ಯುವ ಜನತೆ ನಮ್ಮ ದೇಶದ ಸಂಪತ್ತು, ಯುವ ಜನತೆಗೆ ಸಕಾಲದಲ್ಲಿ ಪ್ರೋತ್ಸಾಹ ಮತ್ತು ಉತ್ತೇಜನ ನೀಡಲು ಯುವನಿಧಿ ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ಹೇಳಿದರು.
ಗುರುವಾರ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಉದ್ಯೋಗ ಸೇವೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಯಲಯ ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉದ್ಯೋಗ ಮಾರುಕಟ್ಟೆ ಮಾಹಿತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರ ಯಾವುದೇ ಯೋಜನೆ ತಂದರು ಅದನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ತರುವುದು ಅಧಿಕಾರಿಗಳ ಇಚ್ಛಾಶಕ್ತಿಯ ಮೇಲೆ ನಿಂತಿದೆ. ನಮ್ಮ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಅರ್ಹ ಎಲ್ಲಾ ಸಾರ್ವಜನಿಕರಿಗೆ ತಲುಪಿಸಲು ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಜೊತೆಗೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಯ ಅಧ್ಯಕ್ಷರು ಹಾಗೂ ಸದಸ್ಯರು ಗ್ಯಾರಂಟಿ ಯೋಜನೆಗಳ ಕುರಿತು ವ್ಯಾಪಕ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಹೇಳಿದರು.
ಇತ್ತೀಚೆಗೆ ನಡೆದ ಕೆ.ಡಿ.ಪಿ ಸಭೆಗೆ ಆಗಮಿಸಿ ಮಾತನಾಡಿದ್ದ ರಾಜ್ಯ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರ ಅಧ್ಯಕ್ಷರಾದ ಎಚ್.ಎಂ ರೇವಣ್ಣ ಅವರು ಗ್ಯಾರಂಟಿ ಯೋಜನೆಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲು ನಮಗೆ ಕೆಲವು ಮಾರ್ಗದರ್ಶನ ನೀಡಿದ್ದಾರೆ ಹಾಗೂ ಯುವನಿಧಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಕಡ್ಡಾಯವಾಗಿ ಕಾಲೇಜುಗಳಿಗೆ ತೆರಳಿ ಯುವನಿಧಿ ಯೋಜನೆ ಕುರಿತಾಗಿ ಹೆಚ್ಚಿನ ಪ್ರಚಾರ ಹಾಗೂ ಅರಿವು ಮೂಡಿಸಿ ಎಂದು ತಿಳಿಸಿದ್ದಾರೆ.
ನಮ್ಮ ಜಿಲ್ಲೆಯಲ್ಲಿ ಯುವ ನಿಧಿ ವ್ಯಾಪ್ತಿಗೆ ಒಳಪಡುವ 60 ಪದವಿ, ಪಾಲಿಟೆಕ್ನಿಕ್ ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿವೆ, 2025 ನೇ ಸಾಲಿನಲ್ಲಿ ತೇರ್ಗಡೆಗೊಂಡು ಹೊರ ಹೋಗಿರುವ ವಿದ್ಯಾರ್ಥಿಗಳಿಗೆ 180 ದಿನಗಳು ಕಳೆದರೂ ಉದ್ಯೋಗ ಸಿಗದ ಪಕ್ಷದಲ್ಲಿ ಅವರಿಗೆ ಯುವ ನಿಧಿ ಕೊಡಿಸುವ ಜವಾಬ್ದಾರಿ ಅ ಕಾಲೇಜಿನ ಪ್ರಾಂಶುಪಾಲರದ್ದು ಎಂದು ಹೇಳಿದರು.
