೋಗ ಪಡಿಸಿಕೊಂಡು ರಾಜೀ ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಸುಲಭ ಹಾಗೂ ಶೀಘ್ರವಾಗಿ ಯಾವುದೇ ಶುಲ್ಕ, ಖರ್ಚು ವೆಚ್ಚವಿಲ್ಲದೇ ತೀರ್ಮಾನ ಮಾಡಿಕೊಳ್ಳಬಹುದು. ಕಕ್ಷಿದಾರರು ನೇರವಾಗಿ ಅಥವಾ ವಕೀಲರ ಮೂಲಕ ಲೋಕ ಅದಾಲತ್ನಲ್ಲಿ ಭಾಗವಹಿಸಬಹುದು. ಸಾರ್ವಜನಿಕರು ಲೋಕ ಅದಾಲತ್ ಕುರಿತು ಹೆಚ್ಚಿನ ಪ್ರಶ್ನೆ ಮತ್ತು ಮಾಹಿತಿಗಾಗಿ ಬೇಕಾದಲ್ಲಿ ಇ-ಮೇಲ್ [email protected] ಹಾಗೂ ಟೋಲ್ ಪ್ರೀ ಸಂಖ್ಯೆ 15100 ಸಂಪರ್ಕಿಸುವಂತೆ ಎಂದು ನ್ಯಾಯಾಧೀಶ ರೋಣ ವಾಸುದೇವ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಇದ್ದರು.

Share This Article
error: Content is protected !!
";