ಉದ್ಯೋಗ ಅರಸಿ ಬರುತ್ತಿರುವ ಯುವ ಸಮೂಹ ನಿರಾಸೆಯಿಂದ ಕೈಚಲ್ಲಿ ಕೂರಬಾರದು ಎಂಬ ಉದ್ದೇಶದಿಂದ ಯುವ ನಿಧಿ ಜಾರಿಗೊಳಿಸಲಾಗಿದೆ, ಇದನ್ನು ಬಳಸಿಕೊಂಡು ಯುವ ಜನತೆ ಆಸಕ್ತಿ ಇರುವ ವಿಷಯಗಳಲ್ಲಿ ಯುವ ನಿಧಿ ಪ್ಲಾಸ್ ಮುಖಾಂತರ ಕೌಶಲ್ಯ ತರಬೇತಿ ಪಡೆಯಬೇಕು ಎಂದು ತಿಳಿ ಹೇಳಿದರು.
ಕಾಲೇಜುಗಳ ಪ್ರಾಂಶುಪಾಲರು ಉತ್ತೀರ್ಣರಾಗಿ ಹೊರಹೋಗುವ ವಿದ್ಯಾರ್ಥಿಗಳಿಗೆ ಇದರ ಕುರಿತಾಗಿ ಮಾಹಿತಿ ನೀಡಬೇಕು. ವಿದ್ಯಾರ್ಥಿಗಳಿಗೆ ಸರ್ಕಾರದಲ್ಲಿ ಲಭ್ಯವಿರುವ ಅನೇಕ ಕೌಶಲ್ಯ ತರಬೇತಿಗಳ ಬಗ್ಗೆ ತಿಳುವಳಿಕೆ ಇರುವುದಿಲ್ಲ, ಪ್ರಾಂಶುಪಾಲರುಗಳು ವಿದ್ಯಾರ್ಥಿಗಳಿಗೆ ಆಸಕ್ತಿ ಇರುವ ವಿಷಯಗಳ ಕುರಿತು ಅವರಿಗೆ ಸರ್ಕಾರದ ವತಿಯಿಂದ ಲಭ್ಯವಿರುವ ಕೌಶಲ್ಯ ತರಬೇತಿಗಳ ಕುರಿತಾಗಿ ಹೆಚ್ಚಿನ ಮಾಹಿತಿ ನೀಡಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಆರ್ ನಂದಿನಿ ಅವರು ಮಾತನಾಡಿ ಸಾರ್ವಜನಿಕ ವಲಯಗಳಲ್ಲಿ ಕೆಲಸ ಪಡೆಯಲು ಕೌಶಲ್ಯ ಅಭಿವೃದ್ಧಿ ಅತಿ ಮುಖ್ಯ, ಯುವ ಜನತೆಗೆ ಕೌಶಲ್ಯದ ಕೊರತೆಯಿಂದಾಗಿ ಉದ್ಯೋಗ ದೊರೆಯುತ್ತಿಲ್ಲ. ಜಿಲ್ಲೆಯ ಯುವ ಜನತೆಗೆ ಕೌಶಲ್ಯದ ಅಭಿವೃದ್ಧಿ ಅಗತ್ಯವಿದೆ ಎಂದು ಹೇಳಿದರು.
ಕಾಲೇಜುಗಳು ಖಾಸಗಿ ವಲಯಗಳಲ್ಲಿರುವ ಸಂಸ್ಥೆಗಳೊಡನೆ ನೇರ ಸಂಪರ್ಕ ಸಾಧಿಸಬೇಕು, ಕಾಲೇಜುಗಳಲ್ಲಿ ಇರುವ ಪ್ಲೇಸ್ ಮೆಂಟ್ ಸೆಲ್ ಗಳನ್ನು ಬಲವರ್ಧನೆಗೊಳಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ 6856 ಜನ ನಿರುದ್ಯೋಗಿಗಳು ಎಂದು ನೊಂದಣಿ ಮಾಡಿಕೊಂಡಿದ್ದಾರೆ ಒಟ್ಟು ಯುವ ನಿಧಿಗೆ ಅರ್ಹರೆಂದು ಗುರುತಿಸಲಾಗಿರುವುದು 5942 ಜನರು ಪರಿಗಣಿಸಲಾಗಿದೆ, ಈವರೆಗೆ ಫಲಾನುಭವಿಗಳ ಖಾತೆಗೆ ಡಿ.ಬಿ.ಟಿ ಮೂಲಕ ನೇರವಾಗಿ 11.92 ಕೋಟಿ ಅನುದಾನವನ್ನು ಯುವ ನಿಧಿ ಯೋಜನೆಯಡಿ ಮಂಜೂರು ಮಾಡಲಾಗಿದೆ. ನೀಡಲಾಗಿರುವ ಹಣವನ್ನು ಬಳಸಿಕೊಂಡು ಉದ್ಯಮ ಆರಂಭಿಸಿದರೆ ಕಡ್ಡಾಯ ಅವರು ತಮ್ಮ ಜೀವನವನ್ನು ರೂಪಿಸಿಕೊಳ್ಳಬಹುದು ಎಂದು ಹೇಳಿದರು.
ಯುವ ಸಮೂಹ ಉದ್ಯೋಗ ಮತ್ತು ಕೌಶಲ್ಯವನ್ನು ಹೊರ ಜಿಲ್ಲೆ ಹೊರ ರಾಜ್ಯದಲ್ಲಿ ಪಡೆದುಕೊಂಡು ಜೀವನ ರೂಪಿಸಿಕೊಳ್ಳಲು ಸಿದ್ಧರಿರಬೇಕು. ಎಲ್ಲವನ್ನೂ ಸ್ವತಃ ಊರಿನಲ್ಲೆ ಮಾಡುತ್ತೇನೆ ಎಂದು ಕೂರಬಾರದು. ಯುವ ನಿಧಿ ಮತ್ತು ಯುವ ನಿಧಿ ಪ್ಲಾಸ್ ಯೋಜನೆಯ ಮೂಲ ಉದ್ದೇಶ ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯೋಗ ಅವಕಾಶವನ್ನು ಹೆಚ್ಚಿಸುವುದು ಎಂದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಿಕ್ಕಲಿಂಗಯ್ಯ ಮಾತನಾಡಿ ವಿದ್ಯಾರ್ಥಿಗಳು ಯಾವ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ ಎಂಬುದು ಪ್ರಾಂಶುಪಾಲರಿಗೆ ತಿಳಿದಿರುತ್ತದೆ, ಪ್ರಾಂಶುಪಾಲರು ವಿದ್ಯಾರ್ಥಿಗಳು ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಪಡೆಯಲು ಮಾರ್ಗದರ್ಶನ ನೀಡಬೇಕು. ಆಗ ಮಾತ್ರ ವಿದ್ಯಾರ್ಥಿಗಳು ಉದ್ಯೋಗ ಪಡೆದು ಬದುಕಿನಲ್ಲಿ ಯಶಸ್ಸು ಕಾಣುತ್ತಾರೆ ಎಂದು ತಿಳಿಸಿದರು.
ಮಂಡ್ಯ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರುದ್ರಪ್ಪ ಅವರು ಮಾತನಾಡಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದೆ. ಮಂಡ್ಯ ತಾಲ್ಲೂಕು ಒಂದರಲ್ಲೆ ಗೃಹ ಲಕ್ಷ್ಮಿ ಯೋಜನೆಯಡಿ 341 ಕೋಟಿ ಅನುದಾನ ನೀಡಲಾಗಿದೆ ಇದರಿಂದ ತಾಲ್ಲೂಕಿನ ಮಹಿಳೆಯರು ಸಣ್ಣ ಸಣ್ಣ ಉದ್ಯಮ ಆರಂಭಿಸಿ ಬದುಕು ಕಟ್ಟಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ನಂತರ ಜಿಲ್ಲಾಧಿಕಾರಿ ಡಾ ಕುಮಾರ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಆರ್ ನಂದಿನಿ ಅವರು ಯುವ ನಿಧಿ ಪೋಸ್ಟರ್ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ನವೀನ್ ಕುಮಾರ್, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ನಾಗನಂದ, ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಧನುಷ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.